--Ads--

ಜ್ಞಾನದ ಹುಡುಕಾಟ, ನಡವಳಿಕೆಗಾಗಿ………

On: September 17, 2026 10:59 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಜ್ಞಾನದ ಹುಡುಕಾಟ, ನಡವಳಿಕೆಗಾಗಿ………

ಜ್ಞಾನದ ಆಳಕ್ಕೆ ಇಳಿದಷ್ಟು ಚಿತ್ರ ವಿಚಿತ್ರ ಸತ್ಯಗಳು ಅನಾವರಣಗೊಳ್ಳುತ್ತವೆ. ಮತ್ತೆ ನಮ್ಮ ಅಲ್ಪಜ್ಞಾನದ ಅರಿವಾಗಿ ನಾಚಿಕೆಯಾಗುತ್ತದೆ. ಹಾಗೆಯೇ ಕೆಲವೊಮ್ಮೆ ವಿಷಯಗಳು ಗಾಬರಿ ಹುಟ್ಟಿಸುತ್ತವೆ. ಮುಖವಾಡ ಕಳಚಿದ ಸಹಜ ಸ್ಥಿತಿ ಮತ್ತು ತಟಸ್ಥ ಸನ್ನಿವೇಶ ದಲ್ಲಿ ತೆರೆದುಕೊಳ್ಳುವ ಮಾಹಿತಿಗಳು ಸ್ಪೋಟಕ ಮನಸ್ಥಿತಿ ಹೊಂದಿರುತ್ತದೆ.

ಹಾಗೆ ಕೆಲವೊಮ್ಮೆ ದೀರ್ಘ ಚಿಂತನೆಯಲ್ಲಿ ತೊಡಗಿದಾಗ……

ಇತ್ತೀಚಿನ ವರ್ಷಗಳಲ್ಲಿ ಸಮಾಜಮುಖಿ ಚಿಂತನೆಯಲ್ಲಿ ತೊಡಗಿರುವವರು, ಚಳವಳಿ, ಹೋರಾಟಗಳಲ್ಲಿ ಭಾಗಿಯಾಗುತ್ತಿರುವವರು, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗಿಸಿಕೊಂಡಿರುವವರು ತಾವು ಮಹಾ ಜ್ಞಾನಿಗಳು, ಎಲ್ಲಾ ವಿಷಯಗಳನ್ನು ಅರಿತವರು, ತುಂಬಾ ಒಳ್ಳೆಯವರು ಎಂದು ಭಾವಿಸಿಕೊಳ್ಳುತ್ತಾ, ಇತರರಲ್ಲಿ ಪರಿಪೂರ್ಣ ಪ್ರಜ್ಞೆ ಇಲ್ಲ, ಅವರು ಕೆಟ್ಟವರು ಮತ್ತು ನಂಬಿಕೆಗೆ ಅರ್ಹರಲ್ಲ ಎಂದು ಭ್ರಮಿಸುತ್ತಾ, ತಮ್ಮನ್ನು ತಾವು ಮಾರ್ಕೆಟ್ ಮಾಡಿಕೊಂಡು, ಸಮಾಜದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು, ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ.

ತನ್ನ ಆತ್ಮಾವಲೋಕನ ಮಾಡಿಕೊಳ್ಳದೆ, ಇತರರನ್ನೇ ಹೆಚ್ಚು ಟಾರ್ಗೆಟ್ ಮಾಡಿಕೊಂಡು, ಬದುಕುವ ಕಲೆಯನ್ನೇ ಮರೆತು ಮಾತು ಮತ್ತು ಅಕ್ಷರಗಳ ಮೂಲಕವೇ ತಾವು ಒಬ್ಬ ಶ್ರೇಷ್ಠ ಚಿಂತಕರೇನೋ ಎಂಬಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ತನ್ನನ್ನು ತಾನು ನಾನೇ ಎಂದು ಭಾವಿಸಿಕೊಳ್ಳುವುದೇ ಮೂರ್ಖತನದ ಇನ್ನೊಂದು ಮುಖ.

