ವಿಜಯ ದರ್ಪಣ ನ್ಯೂಸ್….
ಪ್ರತಿಭೆಗೆ ಮಾನದಂಡ ಜಾತಿಯಾಗಬಾರದು : ಪ್ರಾಧ್ಯಾಪಕ ಡಾ ಸಿಸಿರಾ

ಬೆಂಗಳೂರು : ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅದು ಜಾತಿ ಮತ ಧರ್ಮ ಮೀರಿದ್ದು, ಪಂಪನಿಂದ ಹಿಡಿದು ಕುವೆಂಪು ನಂತರದಲ್ಲೂ ಜಾತೀಯತೆಯು ತನ್ನ ಮಿತಿಯನ್ನು ಬೇರೆ ಬೇರೆ ರೂಪದಲ್ಲಿ ಟಿಸಿಲೊಡೆದು ಬೆಳೆಯುತ್ತಲೇ ಇದೆ, ಇದು ಸಮಸಮಾಜದ ಕನಸು ಕಂಡ ದಾರ್ಶನಿಕರ ತತ್ವ ಸಿದ್ಧಾಂತಗಳಿಗೆ ಮಾಡಿದ ಅವಮಾನವೆಂದು ಸಾಹಿತಿ ಹಾಗೂ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ವಿಷಾದ ವ್ಯಕ್ತಪಡಿಸಿದರು.
ಪತಂಜಲಿ ಯೋಗಾಶ್ರಮ ಟ್ರಸ್ಟ್ ಹಾಗೂ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರಿನ ವಿಜಯನಗರದ ರೂಪಾಲಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕವಿ, ಚಿಂತಕ ಕನಕಪುರದ *ಜಿ.ಆನಂದ್ ಕುಮಾರ್ ಅವರ ಚೊಚ್ಚಲ ಕವನ ಸಂಕಲನ ಕರುನಾಡ ಕಂದ* ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಇಂದು ಸಮಾಜದಲ್ಲಿ ಜಾತಿಯ ವಿಷಬೀಜ ಸಾಮಾಜಿಕ ಸಾಂಸ್ಕೃತಿಕ ಸಾಹಿತ್ಯಿಕ ವಲಯದಲ್ಲಿ ವಿಜೃಂಭಿಸಿ ಎಲ್ಲಾ ಕಡೆಯೂ ಕೇಕೆ ಹಾಕುತ್ತಿದೆ. ಬಸವಣ್ಣ, ಕನಕ, ಪುರಂದರ, ಅಂಬೇಡ್ಕರ್,ಕುವೆಂಪು ಅವರೆಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಹಾಗೂ ಬರಹಗಳಲ್ಲಿ ಜಾತ್ಯತೀತ ಮೌಲ್ಯಗಳನ್ನು ಪಸರಿಸುವ ಕಾರ್ಯ ಮಾಡಿದರು, ಆದರೆ ಅವರನ್ನು ಇಂದು ದೇವರು, ಧರ್ಮ, ಲಾಂಛನದಲ್ಲಿ ಹಿಡಿದಿಟ್ಟುಕೊಂಡು ಸಂಕೋಲೆಯಲ್ಲಿ ಇರಿಸಿರುವುದು ನೋವಿನ ಸಂಗತಿ ಎಂದರು. ಸಾಹಿತ್ಯವು ಜಾತಿವ್ಯವಸ್ಥೆಯನ್ನು ಮೀರಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಆಗಬೇಕು ಮನುಷ್ಯ ಜಾತಿ ತಾನೊಂದೇ ವಲಂ ಎಂದ ಪಂಪಕವಿ, ಮನುಜ ಮತ ವಿಶ್ವಪಥ ಸರ್ವೋದಯ ಸಾರಿದ ಕುವೆಂಪು ಇಂದು ನಮಗೆ ದಾರಿದೀಪ ಆಗಬೇಕಾಗಿದೆ ಎಂದರು.
ಸಮಾರಂಭವನ್ನು ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ.ವೀಣಾ ಎನ್.ವಿನೋದ್ ದೀಪ ಬೆಳಗಿಸಿ ಉದ್ಘಾಟಿಸಿ ಸರ್ಕಾರ ಮತ್ತು ಸಂಘಸಂಸ್ಥೆಗಳು ಯುವಜನರಿಗೆ ಆದರ್ಶ, ಉದ್ಯೋಗ, ನೀಡಿ ಬದುಕು ಹಸನು ಗೊಳಿಸುವ ಮೂಲಕ ಅವರ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ದಾಸ ಸಾಹಿತ್ಯ ಸಂಶೋಧಕರು, ವಿಜಯ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ವಾದಿರಾಜು ವಹಿಸಿ ಆನಂದ್ ಕುಮಾರ್ ಅವರು ಯಾರ ಸಹಾಯ ಸಹಕಾರ ಪ್ರೋತ್ಸಾಹ ಇಲ್ಲದೆ ಸ್ವಪ್ರಯತ್ನದಿಂದ ಇಂದು ಶಾಲಾ ಶಿಕ್ಷಣ ವ್ಯವಸ್ಥೆ, ಮಕ್ಕಳ ಮನಸು, ಪೋಷಕರನ್ನು ತಮ್ಮ ಎಲ್ಲ ಕವನಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಇದು ಶ್ಲಾಘನೀಯ ಸೇವಾ ಮನೋಭಾವ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೂ.ಗಿ.ಗಿರಿಯಪ್ಪನವರು ಕನ್ನಡದ ಕಂದ ಕೃತಿಯ ವೈಶಿಷ್ಟ್ಯಗಳನ್ನು ಮತ್ತು ನ್ಯೂನ್ಯತೆಗಳನ್ನು ತಿಳಿಸಿಕೊಟ್ಟರು. ಪತಂಜಲಿ ಯೋಗಾಶ್ರಮ ಟ್ರಸ್ಟ್ ನ ಶ್ರೀ ಶ್ರೀ ಪ್ರಕಾಶ್ ಯೋಗಿ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಧ್ಯಾತ್ಮಿಕ ಮತ್ತು ಲೌಕಿಕದಲ್ಲಿ ಇರುವ ನಿಗೂಢ ಮನುಷ್ಯ ಸಂಬಂಧಗಳನ್ನು ತಿಳಿಸಿದರು.ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಪ್ರಭುಸ್ವಾಮಿಯವರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಮೀನಾಕ್ಷಿ ಅಶೋಕ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಕೃತಿಕಾರ ಆನಂದ್ ಕುಮಾರ್ ತಮ್ಮ ಸಾಹಿತ್ಯ ಮತ್ತು ಜೀವನ ಬೆಳೆದು ಬರಲು ಕಾರಣರಾದ ತಂದೆ, ತಾಯಿ, ಗುರುಗಳನ್ನು ಸ್ಮರಿಸಿದರು.ಶ್ರೀಮತಿ ದಿವ್ಯ ಪ್ರಭಾಕರ್ ನಿರೂಪಿಸಿದರು, ಕುಮಾರಿ ಪಲ್ಲವಿ ಸ್ವಾಗತಿಸಿ ವಂದಿಸಿದರು.









