--Ads--

ಕಾಡಾನೆ ಸ್ಥಳಾಂತರ ಖಂಡಿಸಿ ಎನ್‌ಡಿಎ ಮೈತ್ರಿ ಕೂಟದಿಂದ ಪ್ರತಿಭಟನೆ

On: November 27, 2026 5:31 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ಕಾಡಾನೆ ಸ್ಥಳಾಂತರ ಖಂಡಿಸಿ ಎನ್‌ಡಿಎ ಮೈತ್ರಿ ಕೂಟದಿಂದ ಪ್ರತಿಭಟನೆ

ಬಾಳೆಹೊನ್ನೂರು: ಭದ್ರಾ ಅಭಯಾರಣ್ಯಕ್ಕೆ ೫೬ ಕಾಡಾನೆ ಸ್ಥಳಾಂತರ ಖಂಡಿಸಿ ಸಮೀಪದ ಕಡಬಗೆರೆಯಲ್ಲಿ ಖಾಂಡ್ಯ ಹೋಬಳಿ ಬಿಜೆಪಿ, ಜೆಡಿಎಸ್ ಹಾಗೂ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನಾ ನಡೆಸಲಾಯಿತು.
ಪ್ರತಿಭಟನೆಯ ಆರಂಭದಲ್ಲಿ ಸಂಗಮೇಶ್ವರ ಪೇಟೆಯ ಹೆಬ್ಬೆ ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗದಿಂದ ಕಡಬಗೆರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆ ಬಳಿಕ ಕೆಲಕಾಲ ಬಾಳೆಹೊನ್ನೂರು-ಚಿಕ್ಕಮಗಳೂರು ರಸ್ತೆ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು.
ಮಾಜಿ ಶಾಸಕ ಡಿ.ಎನ್.ಜೀವರಾಜ್ ಸಭೆಯಲ್ಲಿ ಮಾತನಾಡಿ, ಕಾಡಾನೆ ವಿಚಾರದಲ್ಲಿ ಹಲವಾರು ಪ್ರತಿಭಟನೆಗಳು ನಡೆದಿದ್ದರೂ ಸಹ ಇಲ್ಲಿನ ಶಾಸಕರು ಸೂಕ್ತ ಎಚ್ಚರಿಕೆ ವಹಿಸಿ ಕ್ರಮ ತೆಗೆದುಕೊಳ್ಳದೆ ಇದ್ದು, ಕ್ಷೇತ್ರದ ಜನರ ಕುರಿತು ಕಾಳಜಿ ಇಲ್ಲವಾಗಿದೆ. ನಮ್ಮ ಕ್ಷೇತ್ರದ ಶಾಸಕರು ಸಾವಿನ ಮನೆಗೆ ಸೈರನ್ ಹಾಕಿಕೊಂಡು ಹೋಗುವಲ್ಲಿ ನಿಸ್ಸೀಮರಾಗಿದ್ದಾರೆ. ಕ್ಷೇತ್ರಕ್ಕೆ ಎಲ್ಲಿಂದಾದರೂ ಕಾಡಾನೆ ಬಂದರೆ ಅದಕ್ಕೂ ನನಗೂ ಸಂಬಂಧವಿಲ್ಲದಂತೆ ಶಾಸಕರು ವರ್ತಿಸುತ್ತಿದ್ದಾರೆ.
ಆದರೆ ಅವರ ಮನೆ ಬಳಿ ಮಾತ್ರ 500,1000 ಮೀಟರ್ ಎತ್ತರದ ವಾಲ್ ನಿರ್ಮಿಸಿಕೊಂಡು ಪ್ರಾಣಿಗಳು ಬರದಂತೆ ಎಚ್ಚರಿಕೆ ವಹಿಸಿಕೊಂಡಿದ್ದಾರೆ. ಇಡೀ ಕ್ಷೇತ್ರಕ್ಕೆ ನಾನೊಬ್ಬನೇ ಶಾಸಕ, ನನ್ನ ರಕ್ಷಣೆಯಾದರೆ ಎಲ್ಲರ ರಕ್ಷಣೆಯಾದಂತೆ ಶಾಸಕರು ಅಂದುಕೊಂಡಿರಬೇಕು ಎಂದು ಲೇವಡಿ ಮಾಡಿದರು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಮಾತನಾಡಿ, ಕಳೆದ ವಾರ ಹೆನ್ನಂಗಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಕಾಡಾನೆಗಳ ಸ್ಥಳಾಂತರ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು ಭರವಸೆ ನೀಡಿದ್ದರು.
