--Ads--

ನಶೆಯ ನೆರಳಲ್ಲಿ ನಶಿಸುತ್ತಿರುವ ಬದುಕು

On: June 2, 2026 4:12 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನಶೆಯ ನೆರಳಲ್ಲಿ ನಶಿಸುತ್ತಿರುವ ಬದುಕು
==================

ಮಾನವನ ಜೀವನ ಅಮೂಲ್ಯವಾದುದು ಕಾರಣ ಸೃಷ್ಟಿಯ ಅಸಂಖ್ಯ ಜೀವಿಗಳ ನಡುವೆ ಮಾನವನ ಸೃಷ್ಟಿಯು ಒಂದು ಅದ್ಭುತ ವಿಸ್ಮಯವಾಗಿದೆ. ಈ ಅಮೂಲ್ಯವಾದ ಜೀವನವನ್ನು ಅರ್ಥಪೂರ್ಣವಾಗಿ ಬದುಕಬೇಕೆಂದರೆ ಆರೋಗ್ಯ ಅತ್ಯಂತ ಮುಖ್ಯವಾದ ಸಂಪತ್ತಾಗಿದೆ. ಹಾಗಾಗಿ ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಈ ಅದ್ಭುತ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೇ ಹೊರತು ಬದಲಿಗೆ ದುಶ್ಚಟಗಳಿಗೆ ದಾಸರಾಗಿ ಜೀವವನ್ನು ವ್ಯರ್ಥ ಮಾಡಿಕೊಳ್ಳಬಾರದು. ಅರೋಗ್ಯ ಚಂದವಾಗಿದ್ದರೆ ಒಬ್ಬ ವ್ಯಕ್ತಿ ಏನು ಬೇಕಾದರೂ ಸಾಧಿಸಬಹುದು ಕಾರಣ ಆರೋಗ್ಯವಂತ ದೇಹ ಮತ್ತು ಸ್ವಸ್ಥ ಮನಸ್ಸು ಇದ್ದಾಗ ಮಾತ್ರ ವ್ಯಕ್ತಿ ತನ್ನ ಕನಸುಗಳು, ಗುರಿಗಳು ಹಾಗೂ ಜೀವನದ ಮೌಲ್ಯಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಅಲ್ಲದೆ ಚಿಂತನೆ, ವಿವೇಕ ಮತ್ತು ಸೃಜನಶೀಲತೆಯ ಅಪಾರ ಶಕ್ತಿಯನ್ನು ಪಡೆದ ಮಾನವನು ಸಮಾಜವನ್ನು ಸಕಾರಾತ್ಮಕವಾಗಿ ಬೆಳಗಿಸಬಹುದು, ಆದರೆ ಆರೋಗ್ಯದ ಬಗ್ಗೆ ಇಷ್ಟೆಲ್ಲ ಮಹತ್ವ್ ಗೊತ್ತಿದ್ದರೂ ಕೆಲವರು ಕ್ಷಣಿಕ ಸುಖ ಸಂತೋಷಕ್ಕಾಗಿ ನಶೆ ಮತ್ತು ವ್ಯಸನಗಳ ಅಮಲಿಗೆ ಸಿಲುಕಿ ತಮ್ಮ ಅಮೂಲ್ಯ ಬದುಕನ್ನೇ ನಿಧಾನವಾಗಿ ಕತ್ತಲೆಯತ್ತ ತಾವೇ ತಮ್ಮ ದುರಭ್ಯಾಸಗಳ ಮೂಲಕ ತಳ್ಳಿಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಹಾಗೂ ವಿಷಾದನೀಯ ಬೆಳವಣಿಗೆಯಾಗಿದೆ.

