ವಿಜಯ ದರ್ಪಣ ನ್ಯೂಸ್…..
ಸಂವಿಧಾನ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ತಾಂಡವಪುರ ನವಂಬರ್ 26ಸಂವಿಧಾನ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ: ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹೇಳಿದರು ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದ 77ನೇ ಸಂವಿಧಾನ ದಿನಾಚರಣೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಂವಿಧಾನ ಅಂಗೀಕಾರವಾಗಿ 77 ವರ್ಷ ಕಳೆದರೂ ಈಡೇರದ ಸಂವಿಧಾನದ ಆಶಯಗಳು; ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿವಾರಣೆಯಾಗದೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ
ಸಂವಿಧಾನವನ್ನು ಹಂತಹಂತವಾಗಿ ದುರ್ಬಲಗೊಳಿಸಲು ಬಿಜೆಪಿಯಿಂದ ಪ್ರಯತ್ನ; ಭಾಗ್ಯ ಮತ್ತು ಗ್ಯಾರಂಟಿ ಯೋಜನೆಗಳು ಸಾಮಾಜಿಕ ನ್ಯಾಯದ ಸಾಕಾರದತ್ತ ಮಹತ್ವದ ಹೆಜ್ಜೆಗಳು: ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ ವ್ಯಕ್ತಪಡಿಸಿದರು
ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮತ್ವದ ರಕ್ಷಣೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿಯೇ ಇಂದು ಸಂವಿಧಾನದ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಗಳು, ಬಾಬಾಸಾಹೇಬ್ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳು, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿವಾರಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಸಂವಿಧಾನದ ರಕ್ಷಣೆಯ ಅಗತ್ಯತೆಯ ಕುರಿತು ವಿವರಿಸಿದ ಸಿದ್ದರಾಮಯ್ಯನವರು 1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಸಂವಿಧಾನ ರಚನಾ ಸಭೆ ಅಂಗೀಕರಿಸಿತು. ಈ ಸ್ಮರಣೀಯ ದಿನವನ್ನು ದೇಶಾದ್ಯಂತ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂವಿಧಾನ ಅಂಗೀಕಾರವಾಗಿ 77 ವರ್ಷಗಳು ಕಳೆದಿದ್ದರೂ ಅದರ ಆಶಯಗಳು ಇನ್ನೂ ಸಂಪೂರ್ಣವಾಗಿ ಈಡೇರಿಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.
ಸಂವಿಧಾನ ಅಂಗೀಕಾರಗೊಂಡ ಸಂದರ್ಭದಲ್ಲಿ ಸಾವರ್ಕರ್ ಸೇರಿದಂತೆ ಹಿಂದುತ್ವವಾದಿ ನಾಯಕರು ಸಂವಿಧಾನವನ್ನು ಟೀಕಿಸಿದ್ದರು. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ ಎಂಬ ಟೀಕೆ ಮಾಡಲಾಗಿತ್ತು. ಆದರೆ ಇಂದು ಬಿಜೆಪಿಯವರು ಸಂವಿಧಾನವನ್ನು ರಕ್ಷಿಸುವುದಾಗಿ ಹಾಗೂ ಅದರ ಆಶಯಗಳನ್ನು ಈಡೇರಿಸುವುದಾಗಿ ಮಾತನಾಡುತ್ತಿದ್ದಾರೆ. ಸಂವಿಧಾನವನ್ನು ವಿರೋಧಿಸಿದ ಸಿದ್ಧಾಂತದ ಹಿನ್ನೆಲೆಯಿಂದ ಬಂದವರಿಗೆ ಸಂವಿಧಾನ ರಕ್ಷಣೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ಎಲ್ಲಿದೆ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದರು.
