--Ads--

ಪರಿವರ್ತನೆಗಾಗಿ……… ಪ್ರಶ್ನಿಸುವ ನಿರಂತರ ಹೋರಾಟ…..

On: April 25, 2026 1:33 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪರಿವರ್ತನೆಗಾಗಿ………

ಪ್ರಶ್ನಿಸುವ ನಿರಂತರ ಹೋರಾಟ…..

ಬರೆಯುವ ಕೈಗಳು ಚಲಿಸುತ್ತಿರಲಿ,

ಆಡುವ ಮಾತುಗಳು ನಿಲ್ಲದಿರಲಿ,

ಹೋರಾಟಗಳು ಸೋಲದಿರಲಿ,

ಓದುವ ಉತ್ಸಾಹ ಸಾಯದಿರಲಿ,

ಬಂಡಾಯದ ಧ್ವನಿ ಅಡಗದಿರಲಿ,

ಸಾಧನೆಯ ಕಿಚ್ಚು ಚಿಮ್ಮುತ್ತಿರಲಿ,

ಜೀವನೋತ್ಸಾಹ ಪುಟಿದೇಳುತ್ತಿರಲಿ,

ಪ್ರಾಮಾಣಿಕತೆ ಸದಾ ಕಾಲ ಉಳಿಯಲಿ,

ದಕ್ಷತೆ ನಾಶವಾಗದಿರಲಿ,

ಕರುಣೆ ಮರೆಯಾಗದಿರಲಿ,

ತ್ಯಾಗ ನಿರಂತರವಾಗಿರಲಿ,

ಕ್ಷಮೆ ಸದಾ ಜಾಗೃತವಾಗಿರಲಿ,

ಭಾವನೆಗಳು ನಿಯಂತ್ರಣದಲ್ಲಿರಲಿ,

ಚಿಂತನೆ ಚೆಲುಮೆಯಾಗಿರಲಿ,

ಸ್ವಾತಂತ್ರ್ಯ ಉಸಿರಾಗಿರಲಿ,

ಸಮಾನತೆ ಆಶಯವಾಗಿರಲಿ,

ಸ್ವಾವಲಂಬನೆ ಬದುಕಾಗಿರಲಿ,

ಒಂದು ಕಡೆ ನಮ್ಮ ರಕ್ತದ ಕಣಕಣದಲ್ಲೂ ದೇವರೆಂಬ ವ್ಯಕ್ತಿಯನ್ನು ಮತ್ತು ಶಕ್ತಿಯನ್ನು ಹುಟ್ಟಿನಿಂದಲೇ ನಮ್ಮೊಳಗೆ ತುಂಬಿರುತ್ತಾರೆ.

ಇನ್ನೊಂದು ಕಡೆ ಬದುಕಿನ ಸುಖಲೋಲುಪತೆ – ನಿರ್ಗತಿಕತೆ – ನೋವು ಮತ್ತು ಸಾವಿನ ಆತಂಕ ಮೆದುಳಿನ ಕ್ರಿಯೆಯ ಪ್ರತಿ ಕ್ಷಣದ ಭಾವವೇ ಆಗಿರುತ್ತದೆ.

ಈ ಎರಡರ ಮಧ್ಯೆ ವಾಸ್ತವದಲ್ಲಿ ಎಲ್ಲಿಯೂ ಸಂಬಂಧವೇ ಕಾಣುತ್ತಿಲ್ಲ. ಇದನ್ನು ಅರಿಯಲು ಅಪಾರ ಜ್ಞಾನ ಬುದ್ಧಿಶಕ್ತಿ ಬೇಕೆನ್ನುತ್ತಾರೆ.
ಆದರೆ ನಾನೊಬ್ಬ ಸಾಮಾನ್ಯ ಮನುಷ್ಯ ಅಷ್ಟೊಂದು ಜ್ಞಾನ ನನಗಿಲ್ಲ.

ಹುಟ್ಟುತ್ತಲೇ ಶಾಲೆಗೆ ಕಳುಹಿಸಿದರು. ಬೆಳೆಯುತ್ತಾ ಉದ್ಯೋಗ ಕೊಡಿಸಿದರು. ಆಮೇಲೆ ಸಂಸಾರ ಕಟ್ಟಿದರು.
ಬದುಕು ಆರಕ್ಕೇರುತ್ತಿಲ್ಲ ಮೂರಕ್ಕೆ ಇಳಿಯುತ್ತಿಲ್ಲ.
ಬದುಕಿನ ಗುರಿಯೇನು ತಿಳಿಯುತ್ತಿಲ್ಲ. ನಾನು ನನಗಾಗಿ ಬದುಕಬೇಕೆ – ಇತರರಿಗಾಗಿ ಬದುಕಬೇಕೆ ಗೊತ್ತಾಗುತ್ತಿಲ್ಲ.

ನಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಗೋಚರಿಸುತ್ತಿಲ್ಲ. ಯಾರು ಯಾರೋ ಏನೇನ್ನನ್ನೋ ಹೇಳುತ್ತಿದ್ದಾರೆ.
ಆಧ್ಯಾತ್ಮಿಕ ಚಿಂತಕರು, ವಿಚಾರವಾದಿಗಳು, ವಿಜ್ಞಾನಿಗಳು, ಜ್ಯೋತಿಷಿಗಳು ಬದುಕಿನ ಬಗ್ಗೆ ಹೇಳುವುದು
ನನಗೂ ಅರ್ಥವಾಗುತ್ತಿಲ್ಲ.

ಒಳ್ಳೆಯದು ಎಂದರೆ ಇದು ಎಂದು ಹೇಳಿಕೊಟ್ಟರು. ಕೆಟ್ಟದು ಎಂದರೆ ಇದು ಎಂದು ಹೇಳಿದರು.
ಆದರೆ ವಾಸ್ತವ ಬದುಕಿನಲ್ಲಿ ಇದು ತೀರಾ ಗೊಂದಲ ಮತ್ತು ವಿರುದ್ಧವಾಗಿದೆ.

ಒಳ್ಳೆಯದನ್ನು ಅವರು ಹೇಳಿಕೊಟ್ಟಂತೆ ಅನುಸರಿಸಿದರೆ ದಡ್ಡನೆನ್ನುವರು.
ಕೆಟ್ಟದ್ದನ್ನು ಮರೆಮಾಚಿ ಬದುಕಿದರೆ ಬುದ್ದಿವಂತನೆನ್ನುವರು.
ಏಕೆಂದು ಕೇಳಿದರೆ ಸಮಯ ಸಂದರ್ಭಕ್ಕೆ ತಕ್ಕಂತೆ ಬದುಕುವುದನ್ನು ಕಲಿಯಬೇಕು ಎನ್ನುವರು.
ಹಾಗಾದರೆ ಅದು ಸುಳ್ಳು – ಮೋಸ ಆಗುವುದಿಲ್ಲವೇ ಎಂದರೆ ಸಮಾಜ ಇರುವುದೇ ಹೀಗೆನ್ನುತ್ತಾರೆ.

ಯಶಸ್ಸು, ಹಣ, ಅಧಿಕಾರ, ಜನಪ್ರಿಯತೆಯೇ ಜೀವನದ ಸಾರ್ಥಕತೆ ಎನ್ನುವರು. ಅದು ದೊರೆತಾಗ ಅಥವಾ ಸಿಗದಿದ್ದಾಗ ಸುಖ, ಸಂತೋಷ, ನೆಮ್ಮದಿಗಳೇ ಬದುಕಿನ ಸಾರ್ಥಕತೆ,
ಬೇರೆಯಲ್ಲ ಕೇವಲ ಪ್ರದರ್ಶನ ಎನ್ನುವರು.

ಆತ್ಮಾವಲೋಕನ ಮಾಡಿಕೊಂಡು ತಿಳಿದ ಸತ್ಯ ಹೇಳಿದರೆ ಅರೆ ಹುಚ್ಚನೆನ್ನುವರು. ನನ್ನೊಳಗಿನ ಗೊಂದಲ ಪರಿಹರಿಸಿಕೊಳ್ಳಲು ದೇವರನ್ನು ಕೇಳೋಣವೆಂದರೆ ಆತ ಸಿಗುವುದಿಲ್ಲ.

ಆತ ಸಿಗಬೇಕೆಂದರೆ ನಿನ್ನೊಳಗಿನ ಗೊಂದಲ ಪರಿಹರಿಸಿಕೋ ಎನ್ನುವರು. ಅದನ್ನು ಪ್ರಶ್ನಿಸಿ ಪರಿಹರಿಸಿಕೊಳ್ಳಲು ಹೋದರೆ ನೀನೇನು ಮಹಾಜ್ಞಾನಿಯಲ್ಲ ಸಾಮಾನ್ಯ ಮನುಷ್ಯ ನಿನ್ನಿಂದ ಸಾಧ್ಯವಿಲ್ಲವೆನ್ನುವರು.

