--Ads--

ವಿಜಯ್, ಆಃಡವನ್ ಮತ್ತು ಪ್ರಮಾಣವಚನ ನಿಷ್ಠೆ…….

On: May 14, 2026 6:49 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ವಿಜಯ್, ಆಃಡವನ್ ಮತ್ತು ಪ್ರಮಾಣವಚನ ನಿಷ್ಠೆ…….

ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು ಎಂಬುದು ನಮಗೆ ಮುಖ್ಯವಲ್ಲ, ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬುದು ನಮಗೆ ಬಹಳ ಮುಖ್ಯ… ”
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್

ತಮಿಳುನಾಡಿನ ಹೊಸ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ದೇವರ ಹೆಸರಿನಲ್ಲಿ ( ಆಂಡವನ್ ) ಪ್ರಮಾಣ ಮಾಡಿ ಮುಖ್ಯಮಂತ್ರಿ ಪದವಿ ಸ್ವೀಕರಿಸಿದರು. ಅದು ಅವರ ನಂಬಿಕೆ, ಅವರ ಆಯ್ಕೆಗೆ ಬಿಟ್ಟಿದ್ದು. ಪೆರಿಯಾರ್ ಅವರನ್ನು ಆಗಾಗ ಸ್ಮರಿಸುವ ವಿಜಯ್ ಅವರು ರಾಜಕಾರಣಿಯೋ, ಸಿನಿಮಾ ನಟರೋ, ವೈಚಾರಿಕ ಚಿಂತಕರೋ, ಸಂಪ್ರದಾಯವಾದಿ ವ್ಯಕ್ತಿಯೋ, ಎಲ್ಲವೂ ಮುಖವಾಡವೋ ಎಂಬುದೆಲ್ಲಾ ಮುಂದಿನ ದಿನಗಳು ನಿರ್ಧರಿಸುತ್ತದೆ.

ಏಕೆಂದರೆ ವಿಜಯ್ ಅವರಿಗೆ ಜನ್ಮ ನೀಡಿದ ತಂದೆ ತಾಯಿಗಳು ಆ ಸಂದರ್ಭದಲ್ಲಿ ಪ್ರಮಾಣವಚನ ಸಮಾರಂಭದಲ್ಲಿ ಅವರಿಗೆ ಮುಖಾಮುಖಿಯಾಗಿಯೇ ಕುಳಿತಿದ್ದರು.

ಅವರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ತಮಿಳುನಾಡಿನ ಮತದಾರರೇ ನೇರ ಕಾರಣವಾಗಿದ್ದರು. ಅವರಲ್ಲಿ ಕೆಲವರು ಅಲ್ಲಿ ಸೇರಿದ್ದರು.

ಹಾಗೆಯೇ ಸಿನಿಮಾ ನಟರೊಬ್ಬರು ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿ ಆಗಬಹುದಾದ ಮೂಲಭೂತ ಹಕ್ಕನ್ನು ನೀಡಿರುವುದು ಸಂವಿಧಾನ ಎಂಬುದು ವಿಜಯ್ ಅವರಿಗೂ ತಿಳಿದಿದೆ.

ಈ ಮೂರು ಅಂಶಗಳು ಅವರು ಈ ಉನ್ನತ ಹುದ್ದೆಗೆ ಏರಲು ಅತ್ಯಂತ ಪ್ರಮುಖ ಕಾರಣಗಳು. ಆದರೆ ಅವರು ಮಾತ್ರ ಆಂಡವನ್ ಅವರಿಗೆ ತಮ್ಮ ಪ್ರಮಾಣ ವಚನದ ಕೃತಜ್ಞತೆ ಅರ್ಪಿಸಿ ಅವರ ಮೇಲೆಯೇ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದರು. ಅವರ ನಿಷ್ಠೆ ದೇವರಿಗೆ ಎಂಬುದು ಸ್ಪಷ್ಟವಾಯಿತು.

ಆ ದೇವರು ಅವರಿಗೆ 234 ಸ್ಥಾನದಲ್ಲಿ 108 ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಿ ಉಳಿದ ಸುಮಾರು 10 ಸ್ಥಾನಗಳನ್ನು ಇತರರ ಸಹಾಯ ಪಡೆಯಲಿ ಎನ್ನುವ ಉದ್ದೇಶದಿಂದಲೇ ಈ ರೀತಿ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆಯೇ ಅಥವಾ ವಿಜಯ್ ಅವರಿಗೆ ಅಗ್ನಿಪರೀಕ್ಷೆ ಒಡ್ಡುತ್ತಿದ್ದಾರೆಯೇ….