ಆದರೆ ಆಶ್ವಾಸನೆ ನೀಡಿದ ಕೆಲವೇ ಗಂಟೆಗಳಲ್ಲಿಯೇ ಕಾಡಾನೆಗಳ ಸ್ಥಳಾಂತರ ಪ್ರಕ್ರಿಯೆ ಆರಂಭಗೊಂಡಿದೆ. ಮಲೆನಾಡಿಗರ ಮುಗ್ಧತೆಯನ್ನು ಶಾಸಕರು, ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೇ ಘಟನೆ ಬಯಲು ಸೀಮೆ ಭಾಗದಲ್ಲಿ ನಡೆದಿದ್ದರೆ ಅರಣ್ಯ ಇಲಾಖೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರು. ಬೇಲೂರಿನಲ್ಲಿ ಆನೆ ದಾಳಿ ನಡೆದಾಗ ಉಸ್ತುವಾರಿ ಸಚಿವರು ಕೂಡಲೇ ಆನೆಗಳ ಸ್ಥಳಾಂತರಕ್ಕೆ ಆದೇಶ ಮಾಡಿಸಿದ್ದರು. ಆದರೆ ಜಿಲ್ಲೆಯಲ್ಲಿ ೫ ಶಾಸಕರಿದ್ದರೂ ಕೂಡ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮಾತನಾಡಲು ಆಗಿಲ್ಲ ಎಂಬುದು ವಿಶಾದನೀಯವಾಗಿದೆ ಎಂದರು.
ಪ್ರತಿಭಟನೆ ಮುಕ್ತಾಯಗೊಂಡ ನಂತರ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸುವ ಕುರಿತು ಮೊದಲೇ ಮಾಹಿತಿ ನೀಡಿದ್ದು, ಪ್ರತಿಭಟನೆ ಮುಕ್ತಾಯಗೊಂಡರೂ ಸಹ ಸ್ಥಳಕ್ಕೆ ಅರಣ್ಯ ಇಲಾಖೆ ಆರ್‌ಎಫ್‌ಓ ಮನವಿ ಸ್ವೀಕರಿಸಲು ಆಗಮಿಸದೆ ಗೈರಾಗಿದ್ದರು. ತಡವಾಗಿ ಸ್ಥಳಕ್ಕೆ ಆರ್‌ಎಫ್‌ಓ ಆಗಮಿಸಿದ್ದು ಇದರಿಂದ ಮಾಜಿ ಶಾಸಕ ಜೀವರಾಜ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಅವರ ಕೈಗೆ ಮನವಿ ನೀಡದೆ, ನಾಡಕಚೇರಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ನಿಲೇಶ್, ಮಾಜಿ ಅಧ್ಯಕ್ಷ ಅರುಣ್‌ಕುಮಾರ್, ಹೋಬಳಿ ಬಿಜೆಪಿ ಅಧ್ಯಕ್ಷ ಸಾರಗೋಡು ಸುರೇಶ್, ಹೋಬಳಿ ಜೆಡಿಎಸ್ ಅಧ್ಯಕ್ಷ ರಘು ಬಿಳಗೊಳ, ಮುಖಂಡರಾದ ಭಾಸ್ಕರ್ ವೆನಿಲ್ಲಾ, ಪ್ರಭಾಕರ್ ಪ್ರಣಸ್ವಿ, ಪ್ರದೀಪ್ ಕಿಚ್ಚಬ್ಬಿ, ಯೋಗಾನಂದ ರಾಜು, ಪ್ರೇಮೇಶ್, ಶಿವಶಂಕರ್, ಕೋಕಿಲಮ್ಮ, ವಿನೋದ್ ಬೊಗಸೆ, ಹುಯಿಗೆರೆ ವಾಸು, ಬೆಳಸೆ ನಾಗೇಶ್, ಎ.ಕೆ.ಸಂದೇಶ್, ಸಂಪತ್ ಮಾಗಲು ಮತ್ತಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now