ವಿಜಯ ದರ್ಪಣ ನ್ಯೂಸ್….
ವೀರಾಪುರ ಬಳಿಯ ರೈಲ್ವೆ ಅಂಡರ್ ಪಾಸ್ ನ
ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ

ಶಿಡ್ಲಘಟ್ಟ : ಶಿಡ್ಲಘಟ್ಟ-ಚಿಂತಾಮಣಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ-234ರ ವೀರಾಪುರ ಬಳಿಯ ರೈಲ್ವೆ ಅಂಡರ್‌ಪಾಸ್‌ನಲ್ಲಿ 5 ತಿಂಗಳಿನಿಂದ ಐದಾರು ಬಾರಿ ಕಬ್ಬಿಣದ ಸರಳುಗಳ ವೆಲ್ಡಿಂಗ್ ಕಿತ್ತು ಕಬ್ಬಿಣದ ಸಲಾಕೆ ಮೇಲ್ಮುಖವಾಗಿ ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು 4-5 ಅಪಘಾತಗಳು ಕೂಡ ಸಂಭವಿಸಿದ್ದವು ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೀರು ಹೋಗಲು ಅಳವಡಿಸಿದ ಮೋರಿಯ ಕಬ್ಬಿಣದ ಸರಳುಗಳ ವೆಲ್ಡಿಂಗ್ ಕಿತ್ತು ಬರುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಾತ್ಕಾಲಿಕವಾಗಿ
ದುರಸ್ತಿ ಮಾಡಿ ಹೋಗುವಷ್ಟರಲ್ಲಿ ಈಕಡೆ ಕಿತ್ತು ಹೋಗುತ್ತಿತ್ತು ಅಂಡರ್ ಪಾಸ್‌ನ ಆಸುಪಾಸಿನ ವೀರಾಪುರ, ತಲದುಮ್ಮನಹಳ್ಳಿ ಗ್ರಾಮಸ್ಥರು ಅಧಿಕಾರಿಗಳಿಗೆ, ಪೊಲೀಸರಿಗೆ ಮನವಿ ಮಾಡಿದ್ದರು.
ಅದಕ್ಕೆ ಅಧಿಕಾರಿಗಳು ತಾತ್ಕಾಲಿಕ ದುರಸ್ತಿ ಕಾರ್ಯ ಬೇಡ, ಒಂದೆರಡು ದಿನ ತಡವಾದರೂ ಶಾಶ್ವತ ದುರಸ್ತಿ ಕಾರ್ಯ ಮಾಡುವುದಾಗಿ ಹೇಳಿದ್ದರು. ಇತ್ತ ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡುವೆ ಯಾರು ದುರಸ್ತಿ ಮಾಡಬೇಕೆನ್ನುವ ಗೊಂದಲವಿದ್ದರಿಂದ ದುರಸ್ತಿ ಕಾರ್ಯ ನೆನೆಗುದಿಗೆ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಅಂತಿಮವಾಗಿ ಶಾಸಕ ಬಿ.ಎನ್.ರವಿಕುಮಾರ್ ಅವರು ಮಧ್ಯಪ್ರವೇಶಿಸಿ ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರು, ಸ್ಥಳೀಯರನ್ನು ಕರೆಸಿ ದುರಸ್ತಿ ಕಾರ್ಯದ ಬಗ್ಗೆ ಚರ್ಚಿಸಿದ್ದರು.
ಮತ್ತೆ ,ಮತ್ತೆ ಸಮಸ್ಯೆ ಮರುಕಳಿಸಬಾರದೆಂದು ಸೂಚಿಸಿದ ನಂತರ ಕಬ್ಬಿಣದ ಸರಳು ಕಿತ್ತು ನೀರು ಹರಿಯಲು ಪೈಪ್ ಅಳವಡಿಸಿ ಸಿಮೆಂಟ್ ಕಟ್ಟೆ ನಿರ್ಮಿಸಿದ್ದಾರೆ,ವೀರಾಪುರ ಗ್ರಾಮಸ್ಥರು ಟ್ಯಾಂಕರ್ ನೀರನ್ನು ಸಿಮೆಂಟ್ ಕಟ್ಟೆಗೆ ಹಾಕಿ ಕ್ಯೂರಿಂಗ್ ಕಾರ್ಯಕ್ಕೂ ಸಹಕರಿಸುತ್ತಿದ್ದಾರೆ ,ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಅಂಡರ್‌ಪಾಸ್ ನಲ್ಲಿ ಹತ್ತು ದಿನಗಳಿಂದಲೂ ಏಕ ಮುಖ ಸಂಚಾರವಿದ್ದು ಇನ್ನು 2-3 ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.