ಆ ದೇವರಿಗೆ ಇಡೀ ತಮಿಳುನಾಡಿನಲ್ಲಿ ವಿಜಯ್ ಅವರ ಮೇಲೆಯೇ ತುಂಬಾ ಪ್ರೀತಿ ಇರಬೇಕು. ಅವರನ್ನೇ ಪ್ರಖ್ಯಾತ ಸಿನಿಮಾ ನಟರನ್ನಾಗಿ ಮಾಡಿ, ಆಮೇಲೆ ಅವರು ರಾಜಕೀಯ ಪ್ರವೇಶ ಮಾಡುವಂತೆ ಮಾಡಿ, ಅವರನ್ನೇ ಮುಖ್ಯಮಂತ್ರಿ ಮಾಡಿ, ತಮಿಳು ಜನರನ್ನು ಉದ್ಧಾರ ಮಾಡುವ ಸಂಕಲ್ಪ ದೇವರೇ ಮಾಡಿರಬೇಕಲ್ಲವೇ.

ದೇವರೇ, ಏನಪ್ಪಾ ನಿನ್ನ ಲೀಲೆ.
ಇದಕ್ಕೆ ಮೊದಲು ಬೇರೆ ಬೇರೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿ, ಅವರ ಒಳ್ಳೆಯ, ಕೆಟ್ಟ, ದುಷ್ಟ, ಭ್ರಷ್ಟ ಸರ್ಕಾರಗಳನ್ನೆಲ್ಲಾ ನೋಡಿ, ಕೊನೆಗೆ ವಿಜಯ್ ಅವರನ್ನು ಆಯ್ಕೆ ಮಾಡಿಕೊಂಡಿರುವ ನಿನ್ನ ಬುದ್ಧಿಶಕ್ತಿಗೆ ಒಂದು ದೊಡ್ಡ ಸಲಾಂ.

ದೇವರೇ, ಇದೆ ಬುದ್ಧಿಶಕ್ತಿಯನ್ನು ಭಾರತದ ಇತರ ರಾಜ್ಯಗಳಿಗೆ ಮಾಡುವ ಯೋಚನೆ ಇದೆಯೇ ಅಥವಾ ಈಗಾಗಲೇ ಆಯ್ಕೆಯಾಗಿರುವ ಎಲ್ಲ ಮುಖ್ಯಮಂತ್ರಿಗಳು ನಿನ್ನ ಯೋಜನೆಯ ಭಾಗವೇ,
ಹಾಗೆಯೇ ಇರಾನ್, ಪಾಕಿಸ್ತಾನ, ಇಸ್ರೇಲ್, ಅಮೆರಿಕ, ರಷ್ಯಾ, ಚೀನಾ, ಉಕ್ರೇನ್, ಇಥೋಪಿಯಾ, ನೈಜೀರಿಯಾ, ಸುಡಾನ್ ಮುಂತಾದ ದೇಶಗಳಲ್ಲಿ ಈ ರೀತಿಯ ಪ್ರಯೋಗ ಮಾಡುವ ಯೋಜನೆ ಏನಾದರೂ ಇದೆಯೇ ಅಥವಾ ಆಂಡವನ್ ನಿಮ್ಮ ಶಕ್ತಿ, ಸಾಮರ್ಥ್ಯ, ವ್ಯಾಪ್ತಿ ತಮಿಳುನಾಡಿಗೆ ಮಾತ್ರ ಸೀಮಿತವೇ.

ನಾವು ಭಾರತೀಯರಾದ್ದರಿಂದ, ಇಲ್ಲಿನ ಸಂವಿಧಾನದ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದರಿಂದ, ಇಲ್ಲಿನ ಮಣ್ಣಿನಲ್ಲಿಯೇ ಪ್ರಶ್ನಿಸುವ ಮನೋಭಾವ ಅಂತರ್ಗತವಾಗಿರುವುದರಿಂದ ನಾವು ನಿಮ್ಮನ್ನು ಪ್ರಶ್ನಿಸುತ್ತಲೇ ಇರುತ್ತೇವೆ. ಅದೂ ಅತ್ಯಂತ ಗೌರವಪೂರ್ವಕವಾಗಿ ಮತ್ತು ಪ್ರೀತಿಪೂರ್ವಕವಾಗಿ. ಏಕೆಂದರೆ ನಮಗೂ ಅನೇಕ ಬಗೆಹರಿಯದ ಪ್ರಶ್ನೆಗಳು ಸದಾ ಕಾಡುತ್ತಲೆ ಇರುತ್ತವೆ.