ಕರ್ನಾಟಕದ ಸಂಸದರಾಗಿದ್ದ ಹಾಗೂ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಬಿಜೆಪಿ ನಾಯಕರೊಬ್ಬರು ಸಂವಿಧಾನ ಬದಲಾವಣೆ ಮಾಡಲೆಂದೇ ಅಧಿಕಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಜಾತ್ಯತೀತತೆ ಮತ್ತು ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಆದರೆ ಬಿಜೆಪಿಯವರು ಈ ಮೌಲ್ಯಗಳಿಗೆ ವಿರುದ್ಧವಾದ ಸಿದ್ಧಾಂತವನ್ನು ಹೊಂದಿದ್ದಾರೆ ಎಂದು ಟೀಕಿಸಿದ ಸಿದ್ದರಾಮಯ್ಯನವರು
ಸಂವಿಧಾನ ಅಂಗೀಕಾರಗೊಳ್ಳುವ ಹಿಂದಿನ ದಿನವಾದ 1949ರ ನವೆಂಬರ್ 25ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದರು. 1950ರ ಜನವರಿ 26ರಂದು ಸಂವಿಧಾನ ಜಾರಿಯಾಗುವುದರೊಂದಿಗೆ ಭಾರತ ವೈರುಧ್ಯಗಳಿಂದ ಕೂಡಿದ ಬದುಕಿಗೆ ಕಾಲಿಡಲಿದೆ. ರಾಜಕೀಯವಾಗಿ ಸಮಾನತೆ ದೊರೆತರೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನತೆ ಮುಂದುವರಿಯಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು.
ರಾಜಕೀಯ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದು ಮೌಲ್ಯ ಎಂಬ ತತ್ವವನ್ನು ಒಪ್ಪಿಕೊಂಡಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಮೌಲ್ಯ ದೊರೆತಿಲ್ಲ. ಈ ವೈರುಧ್ಯವನ್ನು ಶೀಘ್ರವಾಗಿ ನಿವಾರಿಸದಿದ್ದರೆ ಅಸಮಾನತೆಯಿಂದ ನರಳುತ್ತಿರುವ ಜನರೇ ಸಂವಿಧಾನ ರಚನಾ ಸಭೆ ಶ್ರಮಪಟ್ಟು ನಿರ್ಮಿಸಿದ ರಾಜಕೀಯ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಧ್ವಂಸಗೊಳಿಸಲಿದ್ದಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದರು. ಅಧಿಕಾರಕ್ಕೆ ಬರುವ ಎಲ್ಲ ರಾಜಕೀಯ ಪಕ್ಷಗಳು ಈ ಮಾತುಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರಲ್ಲಿ ಬದ್ಧತೆ ಇಲ್ಲದಿದ್ದರೆ ಅದರ ಆಶಯಗಳು ಈಡೇರುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ದೇಶದಲ್ಲಿ ನಿರೀಕ್ಷಿತ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
2013ರಿಂದ 2018ರವರೆಗೆ ಹಾಗೂ 2023ರಿಂದೀಚೆಗೆ ತಮ್ಮ ನೇತೃತ್ವದ ಸರ್ಕಾರ ಸಮಾಜದಲ್ಲಿರುವ ಅಸಮಾನತೆಯನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಈ ಉದ್ದೇಶದಿಂದಲೇ ಹಲವು ಭಾಗ್ಯ ಯೋಜನೆಗಳು ಹಾಗೂ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವು ಕೇವಲ ಕಲ್ಯಾಣ ಕಾರ್ಯಕ್ರಮಗಳಲ್ಲ, ಸಾಮಾಜಿಕ ನ್ಯಾಯವನ್ನು ಒದಗಿಸುವ ಹಾಗೂ ಸಮಾನತೆಯ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಇಟ್ಟ ಮಹತ್ವದ ಹೆಜ್ಜೆಗಳಾಗಿವೆ. ಇದೇ ದಿಕ್ಕಿನಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದರು.
ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿವಾರಣೆಯಾಗದೆ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾನ ಅವಕಾಶಗಳು ದೊರೆಯಬೇಕು. ಇಲ್ಲವಾದರೆ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು ಹಾಗೂ ಸಂವಿಧಾನ ರಚನೆಯಾಗಿದ್ದು ಸಾರ್ಥಕವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿಪ್ರಾಯಪಟ್ಟರು.