ಯಾಕೋ ಬಗೆಹರಿಯದ ಗೊಂದಲದಲ್ಲಿ ಮೌನವೇ ಉತ್ತರವೆಂಬಂತೆ ಮನಸ್ಸಿನೊಳಗಿನ ಆಂತರ್ಯದಲ್ಲಿ ಬಂದಿಯಾಗಿದ್ದೇನೆ ………….

ಮನುಷ್ಯರಲ್ಲಿ ಮೇಲು ಕೀಳು – ಶ್ರೇಷ್ಠ ಕನಿಷ್ಠ – ಬಡವ ಶ್ರೀಮಂತ – ಸುಂದರ ಕುರೂಪ ಎಂದು ಮಾಡಿರುವುದು ದೇವರೇ ಆಗಿದ್ದರೆ ಆ ದೇವರು ನನಗೆ ಬೇಡ.

ಹಣ, ಹೆಂಡ, ಸೀರೆ, ಪಂಚೆ, ತೋಳ್ಬಲದಿಂದ ಮತ ಪಡೆದು ಅಧಿಕಾರಕ್ಕೇರಿ, ಅದರಿಂದಲೇ ಮತ್ತೆ ಹಣ ಮಾಡಿ ಅಮಾಯಕ ಜನರನ್ನು ಶೋಷಿಸುವುದೂ ಪ್ರಜಾಪ್ರಭುತ್ವ ಎಂದಾದರೆ ಆ ಪ್ರಜಾಪ್ರಭುತ್ವ ನನಗೆ ಬೇಡ.

ಮನಸ್ಸುಗಳನ್ನು ಒಡೆಯುವ – ಜನರನ್ನು ವಿಭಜಿಸುವ – ಮಾನವೀಯತೆ ವಿರೋಧಿಸುವ – ವಿಕೃತ ಭಾವ ಮೂಡಿಸುವ ಅಕ್ಷರಗಳೂ ಸಾಹಿತ್ಯ ಎನ್ನುವುದಾದರೆ ಆ ಸಾಹಿತ್ಯವೇ ನನಗೆ ಬೇಡ.

ಹಿಂಸೆಯಿಂದಾದರೂ – ಕೊಲೆಯಿಂದಾದರೂ –
ಪ್ರಾಣ ಹೋದರೂ ಧರ್ಮವನ್ನು ರಕ್ಷಿಸಬೇಕು, ಅದು ನಿನ್ನ ಕರ್ತವ್ಯ ಎನ್ನುವದೂ ಧರ್ಮದ ಭಾಗವಾಗಿದ್ದರೆ ಆ ಧರ್ಮ ನನಗೆ ಬೇಡ.

ಪ್ರೀತಿ, ವಿಶ್ವಾಸ, ಸಭ್ಯತೆ, ತಾಳ್ಮೆ, ಸತ್ಯ, ವಾಸ್ತವಿಕತೆ ಇಲ್ಲದ
ಕೇವಲ ದರ್ಪ, ಬುದ್ದಿಯ ಪ್ರದರ್ಶನ, ಪಾಂಡಿತ್ಯದ ತೋರಿಕೆ, ಗೆಲುವು ಮತ್ತು ಜನಪ್ರಿಯತೆ ಗಳಿಸುವುದು ಚರ್ಚೆ ಎನ್ನುವುದಾದಾರೆ ಆ ರೀತಿಯ ಚರ್ಚೆಯೇ ನನಗೆ ಬೇಡ.

ಕೆಟ್ಟದ್ದನ್ನು ತಿರಸ್ಕರಿಸುವ,
ಒಳ್ಳೆಯದನ್ನು ಸ್ವೀಕರಿಸುವ,
ಸ್ವಾತಂತ್ರ್ಯ ವನ್ನು ಅನುಭವಿಸುವ,
ಸಮಾನತೆಯನ್ನು ಸಾರುವ,
ಮಾನವೀಯತೆಯನ್ನು ಬೆಳೆಸುವ,
ನಾಗರಿಕ ವ್ಯವಸ್ಥೆ ನನಗೆ ಬೇಕು.

ಅಲ್ಲಿಯವರೆಗೂ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now