ದೈವಶಕ್ತಿ, ಜನಶಕ್ತಿ ಇವುಗಳಲ್ಲಿ ಯಾವುದು ನಂಬಿಕೆ, ಯಾವುದು ವಾಸ್ತವ, ಯಾವ ಶಕ್ತಿಗೆ ಮಹತ್ವ ಕೊಡಬೇಕು ಇದು ನಮಗೆ ಬಗೆಹರಿಯಬೇಕಿದೆ. ಬಹಳಷ್ಟು ಜನ ದೈವ ಶಕ್ತಿಯನ್ನು ನಂಬುತ್ತಾರೆ. ಕೆಲವರು ಮಾತ್ರ ಜನಶಕ್ತಿಯನ್ನು ನಂಬುತ್ತಾರೆ. ಆದರೆ ಕಣ್ಣಿಗೆ ಕಾಣುವುದು ಜನಶಕ್ತಿಯೇ ಹೊರತು ದೈವ ಶಕ್ತಿಯಲ್ಲ. ಆದರೆ ವಿಜಯ್ ಅಂತಹತವರು, ಸನ್ಮಾನ್ಯ ನರೇಂದ್ರ ಮೋದಿ ಅಂತವರು ದೈವ ಶಕ್ತಿಯನ್ನೇ ಪ್ರೋತ್ಸಾಹಿಸುತ್ತಾರೆ. ಆದ್ದರಿಂದ ನಮ್ಮೊಳಗೆ ಪ್ರಶ್ನೆಗಳು ಏಳುತ್ತಲೇ ಇವೆ.

ದೇವರು ಎಂಬ ನಂಬಿಕೆಯ ಸುತ್ತ ಇರುವ ಭಕ್ತಿಯೇ ದೈವಿಕ ಶಕ್ತಿ. ಇದು ಸರ್ವಶಕ್ತ, ಸರ್ವಾಂತರ್ಯಾಮಿ,
ಸರ್ವವ್ಯಾಪಿ, ಅಗೋಚರ, ಅತಿಮಾನುಷ, ಅದೃಶ್ಯ ಶಕ್ತಿ. ಬಹುತೇಕ ಜಗತ್ತಿನ ಎಲ್ಲಾ ಕಡೆಯೂ ಈ ಪರಿಕಲ್ಪನೆಯ ವಿಧಾನ ಒಂದೇ ರೀತಿಯಲ್ಲಿದೆ. ಧರ್ಮಗಳು, ಮತಗಳು, ಭಾಷೆಗಳು, ಪ್ರದೇಶಗಳು, ಆಡಳಿತಾತ್ಮಕ ವ್ಯವಸ್ಥೆಗಳು ಬೇರೆ ಬೇರೆ ಇರಬಹುದು. ಆದರೆ ದೈವಿಕ ಶಕ್ತಿಯ ನಂಬಿಕೆ ಮಾತ್ರ ಒಂದೇ ರೀತಿ ಇದೆ.

ಈ ಜಗತ್ತನ್ನು, ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸಿರುವುದೇ ಆ ದೈವಶಕ್ತಿ. ಈ ಜಗತ್ತು ಮುಂದುವರೆಯುತ್ತಿರುವುದು ಆ ದೈವ ಶಕ್ತಿಯ ಬಲದಿಂದಲೇ. ನಮ್ಮನ್ನೆಲ್ಲಾ ಆ ದೈವ ಶಕ್ತಿಯೇ ನಿಯಂತ್ರಿಸುತ್ತಿದೆ. ನಮ್ಮ ಬದುಕಿನ ಆಗುಹೋಗುಗಳಿಗೆ, ಕಷ್ಟ ನಷ್ಟಗಳಿಗೆ, ಸುಖ-ದುಃಖಗಳಿಗೆ ಆ ಶಕ್ತಿಯೇ ಕಾರಣ. ನಾವು ಇಲ್ಲಿ ನಿಮಿತ್ತ ಮಾತ್ರ. ಆತನ ಕೃಪೆಯಿಂದಲೇ ನಾವು ಇಂದು ಬದುಕಿದ್ದೇವೆ ಎಂದೇ ದೈವಿಕ ಶಕ್ತಿಯನ್ನು ನಂಬುವ ಎಲ್ಲರ ಭಾವನೆಯಾಗಿದೆ.

