--Ads--

ಭಾರತ ಮಾತೆಯ ಉಸಿರಾಟದ ಆತಂಕ……. ಭಾರತದ ವಾಯುಮಾಲಿನ್ಯ ಎತ್ತರೆತ್ತರಕ್ಕೆ,…….

On: November 10, 2026 2:04 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಭಾರತ ಮಾತೆಯ ಉಸಿರಾಟದ ಆತಂಕ…….

ಭಾರತದ ವಾಯುಮಾಲಿನ್ಯ ಎತ್ತರೆತ್ತರಕ್ಕೆ,…….

ವಿಷ ಬೆರೆತ ಸ್ಥಿತಿಯಲ್ಲಿ ದೆಹಲಿಯ ಗಾಳಿ ಮತ್ತು ವಾತಾವರಣ.
ಎಲ್ಲಾ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಸರ್ಕಾರಗಳು ಮತ್ತು ನಾಗರೀಕರು.
ಕೊನೆಗೂ ನಾವೆಣಿಸಿದಂತೆ ಭಯಂಕರ ಮಾಲಿನ್ಯದತ್ತ ನಮ್ಮ ರಾಜಧಾನಿ.

ಅಭಿವೃದ್ಧಿಯ ತುತ್ತತುದಿಯಲ್ಲಿ ಭಾರತ…….ವಿಶ್ವಗುರು ಭಾರತ…….!!!!!!!

ಕ್ಷಮಿಸಿ…..
ಇದು ವ್ಯಂಗ್ಯವಲ್ಲ, ಸಂತೋಷವಲ್ಲ, ಕೋಪವಲ್ಲ, ವಿಕೃತವಲ್ಲ.
ಉಸಿರುಗಟ್ಟಿ ಸಹಜವಾಗಿ ಉಸಿರಾಡಲು ಒದ್ದಾಡುತ್ತಿರುವ ಭಾರತ ಮಾತೆಯನ್ನು ಕಂಡು ಆನುಭವಿಸುತ್ತಿರುವ ನೋವು, ದು:ಖ.

ಇದು ಪ್ರಕೃತಿಯ ಮುನಿಸಲ್ಲ. ಅನೀರೀಕ್ಷಿತ ಆಘಾತವಲ್ಲ. ಬಹುತೇಕರ ನಿರೀಕ್ಷೆಯ ನಮ್ಮದೇ ಅಜ್ಞಾನದ, ಅಹಂಕಾರದ ಫಲ. ಸಂಸ್ಕೃತಿ, ಸಂಪ್ರದಾಯ, ಸಂಭ್ರಮಗಳ ವಿವೇಚನೆಯಿಲ್ಲದ ಬದಲಾವಣೆ ಹೊಂದದ ನಮ್ಮ ಮೌಢ್ಯಕ್ಕೆ ತೆರಬೇಕಾಗಿರುವ ಬೆಲೆ.

ಹಳೆಯ ಕಾಲದಲ್ಲಿ ಪರಿಸರ ಅತ್ಯುತ್ತಮ ಸ್ಥಿತಿಯಲ್ಲಿರುವಾಗ ದೀಪಾವಳಿಯ ಪಟಾಕಿ ಹಚ್ಚುವಿಕೆ ಖುಷಿ ನೀಡುತ್ತಿದ್ದುದು ನಿಜ.ಆದರೆ ಈಗ ನಿಜವಾದ ಬಂದೂಕು ಬಾಂಬುಗಳು ಸಿಡಿಯುತ್ತಿರುವ ಸಂದರ್ಭದಲ್ಲಿ ಕೈಗಾರಿಕೀಕರಣ, ವಿಪರೀತ ವಾಹನಗಳು, ಮಿತಿಮೀರಿದ ಜನಸಂಖ್ಯೆಯ ಏಕೀಕರಣ, ಒತ್ತಡ ಮೀರಿ ಬೆಳೆದ ನಗರೀಕರಣದಲ್ಲಿ ಮೊದಲೇ ಅಪಾಯಕಾರಿ ಮಟ್ಟದಲ್ಲಿರುವ ವಾತಾವರಣದಲ್ಲಿ ಮೂರು ದಿನ ದೀಪಾವಳಿ ಸಂಭ್ರಮದ ಹೆಸರಿನಲ್ಲಿ ಪಟಾಕಿ ಹೊಡೆದರೆ ಪ್ರಕೃತಿ ಅದುಹೇಗೆ ಒತ್ತಡ ಸಹಿಸುತ್ತದೆ.

ನಮ್ಮನ್ನಾಳುವ ಸರ್ಕಾರಗಳಿಗೆ ಜವಾಬ್ದಾರಿ ಇದ್ದಿದ್ದರೆ 20 ವರ್ಷಗಳ ಹಿಂದೆಯೇ ಪಟಾಕಿ ನಿಷೇದಿಸಬೇಕಿತ್ತು. ಎಲ್ಲರೂ ಹಣತೆ ಹಚ್ಚಿ ಸಂಭ್ರಮಿಸುವ ಮನೋಭಾವ ಬೆಳೆಸಬೇಕಿತ್ತು. ಜನರೂ ಜಾಗೃತರಾಗಬೇಕಿತ್ತು. ಅದು ಆಗಲಿಲ್ಲ. ಈಗ ಅನುಭವಿಸಬೇಕಿದೆ.

ಪಟಾಕಿಯೇ ಈ ಎಲ್ಲಾ ವಿಷದ ಮೂಲವಲ್ಲ. ಆದರೂ ಮೊದಲೇ ಕಲುಷಿತವಾದ ವಾತಾವರಣ ಇದರಿಂದ ನೇರ ಆಘಾತಕ್ಕೊಳಗಾಯಿತು. ಅದರ ಪರಿಣಾಮ ಘೋರವಾಯಿತು.

ಸರ್ಕಾರಗಳು ಅಭಿವೃದ್ಧಿಯ ಮಾನದಂಡಗಳನ್ನು ಮತ್ತೊಮ್ಮೆ ಪ್ರಕೃತಿಯ ಹಿನ್ನೆಲೆಯಲ್ಲಿ ಪರಶೀಲಿಸಬೇಕಿದೆ. ಗಾಳಿ, ನೀರು, ಆಹಾರದ ಶುಧ್ಧತೆಗೆ ಅತಿಹೆಚ್ಚು ಮಹತ್ವ ನೀಡಬೇಕಿದೆ. ಸದ್ಯಕ್ಕೆ ಆ ಪರಿಸ್ಥಿತಿಯಿಂದ ಸ್ವಲ್ಪ ದೂರದಲ್ಲಿರುವ ನಾವುಗಳು ಇದರಿಂದ ಈ ಕ್ಷಣವೇ ಪಾಠ ಕಲಿತು ಎಚ್ಚೆತ್ತುಕೊಳ್ಳಬೇಕಿದೆ.

ಹಸಿರೇ ಉಸಿರು, ಮಾಲಿನ್ಯವೇ ಮರಣ ಎಂಬ ಘೋಷಣೆಯನ್ನು ಅಕ್ಷರಶಃ ಅಳವಡಿಸಿಕೊಳ್ಳಬೇಕಿದೆ. ಭಾರತಾಂಬೆಯ ಉಸಿರಾಟ ಸರಾಗ ಮಾಡಬೇಕಿದೆ. ಜೊತೆಗೆ ನಮ್ಮ ಉಸಿರೂ ……….

ಟೀಕಿಸುವುದು ಸುಲಭ – ಆಚರಿಸುವುದು ಕಷ್ಟ – ಅನುಭವಿಸುವುದು ದುರಂತ.
ಆದರೆ ನಮ್ಮ ಮುಂದಿನ ಪೀಳಿಗೆಗಾಗಿ ಹಣ ಮಾಡುವುದಕ್ಕಿಂತ ಅವರ ಉಸಿರಾಟ ಸರಾಗವಾಗುವಂತೆ ಮೊದಲು ಮಾಡಬೇಕಿದೆ. ಆ ಸಂಕಲ್ಪ ಮಾಡೋಣ.

