ವಿಜಯ ದರ್ಪಣ ನ್ಯೂಸ್
ಪಿಕ್ ಅಪ್ ಚಾಲಕನ ಅವಾಂತರಕ್ಕೆ ಆಂಬುಲೆನ್ಸ್ ಚಾಲನೆಗೆ ಸಂಚಾಕಾರ

ಮಡಿಕೇರಿ: ಪಿಕ್ ಅಪ್ ಚಾಲಕನೋರ್ವನ ಅಜಾಗರೂಕತೆ ಮತ್ತು ಅತೀ ವೇಗದ ಚಾಲನೆಯಿಂದಾಗಿ ಆಂಬುಲೆನ್ಸ್ ಸಂಚಾರಕ್ಕೆ ಕೆಲ ಕಾಲ ಸಂಚಾಕಾರ ಉಂಟಾದ ಘಟನೆ ಇಂದು ಸಂಜೆ ಸುಂಟಿಕೊಪ್ಪ ಪಟ್ಟಣದಲ್ಲಿ ನಡೆದಿದೆ.
ಮೊದಲೇ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಮಡಿಕೇರಿಯತ್ತ ಒಂದೇ ಟ್ರ್ಯಾಕ್ ನಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಇದೇ ಸಂದರ್ಭ ಕುಶಾಲನಗರದಿಂದ ಬಂದ ಪಿಕ್ ಅಪ್ ವಾಹನದ ಚಾಲಕ ಮುಂದಿದ್ದ ವಾಹನಗಳನ್ನು ಹಿಂದಿಕ್ಕಿ ಓವರ್ ಟೇಕ್ ಮಾಡಿ ಮುನ್ನುಗ್ಗಿದ್ದಾನೆ.
ಈ ನಡುವೆ ಮಡಿಕೇರಿ ಕಡೆಯಿಂದ ಇನ್ನೊಂದು ಟ್ರ್ಯಾಕ್ ನಲ್ಲಿ ಬಸ್ ಬಂದ ಕಾರಣ ಪಿಕ್ ಅಪ್ ಗೆ ಮುಂದಕ್ಕೆ ಹೋಗಲಾಗಲಿಲ್ಲ. ಇದೇ ಸಂದರ್ಭ ತುರ್ತಾಗಿ ಕುಶಾಲನಗರದಿಂದ ಮಡಿಕೇರಿಯತ್ತ ಬರುತ್ತಿದ್ದ ಆಂಬುಲೆನ್ಸ್ ವಾಹನ ಸ್ವಲ್ಪ ಹೊತ್ತು ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿತು.
ಸ್ಥಳದಲ್ಲಿದ್ದವರು ಇನ್ನಿತರ ವಾಹನಗಳನ್ನು ನಿಯಂತ್ರಿಸಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟರು. ಇಲ್ಲವಾದಲ್ಲಿ ಪಿಕ್ ಅಪ್ ವಾಹನದಿಂದಾಗಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.
ಕ್ರಮಕ್ಕೆ ಒತ್ತಾಯ
ಕೆಲವು ಪಿಕ್ ಅಪ್ ವಾಹನಗಳು ನಗರದೊಳಗೆ ಅತೀ ವೇಗದಲ್ಲಿ ಸಂಚರಿಸುತ್ತಿರುತ್ತವೆ. ಅಂತಹ ವಾಹನಗಳಿಂದ ಅನಾಹುತ ಸಂಭವಿಸುವ ಮುನ್ನ ಮಿತಿ ಮೀರುವ ಪಿಕ್ ಅಪ್ ಚಾಲಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.