ಅದಕ್ಕೆ ವಿರುದ್ಧವಾಗಿ ದೈವಿಕ ಶಕ್ತಿ ಎಂಬುದೇ ಒಂದು ಭ್ರಮೆ, ಕಾಲ್ಪನಿಕ ಮತ್ತು ನಂಬಿಕೆ ಮಾತ್ರ. ವಾಸ್ತವವಲ್ಲ. ಈ ಜಗತ್ತಿನಲ್ಲಿ ಯಾವುದೇ ಅತಿಮಾನುಷ ಶಕ್ತಿಯೂ ಇಲ್ಲ. ಎಲ್ಲವೂ ಈ ಪ್ರಾಕೃತಿಕ ಸೃಷ್ಟಿಯ ನಿಯಮದ ಅಡಿಯಲ್ಲಿಯೇ ನಡೆಯುತ್ತಿದೆ. ಪ್ರಕೃತಿಯೇ ಒಂದು ಜೀವದ್ರವ್ಯ, ಸೃಷ್ಟಿಯ ಮೂಲ. ಅದರ ಶಕ್ತಿಯ ಅಡಿಯಲ್ಲಿಯೇ ನಾವು ಬದುಕುತ್ತಿದ್ದೇವೆ. ಎಲ್ಲವೂ ಒಂದಕ್ಕೊಂದು ಪೂರಕವಾಗಿ ನಮ್ಮ ಅರಿವು, ಅನುಭವದಿಂದಲೇ ಜಗತ್ತು ಬೆಳವಣಿಗೆ ಹೊಂದುತ್ತಾ ಬಂದಿದೆ ಮತ್ತು ಈ ಹಂತ ತಲುಪಿದೆ. ಎಲ್ಲವೂ ಮಾನವ ಶಕ್ತಿಯ ಬಲದಿಂದಲೇ ನಡೆಯುತ್ತಿದೆ.

ಮಾನವೀಯ ಮೌಲ್ಯಗಳೇ ಈ ನಾಗರೀಕ ಸಮಾಜದ ಬಹುದೊಡ್ಡ ಶಕ್ತಿ. ಅದನ್ನು ನಿಯಂತ್ರಿಸಲು ನೀತಿ ನಿಯಮಗಳ ಸಾಂವಿಧಾನಿಕ ಶಕ್ತಿ ಇದೆ. ಈಗ ನಾವು ಅನುಸರಿಸಬೇಕಾಗಿರುವುದು ದೈವಿಕ ಶಕ್ತಿಯನ್ನಲ್ಲ ಮಾನವ ಶಕ್ತಿಯನ್ನು. ಆ ಶಕ್ತಿ ಮೌಲ್ಯಗಳ ದೃಷ್ಟಿಯಲ್ಲಿ ಅಧ:ಪತನದತ್ತ ಸಾಗುತ್ತಿದೆ. ಅದನ್ನು ಸರಿ ಮಾಡಲು ಯಾವ ದೈವಿಕ ಶಕ್ತಿಯಿಂದಲೂ ಸಾಧ್ಯವಿಲ್ಲ. ಮಾನವ ಶಕ್ತಿಯೇ ಜೀವಪರ ನಿಲುವನ್ನು ತಳೆದು ಈ ಎಲ್ಲಾ ವಿಧ್ವಂಸಕ ಕೃತ್ಯಗಳಿಂದ ಹೊರಬಂದು ಮಾನವೀಯ ಮೌಲ್ಯಗಳ ನಾಗರಿಕ ಪ್ರಜ್ಞೆಯೊಂದಿಗೆ ಬದುಕು ರೂಪಿಸಿಕೊಳ್ಳಬೇಕಿದೆ. ಇದೆ ಜನಶಕ್ತಿ ಅಥವಾ ಮಾನವ ಶಕ್ತಿ.

ರಾಮ, ಕೃಷ್ಣ, ಅಲ್ಲಾ, ಬ್ರಹ್ಮ, ವಿಷ್ಣು, ಮಹೇಶ್ವರ, ಮಾರಮ್ಮ, ಕಾಳಮ್ಮ, ದೇವಿ, ದುರ್ಗೆ ಮುಂತಾದ ದೇವರುಗಳು ದೈವಿಕ ಶಕ್ತಿಯ ಸಂಕೇತಗಳಾದರೆ, ಬುದ್ಧ, ಮಹಾವೀರ, ಜೀಸಸ್, ಪೈಗಂಬರ್, ಗುರುನಾನಕ್, ಬಸವಣ್ಣ, ವಿವೇಕಾನಂದ, ಕಾರ್ಲ್ ಮಾರ್ಕ್ಸ್, ಗಾಂಧಿ, ಅಂಬೇಡ್ಕರ್ ಮುಂತಾದವರು
ಜೀವಪರ ನಿಲುವಿನ ಮಾನವ ಶಕ್ತಿಯ ಸಂಕೇತ.

ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ದೈವಶಕ್ತಿ ಮತ್ತು ಜನಶಕ್ತಿ. ಎರಡನ್ನೂ ಸಂಭಾಳಿಸಿಕೊಂಡು ಯಾವುದನ್ನೂ ಅತಿಯಾಗಿ ನಂಬದೇ ವಾಸ್ತವ ನೆಲೆಯಲ್ಲಿ ಜೀವಿಸುವ ಒಂದು ವರ್ಗ.

ದೈವಿಕ ಶಕ್ತಿಯೇ ಪರಮೋಚ್ಚ ಶಕ್ತಿ ಎಂದು ಅದನ್ನೇ ನಂಬಿ ಬದುಕುತ್ತಿರುವ ಇನ್ನೊಂದು ವರ್ಗ.