ದೇವರ ಸೃಷ್ಟಿಯಲ್ಲಿ ಎಲ್ಲವೂ ಆರೋಗ್ಯಕರವಾಗಿಯೇ ಇರುತ್ತದೆ ಆದರೆ ಮನುಷ್ಯನೆಂಬ ಸ್ವಾರ್ಥ ಆಸೆಬುರುಕ ಪ್ರಾಣಿ ಹಣ ಅಸ್ತಿ ಎಂಬ ಕ್ಷಣಿಕ ಸಂಪತ್ತಿಗಾಗಿ ಆರೋಗ್ಯವೆಂಬ ಬಹು ದೊಡ್ಡ ಸಂಪತ್ತನ್ನೇ ಹಾಳು ಮಾಡುವ ವಿಷಕಾರಿ ವಸ್ತುಗಳನ್ನು ತಯಾರಿಸುವ ಮೂಲಕ ಮೋಜು ಮಸ್ತಿ ಆಧುನಿಕತೆ ಎಂಬ ಹೆಸರಿನಲ್ಲಿ ನಿತ್ಯವೂ ವಿಷಪ್ರಾಶನ ಮಾಡುತ್ತ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿರುವುದನ್ನು ಮೂರ್ಖತನದ ಪರಮಾವಧಿ ಎನ್ನಬಹುದು.

ಅದರಲ್ಲೂ ಇಂದಿನ ವಿದ್ಯಾವಂತ ಯುವಜನಾಂಗ ಆರೋಗ್ಯವೇ ಜೀವನದ ಅಮೂಲ್ಯ ಸಂಪತ್ತು ಎಂಬ ಅರಿವು ಇದ್ದರೂ, ಆಧುನಿಕತೆ ಎಂಬ ಹೆಸರಿನ ಮೂಲಕ ಆ ಕ್ಷಣದ ಮೋಜು-ಮಸ್ತಿ ಸುಖ, ಸಂತೋಷ, ಪ್ರತಿಷ್ಠೆಗಾಗಿ ಮತ್ತು ತಪ್ಪು ತಪ್ಪಾದ ಆಕರ್ಷಣೆಗಳ ಹಿಂದೆ ಹೋಗಿ ಬದುಕನ್ನು ಸುಂದರ ಹಾಗೂ ಸಾರ್ಥಕವಾಗಿ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ನಶೆಯ ಅಮಲಿಗೆ ಬಲಿಯಾಗಿ ದೇಹವನ್ನು ರೋಗಗಳ ಗೂಡಾಗಿ ಮಾಡಿಕೊಂಡು ತಮ್ಮ ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಬಾಳಿ ಬದುಕಬೇಕಾದ, ಸಾಧನೆಗಳ ಶಿಖರ ಏರಬೇಕಾದ ಯುವಶಕ್ತಿ ವ್ಯಸನದ ಕತ್ತಲೆಯೊಳಗೆ ಸಿಲುಕಿ ತಮ್ಮ ಭವಿಷ್ಯವನ್ನೇ ನಾಶಮಾಡಿ ಕೊಳ್ಳುತ್ತಿರುವುದು ಸಮಾಜ ಆರೋಗ್ಯಕರವಾಗಿ ಬೆಳೆಯುತ್ತಿಲ್ಲ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿ ನಿಂತಿದೆ.

ಆಧುನಿಕ ಸಮಾಜದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ತಂಬಾಕು ಸೇವನೆ ಇಂದು ಜಾಗತಿಕ ಮಟ್ಟದಲ್ಲಿ ಗಂಭೀರ ಚಿಂತನೆಯ ವಿಷಯವಾಗಿದೆ. ಮಾನವನ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುವ ತಂಬಾಕು, ಪ್ರತಿವರ್ಷ ಲಕ್ಷಾಂತರ ಅಮೂಲ್ಯ ಜೀವಗಳನ್ನು ಕಸಿದುಕೊಳ್ಳುತ್ತಿರುವ ಘಾತುಕಶಕ್ತಿಯಾಗಿದೆ, ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಹೀಗೆ ವಿವಿಧ ರೂಪಗಳಲ್ಲಿ ವ್ಯಾಪಕವಾಗಿರುವ ತಂಬಾಕು ವ್ಯಸನವು ವ್ಯಕ್ತಿಯ ಜೀವನಮಟ್ಟವನ್ನು ಹದಗೆಡಿಸುವುದರ ಜೊತೆಗೆ ಕುಟುಂಬ ಹಾಗೂ ಸಮಾಜದ ನೆಮ್ಮದಿಯನ್ನೂ ದುರ್ಬಲಗೊಳಿಸುತ್ತಿದೆ. ಈ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ.

