ವಿಜಯ ದರ್ಪಣ ನ್ಯೂಸ್….
ಕೋಲಾರ ಜಿಲ್ಲೆಯಲ್ಲಿ ಹಸ್ತಪ್ರತಿಗಳ ಸಂರಕ್ಷಣೆಗೆ ಡಿಜಿಟಲೀಕರಣ

ಕೋಲಾರ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಜ್ಞಾನ ಭಾರತ” ಮಿಷನ್ ಯೋಜನೆಯಡಿ ಜಿಲ್ಲೆಯಾದ್ಯಂತ ಇರುವ ಅಮೂಲ್ಯ ಹಸ್ತಪ್ರತಿಗಳನ್ನು ಗುರುತಿಸಿ, ಸಂರಕ್ಷಿಸಿ ಹಾಗೂ ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ ಮಾತನಾಡಿದರು.
ಜಿಲ್ಲೆಯ ವಿವಿಧ ಮಠಗಳು, ಮಂದಿರಗಳು, ಮಸೀದಿಗಳು ಹಾಗೂ ಹಳೆಯ ಮನೆಗಳಲ್ಲಿ ಇರುವ ತಾಳೆಗರಿ ಮತ್ತು ಕಾಗದದ ರೂಪದ ಹಸ್ತಪ್ರತಿಗಳನ್ನು ಸಮೀಕ್ಷೆ ನಡೆಸಿ ಪಟ್ಟಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿಶೇಷವಾಗಿ 100 ವರ್ಷಗಳಿಗಿಂತ ಹಳೆಯದಾದ ಹಸ್ತಪ್ರತಿಗಳನ್ನು ಆದ್ಯತೆಯ ಮೇರೆಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಸಾರ್ವಜನಿಕರಲ್ಲಿ ಇರುವ ಹಸ್ತಪ್ರತಿಗಳನ್ನು ಜಿಲ್ಲಾಧಿಕಾರಿಗಳು ಕೋಲಾರ DEPUTY COMMISSIONER KOLAR ಸರ್ಕಾರ ಕಸಿದುಕೊಳ್ಳುತ್ತದೆ ಎಂಬ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ ಅಪರ ಜಿಲ್ಲಾಧಿಕಾರಿಗಳು, ಮಾಲೀಕರ ಅನುಮತಿಯೊಂದಿಗೆ ಮಾತ್ರ ಅವುಗಳನ್ನು ಡಿಜಿಟಲೀಕರಣಗೊಳಿಸಿ ಮೂಲ ಪ್ರತಿಯನ್ನು ಅವರ ಬಳಿಯೇ ಉಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಆರು ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರನ್ನು ಈ ಸಮೀಕ್ಷಾ ಕಾರ್ಯದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಹೆಚ್ಚು ಸಂಪರ್ಕ ಹೊಂದಿರುವುದರಿಂದ ಹಸ್ತಪ್ರತಿಗಳ ಪತ್ತೆ ಹಚ್ಚುವುದು ಸುಲಭವಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಇದಲ್ಲದೆ, ಇತಿಹಾಸ ಸಂಶೋಧಕರು ಮತ್ತು ಸ್ಥಳೀಯ ವಿದ್ವಾಂಸರ ನೆರವನ್ನೂ ಪಡೆಯಲಾಗುವುದು ಎಂದರು.
ಉಳಿದಂತೆ ಹಸ್ತಪ್ರತಿಗಳ ಮಾಹಿತಿಗಾಗಿ ವಿಶೇಷ ಪೋಸ್ಟರ್ಗಳು ಮತ್ತು ಡಿಜಿಟಲ್ ಬೋಚರ್ಗಳನ್ನು ಸಿದ್ಧಪಡಿಸಿ ಪ್ರಚಾರ ಮಾಡುವುದು.ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸುವುದು.ಸಂಪರ್ಕಕ್ಕಾಗಿ ಜಿಲ್ಲಾ ಸಮನ್ವಯಾಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಸಾರ್ವಜನಿಕರಿಗೆ ಒದಗಿಸುವುದು. ಮೇ ಅಂತ್ಯದೊಳಗೆ ಪ್ರಾಥಮಿಕ ಹಂತದ ಸಮೀಕ್ಷಾ ಕಾರ್ಯವನ್ನು ಪೂರ್ಣ ಗೊಳಿಸುವುದು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾಪಂಚಾಯತ್ ಸಹಾಯಕ ಕಾರ್ಯ ದರ್ಶಿ ವೆಂಕಟಾಚಲಪತಿ, ಜ್ಞಾನಭಾರತಮ್ ಸಂಯೋಜಕರು ಹೆಚ್ ಎಸ್. ಶ್ಯಾಮಾಚಾರ, ಇತಿಹಾಸ ತಜ್ಞರು ಡಾ. ಅರಿವು ಶಿವಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ತುಕರಾಮ ಎನ್ ಪವಾರ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿಷಯ ತಜ್ಞ ವಿ. ಶಿವಶಂಕರ ಶಾಸ್ತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.