ಯಾವ ದೈವ ಶಕ್ತಿಯೂ ಇಲ್ಲ. ಜನಶಕ್ತಿಯೇ ನಮ್ಮೆಲ್ಲರ ಶಕ್ತಿ. ಅದೇ ನಮ್ಮ ಸಮಾಜದ ಚಾಲನ ಶಕ್ತಿ ಎಂದು ನಂಬಿರುವ ಮತ್ತೊಂದು ವರ್ಗ.

ವಿಷಯ ಇಷ್ಟು ಸರಳವಾಗಿ ಅರಿವಿನ ಅಂಚಿನಲ್ಲಿಯೇ ಸಾಗುತ್ತಿದ್ದರೆ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಆದರೆ ದೈವಶಕ್ತಿ ಮತ್ತು ಜನಶಕ್ತಿ ಪರಸ್ಪರ ವಿರುದ್ಧ ಮತ್ತು ಸಂಘರ್ಷದಲ್ಲಿ ತೊಡಗಿರುವ ಕಾರಣದಿಂದಲೇ ಸಮಾಜ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೈವಿಕ ಶಕ್ತಿ ಮನುಷ್ಯನಲ್ಲಿ ಅನೇಕ ರೀತಿಯ ವಿಭಜನೆಗೆ, ಶ್ರೇಷ್ಠತೆಯ ವ್ಯಸನಕ್ಕೆ ಕಾರಣವಾಗಿದೆ. ಅನೇಕ ಜನರ ಶೋಷಣೆಗೆ ದೈವಿಕ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅದಕ್ಕೆ ವಿರುದ್ಧವಾಗಿ ಜನಶಕ್ತಿ ಅದನ್ನು ನಿರಾಕರಿಸುತ್ತಿರುವುದರಿಂದ ಘರ್ಷಣೆಗಳು ಪ್ರಾರಂಭವಾಗಿದೆ.

ದೈವಿಕ ಶಕ್ತಿಯ ಅತಿಯಾದ ನಂಬಿಕೆಯ ಕಾರಣದಿಂದಲೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅನೇಕ ಹತ್ಯಾಕಾಂಡಗಳು ನಡೆದಿವೆ ಮತ್ತು ನಡೆಯುತ್ತಿವೆ. ಮನುಷ್ಯ ಶಕ್ತಿಗೂ, ಸಾಂವಿಧಾನಿಕ ಶಕ್ತಿಗೂ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ದೇವರೆಂಬ ಅಗೋಚರ ಶಕ್ತಿ ಮತ್ತು ಮನುಷ್ಯರೆಂಬ ನಮ್ಮ ನಡುವಿನ ಜೊತೆಗಾರ ಶಕ್ತಿ ನಡುವೆ ಸಮನ್ವಯ ಸಾಧ್ಯವೇ ? ಅದು ಆತ್ಮ ವಂಚನೆಯಲ್ಲವೇ? ಅದು ವ್ಯಾವಹಾರಿಕ ನಡೆಯಲ್ಲವೇ? ಅದು ಗುಲಾಮ ಸಂಸ್ಕೃತಿಯ
ಅನುಸರಣೆಯಲ್ಲವೇ ?

ಏಕೆಂದರೆ ನಮ್ಮ ನಡುವಿನ ದೈವಿಕ ಶಕ್ತಿ ಎಂದೂ ನೇರವಾಗಿ ಪ್ರತ್ಯಕ್ಷವಾಗಿಲ್ಲ. ಅದೊಂದು ಅನುಭವ, ತಿಳುವಳಿಕೆ ಅಸಾಧಾರಣ ಶಕ್ತಿ ಎಂಬುದಾಗಿ ಬಿಂಬಿಸಲಾಗಿದೆ. ಅದನ್ನು ಭಯದಿಂದಲೋ, ಭಕ್ತಿಯಿಂದಲೋ ಆಚರಿಸಬೇಕು ಎಂದು ನಂಬಿಸಲಾಗಿದೆ. ಅದರ ಕಾರ್ಯ ವ್ಯಾಪ್ತಿ, ಇರುವಿಕೆ ಸದಾಕಾಲ ಪ್ರಶ್ನೆಗೆ ಒಳಪಡುತ್ತದೆ. ಉತ್ತರ ಸಿಗುತ್ತಿಲ್ಲ. ಈ ಸಮಾಜದ ಎಲ್ಲಾ ಅನ್ಯಾಯ, ಅನೀತಿ ಹತ್ಯಾಕಾಂಡಗಳಿಗೆ ಅದು ನೇರ ಪರಿಹಾರ ಸೂಚಿಸುತ್ತಿಲ್ಲ ಮತ್ತು ನಿಯಂತ್ರಿಸುತ್ತಿಲ್ಲ. ಅದಕ್ಕಾಗಿ ಜನ್ಮ ಪುನರ್ಜನ್ಮದ ನಂಬಿಕೆ, ಸ್ವರ್ಗ ನರಕದ ಕಲ್ಪನೆ ಸೃಷ್ಟಿಸಲಾಗಿದೆ.