ಕ್ಷಣಿಕ ಸುಖ ಮತ್ತು ಒತ್ತಡ ನಿವಾರಣೆಯ ಹೆಸರಿನಲ್ಲಿ ಆರಂಭವಾಗುವ ತಂಬಾಕಿನ ಬಳಕೆ ನಿಧಾನವಾಗಿ ವ್ಯಕ್ತಿಯ ದೈಹಿಕ ಆರೋಗ್ಯ, ಮಾನಸಿಕ ಸ್ಥಿತಿ ಹಾಗೂ ಸಾಮಾಜಿಕ ಬದುಕನ್ನೇ ಹಾಳುಮಾಡುತ್ತದೆ. ವ್ಯಸನದ ನೆರಳಲ್ಲಿ ಬದುಕಿನ ಕನಸುಗಳು, ಕುಟುಂಬದ ಸಂತೋಷ ಮತ್ತು ಭವಿಷ್ಯದ ಆಸೆಗಳು ನಶಿಸುತ್ತಿರುವುದು ಸಮಾಜದ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದರ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಆರೋಗ್ಯಕರ ಯುವಪೀಳಿಗೆ ಹಾಗೂ ವ್ಯಸನ ಮುಕ್ತ ಸಮಾಜ ನಿರ್ಮಾಣದ ದೃಷ್ಟಿಯಿಂದ ಈ ದಿನದ ಆಚರಣೆಯು ಅತ್ಯಂತ ಮಹತ್ವದ್ದಾಗಿ ಆರೋಗ್ಯವಾದ ಸಮಾಜ ನಿರ್ಮಾಣದ ಜಾಗೃತಿ ಚಳುವಳಿಯಾಗಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇಂದಿನ ಒತ್ತಡದ ಜೀವನದ ನಡುವೆ ಸಿಲುಕಿರುವ ಯುವಜನಾಂಗಕ್ಕೆ ಫ್ಯಾಷನ್, ಸ್ನೇಹಿತರ ಜೊತೆ ಮೋಜು ಮಾಡಲು ಹಾಗೂ ಕುತೂಹಲದಿಂದ ತಂಬಾಕಿನ ಕಡೆ ಆಕರ್ಷಿತರಾಗುತ್ತಿರುವ ಈ ಒಂದು ಚಿಕ್ಕ ಅಭ್ಯಾಸವೇ ಮುಂದಿನ ದಿನಗಳಲ್ಲಿ ದೊಡ್ಡ ವ್ಯಸನವಾಗಿ ಬದುಕನ್ನು ಹಾಳುಮಾಡುತ್ತದೆ ಎಂಬ ಅರಿವು ಇರಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿ ಜೀವನದ ಗುರಿ, ಕನಸು ಮತ್ತು ಸಾಧನೆಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಅಲ್ಲದೆ ಕುಟುಂಬ ಮತ್ತು ಸಮಾಜದ ಮೇಲೆ ಕೆಟ್ಟ ಪರರಿಣಾಮ ಬೀರುವುದರೊಟ್ಟಿಗೆ ಆರ್ಥಿಕ ಸಂಕಷ್ಟ, ಮಾನಸಿಕ ಒತ್ತಡ ಹಾಗೂ ಸಂಬಂಧಗಳಲ್ಲಿ ಬಿರುಕು ಹೆಚ್ಚಾಗುತ್ತದೆ. ಇನ್ನು ಸಮಾಜದಲ್ಲಿ ಅಪರಾಧಗಳು, ಆರೋಗ್ಯ ಸಮಸ್ಯೆಗಳು ಮತ್ತು ಅಶಾಂತಿ ಹೆಚ್ಚಲು ವ್ಯಸನವು ಒಂದು ಪ್ರಮುಖ ಕಾರಣವಾಗುತ್ತಿದೆ ಎಂಬುದು ಕಟು ಸತ್ಯ ಆದ್ದರಿಂದ ತಂಬಾಕು ವಿರೋಧಿ ಹೋರಾಟವು ಕೇವಲ ವೈಯಕ್ತಿಕ ಹೋರಾಟವಲ್ಲ, ಅದು ಸಾಮಾಜಿಕ ಜವಾಬ್ದಾರಿಯಾಗಿದೆ.

