ವಿಜಯ ದರ್ಪಣ ನ್ಯೂಸ್……
ವಿಕಸಿತ ಭಾರತ ಯುವ ನಾಯಕತ್ವ ಸಂವಾದ-2027 ಭಾಗವಾಗಿ ಯುವಜನತೆಗೆ ಕ್ವಿಜ್ ಸ್ಪರ್ಧೆ ಆಯೋಜನೆ

ಬೆಂ.ಗ್ರಾ ಜಿಲ್ಲೆ ಸೆ.09 –
ವಿಕಸಿತ ಭಾರತ ಯುವ ನಾಯಕತ್ವ ಸಂವಾದ-2027 ಗುರಿಯಾಗಿಸಿ ಯುವ ಸಮೂಹಕ್ಕೆ ವಿಕಸಿತ ಭಾರತ ಕ್ವಿಜ್(ರಸಪ್ರಶ್ನೆ)ಸ್ಪರ್ಧೆಯನ್ನು ಆನ್ಲೈನ್ ಮೂಲಕ ರಾಷ್ಟ್ರದಾದ್ಯಂತ ವಿವಿಧ ಭಾಷೆಗಳಲ್ಲಿ ನಡೆಸಲಾಗುತ್ತಿದ್ದು ಆಸಕ್ತ ಜಿಲ್ಲೆಯ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಮೈ ಭಾರತ್ ಸಂಸ್ಥೆಯ ಜಿಲ್ಲಾ ಯುವ ಅಧಿಕಾರಿ ಅರುಣಿಮಾ ತಿಳಿಸಿದ್ದಾರೆ.
ದೇವನಹಳ್ಳಿ ಟೌನ್ ನ ಮೈ ಭಾರತ್ ಕಚೇರಿಯಲ್ಲಿ ಇಂದು ನಡೆದ ವಿಕಸಿತ ಭಾರತ ಯುವ ನಾಯಕತ್ವ ಸಂವಾದ-2027 ಕುರಿತ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ದೇಶದ ಯುವಜನರಲ್ಲಿ ನಾಯಕತ್ವ, ಸೃಜನಶೀಲತೆ, ನವೀನತೆ ಹಾಗೂ ರಾಷ್ಟ್ರ ನಿರ್ಮಾಣದತ್ತ ಜವಾಬ್ದಾರಿಯ ಪ್ರಜ್ಞೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಕಸಿತ ಭಾರತ ಯುವ ನಾಯಕತ್ವ 2027 ಆಯೋಜಿಸಲಾಗುತ್ತಿದೆ.
ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈ ಭಾರತ್ ಈ ಕಾರ್ಯಕ್ರಮದ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂವಾದದ ಮೂಲಕ ಯುವಜನರು ವಿಕಸಿತ ಭಾರತ @2047 ಎಂಬ ರಾಷ್ಟ್ರದ ಗುರಿಯತ್ತ ತಮ್ಮ ಆಲೋಚನೆಗಳು ಹಾಗೂ ಕೊಡುಗೆಗಳನ್ನು ಪ್ರಸ್ತುತಪಡಿಸಲು ವೇದಿಕೆ ಸಿಗಲಿದೆ.
ಆಸಕ್ತ 15 ರಿಂದ 29 ವರ್ಷ ವಯಸ್ಸಿನ ಯುವಕ-ಯುವತಿಯರು ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಲು ಮೈ ಭಾರತ್ ಪೋರ್ಟಲ್ https://mybharat.gov.in/ ನಲ್ಲಿ ನೋಂದಾಯಿಸಿಕೊಳ್ಳಬೇಕು. ಕ್ವಿಜ್ ಸ್ಪರ್ಧೆಯು ಸೆಪ್ಟೆಂಬರ್ 30 ವರೆಗೆ ನಡೆಯಲಿದ್ದು ಆನ್ಲೈನ್ ಮೂಲಕವೇ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ರಸಪ್ರಶ್ನೆಯ ನಂತರ ಆಯ್ಕೆಯಾಗುವ ಯುವಜನರು 500 ಪದಗಳ ವಿಕಸಿತ ಭಾರತ್ ಈಸಿ ಚಾಲೆಂಜ್ ನಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಹಂತದಲ್ಲಿ ಪ್ರತಿಯೊಂದು ಜಿಲ್ಲೆಯಿಂದ ಅತ್ಯುತ್ತಮ 50 ಪ್ರಬಂಧಗಳನ್ನು ಡಿಸ್ಟಿಕ್ ಚಾಂಪಿಯನಶಿಪ್ ಪಿಪಿಟಿ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ನಂತರ ಈ ಹಂತದಿಂದ ಪ್ರತಿ ಜಿಲ್ಲೆಯ ಅತ್ಯುತ್ತಮ ಇಬ್ಬರ ಸ್ಪರ್ಧಿಗಳು ರಾಜ್ಯಮಟ್ಟಕ್ಕೆ ಅರ್ಹರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಯುವಜನರು ತಮ್ಮ ಆಲೋಚನೆ, ಗುರಿಗಳನ್ನು ತೀರ್ಪುಗಾರರ ಸಮಿತಿಯ ಮುಂದೆ ಮಂಡಿಸಲಿದ್ದಾರೆ. ರಾಜ್ಯ ಮಟ್ಟದ ಪ್ರದರ್ಶನದ ಆಧಾರದ ಮೇಲೆ ರಾಷ್ಟ್ರೀಯ ಹಂತಕ್ಕಾಗಿ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರೀಯ ಹಂತದಲ್ಲಿ ಆಯ್ಕೆಯಾಗುವ ಯುವಜನರು ನವದೆಹಲಿಯಲ್ಲಿ ತಜ್ಞರು, ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರ ಸಮ್ಮುಖದಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ಪಡೆಯಲಿದ್ದಾರೆ. ಪ್ರಾದೇಶಿಕ ಅಂತಿಮ ಸುತ್ತಿಗೆ ಆಯ್ಕೆಯಾಗುವ ಸ್ಪರ್ಧಿಗಳು ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ತಮ್ಮ ಆಲೋಚನೆ ಮಂಡಿಸುವ ಅವಕಾಶವನ್ನು ಪಡೆಯಲಿದ್ದಾರೆ.
ಈ ಕಾರ್ಯಕ್ರಮವು ಕೇವಲ ರಸಪ್ರಶ್ನೆ ಅಥವಾ ಸ್ಪರ್ಧೆ ಜೊತೆಗೆ ವಿವಿಧ ಕ್ಷೇತ್ರಗಳ ಪ್ರತಿಭಾವಂತ ಯುವಜನರು ತಮ್ಮ ಕೌಶಲ್ಯ, ಸೃಜನಶೀಲತೆ ಹಾಗೂ ನವೀನ ಆಲೋಚನೆಗಳನ್ನು ಪ್ರದರ್ಶಿಸಲು ಅವಕಾಶ ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ 7903994692 ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅರ್ಹ ಯುವಜನರು ವಿಕಸಿತ ಭಾರತ್ ಕ್ವಿಜ್ ನಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾ ಯುವ ಅಧಿಕಾರಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಅಶೋಕ್ ಕುಮಾರ್, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.