ಆದರೆ ಮಾನವ ಶಕ್ತಿ ಮಾತ್ರ ನಮ್ಮ ಕಣ್ಣ ಮುಂದೆಯೇ ಇದೆ. ಅನೇಕ ಮಾನವ ಶಕ್ತಿಯ ಮಹಾ ದಾರ್ಶನಿಕರು ಸುಖ ಸಮೃದ್ಧಿಯ ಬದುಕಿನ ಆಶಯಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ಅದು ಅನುಸರಿಸಲು ಯೋಗ್ಯವೂ ಆಗಿದೆ. ಫಲಿತಾಂಶವೂ ಸಾರ್ವತ್ರಿಕ ಸತ್ಯವಾಗಿ ನಮ್ಮ ಮುಂದಿದೆ. ದೈವಿಕ ಶಕ್ತಿ ಕೇವಲ ಕೆಲವರ ಆಸ್ತಿ ಎಂಬಂತಾಗಿದೆ.

ಆದರೆ ಈ ಕ್ಷಣಕ್ಕೂ ದೈವಿಕ ಶಕ್ತಿಯೇ ಎಲ್ಲಾ ರೀತಿಯಲ್ಲೂ ಮೇಲುಗೈ ಪಡೆದಿದೆ. ಮಾನವ ಶಕ್ತಿಯ ತತ್ವ ಸಿದ್ಧಾಂತಗಳು ಕೇವಲ ತಿಳುವಳಿಕೆಗೆ ಮಾತ್ರ ಸೀಮಿತವಾಗಿದೆ. ನನ್ನ ವೈಯಕ್ತಿಕ ದೃಷ್ಟಿಯಲ್ಲಿ ದೈವಶಕ್ತಿ ಒಂದು ಮಾನಸಿಕ, ತಾತ್ಕಾಲಿಕ, ಕೃತಕ, ಮೌಢ್ಯದ ನಂಬಿಕೆ ಮಾತ್ರ. ಆದರೆ ಮಾನವ ಶಕ್ತಿ ಅರಿವಿನ, ಅನುಭಾವಿಕ ಶಕ್ತಿ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಬದುಕಿನ ನೆಮ್ಮದಿಯ ಗುಣಮಟ್ಟ ಶಾಶ್ವತವಾಗಿ ಹೆಚ್ಚಾಗುತ್ತದೆ.

ಆದರೆ ಅದು ಸಹ ಅಷ್ಟು ಸುಲಭವಲ್ಲ. ಶ್ರಮ ಪಟ್ಟರೆ ಮಾನವ ಶಕ್ತಿಯ ಸದುಪಯೋಗ ಪಡೆದುಕೊಳ್ಳಬಹುದು. ಆದರೆ ಎಷ್ಟೇ ಶ್ರಮ ಪಟ್ಟರು ದೈವಿಕ ಶಕ್ತಿಯನ್ನು ಕಾಣಲು ಸಾಧ್ಯವೇ ಇಲ್ಲ. ಅದು ಸಾಮಾನ್ಯ ಜ್ಞಾನಕ್ಕೆ ನಿಲುಕುವುದೂ ಇಲ್ಲ. ಅಸಾಮಾನ್ಯ ಜ್ಞಾನದಿಂದ ಪ್ರಯೋಜನವು ಇಲ್ಲ. ಮಾನವ ಶಕ್ತಿಯೇ ಅತ್ಯಂತ ಮಹತ್ವದ್ದು ಮತ್ತು ಉಪಯುಕ್ತವಾದದ್ದು. ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ……..

ದೇವರು ಮತ್ತು ಮನುಷ್ಯ…..
ಇದ್ದರೆ ಇರಲಿ ಬಿಡಿ ದೇವರು ನಮಗೇನು……

ನಾವು ವಂಚಕರಲ್ಲ, ಭ್ರಷ್ಟರಲ್ಲ, ಮೋಸಗಾರರಲ್ಲ, ಕಳ್ಳ ಖದೀಮರಲ್ಲ…….

ದೇವರಿದ್ದರೆ ನಮಗೇ ಒಳ್ಳೆಯದು…..

ನಾವು ಬೇರೆಯವರ ಆಸ್ತಿಗೆ ಹೊಂಚು ಹಾಕುವವರಲ್ಲ, ಬೇರೆಯವರನ್ನು ಹಿಂಸಿಸುವವರಲ್ಲ, ಭೂಮಿ ಬಗೆಯುವವರಲ್ಲ,…..

