ವಿಜಯ ದರ್ಪಣ ನ್ಯೂಸ್…..
ಸಾಲ ವಸೂಲಾತಿ ಕೊರತೆಯಿಂದ ಪಿ.ಎಲ್.ಡಿ. ಬ್ಯಾಂಕ್
8 ಕೋಟಿ ರೂ. ನಷ್ಟದಲ್ಲಿದೆ : ಬಂಕ್ ಮುನಿಯಪ್ಪ

ಶಿಡ್ಲಘಟ್ಟ : ಕಳೆದ ಮೂರು ವರ್ಷಗಳಿಂದ ರೈತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಸಾಲದ ವಸೂಲಾತಿ ಪ್ರಮಾಣ ಶೇ 50ರಷ್ಟಿದ್ದು, ಶೇ 80ರಿಂದ 90ರಷ್ಟು ವಸೂಲಾತಿಯಾದರೆ ಮೇಲ್ಮಟ್ಟದ ಬ್ಯಾಂಕ್‌ಗಳಿಂದ ಹೆಚ್ಚಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ನಗರದ ಪಿ.ಎಲ್.ಡಿ ಬ್ಯಾಂಕ್ ಆವರಣದಲ್ಲಿ ನಡೆದ 2025-26ನೇ ಸಾಲಿನ 88ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಾಲ ವಸೂಲಾತಿ ಕಡಿಮೆಯಾಗಿರುವುದೇ ಬ್ಯಾಂಕಿನ ಆರ್ಥಿಕ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ ,
ರೈತರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ
ಮರುಪಾವತಿ ಮಾಡದಿರುವುದರಿಂದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿ.ಎಲ್.ಡಿ ಬ್ಯಾಂಕ್) ಸುಮಾರು 8 ಕೋಟಿ ರೂ.ಗಳ ನಷ್ಟದಲ್ಲಿದೆ ಎಂದು ಹೇಳಿದರು.
ಸಾಲ ಮನ್ನಾ ಯೋಜನೆಗಳ ಸಂದರ್ಭದಲ್ಲಿ ಕೆಲ ರೈತರು ಮಾತ್ರ ಬಾಕಿ ಪಾವತಿಸಿದ್ದಾರೆ ಇದರಿಂದ ವಸೂಲಾತಿ ಪ್ರಮಾಣದಲ್ಲಿ ಸುಧಾರಣೆಯಾಗಿದ್ದರೂ, ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ ಬ್ಯಾಂಕಿನಿಂದ ಸಾಲ ಪಡೆದಿರುವ ರೈತರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಮಾತ್ರ ಬ್ಯಾಂಕಿನ ಹಣಕಾಸು ಸ್ಥಿತಿ ಸುಧಾರಿಸಲು ಸಾಧ್ಯ ಎಂದು ಮನವಿ ಮಾಡಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಜಿ. ಸುರೇಶ್ ಮಾತನಾಡಿ , ಸಾಲ ಪಡೆದ ರೈತರು ನಿಗಧಿತ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಿ ಬ್ಯಾಂಕನ್ನು ಉಳಿಸುವ ಜತೆಗೆ ಹೊಸ ಸಾಲ ನೀಡಲು ಅನುವು ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಸಹಕಾರಿ ಬ್ಯಾಂಕ್‌ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ದೊರೆಯುವ ಸಾಲದ ಸೌಲಭ್ಯವನ್ನು ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಡರಾಗಬೇಕೆಂದು ಹೇಳಿದರು.
ಚಿಮುಲ್ ನಿರ್ದೇಶಕ ಹುಜುಗೂರು ಎಂ.ರಾಮಯ್ಯ ಮಾತನಾಡಿ, ಸಾಲ ಮನ್ನಾ ಕುರಿತು ಕೆಲ ರೈತರಲ್ಲಿ ತಪ್ಪು ಕಲ್ಪನೆ ಉಂಟಾಗಿದೆ ಬ್ಯಾಂಕ್‌ನಲ್ಲಿರುವ ಅಸಲು ಮೊತ್ತವೂ ಸಂಪೂರ್ಣವಾಗಿ ಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಿಂದ ಸಾಲ ಮರುಪಾವತಿ ಮಾಡದೆ ಇರುವುದರಿಂದ ಬ್ಯಾಂಕ್‌ಗೆ ಆರ್ಥಿಕ ಹೊರೆ ಉಂಟಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಕೃಷಿ ಸಾಲದ ಬಡ್ಡಿದರಕ್ಕೆ ಹೋಲಿಸಿದರೆ ಪಿ.ಎಲ್.ಡಿ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ ಸುಮಾರು ಎಂಟು ದಶಕಗಳ ಇತಿಹಾಸ ಹೊಂದಿರುವ ಈ ಬ್ಯಾಂಕ್ ಅನ್ನು ರೈತರು ಹಾಗೂ ಸದಸ್ಯರು ಉಳಿಸಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ಡಿ.ಎನ್.ರಾಮಚಂದ್ರ ,ನಿರ್ದೇಶಕರಾದ ಟಿ.ಎಲ್.ಅಂಬರೀಷ್,ಎಂ.ಮುರಳಿ, ಎಂ.ಪಿ.ರವಿ, ಡಿ.ವಿ. ವೆಂಕಟೇಶಪ್ಪ,ಗುಡಿಹಳ್ಳಿ ಎನ್.ಚಂದ್ರನಾಥ್,ಕೆ.ಆನಂದ್, ಕೆ.ಪಿ. ಕಿಶೋರ್, ಕೆ.ಎಂ. ಬೈರೇಗೌಡ,ಮೇಲೂರು ಮಂಜುನಾಥ್, ಚೀಮನಹಳ್ಳಿ ಗೋಪಾಲ್, ಮುಗಿಲಡಿಪಿ ನಂಜಪ್ಪ, ಎಚ್.ಜಿ.ಗೋಪಾಲಗೌಡ ಹಾಗೂ ವ್ಯವಸ್ಥಾಪಕ ಬಿ.ಆರ್.ವೇಣುಗೋಪಾಲ್ ಮುಂತಾದವರು ಹಾಜರಿದ್ದರು.