ತಂಬಾಕು ಉತ್ಪನ್ನಗಳು ಸರ್ಕಾರದ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಅದರ ಸಂಪೂರ್ಣ ನಿಷೇಧದ ವಿಷಯದಲ್ಲಿ ಸರ್ಕಾರಗಳು ಕಠಿಣ ಹಾಗೂ ನಿರ್ಧಾರಾತ್ಮಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಹಿಂಜರಿಯುತ್ತಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆಯಾಗಿದೆ. ಸಾರ್ವಜನಿಕ ಆರೋಗ್ಯದ ಮೇಲೆ ತಂಬಾಕು ಉಂಟುಮಾಡುವ ಗಂಭೀರ ದುಷ್ಪರಿಣಾಮಗಳು ತಿಳಿದಿದ್ದರೂ, ಆರ್ಥಿಕ ಲಾಭ ಮತ್ತು ತೆರಿಗೆ ಆದಾಯದ ಅಂಶಗಳು ನೀತಿ ರೂಪಣೆಯಲ್ಲಿ ಪ್ರಮುಖ ಪ್ರಭಾವ ಬೀರುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಸರ್ಕಾರಗಳು ತಮ್ಮ ಲಾಭದ
ಲೆಕ್ಕಾಚಾರಗಳನ್ನು ಬಿಟ್ಟು ಪ್ರಮಾಣಿಕವಾಗಿ ಜನರ ಆರೋಗ್ಯವನ್ನು ಕಾಪಾಡುವತ್ತ ಕಾಳಜಿ ವಹಿಸಬೇಕೆ ವಿನಃ, ಸರ್ಕಾರದ ಖಜಾನೆ ತುಂಬಿಸುವಲ್ಲಿ ಕಾಳಜಿ ವಹಿಸುವುದನ್ನು ಬಿಡಬೇಕು. ತಂಬಾಕು ಮೂಲದ ವಿವಿಧ ಮಾದರಿಯ ಉತ್ಪಾದನೆ ಹಾಗೂ ಪರವಾನಿಗೆಗಳ ಹಿಡಿತವೆಲ್ಲವೂ ಸರ್ಕಾರಗಳ ಕೈಯಲ್ಲಿಯೇ ಇರುವುದರಿಂದ ಆರೋಗ್ಯಕರ ಸಮಾಜ ನಿರ್ವಹಣೆಯಲ್ಲಿ ಸರ್ಕಾರದ ಪಾತ್ರವೇ ಮಹತ್ತರವಾದದ್ದು ಎಂಬುದನ್ನು ಸರಕಾರಗಳು ಮನಗಂಡು, ಇವುಗಳ ಉತ್ಪಾದನೆಯನ್ನು ನಿಷೇದಗೊಳಿಸಲು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ತಂಬಾಕು ಕ್ಷಣಿಕ ಆನಂದ ನೀಡಬಹುದು, ಆದರೆ ಅದು ಜೀವನಪೂರ್ತಿ ನೋವನ್ನು ಉಡುಗೊರೆಯಾಗಿ ನೀಡುತ್ತದೆ. ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಮಸಾಲಾ, ಜರ್ದಾ, ಹುಕ್ಕಾ ಹೀಗೆ ವಿವಿಧ ರೂಪಗಳಲ್ಲಿ ತಂಬಾಕನ್ನು ಸೇವಿಸಲಾಗುತ್ತದೆ. ಇವುಗಳಲ್ಲಿ ಇರುವ ನಿಕೋಟಿನ್ ಹಾಗೂ ವಿಷಕಾರಿ ರಾಸಾಯನಿಕಗಳು ಮಾನವನ ದೇಹವನ್ನು ನಿಧಾನವಾಗಿ ದುರ್ಬಲಗೊಳಿಸಿ ಅನೇಕ ಗಂಭೀರ ಕಾಯಿಲೆಗಳಿಗೆ ಮೂಲ ಕಾರಣವಾಗುತ್ತವೆ.

