ಮೈಸೂರು ಜಿಲ್ಲಾ ಪತ್ರಕರ್ತರ ಸಮ್ಮೇಳನಕ್ಕೆ ಅಗತ್ಯ ಸಹಕಾರ: ಶಾಸಕ ಜಿ.ಡಿ. ಹರೀಶ್‌ಗೌಡ

ವಿಜಯ ದರ್ಪಣ ನ್ಯೂಸ್

ಮೈಸೂರು ಅಕ್ಟೋಬರ್ 13: ಹುಣಸೂರು ತಾಲ್ಲೂಕು ಗಾವಡಗೆರೆಯ ಓಂ ಗುರುಲಿಂಗ ಜಂಗಮ ದೇವರ ಮಠದಲ್ಲಿ ನಡೆಸಲು ಉದ್ದೇಶಿಸಿರುವ ಪತ್ರಕರ್ತರ ಜಿಲ್ಲಾ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಜಿ.ಡಿ. ಹರೀಶ್‌ಗೌಡ ಭರವಸೆ ನೀಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಹುಣಸೂರು ತಾಲ್ಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಲಿರುವ ಸಮ್ಮೇಳನ ಸಂಬಂಧ ಶುಕ್ರವಾರ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ನಿವಾಸದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಪತ್ರಕರ್ತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ಜಿಲ್ಲಾ ಪತ್ರಕರ್ತರ ಸಂಘವೂ ಸಹ ಹಲವು ಕ್ಷೇಮಾಭಿವೃದ್ಧಿ ಕಾರ್ಯ ಮಾಡುತ್ತಿರುವುದರಿಂದ ನಮ್ಮ ಕ್ಷೇತ್ರದ ಗಾವಡಗೆರೆ ಶ್ರೀ ಮಠದಲ್ಲಿ ಆಯೋಜಿಸಲುದ್ದೇಶಿಸಿರುವ ಪತ್ರಕರ್ತರ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ತಾವು ಮತ್ತು ತಂದೆಯವರಾದ ಜಿ.ಟಿ.ದೇವೇಗೌಡರೂ ಸಹ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಮಠಾಧೀಶರಾದ ಶ್ರೀ ನಟರಾಜ ಸ್ವಾಮಿಗಳೊಂದಿಗೆ ಸಮಾಲೋಚನೆ ನಡೆಸಿ ಊಟ, ವಸತಿ ಇನ್ನಿತರ ಸೌಲಭ್ಯಕ್ಕಾಗಿ ಮನವಿ ಮಾಡಿ ಸಮ್ಮೇಳನಕ್ಕೆ ಆಗಮಿಸುವ ಪತ್ರಕರ್ತರಿಗೆ ಆತಿಥ್ಯ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದ ಹರೀಶ್‌ಗೌಡರು, ಕಾರ್ಯಕ್ರಮದ ರೂಪುರೇಷೆ, ಅತಿಥಿಗಳು, ಕಾರ್ಯಾಗಾರದ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಮಾತನಾಡಿ, ಈ ಹಿಂದೆಯೇ ಗಾವಡಗೆರೆ ಮಠದಲ್ಲಿ ಜಿಲ್ಲಾ ಪತ್ರಕರ್ತರ ಸಮ್ಮೇಳನಕ್ಕೆ ಸಿದ್ಧತೆ ನಡೆಸಲಾಗಿತ್ತಾದರೂ, ಅನಿವಾರ್ಯ ಕಾರಣದಿಂದಾಗಿ ಮುಂದೂಡಲಾಗಿತ್ತು. ಇದೀಗ ಸಂಘವು ಹುಣಸೂರು ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಮ್ಮೇಳನ ನಡೆಸಲು ಮುಂದಾಗಿದೆ ಎಂದರು.

ಸಮ್ಮೇಳನ ಯಶಸ್ವಿಯಾಗಿ ನಡೆಯಲು ಕ್ಷೇತ್ರದ ಶಾಸಕರಾದ ನೀವು ಹಾಗೂ ತಂದೆ ಜಿ.ಟಿ. ದೇವೇಗೌಡರ ಸಹಕಾರ ಮುಖ್ಯವಾಗಿದ್ದು, ಈಗಾಗಲೇ ಮಠದ ಶ್ರೀಗಳಾದ ಶ್ರೀ ನಟರಾಜ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪರೊಂದಿಗೂ ಸಮಾಲೋಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ, ರಾಜ್ಯ ಸಮಿತಿ ಸದಸ್ಯ ಬಿ. ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಉಪಸ್ಥಿತರಿದ್ದರು.