ವಿಜಯ ದರ್ಪಣ ನ್ಯೂಸ್…..
ಹಿರಿಯರಿಗೆ ಹಾಗೂ ದಿವ್ಯಾಂಗರಿಗೆ ಆತ್ಮವಿಶ್ವಾಸ ನೀಡುವ ಕೆಲಸದಲ್ಲಿ ಸಾರ್ಥಕತೆಯ ಭಾವ: ಸಂಸದ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 17
ಹಿರಿಯರಿಗೆ ಹಾಗೂ ದಿವ್ಯಾಂಗರಿಗೆ ಆತ್ಮವಿಶ್ವಾಸ ನೀಡುವ ಕೆಲಸದಲ್ಲಿ ಸಾರ್ಥಕತೆಯ ಭಾವ ಮೂಡುತ್ತದೆ. ಕೇಂದ್ರ ಸರ್ಕಾರದ ಯೋಜನೆಯಡಿ ಸಹಾಯಕ ಉಪಕರಣಗಳನ್ನು ನೀಡುತ್ತಿರುವುದು ವಿಶೇಷವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ನಡೆದ, ಸೇವಾ ಸಂಕಲ್ಪ ಅಭಿಯಾನದಲ್ಲಿ ಅವರು ಪಾಲ್ಗೊಂಡರು. ಈ ವೇಳೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಯಿತು. 961 ಹಿರಿಯ ನಾಗರಿಕರಿಗೆ ಹಾಗೂ 1,673 ವಿಶೇಷಚೇತನರಿಗೆ 1.29 ಕೋಟಿ ರೂ. ವೆಚ್ಚದ ಉಪಕರಣಗಳನ್ನು ಹಾಗೂ ವಿವಿಧ ನೆರವು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಕಾರ್ಯಕ್ರಮ ನಡೆಸುತ್ತಿರುವುದು ವಿಶೇಷವಾಗಿದೆ. ಪ್ರಧಾನಿ ಮೋದಿ ಕಳೆದ 25 ವರ್ಷಗಳಿಂದ ಅಹರ್ನಿಶಿಯಾಗಿ ರಾಜಋಷಿಯಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲ ಯೋಜನೆಗಳ ಅಂತ್ಯೋದಯದ ರೂವಾರಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅನೇಕರು ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಾರೆ. ದೊಡ್ಡ ಫ್ಲೆಕ್ಸ್ಗಳನ್ನು ಹಾಕಿ ಎಲ್ಲರಿಗೂ ಪರಿಚಯ ಮಾಡಿಕೊಳ್ಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟುಹಬ್ಬವನ್ನು ಎಲ್ಲರಂತೆ ಆಚರಿಸುವುದಿಲ್ಲ. ಅದಕ್ಕಾಗಿ ಅಕ್ಟೋಬರ್ 17 ರವರೆಗೆ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದಿಂದ ಈಗ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಸಹಾಯಕ ಉಪಕರಣಗಳನ್ನು ವಿತರಿಸಲಾಗುತ್ತಿದೆ. ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದಲೇ ಇದಕ್ಕೆ ಅನುದಾನವನ್ನು ಭರಿಸಲಾಗುತ್ತಿದೆ. ಆದರೆ ಇದನ್ನು ಕಳೆದ ವರ್ಷವೇ ಮಾಡಬೇಕಿತ್ತು. 1,500 ಫಲಾನುಭವಿಗಳಿಗೆ ನೀಡಬೇಕಿದ್ದ ಉಪಕರಣಗಳು ತಪ್ಪಿಹೋಗಿತ್ತು. ಆದ್ದರಿಂದ ಈ ವರ್ಷ ಇಲ್ಲಿ ಕಾರ್ಯಕ್ರಮ ಮಾಡಲೇಬಾರದೆಂದು ತೀರ್ಮಾನವಾಗುವ ಹಂತಕ್ಕೆ ಬಂದಿತ್ತು. ಆದರೆ ನಾನು ಮನವರಿಕೆ ಮಾಡಿ ಅನುದಾನ ತಂದಿದ್ದೇನೆ ಎಂದು ವಿವರಿಸಿದರು.
ಆರೋಗ್ಯ ತಪಾಸಣೆ ಅಗತ್ಯ
ನಾಯನಹಳ್ಳಿಯ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಚನ್ನಕೇಶವಸ್ವಾಮಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿರುವ ಗಣೇಶೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಅನೇಕರು ತಾವು ಚೆನ್ನಾಗಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಆರೋಗ್ಯ ತಪಾಸಣೆ ಮಾಡಿಸಿದರೆ ಮಾತ್ರ ಆರೋಗ್ಯದ ಸ್ಥಿತಿ ತಿಳಿಯುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಮೊದಲಾದ ರೋಗಗಳ ಬಗ್ಗೆ ತಿಳಿಯಲು ಜನರು ಕಾಲಕಾಲಕ್ಕೆ ತಪಾಸಣೆ ಮಾಡಿಸಬೇಕು ಎಂದರು.
ವಿಶ್ವಕರ್ಮ ಜಯಂತಿಯ ದಿನದಂದು ಕುಶಲಕರ್ಮಿಗಳನ್ನು ಗೌರವಿಸಬೇಕು. ದೇಶದ ಪರಂಪರೆಯಲ್ಲಿ ಕರಕುಶಲ ಕಲೆಗಳಿಗೆ ಮಹತ್ವವಿದೆ. ಕೌಶಲ್ಯ ಇದ್ದವರಿಗೆ ಹೆಚ್ಚು ಉದ್ಯೋಗಾವಕಾಶ ಇರುತ್ತದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕರ್ಮ ಯೋಜನೆ ಜಾರಿ ಮಾಡಿ, ಕಾರ್ಮಿಕರಿಗೆ ತರಬೇತಿ, ಸಾಲ ಸೌಲಭ್ಯ ನೀಡಿದ್ದಾರೆ. ಜನರ ಬದುಕನ್ನು ನಿರ್ಮಾಣ ಮಾಡಿಕೊಡುವುದು ಹಾಗೂ ಅವರು ಯಾರನ್ನೂ ಅವಲಂಬಿತರಾಗದೆ ಬದುಕಲು ಸಹಾಯ ಮಾಡುವುದೇ ನಿಜವಾದ ಗ್ಯಾರಂಟಿ. ಇದೇ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಗ್ಯಾರಂಟಿ ಎಂದರು.











