ವಿಜಯ ದರ್ಪಣ ನ್ಯೂಸ್……..
ಕುತ್ತಿಗೆಗೆ ಚಾಕು ಇಟ್ಟು , ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಕಳ್ಳರು

ವಿಜಯಪುರ : ದೇವನಹಳ್ಳಿ ತಾಲ್ಲೂಕು, ವಿಜಯಪುರ ಹೋಬಳಿಯ ಪುರ ಗ್ರಾಮದಲ್ಲಿ ಮಧ್ಯರಾತ್ರಿ ಒಂಟಿ ಮನೆಗೆ ನುಗ್ಗಿದ ಮೂವರು ಕಳ್ಳರು, ಮನೆ ಮಾಲೀಕ ದಂಪತಿಗೆ ಚಾಕು ತೋರಿಸಿ, ಬೆದರಿಸಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಪುರ ಗ್ರಾಮದ ಮರಿ ಸೊಣ್ಣೇಗೌಡ ಅವರ ಮನೆಯಲ್ಲಿ ಈ ದರೋಡೆ ನಡೆದಿದೆ. ಒಂದು ತಿಂಗಳ ಹಿಂದೆ ಈ ಮನೆಯ ಗೃಹ ಪ್ರವೇಶವಾಗಿತ್ತು.
ಮಧ್ಯರಾತ್ರಿ ಮೂವರು ಕಳ್ಳರು ಮುಖಕ್ಕೆ ಮಾಸ್ಕ್ ಹಾಗೂ ಮಂಕಿ ಕ್ಯಾಪ್ ಧರಿಸಿಕೊಂಡು, ಮನೆಯ ಪಕ್ಕದಿಂದ ಬಂದು, ಸಿಮೆಂಟ್ ಇಟ್ಟಿಗೆಯಿಂದ ಮನೆಯ ಬಾಗಿಲನ್ನು ಹೊಡೆದು ಒಳಗೆ ನುಗ್ಗಿದ್ದಾರೆ.
ನಂತರ ಮನೆಯ ಮಾಲೀಕ ಮರಿ ಸೊಣ್ಣೇಗೌಡ ಹಾಗೂ ಅವರ ಪತ್ನಿ ಮಂಜುಳಮ್ಮ ಎಂಬುವವರು, ಬಾಗಿಲು ಹೊಡೆದ ಶಬ್ದವನ್ನು ಕೇಳಿಸಿಕೊಂಡು ಕೆಳಗೆ ಬಂದಿದ್ದಾರೆ. ಈ ವೇಳೆ ಮಂಜುಳಮ್ಮ ಅವರ ಕುತ್ತಿಗೆಗೆ ಚಾಕು ಇಟ್ಟು, ಕಿರುಚಿದರೆ, ಯಾರಿಗಾದರೂ ಪೋನ್ ಮಾಡಿದ್ರೆ ಸಾಯಿಸುತ್ತೇನೆ. ನಿಮ್ಮ ಮಗಳು ಲಂಡನ್ ನಿಂದ ನಿಮಗೆ 2 ಲಕ್ಷ ಹಣ ಕಳುಹಿಸಿದ್ದಾರೆ. ಆ ಹಣವನ್ನು ಕೊಡು, ಹಾಗೆ ಚಿನ್ನವನ್ನೂ ಕೊಡು, ಕೊಡದಿದ್ದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ನಮ್ಮ ಬಳಿ ಹಣವಿಲ್ಲ ಎಂದು ಹೇಳಿದ ಮಂಜುಳಮ್ಮ ಅವರು, ನೇರವಾಗಿ ರೂಂ ಗೆ ಕರೆದುಕೊಂಡು ಹೋಗಿ, ಬೀರುವಿನಲ್ಲಿ ಇಟ್ಟಿದ್ದ ಚಿನ್ನದ ಒಡವೆಗಳ ಬಾಕ್ಸ್ ಗಳನ್ನು ತೆಗೆದಿಟ್ಟಿದ್ದಾರೆ. ಅದರಲ್ಲಿದ್ದ 117 ಗ್ರಾಂ ಚಿನ್ನಾಭರಣ ಎತ್ತಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಾಗೂ 8 ಸಾವಿರ ರೂ. ನಗದನ್ನು ದೋಚಿದ್ದಾರೆ.
ಕಳ್ಳತನದ ನಂತರ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮನೆಯಲ್ಲಿದ್ದ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡ ಕಳ್ಳರು, ಬೈಕ್‌ನಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ.
ಘಟನೆಯ ಕುರಿತು ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚಂದ್ರಕಾಂತ್ ಹಾಗೂ ವಿಜಯಪುರ ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮೀನಾರಾಯಣ, ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬೆರಳಚ್ಚು ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚಂದ್ರಕಾಂತ್ ಅವರು, ಮುಂಜಾನೆ ನಡೆದಿರುವ ದರೋಡೆ ಪ್ರಕರಣದ ಆರೋಪಿಗಳ ಕುರಿತು, ಸ್ವಲ್ಪ ಮಾಹಿತಿ ಲಭ್ಯವಾಗಿದೆ. ಕಳ್ಳರ ಬಂಧನಕ್ಕೆ ತಂಡಗಳನ್ನು ರಚನೆ ಮಾಡಿದ್ದೇವೆ. ಶೀಘ್ರವಾಗಿ ಬಂದಿಸುತ್ತೇವೆ ಎಂದರು. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