ಜಾತಿ ವ್ಯವಸ್ಥೆ ಮತ್ತು ಅಸಮಾನತೆ ನಿರ್ಮೂಲನೆಯಾಗದೆ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡಿದ್ದ ಸಮಾನತೆಯ ಭಾರತದ ಕನಸು ನನಸಾಗಲು ಸಾಧ್ಯವಿಲ್ಲ. ಈ ಮಹನೀಯರ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಇತ್ತೀಚೆಗೆ ಒಳಮೀಸಲಾತಿಯನ್ನು ಜಾರಿಗೆ ತಂದಿರುವುದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಒಳಮೀಸಲಾತಿಯ ಹಿನ್ನೆಲೆಯಲ್ಲಿ ಸಮುದಾಯಗಳ ನಡುವೆ ಕೆಲವು ಭಿನ್ನಾಭಿಪ್ರಾಯಗಳು ತಲೆದೋರಿವೆ. ಇಂತಹ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿಸುವ ಕೆಲಸವಾಗಬೇಕು. ಸಂವಿಧಾನವೇ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಅದರ ರಕ್ಷಣೆಗಾಗಿ ಎಲ್ಲ ಸಮುದಾಯಗಳು ಒಗ್ಗಟ್ಟಿನಿಂದ ನಿಲ್ಲಬೇಕಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು
ಸಂವಿಧಾನವನ್ನು ಏಕಾಏಕಿ ಬದಲಾಯಿಸುವ ಅಥವಾ ರದ್ದುಗೊಳಿಸುವ ಬದಲು ಹಂತಹಂತವಾಗಿ ದುರ್ಬಲಗೊಳಿಸುವ ಪ್ರಯತ್ನವನ್ನು ಬಿಜೆಪಿಯವರು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನದ ಪರಾಮರ್ಶೆಗೆ ಮುಂದಾಗಿದ್ದನ್ನು ಉಲ್ಲೇಖಿಸಿದ ಅವರು, ಅಂದು ವ್ಯಾಪಕ ವಿರೋಧ ವ್ಯಕ್ತವಾಗಿತ್ತು ಎಂದು ಸ್ಮರಿಸಿದರು.
ಸಿಬಿಐ, ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದಂತಹ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ನ್ಯಾಯಾಂಗದ ಮೇಲೂ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ. ಎಲ್ಲರಿಗೂ ನ್ಯಾಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯ ದೊರೆಯಬೇಕೆಂಬ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಪ್ರಯತ್ನಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ತಮ್ಮ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಸಮಾಜದಲ್ಲಿ ದ್ವೇಷದ ಬೀಜ ಬಿತ್ತುವ ಮತ್ತು ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ ಸಿದ್ದರಾಮಯ್ಯ ಅವರು, ಇದಕ್ಕೆ ಪರ್ಯಾಯವಾಗಿ ಪ್ರೀತಿ, ಮಾನವೀಯತೆ ಮತ್ತು ಸಹೋದರತ್ವವನ್ನು ಬೆಳೆಸುವ ಕೆಲಸವಾಗಬೇಕು. ಸಮಾಜವನ್ನು ಹಾಗೂ ಭಾರತವನ್ನು ಒಗ್ಗೂಡಿಸಬೇಕು. ಆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮತ್ತು ಸಂವಿಧಾನ ರಚಿಸಿದ ಮಹನೀಯರ ಆಶಯಗಳಿಗೆ ಗೌರವ ಸಲ್ಲಿಸಬೇಕು. ಈ ಜವಾಬ್ದಾರಿಯನ್ನು ಕಾಂಗ್ರೆಸ್ ಸಮರ್ಥವಾಗಿ ನಿಭಾಯಿಸಬಲ್ಲದು ಎಂದು ಹೇಳಿದರು.
ಸಂವಿಧಾನವನ್ನು ಉಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಪ್ರಜಾಪ್ರಭುತ್ವವನ್ನು ಉಳಿಸುವ ಮೂಲಕ ಸಮಾನತೆಯ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಬೇಕು. ಇದಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿ ಹೋರಾಟ ನಡೆಸಬೇಕಿದೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.
ವಿಭಾಗೀಯ ಮಟ್ಟದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ರಾಜ್ಯದ ಎಲ್ಲ ವಿಭಾಗಗಳಲ್ಲಿಯೂ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಆಶಿಸಿದರು.
ಕೊನೆಯದಾಗಿ, ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಚಿವ ಮುನಿಯಪ್ಪನವರು ಸೇರಿದಂತೆ ವಿಭಾಗದ ಎಲ್ಲ ಸಚಿವರು, ಶಾಸಕರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಮತ್ತು ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು.
ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಮಾತನಾಡಿ ಕರ್ನಾಟಕದಲ್ಲಿ ಆಚರಿಸುತ್ತಿರುವ ಮಾದರಿಯಲ್ಲಿಯೇ ದೇಶದಾದ್ಯಂತ ಸಂವಿಧಾನ ದಿನಾಚರಣೆಯನ್ನು ವ್ಯಾಪಕವಾಗಿ ಆಚರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು. ಆ ಮೂಲಕ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು. ಎಂದು ಹೇಳಿದ ಉಪಮುಖ್ಯಮಂತ್ರಿಗಳು
ಕರ್ನಾಟಕದಲ್ಲಿ ಇಂದು ಐತಿಹಾಸಿಕ ಹೆಜ್ಜೆ ಇಡಲಾಗುತ್ತಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಡಾ. ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪಠಣಕ್ಕೆ ಆದೇಶ ಹೊರಡಿಸಲಾಯಿತು. ಇದು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿತ್ತು. ನಂತರ ಸಂವಿಧಾನ ದಿನಾಚರಣೆಯನ್ನು ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದೀಗ ರಾಜ್ಯ ಸರ್ಕಾರ ಪ್ರತಿ ವರ್ಷ ಸಂವಿಧಾನ ದಿನಾಚರಣೆ ನಡೆಸುತ್ತಿದೆ. ಕರ್ನಾಟಕದ ಮಾದರಿಯಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಸಂವಿಧಾನ ದಿನಾಚರಣೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳಬೇಕು. ಎಂದು ಹೇಳಿದರು
ಸಂವಿಧಾನವನ್ನು ವಿರೋಧಿಸಿದವರೇ ಇಂದು ಹೊಗಳುತ್ತಿದ್ದಾರೆ: ಭಾರತದ ಪ್ರತಿಯೊಂದು ಸಮಸ್ಯೆಗೂ ಪರಿಹಾರ ನೀಡಬಲ್ಲ ಸಂವಿಧಾನವನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಭಾರತದ ಸಂವಿಧಾನ ಇಡೀ ವಿಶ್ವದ ಗಮನ ಸೆಳೆದಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಒಂದು ಕಾಲದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದವರು, ತಮ್ಮ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನೂ ಇಡದಿದ್ದವರು ಇಂದು ಸಂವಿಧಾನವನ್ನು ಹೊಗಳುತ್ತಿದ್ದಾರೆ. ಅಂಬೇಡ್ಕರ್ ಅವರ ಜಯಂತಿಯನ್ನೂ ಆಚರಿಸುತ್ತಿದ್ದಾರೆ. ಇದೊಂದು ದೊಡ್ಡ ಬದಲಾವಣೆ. ಎಂದು ಹೇಳಿದ ಪರಮೇಶ್ವರ್ ಅವರು
ಆದರೆ, ಈ ಬದಲಾವಣೆ ಪ್ರಾಮಾಣಿಕವಾದುದಲ್ಲ. ಜನಾಭಿಪ್ರಾಯ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಪರವಾಗಿರುವುದನ್ನು ಅರಿತುಕೊಂಡು, ಜನರ ಒತ್ತಡಕ್ಕೆ ಮಣಿದು ಇಂದು ಅವರು ಸಂವಿಧಾನವನ್ನು ಪ್ರಶಂಸಿಸುತ್ತಿದ್ದಾರೆ.
