ವಿಜಯ ದರ್ಪಣ ನ್ಯೂಸ್….
ಎಸ್‌ಐಆರ್‌ಗೆ ಪ್ರತಿಯೊಬ್ಬರ ಸಹಕಾರ ಅಗತ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.87.44ರಷ್ಟು ಎನ್ಯುಮರೇಷನ್ ಫಾರ್ಮ್ ವಿತರಣೆ: ಡಿಸಿ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜು.8:
ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೇಕಡ 87.44% ಗಣತಿ ನಮೂನೆ ಮತದಾರರಿಗೆ ವಿತರಿಸಲಾಗಿದೆ ಎಂದು ಜಿಲ್ಲಾಕಾರಿ ಡಾ.ಕೆ ಎನ್ ಅನುರಾಧ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 9,12,913 ಜನರು ಮತದಾರರ ಪಟ್ಟಿಯಲ್ಲಿದ್ದು ಶೇಕಡ 91.33% ರಷ್ಟು ಮತದಾರರ ಮ್ಯಾಪಿಂಗ್ ಮಾಡಲಾಗಿದೆ. ಜು.8ರ ಮಧ್ಯಾಹ್ನದ ವೇಳೆ ಶೇ.87.44ರಷ್ಟು ಗಣತಿ ನಮೂನೆ (ಎನ್ಯುಮರೇಷನ್ ಫಾರ್ಮ್)ಗಳನ್ನು ವಿತರಿಸಲಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಶೇ.100% ಫಾರ್ಮ್ ವಿತರಣೆ ಪೂರ್ಣಗೊಳಿಸಲಾಗುವುದು ಎಂದರು. ಈಗಾಗಲೇ ಶೇ.12ರಷ್ಟು ಎನ್ಯುಮರೇಷನ್ ಫಾರ್ಮ್ಗಳನ್ನು ಡಿಜಿಟಲೀಕರಿಸಲಾಗಿದೆ. ಆನ್ಲೈನ್ ಮೂಲಕ 1334 ಅರ್ಜಿಗಳು ಸಲ್ಲಿಕೆಯಾಗಿದೆ, ಅದನ್ನು ಬಿಎಲ್‌ಒಗಳು ಪರಿಶೀಲಿಸುತ್ತಿದ್ದಾರೆ. ಜು.29 ರವರೆಗೂ ಬಿಎಲ್ಒಗಳು ಮನೆಮನೆಗೆ ಭೇಟಿ ನೀಡಿ ಪ್ರತಿಯೊಬ್ಬರಿಗೂ 02 ಎನ್ಯುಮರೇಷನ್ ಫಾರ್ಮ್ ನೀಡಲಿದ್ದು, ಅದರಲ್ಲಿ ಸಮರ್ಪಕ ಮಾಹಿತಿ ಭರ್ತಿ ಮಾಡಿ ಒಂದನ್ನು ಅಧಿಕಾರಿಗಳಿಗೆ ನೀಡಬೇಕು. ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಣೆಗಾಗಿ ಮನೆ-ಮನೆಗೆ ಭೇಟಿ ನೀಡುವ ಪ್ರಕ್ರಿಯೆಯಲ್ಲಿ ಮತದಾರರು ಬೂತ್ ಮಟ್ಟದ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡಬೇಕು.
*ಶೇ.91.33ರಷ್ಟು ಮ್ಯಾಪಿಂಗ್*
ಜಿಲ್ಲೆಯಲ್ಲಿ 2002 ರ ವೇಳೆಯಲ್ಲಿ 7,91165 ಮತದಾರರಿದ್ದರು. 2026 ಜು.03ರ ಅನ್ವಯ ಜಿಲ್ಲೆಯಲ್ಲಿ 9,12,913 ಮತದಾರರಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಶೇ 91.33% ರಷ್ಟು ಮತದಾರರ 2002 ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಶೇ.91.99, ದೇವನಹಳ್ಳಿ ಶೇ.94.82, ಹೊಸಕೋಟೆಯಲ್ಲಿ ಶೇ.92.64, ನೆಲಮಂಗಲದಲ್ಲಿ ಶೇ.88.23ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದರು.
ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.91ರಷ್ಟು ಮ್ಯಾಪಿಂಗ್ ಮಾಡುವ ಮೂಲಕ ವಲಸೆ ಕಾರ್ಮಿಕರು ಸೇರಿದಂತೆ ಎಲ್ಲಾ ಮತದಾರರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಒಂದೊಮ್ಮೆ ಅವರ ಲಭ್ಯತೆ ಇಲ್ಲದಿದ್ದಲ್ಲಿ ಬಾಡಿಗೆ ಮನೆಗಳ ಮಾಲೀಕರ ಮೂಲಕ ಅವರ ಮೊಬೈಲ್ ನಂಬರ್ ಪಡೆದು ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಮನೆ ಭೇಟಿ ಕಡ್ಡಾಯ
ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಣೆಗಾಗಿ ಮನೆ-ಮನೆಗೆ ಭೇಟಿ ನೀಡುವ ಪ್ರಕ್ರಿಯೆಯಲ್ಲಿ ಮತದಾರರು ಬೂತ್ ಮಟ್ಟದ ಅಧಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡಲು ಹಾಗೂ ಎಸ್‌ಐಆರ್ ಪ್ರಗತಿಯನ್ನು ಮೇಲ್ವಿಚಾರಣೆಗಾಗಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ 40 ಮತಗಟ್ಟೆಗಳಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಎಸ್‌ಐಆರ್ ಮತದಾರರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಸಿಬ್ಬಂದಿಗಳನ್ನು ಒಳಗೊಂಡಂತೆ ಪಾಲ್ಗೊಳುವಿಕೆ ಹಾಗೂ ಪಾರದರ್ಶಕ ಪ್ರಕ್ರಿಯೆಯಾಗಿದೆ. ಪರಿಷ್ಕರಣೆ ಪ್ರಕ್ರಿಯೆಯ ಸಮಯದಲ್ಲಿ, ಬೂತ್ ಮಟ್ಟದ ಅಕಾರಿಗಳು ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಣೆಗಾಗಿ ಮನೆ-ಮನೆಗೆ ಭೇಟಿ ನೀಡುವುದು ಕಡ್ಡಾಯಗೊಳ್ಳಿಸಲಾಗಿದೆ. ಎಲ್ಲಾ ಬಿಎಲ್‌ಓ ಗ್ರಾಮದ ಒಂದು ಜಾಗದಲ್ಲಿ ಕುಳಿತು ಅಥವಾ ಒಂದು ಭಾಗದಲ್ಲಿ ಅಂದರೆ ಧಾರ್ಮಿಕ ಸ್ಥಳಗಳಲ್ಲಿ, ಸಮುದಾಯಭವನಗಳಲ್ಲಿ ಮತದಾರರನ್ನು ಕರಸಿಕೊಂಡು ಎಸ್ಐಆರ್ ಪ್ರಕ್ರಿಯೆ ನಡೆಸಿದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಸ್ವೀಪ್ ಚಟುವಟಿಕೆ ಮೂಲಕ ಎಸ್ಐಆರ್ ಜಾಗೃತಿ: ಸಿಇಒ
ಜಿಲ್ಲಾ ಪಂಚಾಯತ್ ಸಿಇಒ ಡಾ. ವಾಸಂತಿ ಅಮರ್ ಅವರು ಮಾತನಾಡಿ ಜಿಲ್ಲೆಯಲ್ಲಿ ಎಸ್ಐಆರ್ ಕುರಿತು ಜಾಗೃತಿ ಮೂಡಿಸಲು ಸ್ವೀಪ್(ಚಟುವಟಿಕೆಗಳು) ಕೈಗೊಳ್ಳಲಾಗಿದೆ, ಮತದಾರರಿಗೆ ಸಹಾಯವಾಗಲು ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ/ಪುರಸಭೆಗಳಲ್ಲಿ 127 ಬಿ.ಎಲ್.ಓ ಸಹಾಯ ಕೇಂದ್ರ ಗಳನ್ನು ಸ್ಥಾಪಿಸಲಾಗಿದೆ. ಇದುವರೆಗೂ ಸುಮಾರು 200ಕ್ಕೂ ಅಧಿಕ ಸ್ವೀಪ್ ಚಟುವಟಿಕೆಗಳ ಮೂಲಕ 30,000 ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಮನೆಗೆ ಹಂಚಲು 50,000ಕ್ಕೂ ಅಧಿಕ ಕರಪತ್ರಗಳನ್ನು ವಿತರಿಸಲಾಗಿದೆ. ಜಿಲ್ಲೆಯ 18 ವಿ.ಐ.ಪಿಗಳಿಗೆ ಗಣತಿ ನಮೂನೆ ವಿತರಿಸಲಾಗಿದೆ. ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ದುರ್ಬಲ ವರ್ಗದ ಮತದಾರರು ಕೈಬಿಡದಂತೆ ಇವರಿಗೂ ಸಹ ಗಣತಿ ನಮೂನೆಗಳನ್ನು ಹಂಚಲು ಮತ್ತು ಭರ್ತಿ ಮಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ. ಸ್ವೀಪ್ ಅಡಿ ವಿವಿಧ ಸೈಕಲ್ ಜಾಥಾ, ಬೈಕ್ ಜಾಥಾ, ಪಂಜಿನ ಮೆರವಣಿಗೆ ಮುಂತಾದ ಸುಮಾರು 50ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ/ಪುರಸಭೆಗಳ ಸ್ವಚ್ಚತಾ ವಾಹನಗಳ ಮೂಲಕ ಪ್ರತಿದಿನ SIR ಕುರಿತು ವ್ಯಾಪಕ ಆಡಿಯೋ ಪ್ರಚಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಆಪ್‌ಲೋಡ್ ಮಾಡಲು ಸಹಾಯವಾಗುವಂತೆ ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ/ಪುರಸಭೆಗಳಲ್ಲಿನ ಡಿ.ಇ.ಓ ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಗಣತಿ ನಮೂನೆಗಳನ್ನು ಇಂಧೀಕರಿಸಲು ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದ್ದು ಮತದಾರರು ಎಸ್ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಜಿಲ್ಲಾ ಸ್ವೀಪ್ ಸಮಿತಿ ಮುಖಾಂತರ ಜಾಗೃತಿ ಮೂಡಿಸಲಾಗಿದೆ ಎಂದು ಸಿಇಒ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಮತದಾರರ ನೋಂದಣಾಧಿಕಾರಿಗಳಾದ ಶಿವಕುಮಾರ್,ರಮೇಶ್, ಪ್ರಕಾಶ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.










