ವಿಜಯ ದರ್ಪಣ ನ್ಯೂಸ್….
“ನೃತ್ಯಪ್ರಭಾ” ಮೂಲಕ ಮಿಂಚಿದ ನೃತ್ಯ ನೀರಾಜನ

ಬೆಂಗಳೂರು : ನಗರದ ಹೆಸರಾಂತ ಭರತನಾಟ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟ್ (ರಿ.) ವತಿಯಿಂದ ಗುರು ಕಲಾಭೂಷಿಣಿ ಡಾ. ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ಆಯೋಜಿಸಲಾದ “ನೃತ್ಯ ನೀರಾಜನ–14” ಕಾರ್ಯಕ್ರಮವು ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ ಸಾಧನಾಶ್ರೀ (ಆಯುರ್ವೇದ ವೈದ್ಯರು ಹಾಗೂ ಸಾಧನಾ ಸಂಗಮ ಟ್ರಸ್ಟಿನ ನಿರ್ದೇಶಕರು) ಮತ್ತು ಶ್ರೀಮತಿ ರಜನಿ ಆರ್., (ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ) ಅವರು ಉಪಸ್ಥಿತರಿದ್ದು ಯುವ ಕಲಾವಿದೆಯರಿಗೆ ಶುಭ ಹಾರೈಸಿದರು.
ಈ ವರ್ಷದ ನೃತ್ಯ ನೀರಾಜನದ ಶೀರ್ಷಿಕೆ “ನೃತ್ಯಪ್ರಭಾ” ಆಗಿದ್ದು, ಗುರು ಡಾ. ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಪಿ. ಲಿಖಿತಾ, ಕು|| ಜಯಶ್ರೀ ವೇಣು ಕುಳಾವಿ ಹಾಗೂ ಕು|| ಆರ್. ಸಮೃದ್ಧಿ ಅವರು ಭರತನಾಟ್ಯದ ವಿವಿಧ ಆಯಾಮಗಳನ್ನು ಒಳಗೊಂಡ ಸುಂದರ ನೃತ್ಯ ಪ್ರದರ್ಶನವನ್ನು ನೀಡಿದರು.

ಕಾರ್ಯಕ್ರಮವು ಸಂಪ್ರದಾಯಬದ್ಧ ‘ಪುಷ್ಪಾಂಜಲಿ’ ರಾಗ ಅಮೃತ ವರ್ಷಿಣಿ, ಆದಿತಾಳ ಹಾಗೂ ಚಕ್ರವಾಕ ರಾಗದ ‘ಗಜಾನನಾಯುತo’ ಕೃತಿಯ ಮೂಲಕ ಶುಭಾರಂಭವಾಯಿತು.
ನಂತರ ಖಂಡ ಅಲರಿಪು, ಅಭೋಗಿ ಜತಿಸ್ವರ, ನೃತ್ಯ ಭಂದ ಮೂರುಕಲಾವಿದರು ನರ್ತಿಸಿದರು. ಏಕವ್ಯಕ್ತಿ ಪ್ರದರ್ಶನದಲ್ಲಿ ಲಿಖಿತ ಶಿವನ ಕೃತಿ
ಆನಂದತಂದವೇಶ್ವರನ ಅದರಲ್ಲಿ ನವರಸ ವನ್ನು ಅದ್ಭುತವಾಗಿ ಪ್ರದರ್ಶಿಸಿದರು ಸಮೃದ್ಧಿ ದೇವಿ ಕೃತಿ ಓಂಕಾರಕಾರಿಣಿಯಲ್ಲಿ ಬಂಧಸುರ ವಧೆ ಪ್ರಸಂಗ ಹಾಗೂ ಜಯಶ್ರೀ ವಾದಿರಾಜರ ದೇವರನಾಮ ಆವಕುಲವೋ ರಂಗದಲ್ಲಿ ಪಾರಿಜಾತ ಕಥೆ, ಪೂತನ ಮೋಕ್ಷ ಕಥಾಪ್ರಸಂಗ ಸಂಯೋಜನೆಗಳನ್ನು ಕಲಾವಿದೆಯರು ಪ್ರಸ್ತುತಪಡಿಸಿದರು.

ಪ್ರತಿಯೊಂದು ಪ್ರಸ್ತುತಿಯಲ್ಲಿಯೂ ಗುರುಪರಂಪರೆಯ ಶೈಲಿ, ಶಾಸ್ತ್ರೀಯ ಮೌಲ್ಯಗಳು ಹಾಗೂ ಕಲಾತ್ಮಕ ಸೊಬಗು ಎದ್ದು ಕಾಣುತ್ತಿತ್ತು. ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನಗಳ ಮೂಲಕ ಕಲಾವಿದೆಯರು ಪ್ರೇಕ್ಷಕರ ಮನ ಗೆದ್ದು ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದ ಸಮಾರೋಪದಲ್ಲಿ ರಂಜಕ ಕದನಕುತುಹಲ ತಿಲ್ಲಾನ ಹಾಗೂ ಗರುಡ ಗಮನ ಮಂಗಳಂ ಪ್ರಸ್ತುತಗೊಂಡು ನೃತ್ಯಯಾನಕ್ಕೆ ಮಂಗಳಕರ ತೆರೆ ಎಳೆಯಲಾಯಿತು. ನೆರೆದಿದ್ದ ಕಲಾಭಿಮಾನಿಗಳು ಕಲಾವಿದೆಯರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಈ ಸಂಪೂರ್ಣ ಕಾರ್ಯಕ್ರಮದ ನೃತ್ಯ ಸಂಯೋಜನೆ, ತರಬೇತಿ ಹಾಗೂ ನಿರ್ದೇಶನವನ್ನು ಗುರು ಕಲಾಭೂಷಿಣಿ ಡಾ|| ದರ್ಶಿನಿ ಮಂಜುನಾಥ್ ಅವರು ನಿರ್ವಹಿಸಿದ್ದು, ಅವರ ಶ್ರಮ ಮತ್ತು ಕಲಾಸೇವೆಯನ್ನು ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.