ಜ್ಞಾನದ ಆಳದಲ್ಲಿ ಅರಿವಾದ ಮತ್ತೊಂದು ಸತ್ಯದರ್ಶನವೆಂದರೆ, ನಾನು ಬುದ್ಧಿವಂತ ಎಂದು ಜನ ಮಾತನಾಡಿಕೊಳ್ಳುವುದಕ್ಕೆ ಕಾರಣ ನಿಜವಾಗಲೂ ನಾನು ಬುದ್ದಿವಂತನಾಗಿರುವುದಲ್ಲ, ಬದಲಾಗಿ ಜನರ ಗ್ರಹಿಕೆ ಮತ್ತು ತಿಳುವಳಿಕೆಯ ಮಟ್ಟ ಕಡಿಮೆಯಾಗಿರುವುದು ಹಾಗೂ ಅವರು ಚಿಂತನೆ ಮತ್ತು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡು, ಹಣ ಅಧಿಕಾರ ಗಳಿಸುವುದಕ್ಕಾಗಿ ಕುಟುಂಬ ನಿರ್ವಹಣೆಗೋ, ಉದ್ಯೋಗದಲ್ಲಿಯೋ ಹೆಚ್ಚು ಕಳೆದುಹೋಗುವುದರಿಂದ, ದಿಢೀರನೆ ಸಿಗುವ ಸಾಮಾಜಿಕ ಜಾಲತಾಣಗಳ ಕೆಲವು ಚಿಂತನೆಗಳಿಗೆ ಮಾರುಹೋಗುವ ಕಾರಣ ನಾನು ಬುದ್ಧಿವಂತ ಎಂದು ಭ್ರಮೆಗೆ ಒಳಗಾಗುತ್ತಿದ್ದೇನೆ. ಅದು ವಾಸ್ತವ ಅಲ್ಲವೇ ಅಲ್ಲ.

ಮುಖವಾಡವಲ್ಲದ, ಅಸಹಜವಲ್ಲದ, ಸಹಜ ಚಿಂತನಾಕ್ರಮ ಎನ್ನುವ ವಿಧಾನದಲ್ಲಿಯೂ ಈ ಆಧುನಿಕ ಸಂಕೀರ್ಣ ಕಾಲದಲ್ಲಿ ಅಸಹಜತೆ ಮೂಡಿ ಬರುತ್ತಿರುವುದು ಕಾಲದ ವ್ಯಂಗ್ಯವಾಗಿ ಕಾಣುತ್ತಿದೆ.

ಜ್ಞಾನ ನಿಂತ ನೀರಲ್ಲ, ಅದೊಂದು ಹರಿಯುವ ಪ್ರವಾಹ……

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ಅದೇನೆಂದರೆ, ಅನೇಕ ಸಾಮಾನ್ಯ ಜನ ರಿಲ್ಸ್ ಗಳನ್ನು ಮಾಡಿ ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಲ್ಲಿ ಅಪ್ಲೋಡ್ ಮಾಡಿ ತುಂಬಾ ಪ್ರಖ್ಯಾತರಾಗುತ್ತಿದ್ದಾರೆ. ವಯಸ್ಸು, ಪ್ರದೇಶ, ಲಿಂಗ ಮುಂತಾದ ಯಾವುದೇ ವ್ಯತ್ಯಾಸವಿಲ್ಲದೆ, ಚಿತ್ರವಿಚಿತ್ರ ಕಂಟೆಂಟ್ಗಳ ಮೂಲಕ ಜನಪ್ರಿಯವಾಗಿ ಲಕ್ಷಾಂತರ ಹಿಂಬಾಲಕರು ಅಭಿಮಾನಿಗಳನ್ನು ಪಡೆದಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಈ ವಿಷಯದಲ್ಲಿ ಮುಂದಿದ್ದಾರೆ….

ಈ ರೀತಿ ರೀಲ್ಸ್ ಮಾಡುವ ಹೆಣ್ಣು ಮಕ್ಕಳು ಬಹುತೇಕರು ಸಾಂಪ್ರದಾಯಿಕ ಶೈಲಿಯ, ಪುರುಷ ಕೇಂದ್ರೀಕೃತ, ಮಹಿಳಾ ಸಮಾಜದ ಮಿತಿಗಳನ್ನು ಮೀರಿ ಹೆಚ್ಚು ಬೋಲ್ಡ್ ಆಗಿ ಮಾತನಾಡುತ್ತಾರೆ. ಒಂದಷ್ಟು ಅಶ್ಲೀಲ ಮಾತುಗಳು ಸಹ ಪುರುಷರಂತೆಯೇ ಇರುತ್ತದೆ. ಮಹಿಳೆಯರು ಅಶ್ಲೀಲ ಮಾತನಾಡಬಾರದು ಎನ್ನುವ ಪುರುಷ ಸಮಾಜದ ನಿರೀಕ್ಷೆಗೆ ವಿರುದ್ಧವಾಗಿ, ತಾವು ಪುರುಷರಂತೆ ಎಲ್ಲಾ ಪದಗಳನ್ನು ಉಪಯೋಗಿಸುತ್ತಾರೆ.

