ವಿಜಯ ದರ್ಪಣ ನ್ಯೂಸ್…….
ಭೈರನಹಳ್ಳಿ ಗ್ರಾಮದಲ್ಲಿ ಮೂರನೇ ವರ್ಷದ ಶ್ರೀ ಭದ್ರಕಾಳಿ ಅಮ್ಮನವರ ಪಲ್ಲಕ್ಕಿ ಉತ್ಸವ ಸಂಭ್ರಮ

ತಾವರೆಕೆರೆ : ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದ ಸಮೀಪವಿರುವ ಭೈರನಹಳ್ಳಿ ಗ್ರಾಮದಲ್ಲಿ ಗಣಪತಿ ಬಪ್ಪ ವಿನಾಯಕ ಗೆಳೆಯರ ಬಳಗದ ವತಿಯಿಂದ ಮೂರನೇ ವರ್ಷದ ಶ್ರೀ ಭದ್ರಕಾಳಿ ಅಮ್ಮನವರ ಪಲ್ಲಕ್ಕಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ಉತ್ಸವದ ಅಂಗವಾಗಿ ಶ್ರೀ ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ವಿಶೇಷ ವಾದ್ಯಗೋಷ್ಠಿಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಗ್ರಾಮಸ್ಥರು, ಭಕ್ತಾದಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನವರ ದರ್ಶನ ಪಡೆದು ಭಕ್ತಿಭಾವ ಮೆರೆದರು.
ಕಾರ್ಯಕ್ರಮದ ಅಂಗವಾಗಿ ಆಗಮಿಸಿದ ಭಕ್ತಾದಿಗಳಿಗೆ ಗಣಪತಿ ಬಪ್ಪ ವಿನಾಯಕ ಗೆಳೆಯರ ಬಳಗದ ವತಿಯಿಂದ ಅನ್ನದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಗಣಪತಿ ಬಪ್ಪ ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರು ಹಾಗೂ ನಮ್ಮ ಬಳಗದ ಎಲ್ಲಾ ಪದಾಧಿಕಾರಿಗಳ ಸಹಕಾರ ಮತ್ತು ಬೆಂಬಲದೊಂದಿಗೆ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ.
ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಇನ್ನಷ್ಟು ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಿದ್ದೇವೆ. ಇದಕ್ಕೆ ಗ್ರಾಮಸ್ಥರು ಇದೇ ರೀತಿಯ ಸಹಕಾರ, ಪ್ರೋತ್ಸಾಹ ಹಾಗೂ ಬೆಂಬಲವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಒಟ್ಟಾರೆಯಾಗಿ ಭೈರನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಭದ್ರಕಾಳಿ ಅಮ್ಮನವರ ಮೂರನೇ ವರ್ಷದ ಪಲ್ಲಕ್ಕಿ ಉತ್ಸವವು ಭಕ್ತಿ, ಸಂಭ್ರಮ ಹಾಗೂ ಸೌಹಾರ್ದತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.
&&&&&&&&&&&&&&&&&&&&&&&&&&&&
ಗೋಪಿಕೆ

ಹೊರಟೆಯೇಕೆ ಕರೆದು ಎನ್ನ ಮಧುರಯಾನಕೆ
ಕಾಯುತಿಹಳು ಮರೆತೆಯೇಕೆ ನಿನ್ನ ಗೋಪಿಕೆ
ಮನವ ಸೆಳೆದುಕೊಳುವ ನಿನ್ನ ಮುರಳಿ ಗಾನಕೆ
ನಾದದಲ್ಲಿ ಬೆರೆತುಕೊಳುವ ನಿನ್ನ ರಾಧಿಕೆ
ಕೋಟಿ ಯಜ್ಞ ಫಲವು ತಂದ ನಿನ್ನ ಸ್ನೇಹಕೆ
ಹೇಗೆ ನಾನು ಸಿಲುಕದಿರಲಿ ಒಲವ ಪಾಶಕೆ
ಸೂರ್ಯ ಚಂದ್ರ ಸಾಕ್ಷಿ ತಾನೆ ನಮ್ಮ ಪ್ರೇಮಕೆ
ಸಪ್ತ ಸ್ವರದ ರಾಗ ಲಯವು ನಿನ್ನ ಮೋಹಕೆ
ಮರಳದಾದ ನಿಲುವ ತಳೆದ ನಿನ್ನ ಭಾವಕೆ
ಜಗವ ಪೊರೆವ ಹೊರೆಯ ಹೊತ್ತ ನಿನ್ನ ಧ್ಯೇಯಕೆ
ಯಾವ ಚ್ಯುತಿಯು ಬಾರದಿರಲಿ ಎಂಬ ಕೋರಿಕೆ
ಮತ್ತೆ ಮನವು ಜಾರದಿರಲಿ ಶ್ಯಾಮ ನಾಮಕೆ
ರಾಧಿಕಾ ವಿಶ್ವನಾಥ್, ಮಡಿಕೇರಿ