‘ಭಾರತದ ಜನತೆಯಾದ ನಾವು’ ಎಂಬುದೇ ಸಂವಿಧಾನದ ಶಕ್ತಿ: ಯಾರು ಈ ದೇಶದಲ್ಲಿ ಮನುಸ್ಮೃತಿಯನ್ನು ಜಾರಿಗೆ ತರಲು ಬಯಸಿದ್ದರೋ, ಯಾರು ಸಮಾನತೆಯನ್ನು ವಿರೋಧಿಸಿ ಅಸಮಾನತೆಯನ್ನು ಪ್ರತಿಪಾದಿಸುತ್ತಿದ್ದರೋ, ಅವರೇ ಇಂದು ಸಂವಿಧಾನದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಸಂವಿಧಾನವನ್ನು ಅಂಗೀಕರಿಸುವುದಕ್ಕೂ 22 ವರ್ಷಗಳ ಹಿಂದೆಯೇ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ್ದರು ಎಂಬುದನ್ನು ನಾವು ಸ್ಮರಿಸಬೇಕಿದೆ. ಎಂದು ಹೇಳಿದರು
ಸಂವಿಧಾನದ ಪೀಠಿಕೆ ‘We, the People of India’ (ಭಾರತದ ಜನತೆಯಾದ ನಾವು) ಎಂಬ ಪದಗಳೊಂದಿಗೆ ಆರಂಭವಾಗುತ್ತದೆ. ಅಂಬೇಡ್ಕರ್ ಅವರು ಯಾವುದೇ ನಿರ್ದಿಷ್ಟ ವ್ಯಕ್ತಿ, ಜಾತಿ ಅಥವಾ ಧರ್ಮವನ್ನು ಉಲ್ಲೇಖಿಸಲಿಲ್ಲ. ದೇಶದ ಎಲ್ಲ ಜನರನ್ನೂ ಸಮಾನವಾಗಿ ಪರಿಗಣಿಸುವ ಆಶಯದೊಂದಿಗೆ ಸಂವಿಧಾನವನ್ನು ರೂಪಿಸಿದರು. ಇದೇ ನಮ್ಮ ಸಂವಿಧಾನದ ಮಹತ್ವವಾಗಿದೆ.
ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಎಚ್.ವಿ. ಕಾಮತ್ ಅವರು ಸಂವಿಧಾನದ ಪೀಠಿಕೆಯನ್ನು ದೇವರ ಹೆಸರಿನಲ್ಲಿ ಆರಂಭಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟಿದ್ದರು. ಈ ಪ್ರಸ್ತಾಪವನ್ನು ಮತಕ್ಕೆ ಹಾಕಿದಾಗ ಸಂವಿಧಾನ ರಚನಾ ಸಭೆ ಅದನ್ನು ತಿರಸ್ಕರಿಸಿತು. ಸಂವಿಧಾನ ರಚನೆಯ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಾಕಷ್ಟು ಟೀಕೆಗಳನ್ನೂ ಎದುರಿಸಿದ್ದರು. ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ಎಂಬ ಟೀಕೆಯನ್ನೂ ಕೆಲವರು ಮಾಡಿದ್ದರು. ಎಂದರು
ಅಂಬೇಡ್ಕರ್ ಅವರು ತಮ್ಮ ಸಾಮಾಜಿಕ ತತ್ವವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಶಬ್ದಗಳಲ್ಲಿ ಅಡಕಗೊಂಡಿದೆ ಎಂದಿದ್ದರು. ಈ ತತ್ವವನ್ನು ನಾನು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿಲ್ಲ ಎಂದಿದ್ದ ಅಂಬೇಡ್ಕರ್ ಅವರು ನನ್ನ ತಾತ್ವಿಕತೆಯ ಬೇರುಗಳು ರಾಜ್ಯಶಾಸ್ತ್ರದಲ್ಲಿಲ್ಲ, ಧರ್ಮದಲ್ಲಿವೆ ಎಂದಿದ್ದರು. ನನ್ನ ಗುರುವಾದ ಗೌತಮ ಬುದ್ಧನ ಬೋಧನೆಗಳಿಂದ ಈ ಮೌಲ್ಯಗಳನ್ನು ತಾವು ಪಡೆದುಕೊಂಡಿರುವುದಾಗಿ ಅವರು ತಿಳಿಸಿದ್ದರು.
ಮತದಾನದ ಹಕ್ಕು ಕಸಿದುಕೊಂಡರೆ ನ್ಯಾಯಸಮ್ಮತ ಚುನಾವಣೆ ಹೇಗೆ ಸಾಧ್ಯ?: ಕಳೆದ 14–15 ವರ್ಷಗಳಿಂದ ದೇಶದಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವಂತಹ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಪೆಟ್ಟು ನೀಡುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಎಂದು ಹೇಳಿದರು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯಬೇಕೆಂಬ ಆಶಯದೊಂದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನಾತ್ಮಕ ವ್ಯವಸ್ಥೆಯನ್ನು ರೂಪಿಸಿದ್ದರು. ಆದರೆ, ಇಂದು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳು ಎದುರಾಗಿವೆ.
ಮತಗಳ್ಳತನ ಹಾಗೂ ಮತದಾರರ ಪಟ್ಟಿಯಿಂದ ದಲಿತರು, ಅಲ್ಪಸಂಖ್ಯಾತರು, ಬಡವರು ಮತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವವರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಚುನಾವಣಾ ಆಯೋಗವೇ ಇಂತಹ ಕ್ರಮಗಳಿಗೆ ಮುಂದಾದರೆ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಹೇಗೆ ಸಾಧ್ಯ? ಎಂದ ಅವರು
ದೇಶದ ಅಭಿವೃದ್ಧಿಗೆ ಆದ್ಯತೆಗಳನ್ನು ನಿಗದಿಪಡಿಸಿ, ವ್ಯವಸ್ಥಿತವಾಗಿ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಪಂಡಿತ್ ಜವಾಹರಲಾಲ್ ನೆಹರು ಅವರು ಯೋಜನಾ ಆಯೋಗ ಮತ್ತು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಪ್ರತಿ ಐದು ವರ್ಷಗಳಿಗೊಮ್ಮೆ ದೇಶದ ಆದ್ಯತೆಗಳು ಏನಿರಬೇಕು, ಯಾವ ಕ್ಷೇತ್ರದಲ್ಲಿ ಯಾವ ರೀತಿಯ ಅಭಿವೃದ್ಧಿ ಸಾಧಿಸಬೇಕು ಎಂಬುದನ್ನು ನಿರ್ಧರಿಸುವ ವ್ಯವಸ್ಥೆಯನ್ನು ರೂಪಿಸಿದ್ದರು. ಆದರೆ, ಇಂದು ಯೋಜನಾ ಆಯೋಗವನ್ನು ರದ್ದುಗೊಳಿಸಿ ಅದರ ಬದಲಿಗೆ ನೀತಿ ಆಯೋಗವನ್ನು ಸ್ಥಾಪಿಸಲಾಗಿದೆ.
ದೇಶದ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳಾಗಿದ್ದರೆ, ಹಸಿರು ಕ್ರಾಂತಿಯ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೆ, ಅದರ ಹಿಂದೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಸಂವಿಧಾನಾತ್ಮಕ ಅಡಿಪಾಯವಿದೆ ಎಂಬುದನ್ನು ಸ್ಮರಿಸಬೇಕಿದೆ.
ಸಂವಿಧಾನವನ್ನು ವಿರೋಧಿಸುತ್ತಿದ್ದವರೇ ಇಂದು ಸಂವಿಧಾನವನ್ನು ಹೊಗಳಲು ಆರಂಭಿಸಿದ್ದಾರೆ. ಅವರ ಮಾತುಗಳ ಬಗ್ಗೆ ಹಾಗೂ ಮುಂದಿನ ನಡೆಗಳ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಿದೆ.