ಅದು ಅವರವರ ಸ್ವಾತಂತ್ರ್ಯ. ಆದರೆ ಈ ರೀಲ್ಸ್ಗಳನ್ನು ವೀಕ್ಷಿಸುವ ಕೆಲವು ಪರಿಚಿತರು, ಅಪರಿಚಿತರು, ಅನಾಮದೇಯರು, ನಕಲಿ ಐಡಿಯವರು ಯಾರೋ ತಮ್ಮ ತೆವಲಿಗೆ, ಕುಚೇಷ್ಟೆಗೆ, ರೇಗಿಸಬೇಕಂತಲೇ ಇವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಅತ್ಯಂತ ಅಶ್ಲೀಲ ಪದ ಉಪಯೋಗಿಸುತ್ತಾರೆ. ಮುಖ್ಯವಾಗಿ ಆ ಹೆಣ್ಣನ್ನು ಬೆಲೆವೆಣ್ಣು ಎಂತಲೇ ಮಾತನಾಡಿಸುತ್ತಾರೆ.

ಅಲ್ಲಿಂದ ಶುರುವಾಗುತ್ತದೆ ನೋಡಿ ಆ ಕಮೆಂಟ್ ಬಗ್ಗೆ, ಈ ರೀಲ್ಸ್ ಮಾಡುವವರು ಆ ಕಮೆಂಟ್ನಾ ನೂರು ಪಟ್ಟು ಹೆಚ್ಚು ಅಶ್ಲೀಲವಾಗಿ ಅವರಿಗೆ ಕಮೆಂಟ್ ಹಾಕಿದವರನ್ನು ಮತ್ತೆ ಮತ್ತೆ ನಿಂದಿಸುತ್ತಾ, ಅಮ್ಮ, ಅಕ್ಕ ಎಂದು ಎಲ್ಲರನ್ನೂ ನೆನಪಿಸಿಕೊಳ್ಳುತ್ತಾ, ಎಲ್ಲಾ ಕೆಟ್ಟ ಬೈಗುಳನ್ನು ಬಯ್ಯುತ್ತಾ, ತಮ್ಮ ಇಡೀ ಬಾಯಿ ಚಪಲವನ್ನು ತೀರಿಸಿಕೊಳ್ಳುತ್ತಾರೆ. ಇದಂತೂ ಒಂದು ರೀತಿ ಹಾಸ್ಯಾಸ್ಪದವಾಗಿರುತ್ತದೆ.

ಈ ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿಕೆಗಳ ಜೊತೆ ತೆಗಳಿಕೆಗಳು ಇರುತ್ತವೆ. ನಾವು ಎರಡನ್ನು ಗಮನಿಸಿ ನಿರ್ಲಕ್ಷಿಸಬೇಕು. ಯಾರೋ ಕೇವಲ ಒಬ್ಬರ ಕಮೆಂಟ್ಗೆ ಹುಚ್ಚು ಹಿಡಿದವರಂತೆ ಮಾತನಾಡುತ್ತಾ ಗಂಡಸಾಗಿದ್ದರೆ ಬರಲಿ, ಧೈರ್ಯವಿದ್ದರೆ ಬರಲಿ, ತಾಕತ್ತಿದ್ದರೆ ಬರಲಿ ಇತ್ಯಾದಿ ಇತ್ಯಾದಿ ಆಹ್ವಾನ ಕೊಡುವುದು ತುಂಬಾ ಬಾಲಿಶವೆನಿಸುತ್ತದೆ…..

