ವಿಜಯ ದರ್ಪಣ ನ್ಯೂಸ್….
ಭೂಸ್ವಾಧೀನ ನೀತಿ ಮರುಪರಿಶೀಲಿಸಿ,ರೈತರಿಗೆ ನ್ಯಾಯ ಒದಗಿಸಬೇಕು
ಜಂಗಮಕೋಟೆ ಭಾಗದ ವ್ಯಾಪ್ತಿಯ ಸಾವಿರಾರು ಎಕರೆ ಭೂಮಿ ಭೂಸ್ವಾಧೀನ ಕೈ ಬಿಡಬೇಕು : ಸುಫ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ

ಶಿಡ್ಲಘಟ್ಟ : ರೈತರ ಬದುಕು ಮತ್ತು ಕೃಷಿ ಉಳಿಯಬೇಕಾದರೆ ಭೂಸ್ವಾಧೀನ ನೀತಿ ಮರುಪರಿಶೀಲಿಸಿ,ರೈತರಿಗೆ ನ್ಯಾಯ ಒದಗಿಸಬೇಕು
, ಸರ್ಕಾರ ವಿಳಂಬ ಧೋರಣೆ ಬಿಟ್ಟು ರೈತರ ಪರ ತೀರ್ಮಾನ ತೆಗೆದುಕೊಳ್ಳಬೇಕು ಎಂದು
ಸುಫ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಅವರು ತಿಳಿಸಿದರು.
ತಾಲ್ಲೂಕಿನ ಮಳ್ಳೂರಿನಲ್ಲಿ ಮಾಜಿ ಶಾಸಕರು, ಸಹಕಾರ ರತ್ನ ಪುರಸ್ಕೃತ ದಿ.ಕಾಮೇಡ್ ಜಿ.ಪಾಪಣ್ಣ ಅವರ ಸ್ಮಾರಕ ಭವನ ಉದ್ಘಾಟನೆ ಹಾಗೂ ಶಿಲಾಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಂಗಮಕೋಟೆ ಭಾಗದ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿ ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು, ಸರ್ಕಾರ ಬಿಡದಿಯಲ್ಲಿಯೂ ಇದೇ ರೀತಿಯ ಪ್ರಕ್ರಿಯೆ
ಆರಂಭವಾಗಿದೆ ರೈತರು ಬೆಳೆಯುವ ಬೆಳೆಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ ಕೃಷಿಕರು, ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ನೆಮ್ಮದಿ ಮತ್ತು ನ್ಯಾಯ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರವು ರೈತರ ಜಮೀನುಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒದಗಿಸುವ ರಿಯಲ್ ಎಸ್ಟೇಟ್ ಏಜೆಂಟ್ನಂತೆ ಮಧ್ಯವರ್ತಿ ಕೆಲಸ ಮಾಡುತ್ತಿದ್ದು ನಾಚಿಕೇಡಿತನ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಮಳ್ಳೂರು ಜಿ.ಪಾಪಣ್ಣ ಅವರು 1952ರ ಚುನಾವಣೆಯಲ್ಲಿ ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಸೇರಿ ಒಂದೇ ವಿಧಾನಸಭಾ ಕ್ಷೇತ್ರವಾಗಿತ್ತು ಆಗ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾದವರು , ಅವರು ಜನಪರ ಚಿಂತನೆ, ಸರಳತೆ ಹಾಗೂ ರೈತರ ಪರ ಹೋರಾಟಗಳ ಮೂಲಕ ಅವರು ಜನಮನದಲ್ಲಿ ನೆಲೆಸಿದ್ದರು ಎಂದರು.
ದಿವಂಗತ ಜಿ.ಪಾಪಣ್ಣ ಅವರ ಸ್ಮರಣಾರ್ಥ ಮಳ್ಳೂರಿನಲ್ಲಿ ಉದ್ಯಾನವನ ನಿರ್ಮಾಣಕ್ಕೆ ಅಗತ್ಯ ಸರ್ಕಾರಿ ಜಾಗ ಒದಗಿಸುವುದರ ಜತೆಗೆ ಶಾಸಕರ ಅನುದಾನದಿಂದ ಅಗತ್ಯ ನೆರವು ನೀಡಲು ಬದ್ಧನಾಗಿದ್ದೇನೆ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಜಿ.ಪಾಪಣ್ಣ ಅವರು ರಾಜಕಾರಣದ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸದೇ ಜನಸೇವೆಯನ್ನೇ ಧೈಯವನ್ನಾಗಿಸಿಕೊಂಡಿದ್ದ ಅಪರೂಪದ ನಾಯಕರು ಎಂದು ವಿವಿಧ ಗಣ್ಯರು ಅವರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಳ್ಳೂರು ಸಿ.ಎನ್.ಪಿಳ್ಳವೆಂಕಟಸ್ವಾಮಿ, ಸ್ಮಾರಕ ಭವನ ನಿರ್ಮಾಣ ಸಮಿತಿಯ ವೈ.ಎಂ.ನಾರಾಯಣಸ್ವಾಮಿ,ಹಿರಿಯ ವಕೀಲ ಕೆ.ಟಿ.ನಂಜುಂಡಗೌಡ ,ಎಂ.ಎನ್.ವಿಶ್ವನಾಥ್, ನಾಗರಾಜ್, ಕುಂದಲಗುರ್ಕಿ ಕೆ.ಎಂ.ವೆಂಕಟೇಶ್, ಸಿಪಿಎಂ ಮುಖಂಡರಾದ ಲಕ್ಷ್ಮಯ್ಯ, ಜಿ.ಎನ್.ನಾಗರಾಜ್, ಗೀತಾ,
ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಶ್ರೀಧರ್, ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್, ಗ್ರಾಮಸ್ಥರು, ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.