ಬಡವರ ಪರವಾದ ಯೋಜನೆಗಳಲ್ಲಿ ರಾಜಿ ಮಾಡಿಕೊಳ್ಳಬೇಡಿ: 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ಯಾವ ರೀತಿಯ ಆಡಳಿತ ನೀಡುತ್ತಾರೆ, ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿತ್ತು. ಅನ್ನಭಾಗ್ಯ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ ಬದುಕಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುವ ಕೆಲಸ ಮಾಡಿದರು. ಹಲವು ಟೀಕೆಗಳ ನಡುವೆಯೂ ಜಾರಿಗೊಳಿಸಿದ ಆ ಯೋಜನೆಗಳನ್ನು ಇಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಎಂದು ಹೇಳಿದರು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಲ್ಲಿ ನನ್ನದೊಂದು ಮನವಿ ಇದೆ. ಬೆಂಗಳೂರಿನ ಅಭಿವೃದ್ಧಿಗೆ ಎಷ್ಟೇ ಕಾರ್ಯಕ್ರಮಗಳನ್ನು ರೂಪಿಸಿ, ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿ. ಆದರೆ, ಬಡವರ ಪರವಾದ ಕಾರ್ಯಕ್ರಮಗಳಲ್ಲಿ ಮಾತ್ರ ದಯಮಾಡಿ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಸಮಾಜದ ದಲಿತರು, ಶೋಷಿತರು ಮತ್ತು ದುರ್ಬಲ ವರ್ಗದ ಜನರ ಏಳಿಗೆಯಾಗದೆ ಹೋದರೆ ದೇಶದಲ್ಲಿ ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಅದಕ್ಕೆ ಸಾರ್ಥಕತೆ ಇರುವುದಿಲ್ಲ. ಸಮಾಜದ ಎಲ್ಲ ವರ್ಗಗಳ ಜನರ ಅಭಿವೃದ್ಧಿಯನ್ನು ಖಾತರಿಪಡಿಸುವ ಮೂಲಕ ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಸಾಕಾರಗೊಳಿಸಬೇಕಿದೆ. ಎಂದರು
ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ ರವರು
ಸಂವಿಧಾನವು ಕೇವಲ ಲಿಖಿತ ದಾಖಲೆಯಲ್ಲ, ಅದೊಂದು ಜೀವಂತ ಗ್ರಂಥ. ಇದನ್ನು ಗೌರವಿಸುವುದು ಮತ್ತು ಚಾಚೂತಪ್ಪದೆ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ.ಮೂರು ವರ್ಷಗಳಿಂದ ವಿಧಾನಸೌಧದಲ್ಲಿ ಸಂವಿಧಾನ ದಿನಾಚರಣೆ ಸಮಾರಂಭ ನಡೆಯುತ್ತಿತ್ತು. ಈ ಬಾರಿ ಮೈಸೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಎಂದು ಸಂತಸ ವ್ಯಕ್ತಪಡಿಸಿದ ಸಚಿವರು ಹಿಂದೆ ‘ಧರ್ಮೋ ರಕ್ಷತಿ ರಕ್ಷಿತಃ’ ಎನ್ನಲಾಗುತ್ತಿತ್ತು. ಈಗ ‘ನಾವು ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ’. ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳು ಮತ್ತು ಸ್ವಾಭಿಮಾನದ ಬದುಕಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಆಧಾರ. 1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಮಿತಿಯು ಸಂವಿಧಾನವನ್ನು ರಚಿಸಿ ಅಂಗೀಕರಿಸಿದ ಸ್ಮರಣಾರ್ಥ ಪ್ರತಿ ವರ್ಷ ಸಂವಿಧಾನ ದಿನಾಚರಣೆ ಆಚರಿಸಲಾಗುತ್ತಿದೆ. ನನ್ನ ತಂದೆಯವರಾದ ಶ್ರೀ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ವತಿಯಿಂದ ಸಂವಿಧಾನ ದಿನಾಚರಣೆ ನಡೆಸಲು ಪ್ರಾರಂಭಿಸಲಾಯಿತು. ಎಂದು ಹೇಳಿದ ಸಚಿವರು
