ಚನ್ನಪಟ್ಟಣ: ತಾಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದ ಕಮಲ ಫಾರಂನಲ್ಲಿ ರೈತರಿಗಾಗಿ ವಿಶೇಷ ಸಾವಯವ ಕೃಷಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಕೃಷಿ ಕ್ಷೇತ್ರದಲ್ಲಿ ಹೊಸ ದಾರಿದೀಪವಾಗಿ ಪರಿಣಮಿಸಿದೆ. ಮಳವಳ್ಳಿಯ ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ರೋಟರಿ ಬೆಂಗಳೂರು ಸಮೃದ್ಧಿ ಇವರ ಸಹಯೋಗದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ರೈತರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರು ಹಾಗೂ ರೈತಪರ ಚಿಂತಕರಾದ ಸು.ತ ರಾಮೇಗೌಡ ಅವರು ಮಾತನಾಡಿ, “ಇಂದಿನ ಕೃಷಿ ವ್ಯವಸ್ಥೆಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆ ಮಣ್ಣು ಮತ್ತು ಮಾನವ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಸಾವಯವ ಕೃಷಿಯೇ ಶಾಶ್ವತ ಪರಿಹಾರವಾಗಿದ್ದು, ರೈತರು ನಿಧಾನವಾಗಿ ಇದಕ್ಕೆ ಮಾರ್ಗಸೂಚಿ ರೂಪಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಸಾವಯವ ಕೃಷಿ ಚಿಂತಕ ಮಹೇಶ್ ಕುಮಾರ್ ಅವರು, ನೈಸರ್ಗಿಕ ಕೃಷಿ ವಿಧಾನಗಳು, ಗೋಮಯ ಮತ್ತು ಗೋಮೂತ್ರದ ಉಪಯೋಗ, ಜೀವಾಮೃತ ಹಾಗೂ ಘನಜೀವಾಮೃತ
ತಯಾರಿಕಾ ವಿಧಾನಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.<ಅನ್ಸುರಾಜ್ ಅವರು ಮಾತನಾಡಿ, ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ, ಗ್ರಾಹಕರ ಆರೋಗ್ಯ ಜಾಗೃತಿ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದರು.
ಶಿಕ್ಷಣ ಪ್ರೇಮಿ ಆನಂದ್ ಮಾತನಾಡಿ, “ಇಂದಿನ ಯುವಜನತೆ ಕೃಷಿಯತ್ತ ಮುಖ ಮಾಡುವುದು ಅತ್ಯಗತ್ಯವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಇದು ಸಹಕಾರಿ. ರೈತರು ಮಾರುಕಟ್ಟೆ ಸಂಪರ್ಕ, ಮೌಲ್ಯವರ್ಧನೆ ಹಾಗೂ ಬ್ರಾಂಡಿಂಗ್ ಕಡೆಗೂ ಗಮನ ಹರಿಸಿದರೆ ಆರ್ಥಿಕವಾಗಿ ಬಲಿಷ್ಠರಾಗಬಹುದು” ಎಂದು ತಿಳಿಸಿದರು.
ರೋಟರಿ ಬೆಂಗಳೂರು ಸಮೃದ್ಧಿ ಅಧ್ಯಕ್ಷ ರವಿಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಾಗಾರ ಯಶಸ್ವಿಯಾಗಿ ಆಯೋಜಿಸಲಾಗಿದ್ದು, ರೈತರಲ್ಲಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು