ವಿಜಯ ದರ್ಪಣ ನ್ಯೂಸ್……..
ಬಿಗಿಯಾದ ಕಾನೂನು ಮತ್ತು ಹೋರಾಟಗಾರರ ಗಟ್ಟಿ ನಿಲುವಿನಿಂದ ಮಾತ್ರ ನಾಡು ರಕ್ಷಣೆ : ಡಾ.ಸಿಸಿರಾ ಅಭಿಪ್ರಾಯ

ಬೆಂಗಳೂರು : ನಮ್ಮ ಮನೆ, ಮನದ ಮಾತು, ಹೊರಗೆ ವ್ಯವಹರಿಸುವ ಭಾಷೆ ಕನ್ನಡ ಆಗದ ಹೊರತು ಯಾವುದೇ ಬಿಗಿಯಾದಕಾನೂನು, ಹೋರಾಟಗಾರರ ಕಿಚ್ಚು ಹೊರಹೊಮ್ಮದೆ ಪರಭಾಷಿಕರು ಕನ್ನಡ ಕಲಿಯಲಾರರು. ಬಲವಂತವಾಗಿ ಯಾವುದೇ ಭಾಷೆಯನ್ನು ಯಾರ ಮೇಲೂ ಹೇರಲಾಗದಿದ್ದರು . ನಾವು ತಿನ್ನುವ ಅನ್ನ, ಕುಡಿವ ನೀರು, ವಾಸಿಸುವ ನೆಲದ ಋಣದ ಗುಣಕ್ಕಾದರೂ ಕಡ್ಡಾಯವಾಗಿ, ಪ್ರಾಮಾಣಿಕವಾಗಿ ಕನ್ನಡ ಕಲಿಯಬೇಕಿದೆ ಎಂದು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ) ಅಭಿಪ್ರಾಯಪಟ್ಟರು.

ಅವರು ರಾಜಾಜಿನಗರದ ಜನತಾ ವಿದ್ಯಾಸಂಸ್ಥೆಯ ವಿವೇಕಾನಂದ ಸಮೂಹ ಕಾಲೆಜುಗಳು ಆಯೋಜಿಸಿದ್ದ *ಸುವರ್ಣ ಸಂಭ್ರಮ ವಿವೇಕ ಕನ್ನಡೋತ್ಸವ* ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕನ್ನಡ ಎಂಬುದು ಒಂದು ಭಾಷೆಯಲ್ಲ, ಅದೊಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ನಾವು ಎಲ್ಲಿದ್ದರೂ ನಮ್ಮತನವನ್ನು ಬಿಟ್ಟುಕೊಡಬಾರದು, ದೇಸೀಯತೆಯನ್ನು ಉಳಿಸಿಕೊಳ್ಳುವ ಮೂಲಕ ಕುವೆಂಪು, ಬೇಂದ್ರೆ, ಬಿಎಂಶ್ರೀ, ತ್ರಿವೇಣಿ, ಜಿಎಸ್ಎಸ್ ಅವರ ಸಾಹಿತ್ಯ ಸ್ಫೂರ್ತಿಯನ್ನು ಯುವಕರಲ್ಲಿ ತುಂಬಬೇಕಿದೆ. ಏಕೀಕರಣಕ್ಕೆ ದುಡಿದ ಹುಯಿಲಗೋಳ ನಾರಾಯಣರಾಯರು, ಸಿದ್ಧಪ್ಪ ಕಂಬಳಿ, ಅನಕೃ, ಅಂದಾನಪ್ಪ ದೊಡ್ಡಮೇಟಿ, ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ ಮುಂತಾದ ಅನೇಕ ಮಹನೀಯರ ಸ್ಮರಣೆಯೇ ಈ ರಾಜ್ಯೋತ್ಸವದ ಸಂಭ್ರಮ ಎಂದರು.

ಕನ್ನಡ ಮಾತನಾಡಬೇಕು, ಓದಬೇಕು, ಬರೆಯಬೇಕು, ಇಂದಿನಿಂದಲೇ ಕನ್ನಡದಲ್ಲೇ ಸಹಿ ಮಾಡುವ ಶಪಥ ಮಾಡೋಣ ಎಂದರು. ಪ್ರಾಚೀನ ಭಾಷೆಯಾದ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಇಂದಿನ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ನಮ್ಮ ಅಧ್ಯಾಪಕರು, ಕನ್ನಡ ಭಾಷೆಯ ಕಡೆಗೆ ಹೊರಳುವಂತೆ, ಅವರಿಗೆ ಆಸಕ್ತಿ ಮೂಡುವಂತೆ ಪಾಠ ಹೇಳಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಖಜಾಂಚಿ ಹೆಚ್.ಜಿ.ಬಾಲಗೋಪಾಲ್ ಕಿವಿಮಾತು ಹೇಳಿದರು.
ಕಾರ್ಯದರ್ಶಿಗಳಾದ ಅಪ್ಪಾರೆಡ್ಡಿ ಹರೀಶ್ ನಾವು ಕನ್ನಡಿಗರು, ಮನೆಮಾತು ಯಾವುದೇ ಇರಲಿ, ಕರ್ನಾಟಕದಲ್ಲಿ ವಾಸಿಸುತ್ತಿರುವವರೆಲ್ಲರೂ ಒಂದಾಗಿ ಬಾಳಬೇಕು, ಕನ್ನಡ ಮಾತನಾಡಬೇಕು ಎಂದರು. ಆಡಳಿತ ಮಂಡಳಿ ಸದಸ್ಯರಾದ ಐ.ನಾರಾಯಣರೆಡ್ಡಿ, ಎಸ್ .ಎನ್.ಲತಾ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಬಿ.ಹೆಚ್.ಪಂಕಜ, ಪ್ರಾಂಶುಪಾಲ .ಡಾ.ಜಿ.ಪಿ.ಹೇಮಾವತಿ, ಪ್ರೊ.ಎಂ.ಹೆಚ್.ಬೈರಣ್ಣ ಅವರು ಸೇರಿದಂತೆ, ವಿವೇಕಾನಂದ ವಿದ್ಯಾಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ಭಾಗವಹಿಸಿದ್ದರು .
ವಿದ್ಯಾರ್ಥಿಗಳ ಕನ್ನಡ ನಾಡು ನುಡಿ ಗೀತೆಗಳು ಮತ್ತು ನೃತ್ಯ ಪ್ರದರ್ಶನ ರಾಜ್ಯೋತ್ಸವ ಸಮಾರಂಭದ ಕಳೆ ಕಟ್ಟಿತು.