ಇದರಿಂದ ವಿಚಲಿವಾದ ಪ್ರಕೃತಿ ಮುನಿಸಿಕೊಂಡು ಆಡಿದ ಮಾತುಗಳನ್ನು ಸ್ವಲ್ಪ ಕೇಳಿ……

ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ,

ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ,

ನೀನು ನಿಂತಿರುವ ನೆಲವೇ ನನ್ನದು,

ನೀನು ಉಸಿರಾಡುವ ಗಾಳಿ, ಕುಡಿಯುವ ನೀರು, ಅಷ್ಟೇ ಏಕೆ, ನಿನ್ನ ಇಡೀ ದೇಹ, ಆತ್ಮಗಳೇ ನನ್ನದು,

ನಿನ್ನ ಅನುಕೂಲಕ್ಕಾಗಿಯೇ ಮಳೆ, ಚಳಿ, ಗಾಳಿ, ಬಿಸಿಲನ್ನು ಸೃಷ್ಟಿಸಿದೆ,

ನಿನ್ನ ಸುಖಕ್ಕಾಗಿ ಗಿಡ, ಮರ, ಪ್ರಾಣಿ ಪಕ್ಷಿಗಳನ್ನು ನೀಡಿದೆ,

ನಿನ್ನ ದೇಹದ ಪ್ರತಿ ಅಂಗಗಳನ್ನು ಅತ್ಯಂತ ಜಾಗರೂಕವಾಗಿ ರೂಪಿಸಿದೆ,

ನಿನ್ನ ಸಂತೋಷಕ್ಕಾಗಿ ಗಂಡು, ಹೆಣ್ಣುಗಳೆಂಬ ಭಿನ್ನತೆ ಸೃಷ್ಟಿಸಿದ್ದೂ ನಾನೇ,

ನಿನ್ನ ಭಾವನೆ, ಆಕಾರ, ರೂಪಗಳನ್ನು ನಾನೇ ಕಷ್ಟಪಟ್ಟು ರಚಿಸಿದೆ,

ಹೋಗಲಿ ಮಜಾ ಮಾಡು ಎಂದು ನೂರು ವರ್ಷಗಳ ಆಯಸ್ಸು ನೀಡಿದೆ,

ಆದರೆ, ಪಾಪಿ ನೀನು ಮಾಡಿದ್ದಾದರೂ ಏನು,…

ನನ್ನನೇ ಬಗೆದು ನಿನಗೆ ಇಷ್ಟ ಬಂದಂತೆ ಬಂಗಲೆ ನಿರ್ಮಿಸಿಕೊಂಡೆ,

ನಡೆದಾಡಲು ಬಲಿಷ್ಠ ಕಾಲುಗಳನ್ನು ಕೊಟ್ಟಿದ್ದರೂ, ಸೋಮಾರಿಯಾಗಿ ಅಲೆದಾಡಲು ವಾಹನಗಳನ್ನು ನಿರ್ಮಿಸಿ ನನ್ನ ಉಸಿರನ್ನೇ ಮಲಿನಗೊಳಿಸಿದೆ,

ನಿನಗೋಸ್ಕರ ಎಷ್ಟೊಂದು ಬಗೆಯ ಹಣ್ಣು, ತರಕಾರಿ, ಸೊಪ್ಪು, ಬೇಳೆಗಳನ್ನು ಕೊಟ್ಟೆ. ಆದರೆ ದುರಾಸೆಯಿಂದ ರಸಾಯನಿಕಗಳೆಂಬ ವಿಷ ಬೆರೆಸಿ ನಿನಗಿಷ್ಟವಾದ ರುಚಿಗಾಗಿ ನನ್ನನ್ನು ಹಾಳು ಮಾಡಿದೆ.

