ವಿಜಯ ದರ್ಪಣ ನ್ಯೂಸ್….
ದೊಡ್ಡಹುಲ್ಲೂರಿನಲ್ಲಿ ವಿಜೃಂಭಣೆಯಿಂದ ನಾಲ್ಕನೇ ವರ್ಷದ ಗಣೇಶೋತ್ಸವ :ಬೃಹತ್ ವಿನಾಯಕ ಮೂರ್ತಿ ಪ್ರತಿಷ್ಠಾಪನೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಗ್ರಾಮದ ಶ್ರೀ ಮುತ್ಯಾಲಮ್ಮ ಮತ್ತು ಯಲ್ಲಮ್ಮ ದೇವಿಯ ವಿನಾಯಕ ಗೆಳೆಯರ ಬಳಗದ ವತಿಯಿಂದ ನಾಲ್ಕನೇ ವರ್ಷದ ಗಣೇಶೋತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಉತ್ಸವದ ಪ್ರಮುಖ ಆಕರ್ಷಣೆಯಾಗಿ 20 ಅಡಿ ಎತ್ತರದ ಬೃಹತ್ ಶ್ರೀ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಗ್ರಾಮದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಗಣೇಶೋತ್ಸವದ ಸಿದ್ಧತೆಗಾಗಿ ಗ್ರಾಮದ ಯುವಕರು ಹಲವು ದಿನಗಳಿಂದ ಶ್ರಮವಹಿಸಿ, ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಯುವಕರ ಒಗ್ಗಟ್ಟು, ಶ್ರಮ ಮತ್ತು ಉತ್ಸಾಹದಿಂದಾಗಿ ಈ ಬಾರಿಯ ಗಣೇಶೋತ್ಸವವು ವಿಶೇಷ ಮೆರುಗು ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ದೊಡ್ಡಹುಲ್ಲೂರು ಗ್ರಾಮದ ಹಿರಿಯ ಮುಖಂಡರು, ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹೊಸಕೋಟೆ ತಾಲೂಕು ಬಿಜೆಪಿ ನಾಯಕರಾದ ಸಿ. ಮಂಜುನಾಥ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ವಿನಾಯಕನಿಗೆ ಪೂಜೆ ಸಲ್ಲಿಸಿ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ ಹಾಗೂ ಹಿಂದುತ್ವದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಗಣೇಶೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ವೇದಿಕೆಯಾಗಿದೆ. ದೊಡ್ಡಹುಲ್ಲೂರು ಗ್ರಾಮದ ಯುವಕರು ಹಲವು ದಿನಗಳಿಂದ ಶ್ರಮಪಟ್ಟು, ಒಗ್ಗಟ್ಟಿನಿಂದ ಹಾಗೂ ಭಕ್ತಿಭಾವದಿಂದ ಇಷ್ಟು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಗ್ರಾಮದ ಯುವಕರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವ ಜೊತೆಗೆ, ಗ್ರಾಮದ ಜನರಲ್ಲಿ ಪರಸ್ಪರ ಸಹಕಾರ, ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಬೆಳೆಸಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಯೋಜಕರಾದ ಮಿಸ್ಟರ್ 360 ಬಾಯ್ಸ್ ಹಾಗೂ ದೊಡ್ಡಹುಲ್ಲೂರು ಗ್ರಾಮಸ್ಥರು, ಮಂಜಣ್ಣನವರ ಅಭಿಮಾನಿ ಬಳಗದವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.










