ವಿಜಯ ದರ್ಪಣ ನ್ಯೂಸ್….
ಶ್ರೀ ನಿಮಿಷಾಂಬ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ತಾವರೆಕೆರೆ :ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದ ಶ್ರೀ ನಿಮಿಷಾಂಬ ಕೈಗಾರಿಕಾ ತರಬೇತಿ ಸಂಸ್ಥೆಯ 2024–26ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಸಂಭ್ರಮ ಹಾಗೂ ಭಾವನಾತ್ಮಕ ವಾತಾವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದ ಹಾಗೂ ಗಣ್ಯರು ಭಾಗವಹಿಸಿ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಂಸ್ಥೆಯ ಪ್ರಾಂಶುಪಾಲರಾದ ನರಸಿಂಹಮೂರ್ತಿ ಮಾತನಾಡಿ, ಕೈಗಾರಿಕಾ ಶಿಕ್ಷಣವು ವಿದ್ಯಾರ್ಥಿಗಳ ಬದುಕಿಗೆ ಭದ್ರ ಬುನಾದಿಯಾಗಿದ್ದು, ಕಲಿತ ಕೌಶಲ್ಯವನ್ನು ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳಾಗಿ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣದ ಜೊತೆಗೆ ಶಿಸ್ತು, ಸಮಯಪಾಲನೆ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳಾಗಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಂಸ್ಥೆಯ ಹೆಸರನ್ನು ಎತ್ತಿಹಿಡಿಯುವ ರೀತಿಯಲ್ಲಿ ನಡೆದುಕೊಂಡು ಸಮಾಜಕ್ಕೆ ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಪೋಷಕರ ಸಹಕಾರ ಮತ್ತು ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಯಶಸ್ಸಿನ ಪ್ರಮುಖ ಆಧಾರ ಎಂದು ತಿಳಿಸಿ, ಎಲ್ಲ ಪೋಷಕರಿಗೂ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾವರೆಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಗಂಗಯ್ಯ ಮಾತನಾಡಿ, ಕೈಗಾರಿಕಾ ತರಬೇತಿ ಪಡೆದಿರುವ ವಿದ್ಯಾರ್ಥಿಗಳಿಗೆ ಇಂದು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಕಲಿತ ಜ್ಞಾನ ಮತ್ತು ಕೌಶಲ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಮುಂದುವರಿದರೆ ಉಜ್ವಲ ಭವಿಷ್ಯ ನಿಮ್ಮದಾಗಲಿದೆ ಎಂದು ಹೇಳಿದರು.

ಸರ್ಕಾರದ ವಿವಿಧ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಕುಟುಂಬ, ಸಮಾಜ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರುವ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಹಾರೈಸಿ, 2024–26ನೇ ಸಾಲಿನ ಎಲ್ಲ ವಿದ್ಯಾರ್ಥಿಗಳಿಗೂ ಮುಂದಿನ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಜೀವನದಲ್ಲಿ ಯಶಸ್ಸು ಸಿಗಲೆಂದು ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ತಮ್ಮ ಪೋಷಕರಿಗೆ ಪಾದ ಪೂಜೆ ಮಾಡುವುದರ ಮೂಲಕ ಗುರುಪೂರ್ಣಿಮೆಯ ಆಚರಣೆ ಮಾಡಲಾಯಿತು. ಕೆಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಭಾವುಕರಾದ ಸಂದರ್ಭವು ಏರ್ಪಟ್ಟಿತು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಮಲಾ ನರಸಿಂಹಮೂರ್ತಿ, ಹಿರಿಯ ಪತ್ರಕರ್ತ ಟಿ ನಾಗರಾಜ್, ನಟರಾಜ್ ,ವಸಂತ್, ಹಾಗೂ ಪೋಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.