ದೇವರು ಸರ್ವ ಶಕ್ತನಾಗಿದ್ದರೆ ತನಿಖೆ ಮಾಡಿಕೊಳ್ಳಲಿ ಬಿಡಿ….

ನಾವು ಪೂಜೆ ಮಾಡುವುದಿಲ್ಲ, ನಮಾಜು ಮಾಡುವುದಿಲ್ಲ, ಪ್ರಾರ್ಥನೆ ಮಾಡುವುದಿಲ್ಲ….

ಹಸಿದವರಿಗೆ ಅನ್ನ ನೀಡುತ್ತೇವೆ,
ಅಗತ್ಯವಿದ್ದವರಿಗೆ ಬಟ್ಟೆ ನೀಡುತ್ತೇವೆ,
ಅವಶ್ಯಕತೆ ಇದ್ದವರಿಗೆ ರಕ್ತವನ್ನೂ ನೀಡುತ್ತೇವೆ…..

ನಾವು ಮಸೀದಿಗೆ ಹೋಗುವುದಿಲ್ಲ,
ನಾವು ದೇವಸ್ಥಾನಕ್ಕೆ ಹೋಗುವುದಿಲ್ಲ,
ನಾವು ಚರ್ಚಿಗೂ ಹೋಗುವುದಿಲ್ಲ…..

ವೃದ್ದಾಶ್ರಮಕ್ಕೆ ಹೋಗುತ್ತೇವೆ‌ ಸಾಂತ್ವನ ಹೇಳಲು,
ಅನಾಥಾಶ್ರಮಕ್ಕೆ ಹೋಗುತ್ತೇವೆ ಸಹಾಯ ಮಾಡಲು,
ಆಸ್ಪತ್ರೆಗಳಿಗೆ ಹೋಗುತ್ತೇವೆ ಸೇವೆ ಮಾಡಲು….

ದೇವರಿಗೆ ಏನನ್ನೂ ಕೊಡುವುದಿಲ್ಲ,
ದೇವರಲ್ಲಿ ಏನನ್ನೂ ಬೇಡುವುದಿಲ್ಲ,
ದೇವರಿಗಾಗಿ ಕೊಲ್ಲುವುದೂ ಇಲ್ಲ…..

ಮನುಷ್ಯರಿಗಾಗಿ ಬದುಕುತ್ತೇವೆ,
ಮನುಷ್ಯರಿಗಾಗಿ ಕೊಡುತ್ತೇವೆ,
ಮನುಷ್ಯರಿಗಾಗಿಯೇ ಜೀವಿಸುತ್ತೇವೆ…..

ದೇವರನ್ನು ಪ್ರೀತಿಸುವುದಿಲ್ಲ,
ದೇವರನ್ನು ದ್ವೇಷಿಸುವುದಿಲ್ಲ,
ದೇವರನ್ನು ಹುಡುಕಾಡುವುದಿಲ್ಲ…..

ಮನುಷ್ಯರನ್ನು ಪ್ರೀತಿಸುತ್ತೇವೆ,
ಮನುಷ್ಯರನ್ನು ಗೌರವಿಸುತ್ತೇವೆ,
ಮನುಷ್ಯತ್ವವನ್ನೇ ಹುಡುಕುತ್ತೇವೆ…..

ಮನುಷ್ಯ ಮತ್ತು ದೇವರಲ್ಲಿ ನಮ್ಮ ಆಯ್ಕೆ ಮನುಷ್ಯ ಮಾತ್ರ.
ಏಕೆಂದರೆ ನಾವು ಮನುಷ್ಯರು.
ನಾವು ಬದುಕುತ್ತಿರುವುದು ಮನುಷ್ಯರೊಂದಿಗೆ……

ಕೋಟ್ಯಾಂತರ ಮನುಷ್ಯರನ್ನು ನೋಡಿದ್ದೇವೆ, ಆದರೆ ಒಬ್ಬೇ ಒಬ್ಬ ದೇವರನ್ನು ನೋಡಿಲ್ಲ.

ನನ್ನನ್ನು ಹುಟ್ಟಿಸಿದ್ದು, ಬೆಳೆಸಿದ್ದು, ಸಹಾಯ ಮಾಡಿದ್ದು ಎಲ್ಲವೂ ಮನುಷ್ಯನೇ.

ದೇವರೆಂಬುದು ನಂಬಿಕೆ ಎಂದು ಹೇಳಲಾಗುತ್ತದೆ,
ಮನುಷ್ಯರೆಂಬುದು ವಾಸ್ತವ – ಈ ಕ್ಷಣದ ಸತ್ಯ.