ಸಂಯಮವಿಲ್ಲದ ಜ್ಞಾನ ಜ್ಞಾನವೇ ಅಲ್ಲ, ಪ್ರಬುದ್ಧತೆಯು ಅಲ್ಲ. ಇನ್ನೊಬ್ಬರಿಗೆ ಪಾಠ ಕಲಿಸುತ್ತೇವೆ ಎನ್ನುವ ಮನಸ್ಥಿತಿಯೇ ಅಪರಾಧಿ ಮನಸ್ಥಿತಿ, ಕ್ರೌರ್ಯದ ಮನಸ್ಥಿತಿ, ಅಜ್ಞಾನದ ಮನಸ್ಥಿತಿ…

ಜ್ಞಾನವೆಂಬುದು ಮೂರ್ತ ಸ್ವರೂಪವೇ ಹೊರತು ಅಮೂರ್ತವಲ್ಲ……..

ಜ್ಞಾನ ತಿಳಿವಳಿಕೆ ಮಾತ್ರವಲ್ಲ ನಡವಳಿಕೆ…………

ಜ್ಞಾನ ನಂಬಿಕೆಯಲ್ಲ ವಾಸ್ತವ…….

ಜ್ಞಾನ ಮಾತಲ್ಲ ಕೃತಿ…….

ಜ್ಞಾನ ಭಾವನೆಯಲ್ಲ ಬದುಕು……….

ಜ್ಞಾನ ಅಕ್ಷರಗಳಲ್ಲಿ ಇಲ್ಲ ಅಂತರಂಗದಲ್ಲಿದೆ……..

ಜ್ಞಾನ ಹೇಳುವುದಲ್ಲ ಕೇಳುವುದಲ್ಲ ನಡೆದುಕೊಳ್ಳುವುದು…….

ಜ್ಞಾನ ನಿಂತ ನೀರಲ್ಲ, ಹರಿಯುವ ನದಿ ಅರ್ಥಾತ್‌ ತ್ರಿಲೋಕ ಸಂಚಾರಿ……..

ಜ್ಞಾನ ಸರಿಯಾಗಿ ಉಪಯೋಗವಾಗದಿದ್ದರೆ ಅದು ಅಜ್ಞಾನವಾಗುತ್ತದೆ………

ಜ್ಞಾನದಿಂದ ನೆಮ್ಮದಿ ಸಿಗುತ್ತದೆ. ನಮ್ಮ ಮನಸ್ಸು ಶಾಂತವಾಗಿರದಿದ್ದರೆ ನಾವಿನ್ನೂ ಜ್ಞಾನವಂತರಲ್ಲ ಎಂದೇ ಭಾವಿಸಬೇಕು….

ಜ್ಞಾನ ಸ್ವತಂತ್ರ ಚಿಂತನೆಯೇ ಹೊರತು ಎರವಲು ಪಡೆಯಲುಬಾರದು……

ಜ್ಞಾನ ಮೇಲ್ಮುಖವಾಗಿ ಬೆಳೆಯುತ್ತದೆಯೇ ಹೊರತು ಕೆಳಕ್ಕೆ ಇಳಿಯುವುದಿಲ್ಲ…….

ಜ್ಞಾನದ ಅರ್ಥ ಮತ್ತು ವ್ಯಾಪ್ತಿ ಊಹೆಗೂ ನಿಲುಕುವುದಿಲ್ಲ……….

ಜ್ಞಾನದಲ್ಲಿ ವಿನಯವಿರುತ್ತದೆಯೇ ಹೊರತು ಅಹಂಕಾರ ಬೆಳೆಯುವುದೇ ಇಲ್ಲ…………..

ಜ್ಞಾನ ಸಹಜ ಸ್ವಾಭಾವಿಕವೇ ಹೊರತು ಅದನ್ನು ಮುಖವಾಡವಾಗಿಸಲು ಸಾಧ್ಯವಿಲ್ಲ………….

ಹಾಗಾದರೆ ಜ್ಞಾನವೆಂಬ ನಾನು‌ ಯಾರು ?

ಹುಡುಕಾಡುತ್ತಲೇ ಇದ್ದೇನೆ…….

ನೀವು ಬನ್ನಿ ನನ್ನೊಂದಿಗೆ,
ಜ್ಞಾನದ ಹುಡುಕಾಟದಲ್ಲಿ ಜೊತೆಯಾಗೋಣ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now