ಸೃಷ್ಟಿಸುವಾಗ ಇತರೆ ಎಲ್ಲಾ ಜೀವಿಗಳನ್ನೂ ನಿರ್ಲಕ್ಷಿಸಿ ನಿನಗೆ ಮಾತ್ರ ಅತಿ ಹೆಚ್ಚು ಬುದ್ದಿ ನೀಡಿದೆ. ಏನೋ ಮನುಷ್ಯ ಪಾಪ ಚೆನ್ನಾಗಿರಲಿ ಎಂದು,

ಅದೇ ದೊಡ್ಡ ಸಮಸ್ಯೆಯಾಗಿ ಮುಂದೆ ಇಷ್ಟೊಂದು ಅನಾಹುತಕಾರಿಯಾಗುತ್ತದೆಂದು ಸೃಷ್ಟಿಸಿದ ನಾನೇ ಊಹಿಸದಾದೆ,

ಮನುಷ್ಯನ ಅಲೋಚನೆ ಇಷ್ಟೊಂದು ಕ್ರೂರವಾಗಿರುತ್ತದೆ ಎಂದು ಅಂದಾಜಿಸಲು ವಿಫಲನಾದೆ,

ಮನುಷ್ಯರನ್ನೆಲ್ಲಾ ಸಮನಾಗಿ ಸೃಷ್ಟಿಸಿದ ನನಗೇ ಮೋಸಮಾಡಿ ಬೇರೆ ಬೇರೆ ಧರ್ಮ, ಜಾತಿ ಸೃಷ್ಟಿಸಿ ಮನಸ್ಸುಗಳನ್ನೇ ಹೊಡೆದೆ.

ಇಡೀ ಭೂ ಪ್ರದೇಶವನ್ನೇ ತುಂಡು ತುಂಡಾಗಿ ಬೌಂಡರಿ ನಿರ್ಮಿಸಿ ಇಬ್ಭಾಗ ಮಾಡಿ ನನ್ನ ಮಾನವನ್ನೇ ಹರಾಜಾಕಿದೆ,

ನನ್ನೆಲ್ಲಾ ಅದ್ಭುತ ಕ್ರಿಯೆಗಳನ್ನು ನಿನ್ನ ತೆವಲಿಗಾಗಿ ಉಪಯೋಗಿಸಿಕೊಂಡು ಕೊನೆಗೆ, ನನ್ನನ್ನೇ ಅಂದರೆಷಈ ಸೃಷ್ಟಿಕರ್ತನನ್ನೇ ನಾಶಮಾಡಲು ಹೊರಟಿರುವೆ.

ಆದರೆ ಮುಠ್ಠಾಳ, ಮೂರ್ಖ, ಅವಿವೇಕಿ ನೆನಪಿಟ್ಟುಕೋ,
ನನ್ನನ್ನು ದುರುಪಯೋಗ ಪಡಿಸಿಕೊಂಡು ನೀನು ನಿರ್ಮಿಸಿದ ಬಂದೂಕು ಬಾಂಬುಗಳೇ ನಿನ್ನನ್ನು ಕೊಲ್ಲುತ್ತವೆ.

ಎಲ್ಲಾ ಸುಖಗಳಿದ್ದರೂ ಅದನ್ನು ಅನುಭವಿಸಲಾಗದೆ ರಕ್ತ ಕಾರುವ ಸ್ಥಿತಿ ನಿನ್ನದಾಗುತ್ತದೆ.

ನಾಶವಾಗುವುದು ನೀನೇ ಹೊರತು ನಾನಲ್ಲ.

ನಾನು ಅಮರ…..ಶಾಶ್ವತ……

ಬೆನ್ನಿಗೂ ….ಹೃದಯಕ್ಕೂ ….ಒಟ್ಟಿಗೆ ಚೂರಿ ಹಾಕಿದ ದ್ರೋಹಿ ನೀನು.

ನಿನಗೆ ಕ್ಷಮೆ ಇಲ್ಲ………..

ಬದಲಾಗಬೇಕಿದೆ – ಬದಲಾಯಿಸಬೇಕಿದೆ.
ಒಂದಷ್ಟು ಪ್ರಯತ್ನಿಸೋಣ.
ಈ ಕ್ಷಣದಿಂದಲೇ ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now