ಕಣ್ಣಿಗೆ ಕಾಣದ ದೇವರಿಗಿಂತ
ಕಣ್ಣಿಗೆ ಕಾಣುವ ಮನುಷ್ಯನೇ ಶ್ರೇಷ್ಠ ಮತ್ತು ವಾಸ್ತವ……

ದೇವರನ್ನು ನೋಡಲು ಮಾತನಾಡಲು ಸಾಧ್ಯವಿಲ್ಲ,
ಮನುಷ್ಯನೊಂದಿಗೆ ಎಲ್ಲವೂ ಸಾಧ್ಯ.

ಮನುಷ್ಯರಿಗೆ ಹೆದರಿ ದೇವರು ಅಡಗಿ ಕುಳಿತಿದ್ದಾನೆ,
ದೇವರಿಗೆ ಹೆದರದೆ ಮನುಷ್ಯರು ಸಮಾಜದಲ್ಲಿ ಬದುಕುತ್ತಿದ್ದಾರೆ.

ದೇವರನ್ನು ಸೃಷ್ಟಿಸಿದ್ದು ಮನುಷ್ಯರು,
ಮನುಷ್ಯರನ್ನು ಸೃಷ್ಟಿಸಿದ್ದು ದೇವರೇ ?
ಪ್ರಕೃತಿಯೇ‌ ?

ದಯವಿಟ್ಟು ಅರ್ಥಮಾಡಿಕೊಳ್ಳಿ,

ದೇವರಿಗಿಂತ ಮನುಷ್ಯ ಮುಖ್ಯ.
ದೇವರಿಗಾಗಿ ಮನುಷ್ಯರನ್ನು ಕೊಲ್ಲಬೇಡಿ.
ಬೇಕಿದ್ದರೆ ದೇವರನ್ನೇ ಇಲ್ಲವಾಗಿಸಿ.

ಪಾಪ ಮನುಷ್ಯ ಬದುಕುವುದೇ ಕೆಲವು ವರ್ಷಗಳು,
ದೇವರೆಂಬ ಭ್ರಮೆ ಮಾತ್ರ ಶಾಶ್ವತವಾಗಿ ಇರುತ್ತದೆ.

ಮನುಷ್ಯರನ್ನು ಕೊಂದು ದೇವರನ್ನು ಮೆಚ್ಚಿಸುವುದು ಕ್ರೌರ್ಯ,
ಮನುಷ್ಯರನ್ನು ಬದುಕಿಸಿ‌ ದೇವರನ್ನು ಮೆಚ್ಚಿಸುವುದು ಧರ್ಮ.

ದೇವರಿಗಾಗಿ ಏನನ್ನಾದರೂ ಮಾಡುವುದು ಮೂರ್ಖತನ,
ಮನುಷ್ಯರಿಗಾಗಿ ಏನನ್ನಾದರೂ ಮಾಡುವುದು ಜಾಣತನ.

ಭಾರತದ ಭವಿಷ್ಯ ಕರಾಳವಾಗುವ ಮುನ್ನ ಎಲ್ಲರೂ ಮನುಷ್ಯರಾಗಿ,
ಇಲ್ಲವೇ,
ದೇವರು ಧರ್ಮದ ಹೆಸರಿನಲ್ಲಿ ರಾಕ್ಷಸರಾಗಿ ನಾಶವಾಗಿ,

ಆಯ್ಕೆ ನಮ್ಮ ಮುಂದಿದೆ. ದಯವಿಟ್ಟು ಯೋಚಿಸಿ.

ಕ್ರೌರ್ಯ ಮತ್ತು ಪ್ರೀತಿ,
ದೇವರು ಮತ್ತು ಮನುಷ್ಯ,
ಭಕ್ತಿ ಮತ್ತು ಮಾನವೀಯತೆ,
ಧರ್ಮ ಮತ್ತು ಸಂವಿಧಾನ
ಶವ ಮತ್ತು ಜೀವ……

ಆಯ್ಕೆ ನಿಮ್ಮೆಲ್ಲರ ವಿವೇಚನೆಗೆ ಬಿಡುತ್ತಾ……

ಕ್ರಿಯೆ, ಪ್ರತಿಕ್ರಿಯೆ, ಪ್ರಚೋದನೆ, ವಾಸ್ತವ ಪರಿಸ್ಥಿತಿ, ಮಾನಸಿಕ ಆರೋಗ್ಯ, ಸಮಾಜದ ಸ್ವಾಸ್ಥ್ಯ ಎಲ್ಲದರ ಸಮಗ್ರ ಚಿಂತನೆಯನ್ನು ಒಳಗೊಂಡ ಅಭಿಪ್ರಾಯ ನಿಮ್ಮದಾಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068

WhatsApp

Join Now

Telegram

Join Now

Instagram

Join Now