ಡಾ. ಹೆಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ‘ಸಂವಿಧಾನ ಜಾಥ’ ಮೂಲಕ ಸಂವಿಧಾನದ ಸಂದೇಶವನ್ನು ಹಳ್ಳಿಹಳ್ಳಿಗೂ ತಲುಪಿಸಲಾಗಿತ್ತು. ಈಗ ಸಮಾಜ ಕಲ್ಯಾಣ ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ‘ರಾಜ್ಯಮಟ್ಟದ ಯುವ ಸಂಸತ್’ ಕಾರ್ಯಕ್ರಮ ನಡೆಸಲಾಗಿದೆ. ಇದರಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವಿದ್ಯಾರ್ಥಿಗಳು ಮತ್ತು ಯುವಕರು ಭಾಗವಹಿಸಿದ್ದಾರೆ ಎಂದು ಹೇಳಿದ ಸಚಿವರು
ದುರ್ಬಲ ವರ್ಗಗಳ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಗೆ ಅನುಗುಣವಾಗಿ ಸಂವಿಧಾನಕ್ಕೆ ಧಕ್ಕೆ ಅಥವಾ ಅಪಾಯ ಎದುರಾದಾಗಲೆಲ್ಲಾ ಧ್ವನಿ ಎತ್ತಿ, ಅದರ ಉಳಿವಿಗಾಗಿ ಹೋರಾಟ ನಡೆಸುವ ಬದ್ಧತೆಯನ್ನು ಕಾಂಗ್ರೆಸ್ ಸರ್ಕಾರ ಹೊಂದಿದೆ. ಎಂದ ಅವರು
ಇದೇ ಸಂದರ್ಭದಲ್ಲಿ ಭಾರತದ ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಸ್ವೀಕರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ‘ಬಾಬೂಜಿ’ ಎಂದೇ ಪ್ರಸಿದ್ಧರಾಗಿದ್ದ ಬಾಬು ಜಗಜೀವನ್ ರಾಮ್, 12ನೇ ಶತಮಾನದಲ್ಲೇ ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ದೀವಿಗೆಯನ್ನು ಹೊತ್ತಿಸಿದ ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಬಸವಣ್ಣ ಅವರ ಪ್ರತಿಮೆಗಳಿಗೆ ಗೌರವಪೂರ್ವಕವಾಗಿ ಪುಷ್ಪ ನಮನ ಸಲ್ಲಿಸಿದರು
ಸಮಾರಂಭದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನದ ಆಶಯ ಗಳನ್ನು ಮತ್ತು ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಂದು ಹಳ್ಳಿಯಲ್ಲು ಜಾಗತಿ ಮೂಡಿಸುವ ಮೂಲಕ ಅವರ ಸಂದೇಶವನ್ನು ಸಾರುವಂಥ ಕೆಲಸವನ್ನ ನಾವು ಜವಾಬ್ದಾರಿಯುತವಾಗಿ ಮಾಡಬೇಕಿದೆ ಎಂದು ಹೇಳಿದರು ಸಮಾರಂಭದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ,ನಿಕಟಪೂರ್ವ ಸಿಎಂ ಸಿದ್ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, , ಸಚಿವರಾದ ಕೆಎಚ್ ಮುನಿಯಪ್ಪ ಜಮೀರ್ ಅಹಮದ್, ಪಿ.ಎಂ. ನರೇಂದ್ರಸ್ವಾಮಿ, ಸಿ. ಪುಟ್ಟರಂಗಶೆಟ್ಟಿ, ರಿಜ್ವಾನ್ ಅರ್ಷದ್, ಚಲುವರಾಯಸ್ವಾಮಿ, ಡಾ ಎಸ್ ಯತೀಂದ್ರ ಸಿದ್ದರಾಮಯ್ಯ ರವರು ಶಾಸಕರಾದ ನಾಯಕರಾದ ಡಾ. ಹೆಚ್.ಸಿ. ಮಹದೇವಪ್ಪ, ತನ್ವಿರ್ ಸೇಠ್, ಕೆ. ವೆಂಕಟೇಶ್, ಡಿ ರವಿಶಂಕರ್, ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ , ಕೆ ಶಿವಕುಮಾರ್ ರಾಜ್ಯ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್ಎಮ್ ರೇವಣ್ಣ ,ಮಳವಳ್ಳಿ ಶಿವಣ್ಣ, ಮಾಜಿ ಎಂಎಲ್ಸಿ ನಸೀರ್ ಅಹಮದ್ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ . ಶ್ರೀಮತಿ ಪುಷ್ಪ ಅಮರನಾಥ್ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ನಿಕಟ ಪೂರ್ವ ಅಧ್ಯಕ್ಷ ಡಾ ಬಿ ಜೆ ವಿಜಯ್ ಕುಮಾರ್ ನಗರದ ಅಧ್ಯಕ್ಷ ಆರ್ ಮೂರ್ತಿ ಎಂ ಲಕ್ಷ್ಮಣ ಬಿ ಶಿವಣ್ಣ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸೇರದಂತೆ ವಿವಿಧ ನಿಗಮಂಡಳಿಗಳ ಅಧ್ಯಕ್ಷರು ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಭಾಗಿಯಾಗಿದ್ದರು