ವಿವಿಧ ರೂಪಗಳಲ್ಲಿ ಸೇವಿಸುವ ತಂಬಾಕಿನಿಂದ ದೇಹ ರೋಗಗಳ ಗೂಡಾಗುತ್ತದೆಯೇ ಹೊರತು, ಒಳಿತಂತು ಆಗುವುದಿಲ್ಲ, ವೈದ್ಯರು ಹೇಳುವಂತೆ ಇದರಲ್ಲಿನ ವಿಷಕಾರಿ ರಾಸಾಯನಿಕಗಳು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣಮಾಡುತ್ತಿದ್ದು, ಕ್ಯಾನ್ಸರ್ ಗುಟ್ಕಾ, ಪಾನ್ ಮಸಾಲಾ ಮತ್ತು ಜರ್ದಾ ಸೇವನೆಯಿಂದ ಬಾಯಿ, ನಾಲಿಗೆ ಹಾಗೂ ಹಲ್ಲುಸಂದು ಭಾಗಗಳಲ್ಲಿ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆರಂಭದಲ್ಲಿ ಬಾಯಲ್ಲಿ ಗಾಯ, ಉರಿ ಅಥವಾ ಬಿಳಿ ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಂಡು ನಂತರ ಮಾರಕ ಹಂತ ತಲುಪುತ್ತದೆ. ಎಂದು ವೈದ್ಯರು ಹೇಳುತ್ತಾರೆ,ಇನ್ನು ಸಿಗರೇಟ್ ಮತ್ತು ಬೀಡಿ ಧೂಮಪಾನವು ಶ್ವಾಸಕೋಶದ ಕೋಶಗಳನ್ನು ಹಾನಿಗೊಳಿಸಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ದೀರ್ಘಕಾಲದ ಕೆಮ್ಮು, ಉಸಿರಾಟದ ತೊಂದರೆ ಹಾಗೂ ಎದೆನೋವು ಇದರ ಪ್ರಮುಖ ಲಕ್ಷಣಗಳಾಗಿವೆ. ತಂಬಾಕಿನಲ್ಲಿರುವ ನಿಕೋಟಿನ್ ರಕ್ತನಾಳಗಳನ್ನು ಸಂಕುಚಿತಗೊಳಿಸಿ ರಕ್ತದೊತ್ತಡ ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತ, ರಕ್ತಹೆಪ್ಪುಗಟ್ಟುವಿಕೆ ಹಾಗೂ ಹೃದಯ ವೈಫಲ್ಯದ ಅಪಾಯ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ನೇರ ಕಾರಣವಾಗುತ್ತದೆ.

ಇನ್ನು ಧೂಮಪಾನದಿಂದ ಶ್ವಾಸಕೋಶದ ಕಾರ್ಯಕ್ಷಮತೆ ಕುಗ್ಗಿ ದಮ್ಮು, ಬ್ರಾಂಕೈಟಿಸ್ ಮತ್ತು ಉಸಿರಾಟದ ತೊಂದರೆಗಳು ಉಂಟಾಗುತ್ತವೆ. ಕೆಲವೊಮ್ಮೆ ಸಾಮಾನ್ಯ ಉಸಿರಾಟವೂ ಕಷ್ಟಕರವಾಗುತ್ತದೆ. ಹಲ್ಲು ಮತ್ತು ಬಾಯಿಯ ಸಮಸ್ಯೆಗಳು ತಂಬಾಕು ಸೇವನೆಯಿಂದ ಹಲ್ಲು ಹಳದಿಯಾಗುವುದು, ದುರ್ವಾಸನೆ, ಹಲ್ಲುಗೀಜಿನ ಸೋಂಕು ಹಾಗೂ ಹಲ್ಲು ಕುಸಿಯುವ ಸಮಸ್ಯೆಗಳು ಕಂಡುಬರುತ್ತವೆ. ಮೆದುಳಿನ ಘಾತಕ್ಕೂ ಕಾರಣವಾಗುವ (ಸ್ಟ್ರೋಕ್) ತಂಬಾಕು ರಕ್ತಸಂಚಾರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿ ಮೆದುಳಿಗೆ ರಕ್ತಪೂರೈಕೆ ಕಡಿಮೆಯಾಗುವಂತೆ ಮಾಡುತ್ತದೆ. ಇದರಿಂದ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ.
ಜೀರ್ಣಕ್ರಿಯೆ ಮತ್ತು ಯಕೃತ್ತಿನ ತೊಂದರೆಗಳು ತಂಬಾಕು ಸೇವನೆ ಜೀರ್ಣಾಂಗಗಳ ಮೇಲೆ ಪರಿಣಾಮ ಬೀರಿಸಿ ಅಜೀರ್ಣ, ಹೊಟ್ಟೆ ಹಾಗೂ ಯಕೃತ್ತಿನ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಗರ್ಭಾವಸ್ಥೆಯಲ್ಲಿ ತಂಬಾಕು ಸೇವನೆಯಿಂದ ಗರ್ಭಪಾತ, ಕಡಿಮೆ ತೂಕದ ಶಿಶು ಜನನ ಹಾಗೂ ಮಗುವಿನ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚುತ್ತದೆ.

ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳಿಗೂ ಕಾರಣವಾದ ತಂಬಾಕು ವ್ಯಸನ ವ್ಯಕ್ತಿಯನ್ನು ಮಾನಸಿಕವಾಗಿ ದುರ್ಬಲಗೊಳಿಸುವುದರ ಜೊತೆಗೆ ಆತಂಕ, ಕೋಪ ಹಾಗೂ ಅವಲಂಬಿತ ಮನೋಭಾವವನ್ನು ಹೆಚ್ಚಿಸುವುದಲ್ಲದೆ ಕುಟುಂಬದ ಆರ್ಥಿಕ ಸ್ಥಿತಿಯ ಮೇಲೂ ದುಷ್ಪರಿಣಾಮ ಉಂಟುಮಾಡುತ್ತದೆ. ಇಷ್ಟೆಲ್ಲಾ ದುಷ್ಪರಿಣಾಮಗಳು ಇದ್ದರೂ ತಂಬಾಕು ವ್ಯೆಸನಿಗಳ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ ಈ ನಿಟ್ಟಿನಲ್ಲಿ ಸರ್ಕಾರವೇ ತಂಬಾಕು ನಿಷೇಧದ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಂಡು ಜನಗಳನ್ನು ಇದರಿಂದ ಮುಕ್ತಿಗೊಳಿಸಬೇಕೆ ಹೊರತು ಒಂದೆಡೆ ಖಜಾನೆ ತುಂಬಿಸಿಕೊಳ್ಳುವ ಆಸೆಯಿಂದ ಉತ್ಪಾದನೆಗಳಿಗೆ ಅವಕಾಶ ಕೊಟ್ಟು ಇನ್ನೊಂದೆಡೆ ತಂಬಾಕು ಸೇವನೆ ಕೆಟ್ಟದ್ದು ಎಂದು ತಂಬಾಕು ವಿರೋಧಿ ದಿನವನ್ನು ಆಚರಿಸುವುದನ್ನು ನೋಡಿದಾಗ ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗಿದಂತೆ ಆಗುತ್ತದೆ.

ಅದೇನೇ ಇರಲಿ ತಂಬಾಕು ತ್ಯಜಿಸಿದ ಕ್ಷಣವೇ ಆರೋಗ್ಯಕರ ಬದುಕಿನ ಮೊದಲ ಹೆಜ್ಜೆ ಪ್ರಾರಂಭವಾಗುತ್ತದೆ ಆದ್ದರಿಂದ ತಂಬಾಕು ವಿರೋಧಿ ದಿನವು ಕೇವಲ ಒಂದು ದಿನದ ಆಚರಣೆಯಾಗಿ ಉಳಿಯಬಾರದು, ಅದು ಪ್ರತಿಯೊಬ್ಬರ ಮನಸ್ಸಿನಲ್ಲಿ ಆರೋಗ್ಯಕರ ಬದುಕಿನ ಸಂಕಲ್ಪವಾಗಿ ಮೂಡಬೇಕು. ವ್ಯಸನದ ಹೊಗೆಯಲ್ಲಿ ಬದುಕನ್ನು ಸುಟ್ಟುಕೊಳ್ಳುವುದಕ್ಕಿಂತ, ಜಾಗೃತಿಯ ಬೆಳಕಿನಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳುವುದು ಇಂದಿನ ಅತ್ಯಂತ ದೊಡ್ಡ ಅಗತ್ಯವಾಗಿದೆ.
ವ್ಯಸನದಿಂದ ದೂರವಾದ ಯುವಶಕ್ತಿಯೇ ರಾಷ್ಟ್ರದ ನಿಜವಾದ ಸಾಮರ್ಥ್ಯ.

ಗೀತಾಂಜಲಿ ಎನ್ ಎಮ್
ಸೋಮವಾರಪೇಟೆ. ✍️
======================

WhatsApp

Join Now

Telegram

Join Now

Instagram

Join Now