ವಿಜಯ ದರ್ಪಣ ನ್ಯೂಸ್…..
ಕಂದಾಯ ಗ್ರಾಮದ ಅಭಿಯಾನದ ಪ್ರಯುಕ್ತ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಾಹಿತಿ ಪಡೆದ ಜಿಲ್ಲಾಧಿಕಾರಿ ಜಿ.ಪ್ರಭು

ಶಿಡ್ಲಘಟ್ಟ : ಜಿಲ್ಲಾದ್ಯಂತ ಸುಮಾರು 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದ್ದು ಈ ಹಿನ್ನೆಲೆಯಲ್ಲಿ ಸರ್ವೆಯರ್ ಗಳು, ಗ್ರಾಮ ಆಡಳಿತಾಧಿಕಾರಿಗಳು, ತಹಸೀಲ್ದಾರ್ ಗಳು ಹಾಗೂ ಪಿಡಿಒಗಳಿಗೆ ಒಂದೇ ವೇದಿಕೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಕಂದಾಯ ಗ್ರಾಮದ ಅಭಿಯಾನದ ಪ್ರಯುಕ್ತ ನಡೆದ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ಸುಮಾರು 12 ಸಾವಿರ ಕುಟುಂಬಗಳಿಗೆ ಶಾಶ್ವತ ಮಾಲೀಕತ್ವ ಕಲ್ಪಿಸುವ ಉದ್ದೇಶದಿಂದ ಕಂದಾಯ ಗ್ರಾಮದ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮುಂದಿನ 5 ತಿಂಗಳಲ್ಲಿ ಸುಮಾರು 12 ಸಾವಿರ ಮಂದಿಗೆ ಹಕ್ಕುಪತ್ರ ನೋಂದಣಿ ಹಾಗೂ ಈ-ಸ್ವತ್ತು ನೀಡುವ ಕಾರ್ಯ ಕೈಗೊಳ್ಳಲಾಗುವುದು ,ಈಗಾಗಲೇ ಕಾರ್ಯಗಳು ಆರಂಭವಾಗಿದ್ದು, 10 ಕ್ಕೂ ಹೆಚ್ಚು ಮನೆಗಳಿರುವ ವಸತಿ ಪ್ರದೇಶಗಳನ್ನು ಉಪ ಗ್ರಾಮ ಎಂದು ಗುರುತಿಸಿ ಮನೆ ಹಾಗೂ ಮನೆ ನಿರ್ಮಿಸಿರುವ ಜಾಗ ಎರಡಕ್ಕೂ ಮಾಲೀಕತ್ವ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ,
ಇದರಿಂದ ಹಲವು ವರ್ಷಗಳಿಂದ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದ ಕುಟುಂಬಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಎರಡು ತಲೆಮಾರುಗಳಿಂದ ಬಾಕಿ ಉಳಿದಿರುವ ಆಸ್ತಿಗಳನ್ನು ಮುಂದಿನ ತಲೆಮಾರಿನ ವಾರಸುದಾರರ ಹೆಸರಿಗೆ ವರ್ಗಾಯಿಸುವ ಪೌತಿ ಖಾತೆ ಅಭಿಯಾನವನ್ನು ಕೈಗೊಳ್ಳಲಾಗಿದೆ ,ಜಿಲ್ಲೆಯಲ್ಲಿ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಪೌತಿ ಖಾತೆಗಳನ್ನು ಮಾಡಲಾಗಿದ್ದು, ತಾಲ್ಲೂಕಿನಲ್ಲಿ ಮುಂದಿನ ಎರಡು ಮೂರು ತಿಂಗಳಲ್ಲಿ ಅಭಿಯಾನವನ್ನು ಪೂರ್ಣಗೊಳಿಸಲು ಸಂಕಲ್ಪಿಸಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ದರಖಾಸ್ತು, ಪೋಡಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಸರ್ವೇ ನಡೆಸಿ, ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಆನ್ಲೈನ್ನಲ್ಲಿ ಅಳವಡಿಸಲಾಗುತ್ತಿದೆ, ಇದರಿಂದ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ ಎಂದರು.
ಈ ಕಾರ್ಯದಲ್ಲಿ ಈಗಾಗಲೇ ಶೇ.70 ಕೆಲಸ ಪೂರ್ಣಗೊಂಡಿದ್ದು, ಇನ್ನೂ ಒಂದೂವರೆ ತಿಂಗಳಲ್ಲಿ ಸಂಪೂರ್ಣ ಕಾರ್ಯ ಮುಗಿಸುವಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಲಾಗಿದೆ ಜನರಿಗೆ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಿ ಜನಸ್ನೇಹಿ ಆಡಳಿತ ನೀಡುವುದು ಇದರ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಮಳೆಯ ಅಭಾವದಿಂದ ಬಿತ್ತನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ ,ಜಿಲ್ಲೆಯಲ್ಲಿ ಈಗಾಗಲೇ ಸುಮಾರು 1.50 ಲಕ್ಷ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದು, ಅವರ ವಂತಿಕೆ ಸುಮಾರು 4ಕೋಟಿ 50 ಲಕ್ಷ ರೂ.ಗಳು ಇದೆ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವ ಉದ್ದೇಶದಿಂದ ಸುಮಾರು 28 ಕೋಟಿ ರೂ.ಗಳ ನೆರವು ನೀಡಲು ಯೋಜನೆ ರೂಪಿಸಲಾಗಿದೆ,ರೈತರಿಗೆ ಶೇ.25 ಪರಿಹಾರ ದೊರೆಯುವ ಸಾಧ್ಯತೆಯಿದ್ದು, ಒಟ್ಟಾರೆ
ಜಿಲ್ಲೆಗೆ ಸುಮಾರು 76 ಕೋಟಿ ರೂ.ಗಳು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮಳೆ ಕೊರತೆಯಿಂದ ನಗರಕ್ಕಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.
ಈಗಾಗಲೇ 14 ಕಡೆ ಖಾಸಗಿ ಬೋರ್ವೆಲ್ಗಳಿಂದ ನೀರು ಪಡೆದು ಸಾರ್ವಜನಿಕರಿಗೆ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ,ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ಹೊಸ ಬೋರ್ವೆಲ್ ಗಳನ್ನು ಕೊರೆಸಿದರೆ ನೀರು ಸಿಗುವ ಸಾಧ್ಯತೆ ಕಡಿಮೆ ಇರುವುದರಿಂದ, ಸದ್ಯಕ್ಕೆ ಖಾಸಗಿ ಬೋರ್ವೆಲ್ಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ,
ಮಳೆ ಬಂದ ನಂತರ ಅಗತ್ಯವಿರುವ ಕಡೆಗಳಲ್ಲಿ ಹೊಸ ಬೋರ್ವೆಲ್ ಗಳನ್ನು ಕೊರೆಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ
ವಿವರಿಸಿದರು.
ಈ ಸಂದರ್ಭದಲ್ಲಿ ಉಪಭಾಗಾಧಿಕಾರಿ ಎಚ್.ಅಶ್ವಿನ್, ತಹಸೀಲ್ದಾರ್ ಗಗನಸಿಂಧು, ತಾಲ್ಲೂಕು ಪಂಚಾಯತಿ ಇಒ ಆರ್.ಹೇಮಾವತಿ ಮತ್ತಿತರರು ಹಾಜರಿದ್ದರು.








