ವಿಜಯ ದರ್ಪಣ ನ್ಯೂಸ್….
ದೊಡ್ಡಹರವೆ ಅರಣ್ಯದಲ್ಲಿ ಪತ್ತೆಯಾದ ವೃದ್ಧನಿಗೆ ಮಾನವೀಯತೆಯ ಆಸರೆ: ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಹಾಗೂ ದಾವೂದ್ ಅವರ ಕಾರ್ಯಕ್ಕೆ ಮೆಚ್ಚುಗೆ

ಕುಶಾಲನಗರ: ಸುಮಾರು 60 ವರ್ಷ ವಯಸ್ಸಿನ ಶಿವಣ್ಣ ಎಂಬ ವೃದ್ಧರು ಟಿ. ನರಸೀಪುರ ತಾಲ್ಲೂಕಿನ ಹುರುಳಿಕ್ಯಾತನಹಳ್ಳಿ ನಿವಾಸಿಯಾಗಿದ್ದು ಕುಟುಂಬದವರ ಕಿರುಕುಳದಿಂದ ಮನೆ ತೊರೆದು ನಡೆದುಕೊಂಡು ಬಂದು ದೊಡ್ಡಹರವೆ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.
ಮಾತನಾಡುವಾಗ ತೊದಲುವಿಕೆ ಹೊಂದಿರುವ ಶಿವಣ್ಣ ಅವರು ಆನೆಗಳ ಸಂಚಾರ ಹೆಚ್ಚಿರುವ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ದೇವಿ ಪ್ರಸಾದ್ ಅವರು ತಕ್ಷಣ ಮಾನವೀಯ ಕಾಳಜಿಯಿಂದ ಸ್ಪಂದಿಸಿದ್ದಾರೆ. ವೃದ್ಧರ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಅವರ ಕುಟುಂಬದವರನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ.
ನಂತರ ಈ ವಿಷಯವನ್ನು ಕೊಡಗು ಜನ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಎಂ.ಎಂ. ದಾವೂದ್ ಅವರ ಗಮನಕ್ಕೆ ತಂದು ವೃದ್ಧರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿದ ದಾವೂದ್ ಅವರು ಬೈಲುಕುಪ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಕೊಪ್ಪ ಭಾಗದ ರಸ್ತೆಯಲ್ಲಿರುವ ತಮ್ಮ ಕೂರ್ಗ್ ಕಿಂಗ್ಸ್ವೇ (Coorg Kingsway ) ನಲ್ಲಿ ಶಿವಣ್ಣ ಅವರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿದ್ದಾರೆ.
ಅಪರಿಚಿತ ಪ್ರದೇಶದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ, ಕುಟುಂಬದವರನ್ನು ಪತ್ತೆಹಚ್ಚಲು ಪ್ರಯತ್ನಿಸಿದ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ದೇವಿ ಪ್ರಸಾದ್ ಅವರ ಮಾನವೀಯ ಕಾರ್ಯ ಶ್ಲಾಘನೀಯವಾಗಿದೆ. ಅದೇ ರೀತಿ ಪೊಲೀಸ್ ಇಲಾಖೆಯ ಮೂಲಕ ಅಗತ್ಯ ವ್ಯವಸ್ಥೆ ಕಲ್ಪಿಸಿ ಆಶ್ರಯ ನೀಡಿದ ಎಂ.ಎಂ. ದಾವೂದ್ ಅವರ ನಡೆ ಕೂಡ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ
*ಶಿವಣ್ಣ ಅವರ ಕುಟುಂಬದವರು ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ತಕ್ಷಣ ಬೈಲುಕುಪ್ಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಅವರನ್ನು ಕುಟುಂಬದವರೊಂದಿಗೆ ಸೇರಿಸಲು ಸಹಕರಿಸಬೇಕಾಗಿ ಮನವಿ ಮಾಡಲಾಗಿದೆ.
ಸಂಕಷ್ಟದಲ್ಲಿರುವ ವ್ಯಕ್ತಿಗೆ ಜಾತಿ ಧರ್ಮ ಭಾಷೆ ಯಾವುದನ್ನೂ ನೋಡದೆ ನೆರವಿನ ಹಸ್ತ ಚಾಚುವುದೇ ನಿಜವಾದ ಮಾನವೀಯತೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಕೊಡಗು ಜನ ಅಭಿವೃದ್ಧಿ ಸಮಿತಿ










