ವಿಜಯ ದರ್ಪಣ ನ್ಯೂಸ್…..
NDA ಅಭ್ಯರ್ಥಿ ಕೆ.ಎಂ.ಸುರೇಶ್ ಗೆಲುವು ಸಾಧಿಸುವ ವಿಶ್ವಾಸವಿದೆ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಜೆಡಿಎಸ್-ಬಿಜೆಪಿ ಮೈತ್ರಿಕೂಟದ NDA ಅಭ್ಯರ್ಥಿ ಕೆ.ಎಂ. ಸುರೇಶ್ ಈ ಬಾರಿ ಗೆಲುವು ಸಾಧಿಸಲಿದ್ದಾರೆ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಈ ಬಾರಿಯೂ ಅದೇ ಪರಂಪರೆ ಮುಂದುವರಿಯುವ ಭರವಸೆ ಇದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಿಂದೆ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದು, ಮತದಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಅವರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದಾರೆ ಹೀಗಾಗಿ ಮೈತ್ರಿ ಅಭ್ಯರ್ಥಿಯ ಗೆಲುವು ನಿಶ್ಚಿತ ಪದವೀಧರರು ಹಾಗೂ ಶಿಕ್ಷಕ ಮತದಾರರು ಎನ್.ಡಿ.ಎ. ಬೆಂಬಲಿತ ಕೆ.ಎಂ.ಸುರೇಶ್ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ವಿಧಾನಪರಿಷತ್ತಿನ ಅಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ರಾಜ್ಯದಲ್ಲಿ ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿಕ್ಕೂಚಿಯಾಗಲಿದೆ ಎಂದರು.
ಆಡಳಿತ ಪಕ್ಷದ ಶಾಸಕರು ಹಾಗೂ ಸಚಿವರು ಸೇರಿ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲು ನಿಗದಿಪಡಿಸಿರುವುದು ಕ್ರಮಬದ್ಧವಾಗಿಲ್ಲದಿರುವುದರಿಂದ ‘ಜೆಡಿಎಸ್ ಗೆ ಅನಾನುಕೂಲ ಮತ್ತು ಕಾಂಗ್ರೆಸ್ ಗೆ ಅನುಕೂಲ ಆಗುವಂತೆ ಮೀಸಲು ನಿಗದಿಪಡಿಸಿದ್ದಾರೆ’ ಎಂದು ಆರೋಪ ಮಾಡಿದರು.
ಆದರೆ, ಈ ಕುರಿತು ಆಕ್ಷೇಪಣೆ ಸಲ್ಲಿಸುವುದಿಲ್ಲ ಜೆಡಿಎಸ್ ಪಕ್ಷ ತಳಮಟ್ಟದಲ್ಲಿ ಸಂಘಟಿತವಾಗಿದ್ದು, ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ವಿಶ್ವಾಸವಿದೆ ಯಾವುದೇ ವರ್ಗಕ್ಕೆ ಮೀಸಲಾದರೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ನಮ್ಮ ಪಕ್ಷಕ್ಕಿದೆ ಎಂದರು.
ನಗರದಲ್ಲಿ ಒಳಚರಂಡಿ ಮತ್ತು ಜಲ ಜೀವನ್ ಯೋಜನೆಗಳ ಕಾಮಗಾರಿಗಳು ಏಕಕಾಲದಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತಾತ್ಕಾಲಿಕ ತೊಂದರೆ ಉಂಟಾಗುತ್ತಿದೆ ನಾಗರಿಕರು ಇದನ್ನು ಅರ್ಥಮಾಡಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ಕೋರಿದರು.
ಅಮೃತ್-2 ಯೋಜನೆಯ ಕಾಮಗಾರಿಯನ್ನು 2027ರ ನವೆಂಬರ್ ವೇಳೆಗೆ ಪೂರ್ಣಗೊಳಿಸಿ, ರಾಮಸಮುದ್ರ ಕರೆಯಿಂದ ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಪೂರೈಸಲು ಗುತ್ತಿಗೆದಾರರು ಒಪ್ಪಿಕೊಂಡಿರುವುದರಿಂದ ಕಾಮಗಾರಿ ವೇಗವಾಗಿ ನಡೆಯುತ್ತಿದೆ , 2028ರ ವೇಳೆಗೆ ನಗರದ ಎಲ್ಲಾ ನಿವಾಸಿಗಳಿಗೂ ಪ್ರತಿದಿನ 30 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿದೆ ಇದರಿಂದ ನಗರದ ಜನರ ದಶಕಗಳ ಬೇಡಿಕೆ ಈಡೇರಲಿದೆ ಎಂದರು.
ಬರಗಾಲದ ನಡುವೆಯೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಲ್ಲಿಯಾದರೂ ಸಮಸ್ಯೆ ಕಂಡುಬಂದರೆ 24 ಗಂಟೆಯೊಳಗೆ ಬೋರ್ವೆಲ್ ಕೊರೆಸುವುದು, ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸುವುದು ಅಥವಾ ಟ್ಯಾಂಕರ್ ಮೂಲಕ ನೀರು ಒದಗಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಮುಖಂಡರಾದ ತಾದೂರು ರಘು, ಕುಂದಲಗುರ್ಕಿ ಚಂದ್ರು, ವಿಜಯ್ ಕುಮಾರ್, ಲಕ್ಷ್ಮೀಪತಿ ಹಾಜರಿದ್ದರು.









