ಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ಬದಲಿಸುವುದಿಲ್ಲ : ಜೆಡಿಎಸ್ ಸೇವಾದಳದ ರಾಜ್ಯಾಧ್ಯಕ್ಷ ಬಸವರಾಜು ಪಾದಯಾತ್ರಿ:

ವಿಜಯ ದರ್ಪಣ ನ್ಯೂಸ್

ವಿಜಯಪುರ ಏಪ್ರಿಲ್ 23: ದೇಶದಲ್ಲಿ ಇಂದಿರಾಗಾಂಧಿಯ ಕಾಲದಲ್ಲಿ ಗರಿಬೀ ಹಠಾವೋ, ಘೋಷಣೆಯಿಂದ ಅಧಿಕಾರ ನಡೆಸಿದರೂ, ಇಂದಿಗೂ ಬಡತನ ಹೋಗಲಿಲ್ಲ. ಅದೇ ರೀತಿ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ಬದಲಿಸುವುದಿಲ್ಲ. ಆದ್ದರಿಂದ ಮತ್ತೊಮ್ಮೆ ಪ್ರಧಾನಿಯಾಗಿ ಮೋದಿ ಅಧಿಕಾರ ನಡೆಸಲಿದ್ದಾರೆ ಎಂದು ಜೆಡಿಎಸ್ ಸೇವಾದಳದ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್. ಬಸವರಾಜ್ ಪಾದಯಾತ್ರಿ ಹೇಳಿದರು.

ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡುವುದು ಕಾಂಗ್ರೆಸ್ ಪಕ್ಷದ ಮೂಲ ಅಜೆಂಡಾ ಆಗಿದೆ. ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿಕೊಂಡು ಇಂಡಿಯಾ ಮೈತ್ರಿಕೂಟ ಸ್ಥಾಪನೆ ಮಾಡಿಕೊಂಡಿರುವ ಅವರು, 40 ಸ್ಥಾನಗಳನ್ನೂ ಗೆಲ್ಲುವುದು ಅನುಮಾನವಿದೆ. ಅವರಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಈ ದೇಶದಲ್ಲಿ ಪ್ರಧಾನಿಯಾಗಿದ್ದಾಗ ಎಚ್.ಡಿ.ದೇವೇಗೌಡ ಅವರು ಜಾರಿಗೆ ತಂದಿರುವ ನೀರಾವರಿ ಯೋಜನೆಗಳಿಂದಾಗಿ ಲಕ್ಷಾಂತರ ಮಂದಿ ರೈತರು ಜೀವನ ರೂಪಿಸಿಕೊಂಡಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಂದವರು ದೇವೇಗೌಡರು. ಅವರ ಕೊಡುಗೆ ಅಪಾರವಾಗಿದೆ. ಅವರೇ ಸ್ವತಃ ಮೋದಿ ಪ್ರಧಾನಿಯಾಗಬೇಕು ಎಂದು ತೀರ್ಮಾನಿಸಿದ್ದಾರೆ.

ಆದ್ದರಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯವರು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರಿಗೆ ಬೆಂಬಲ ನೀಡುತ್ತಿದ್ದಾರೆ. 400 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಎನ್.ಡಿ.ಎ ಅಧಿಕಾರಕ್ಕೆ ಬರಲಿದೆ ಎಂದರು.

ಹಿರಿಯ ಜೆಡಿಎಸ್ ಮುಖಂಡ ಚಿ.ಮಾ.ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, ಉತ್ತಮವಾದ ತೀರ್ಮಾನ ಮಾಡಿದ್ದಾರೆ. ಜೆಡಿಎಸ್ ಕೇವಲ 3 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೂ ರಾಷ್ಟ್ರದಲ್ಲಿ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬರಲು ನೆರವಾಗಲಿದ್ದು, ರಾಜ್ಯದ ಏಳಿಗೆಗಾಗಿ ಬಿಜೆಪಿಯೊಂದಿಗೆ ಸೇರಿಕೊಂಡು ಉತ್ತಮ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.

ಜೆಡಿಎಸ್ ಸೇವಾದಳ ವಿಭಾಗದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ವೆಂಕಟೇಶಯ್ಯ, ಸಿ.ಎಂ.ಸುಧಾಕರ್, ತಾಲ್ಲೂಕು ಕೋರ್ ಕಮಿಟಿ ಸದಸ್ಯ ಎಂ.ದೊಡ್ಡೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಕರ್ನಾಟಕ ರಾಜ್ಯ ಜ್ಯಾತ್ಯಾತೀತ ಯುವಶಕ್ತಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜು.ಎನ್.ಸಿ, ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್, ಮುಂತಾದವರು ಹಾಜರಿದ್ದರು.

ವಿಜಯಪುರ ಪಟ್ಟಣದಲ್ಲಿ ಜೆಡಿಎಸ್ ಸೇವಾದಳದ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್. ಬಸವರಾಜ್ ಪಾದಯಾತ್ರಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.