ವಿಜಯ ದರ್ಪಣ ನ್ಯೂಸ್….
ಜುಲೈ-11ರಂದು ರಾಷ್ಟ್ರೀಯ ಲೋಕ್ ಅದಾಲತ್

ಶಿಡ್ಲಘಟ್ಟ : ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಗೆ ಹೋಲಿಸಿದರೆ ಲೋಕ್ ಅದಾಲತ್ ನಲ್ಲಿ ಪ್ರಕರಣಗಳು ಕಡಿಮೆ ಅವಧಿಯಲ್ಲಿ ಇತ್ಯರ್ಥವಾಗುವುದರಿಂದ ಸಮಯ ಮತ್ತು ಹಣ ಎರಡನ್ನೂ ಉಳಿತಾಯ ಮಾಡಬಹುದು ಅಲ್ಲದೆ, ನ್ಯಾಯಾಲಯ ಶುಲ್ಕ ಮರುಪಾವತಿ ಸೇರಿದಂತೆ ಕಾನೂನಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನೂ ಪಕ್ಷಕಾರರು ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಜುಲೈ- 11ರಂದು ನಡೆಯಲಿರುವ “ರಾಷ್ಟ್ರೀಯ ಲೋಕ್ ಅದಾಲತ್” ಏರ್ಪಡಿಸಿದ್ದು ಅದರ ಅಂಗವಾಗಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿಕೊಳ್ಳಬಹುದಾದ ನಾಗರಿಕ, ಬ್ಯಾಂಕ್ ಸಾಲ, ಹಣ ವಸೂಲಿ, ಚೆಕ್ ಬೌನ್ಸ್, ಮೋಟಾರು ವಾಹನ ಅಪಘಾತ ಪರಿಹಾರ, ಕೌಟುಂಬಿಕ ವಿವಾದ ಸೇರಿದಂತೆ ವಿವಿಧ ಪ್ರಕರಣಗಳನ್ನು ಉಭಯ ಪಕ್ಷಗಳ ಪರಸ್ಪರ ಒಪ್ಪಿಗೆಯ ಮೇರೆಗೆ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.
ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಹಾಗೂ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಲೋಕ್ ಅದಾಲತ್ ಅತ್ಯುತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜುಲೈ-11ರಂದು ನಡೆಯುವ ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ,ವಕೀಲರು, ಬ್ಯಾಂಕ್ ಅಧಿಕಾರಿಗಳು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಗೂ ಪಕ್ಷಕಾರರು ಪರಸ್ಪರ ಸಹಕಾರ ನೀಡುವ ಮೂಲಕ ಲೋಕ್ ಅದಾಲತ್ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಸ್.ಸುಕನ್ಯಾ, ಅಪರ ಸಿವಿಲ್ ನ್ಯಾಯಾಧೀಶೆ ಭಾವನಾ, ಸರ್ಕಾರಿ ಸಹಾಯಕ ಅಭಿಯೋಜಕರಾದ ರೂಪಾ, ಮೊಹಮ್ಮದ್ ಖಾಜಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲ ಎಂ.ಪಾಪಿರೆಡ್ಡಿ ಮುಂತಾದವರು ಹಾಜರಿದ್ದರು.










