ವಿಜಯ ದರ್ಪಣ ನ್ಯೂಸ್….
ಮಾನವನ ದುರಾಸೆಯಿಂದ ಪರಿಸರ ನಾಶ: ಅಹಿಂದ ಜವರಪ್ಪ

ತಾಂಡವಪುರ: ಜೂನ್ 12 ಮಾನವನ ದುರಾಸೆಯಿಂದ ಪರಿಸರ ನಾಶವಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಯೂ ಭೀಕರವಾದ ಪ್ರಾಕೃತಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಕಳವಳ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ಬನ್ನೂರು ರಸ್ತೆಯಲ್ಲಿರುವ ವಿದ್ಯಾಜ್ಯೋತಿ ಸಮಾಜ ಕಲ್ಯಾಣ ಕೇಂದ್ರ, ಗ್ರಾಮೀಣಾ ಮಹಿಳಾ ಸ್ವಸಹಾಯ ಸಂಘಗಳ(ಒಕ್ಕೂಟ) ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಕೇಂದ್ರದ ಆವರಣದಲ್ಲಿ ಸಸಿನೆಟ್ಟು ಮಾತನಾಡಿದ ಅವರು, ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಕುಡಿಯುವ ನೀರಿಗೆ ಕೊರತೆ ಹೆಚ್ಚುತ್ತಿದೆ. ಇವೆಲ್ಲಾ ಪರಿಸರ ನಾಶದ ಕೊಡುಗೆಗಳಾಗಿವೆ ಎಂದರು.
ಜಲಮೂಲಗಳು ಬತ್ತುತ್ತಿವೆ. ಕುಡಿಯುತ್ತಿರುವ ನೀರು ಯೋಗ್ಯವಾಗಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆಕಟ್ಟೆಗಳು ಬರಿದಾಗುತ್ತಿವೆ. ಹಳ್ಳಿ ಹಳ್ಳಿಯಲ್ಲೂ ಫಿಲ್ಟರ್ ನೀರು ಕುಡಿಯುವಂತಾಗಿದೆ. ನದಿ, ಕೆರೆಗಳಲ್ಲಿ ತ್ಯಾಜ್ಯ ಮತ್ತು ಕಲುಷಿತ ನೀರು ಎಗ್ಗಿಲ್ಲದೇ ಸೇರ್ಪಡೆಯಾಗುತ್ತಿದೆ. ಮನುಷ್ಯರು ಮಾತ್ರವಲ್ಲದೇ ವನ್ಯಜೀವಿಗಳು ನಾನಾ ಕಾಯಿಲೆಗೆ ತುತ್ತಾಗುತ್ತಿವೆ ಎಂದರು.
ಮಹಿಳೆಯರು ಪರಿಸರ ಉಳಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಜಾಗೃತರಾಗಿ ಪರಿಸರ ಹಾಳು ಮಾಡದಂತೆ ಹಿರಿಯರಿಗೆ ಎಚ್ಚರಿಕೆ ಮೂಡಿಸಬೇಕು. ಸಮೂಹವೇ ಒಂದಾಗಿ ಪರಿಸರ ಸಂರಕ್ಷöಣೆಗೆ ಮುಂದಾಗದಿದ್ದರೆ ಅಪಾರ ಹಾನಿಗೆ ಒಳಗಾಗಬೇಕಾಗುತ್ತದೆ. ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಸಮತೋಲನಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕವೀಶ್ ಗೌಡ ಅವರು ಮಾತನಾಡಿ, ಎಲ್ಲರ ಬಳಿ ಎರಡೆರಡು ಮೊಬೈಲ್‌ಗಳಿವೆ. ವಾಹನಗಳು, ಫ್ರಿಡ್ಜ್ ಸೇರಿದಂತೆ ಅತ್ಯಾಧುನಿಕ ಯಂತ್ರಗಳ ದಾಸರಾಗಿದ್ದಾರೆ. ತಾಂತ್ರಿಕತೆಯ ಅಪರಿಮಿತವಾದ ಸಾಧ್ಯತೆಯನ್ನು ಎಗ್ಗಿಲ್ಲದೇ ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲವನ್ನು ಭವಿಷ್ಯದ ಪೀಳಿಗೆಗೆ ಉಳಿಸಬೇಕೆಂಬ ವಿವೇಕ ತೋರದೇ ಪರಿಸರ ಹಾಳು ಮಾಡುತ್ತಿದ್ದಾರೆ ಎಂದರು.
ವಿದ್ಯಾಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ ಮಹಿಳೆಯರಿಗೆ ನಾನಾ ತರಬೇತಿ ನೀಡಲಾಗುತ್ತಿದೆ. ಶಿಕ್ಷöಣ ಕೊಡಲಾಗುತ್ತಿದೆ. ಇಲ್ಲಿ ತಯಾರಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಾಗುವುದು. ಕೇಂದ್ರದ ಎಲ್ಲ ಚಟುವಟಿಕೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಶಿವರಾಜು ಮತ್ತು ಕವೀಶ್ ಗೌಡ ಅವರನ್ನು ಸನ್ಮಾನಿಸಲಾಯಿತು. ಸಸಿಗಳನ್ನು ವಿತರಿಸಲಾಯಿತು. ಶಾಂತಿ, ಸಿಸ್ಟರ್ ತೆರೇಸಾ, ಸಿಸ್ಟರ್ ಗ್ರೇಟಾ, ಖಜಾನೆ ಅಧಿಕಾರಿ ನಾಗರಾಜು, ಹರೀಶ್ ಬಾಬು, ಕರಾಟೆ ಶಿವು, ವರಕೋಡು ಸುರೇಶ್ ಭಾಗವಹಿಸಿದ್ದರು.











