ವಿಜಯ ದರ್ಪಣ ನ್ಯೂಸ್…..
ಸುಗಟೂರು ಸರ್ಕಾರಿ ಶಾಲೆಯಲ್ಲಿ ಸಂಭ್ರಮದ
“ಯೋಗ ಸಪ್ತಾಹ” : ಏಕಾಗ್ರತೆಗೆ ನಿರಂತರ
ಯೋಗಾಭ್ಯಾಸ ಪೂರಕ !

ಶಿಡ್ಲಘಟ್ಟ : ಯೋಗಾಭ್ಯಾಸವು ಕೇವಲ ದೈಹಿಕ
ಕಸರತ್ತುಆಗಿರದೇ ದೇಹ ಮತ್ತು ಮನಸ್ಸನ್ನು
ಶುದ್ಧವಾಗಿಡುವ ಪ್ರಕ್ರಿಯೆಯಾಗಿದೆವಿದ್ಯಾರ್ಥಿಗಳು
ದಿನನಿತ್ಯದ ಆಚಾರ-ವಿಚಾರಗಳಲ್ಲಿ ಸ್ವಚ್ಛತೆಯನ್ನು
ಕಾಪಾಡಿಕೊಳ್ಳಬೇಕು ಎಂದು ಶಿಕ್ಷಕ ಎಚ್.ಎಸ್.
ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ
ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಶಾಲೆಯ ಸುಂದರಲಾಲ್ ಬಹುಗುಣ ಇಕೋಕ್ಲಬ್ ಹಾಗೂ ಬೆಂಗಳೂರಿನ ಎಸ್‌ವ್ಯಾಸ (S vyasa) ಯೋಗ ವಿಶ್ವವಿದ್ಯಾಲಯದ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ‘ಯೋಗಸಪ್ತಾಹ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರೀಕ್ಷೆಯ ಒತ್ತಡ, ಆತಂಕಗಳನ್ನು ದೂರ ಓಡಿಸಿ,
ನೆನಪಿನ ಶಕ್ತಿಯನ್ನು ವೃದ್ಧಿಸುವ ಅದ್ಭುತ ಶಕ್ತಿ
ಯೋಗಕ್ಕಿದೆ ದಿನಕ್ಕೆ ಕೇವಲ ಹದಿನೈದು
ನಿಮಿಷಗಳ ಪ್ರಾಣಾಯಾಮ ಮತ್ತು ಧ್ಯಾನವು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ದುಪ್ಪಟ್ಟು ಮಾಡುತ್ತದೆ
ಎಂದು ಹೇಳಿದರು.
ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ವೈಯಕ್ತಿಕ ನೈರ್ಮಲ್ಯವೇ ಮೊದಲ ಮೆಟ್ಟಿಲು ಶುದ್ಧವಾದ
ದೇಹ ಮತ್ತು ಪರಿಸರದಲ್ಲಿ ಮಾತ್ರ ಸತ್‌ಚಿಂತನೆಗಳು ಮೂಡಲು ಸಾಧ್ಯ ಯೋಗಾಭ್ಯಾಸವು ಮಕ್ಕಳಲ್ಲಿ
ಆಂತರಿಕ ಶಿಸ್ತನ್ನು ಮೂಡಿಸುವ ಮೂಲಕ ಸ್ವಚ್ಛ ಹಾಗೂ ಆರೋಗ್ಯಕರ ಜೀವನಶೈಲಿಗೆ ಪ್ರೇರಣೆ
ನೀಡುತ್ತದೆ ಎಂದು ನುಡಿದರು.
ಇಂದಿನ ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಯೋಗ ಅತ್ಯಂತ ಅವಶ್ಯಕ ಶಾಲೆಯಲ್ಲಿ ಪ್ರತಿ
ಶನಿವಾರವೂ ಯೋಗ ತರಗತಿ ನಡೆಯಲಿದ್ದು,
ಈ ವಾರಪೂರ್ತಿ ಬೆಳಿಗ್ಗೆ ಒಂದು ಗಂಟೆ ಕಾಲ ಸರಳಯೋಗ, ಮಧ್ಯಾಹ್ನ ಒಂದು ಅವಧಿ ಉಪನ್ಯಾಸ,
ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಯಲಿದೆ, ಇದೇ ತಿಂಗಳ ೨೧ ರಂದು ಸಪ್ತಾಹದ ಸಮಾರೋಪ ನಡೆಯಲಿದೆ
ಎಂದರು.
ವಿಶ್ವವಿದ್ಯಾಲಯದ ಸ್ವಯಂಸೇವಕರಾದ ಕೃತಿಕಾ ಮಾತನಾಡಿ, ಇಂದಿನ ಆಧುನಿಕ ಹಾಗೂ ಒತ್ತಡದ ಜೀವನಶೈಲಿಯಲ್ಲಿ ಯೋಗವು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ,ವಿದ್ಯಾರ್ಥಿ ದೆಸೆಯಲ್ಲೇ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ದೈಹಿಕ ಸದೃಢತೆ ಹೆಚ್ಚುತ್ತದೆ ಎಂದರು.
ಪ್ರಕೃತಿಯನ್ನು ಪ್ರೀತಿಸುವ ಇಕೋಕ್ಲಬ್, ಮಾನವನ ಆಂತರಿಕ ಪ್ರಕೃತಿಯನ್ನು ಸಮತೋಲನದಲ್ಲಿಡುವ ಯೋಗವನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ವಿವರಿಸಿದರು.
ಇದೇ ವೇಳೆ ಬೆಂಗಳೂರಿನ ಹೆಸರಾಂತ ಎಸ್.ವ್ಯಾಸ ಯೋಗ ವಿಶ್ವವಿದ್ಯಾಲಯದ ನುರಿತ
ಸ್ವಯಂ ಸೇವಕರಾದ ಕೃತಿಕಾ, ಹರಿಪ್ರಿಯಾ ಮತ್ತು ಹಿರಣ್ಯ ಅವರು ವಿದ್ಯಾರ್ಥಿಗಳಿಗೆ ಸರಳ ಪ್ರಾಣಾಯಾಮ, ಸೂರ್ಯನಮಸ್ಕಾರ ಮತ್ತು ಆಸನಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.
ದಿನನಿತ್ಯದ ಅಭ್ಯಾಸದಿಂದ ಆಗುವ ಧನಾತ್ಮಕ ಬದಲಾವಣೆಗಳು, ವೈಯಕ್ತಿಕ ನೈರ್ಮಲ್ಯಗಳ ಕುರಿತು
ಉಪನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪದ್ಮಶ್ರೀ, ಶಿಕ್ಷಕ
ಎ.ಬಿ.ನಾಗರಾಜ, ಬಿ.ನಾಗರಾಜು,ಕೃತಿಕಾ,ಹರಿಪ್ರಿಯಾ, ಹಿರಣ್ಯ ಇನ್ನೀತರರು ಹಾಜರಿದ್ದರು.









