ರೈತರ ಹಿತಕ್ಕಾಗಿ ಅಮೆರಿಕ ಒಪ್ಪಂದ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ
ವಿಜಯ ದರ್ಪಣ ನ್ಯೂಸ್…
ರೈತರ ಹಿತಕ್ಕಾಗಿ ಅಮೆರಿಕ ಒಪ್ಪಂದ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

ಗುಬ್ಬಿ, ಫೆಬ್ರವರಿ 19: ರೈತ ಪರ ಆಲೋಚನೆ ಮಾಡದ ರಾಹುಲ್ ಗಾಂಧಿ ಕೆಲಸವೇ ಬರೀ ಟೀಕೆ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ತಾಲ್ಲೂಕಿನ ಕಳ್ಳಿಪಾಳ್ಯ ಗೇಟ್ ಬಳಿ ಜೆಡಿಎಸ್ ಕಾರ್ಯಕರ್ತರನ್ನು ಭೇಟಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಪರ ಕೆಲಸಗಳನ್ನು ಎಂದೂ ಮಾಡಿಲ್ಲ. ವಿಷಯವಂತೂ ಮೊದಲೇ ತಿಳಿಯಲ್ಲ, ಯಾರೋ ಹೇಳುತ್ತಾರೆ ರಾಹುಲ್ ಗಾಂಧಿ ಅವರು ಮಾತನಾಡುತ್ತಾರೆ.
ಅಷ್ಟೇ ಎಂದು ವ್ಯಂಗ್ಯವಾಡಿದರು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳನ್ನು ರೈತರ ಪರವಾಗಿ ನಿಂತು ಸರಿಯಾಗಿ ಉಪಯೋಗ ಮಾಡಿಕೊಳ್ಳದ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು.
ರೈತರ ಹಿತ ಕಾಯಲು ಅಮೆರಿಕಾ ಜತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದು ದೇಶಕ್ಕೆ ರೈತರನ್ನು ಏನು ಮಾರಾಟ ಮಾಡುತ್ತಿದ್ದಾರೆಯೇ.? ನಮಗೆ ಅಷ್ಟು ತಲೆಯಲ್ಲಿ ಬುದ್ದಿ ಇಲ್ಲವೇ.? ಆ ರೀತಿ ಏನಾದರೂ ಇದ್ದರೆ ನಾವೇ ಈ ಒಪ್ಪಂದವನ್ನು ವಿರೋಧ ಮಾಡುತ್ತಿದ್ದೆವು ಎಂದು ತಿರುಗೇಟು ನೀಡಿದ ಅವರು, ದೇಶದ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಎಲ್ಲಾ ರೀತಿಯಲ್ಲಿಯೂ ಈ ಒಪ್ಪಂದದಿಂದ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿಯೇ ಎಲ್ಲಾ ಆಗು ಹೋಗುಗಳ ಲೆಕ್ಕಾಚಾರ ಮಾಡಿ ಪ್ರಧಾನಿ ಮೋದಿ ಅವರು ಈ ಒಪ್ಪಂದದ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದರು.
ನಂತರ ಸ್ಥಳೀಯ ಸ್ನಾತಕೋತ್ತರ ಪದವಿ ಪಡೆದ ಯುವತಿಯೊಬ್ಬಳ ಅರ್ಜಿ ಸ್ವೀಕರಿಸಿ ಸೂಕ್ತ ಉದ್ಯೋಗ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಜಿ.ಎನ್.ಬೆಟ್ಟಸ್ವಾಮಿ, ಯೋಗಾನಂದಕುಮಾರ್, ಜಿ.ಡಿ.ಸುರೇಶಗೌಡ, ಕಾರ್ಯಕರ್ತರಾದ ಸೋಮಶೇಖರ್, ಕಾಂತರಾಜು, ಡಿ. ರಘು, ಶಿವಾನಂದ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
*****************************************
ಶ್ರೀ ಗುರು ರಾಘವೇಂದ್ರ ವೈಭವೋತ್ಸವ -2026

ಬೆಂಗಳೂರು : ತ್ಯಾಗರಾಜನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ‘ಕಲಿಯುಗ ಕಾಮಧೇನು’ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತಿ ಉತ್ಸವದ ಅಂಗವಾಗಿ ಫೆಬ್ರವರಿ 19 ರಿಂದ 24ರ ವರೆಗೆ ವಿವಿಧ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಫೆಬ್ರವರಿ 19, ಗುರುವಾರ (ರಾಯರ ಪಟ್ಟಾಭಿಷೇಕ) : ಬೆಳಗ್ಗೆ 8-00 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣ ಸಹಿತ ಫಲ-ಪಂಚಾಮೃತ ಅಭಿಷೇಕ, ಶ್ರೀ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ಮತ್ತು ಅನುಗ್ರಹ ಸಂದೇಶ.
ಸಂಜೆ 6-00ಕ್ಕೆ ಡಾ. ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ “ದಾಸ ವೈಭವ”. ಗಾಯನ ಕಾರ್ಯಕ್ರಮ.
ಫೆಬ್ರವರಿ 20 ರಿಂದ 23ರ ವರೆಗೆ ಪ್ರತಿದಿನ ಬೆಳಗ್ಗೆ ಪೂಜಾ ಕೈಂಕರ್ಯಗಳು, ಸಂಜೆ ವಿವಿಧ ಭಜನಾ ಮಂಡಳಿಗಳ ಸದಸ್ಯರುಗಳಿಂದ “ಭಜನಾಮೃತ” ನಡೆಯಲಿದೆ.
ಫೆಬ್ರವರಿ 24, ಮಂಗಳವಾರ (ರಾಯರ ವರ್ಧಂತಿ ಉತ್ಸವ) : ಬೆಳಗ್ಗೆ-ಫಲ-ಪಂಚಾಮೃತ ಅಭಿಷೇಕ, ಶ್ರೀ ಗುರುರಾಜರಿಗೆ “ಲಕ್ಷ ಪುಷ್ಪಾರ್ಚನೆ” ವಿದ್ವಾಂಸರಿಂದ “ರಾಯರ ಮಹಿಮೆ” ವಿಷಯವಾಗಿ ಧಾರ್ಮಿಕ ಪ್ರವಚನ.
ಸಂಜೆ 6-00ಕ್ಕೆ ವಿದ್ವಾನ್ ಶ್ರೀ ಅನಂತ ಮಿಸ್ತ್ರಿ ಮತ್ತು ಸಂಗಡಿಗರಿಂದ “ದಾಸ ತರಂಗಿಣಿ” ಗಾಯನ ಕಾರ್ಯಕ್ರಮ. ನಂತರ ಸಮಾರೋಪ ಸಮಾರಂಭ ಜರುಗಲಿದೆ ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
