ವಿಜಯ ದರ್ಪಣ ನ್ಯೂಸ್……
ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ನೆಲಮಂಗಲ: ನಾಡಿನ ಅನ್ನದಾತರು ಭೀಕರ ಬರಗಾಲದಿಂದ ನರಳುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ “ರೈತ ಸ್ವಾಭಿಮಾನ ಯಾತ್ರೆ”ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲ್ಲೂಕು ಕಛೇರಿ ಬಳಿಯಿರುವ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನೆರೆದಿದ್ದ ಸಹಸ್ರಾರು ರೈತರನ್ನು ಉದ್ದೇಶಿಸಿ ಮಾತನಾಡಿದರು.
ಬರದಿಂದ ಕಂಗಾಲಾಗಿರುವ ರೈತರ ಸ್ವಾಭಿಮಾನದ ಬದುಕಿಗೆ ಆಸರೆಯಾಗಲು ರಾಜ್ಯ ಸರ್ಕಾರ ತಕ್ಷಣವೇ ಎಕರೆಗೆ ಕನಿಷ್ಠ 25,000 ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರಕ್ಕೆ ಪ್ರಮುಖ ನಾಲ್ಕು ಬೇಡಿಕೆಗಳನ್ನು ಇಟ್ಟರು
ರೈತರ ಸಾಲ ಮನ್ನಾ: ತೀವ್ರ ಬರ ಮತ್ತು 3,500ಕ್ಕೂ ಹೆಚ್ಚು ರೈತರ ಆತ್ಮಹತ್ಯೆಯಿಂದ ಕಂಗಾಲಾಗಿರುವ ಅನ್ನದಾತನ ನೆರವಿಗೆ ಧಾವಿಸಿ, ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
ಬೆಳೆ ನಷ್ಟ ಅನುಭವಿಸಿದ ಪ್ರತಿ ಎಕರೆಗೆ ಕನಿಷ್ಠ
25,000 ರೂ. ಪರಿಹಾರವನ್ನು ರಾಜ್ಯ ಸರ್ಕಾರ ತನ್ನ ಖಜಾನೆಯಿಂದಲೇ ತಕ್ಷಣ ಬಿಡುಗಡೆ ಮಾಡಬೇಕು.
ಪ್ರತಿಯೊಂದು ಬರಪೀಡಿತ ತಾಲ್ಲೂಕಿನಲ್ಲಿ ತಕ್ಷಣವೇ ‘ಉಚಿತ ಮೇವು ಬ್ಯಾಂಕ್’ ಹಾಗೂ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಬೇಕು.
8 ಗಂಟೆಗಳ ಕಾಲ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿಯೇ ನಿರಂತರ ತ್ರಿಫೇಸ್ (Continuous-3 Phase) ವಿದ್ಯುತ್ ಪೂರೈಸಬೇಕು. ಇದೇ ವೇಳೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರಿಗಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಈ ಬೃಹತ್ ಸಮಾವೇಶದಲ್ಲಿ ನೆಲಮಂಗಲ ಮಾಜಿ ಶಾಸಕ ಡಾ. ಕೆ. ಶ್ರೀನಿವಾಸ ಮೂರ್ತಿ, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕ ಹಾಗೂ ಬೆಂಗಳೂರು ನಗರ ಉತ್ತರ ಜಿಲ್ಲಾಧ್ಯಕ್ಷ ಇ. ಕೃಷ್ಣಪ್ಪ, ಜಿಲ್ಲಾಧ್ಯಕ್ಷ ಮಂಜುನಾಥ್, ತಾಲ್ಲೂಕು ಅಧ್ಯಕ್ಷರಾದ ತಿಮ್ಮರಾಯಣ್ಣ, ಹರೀಶ್ ಗೌಡ, ಸಾದಹಳ್ಳಿ ಮಹೇಶ್, ಪ್ರಮುಖ ಮುಖಂಡರಾದ ವೇಣುಗೋಪಾಲ್, ಭೈರೇಗೌಡ, ಶಿವರುದ್ರಣ್ಣ, ಗೋಪಿ, ಹರೀಶ್ ಬಾಬು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಹಾಗೂ ಸಾವಿರಾರು ರೈತರು ಉಪಸ್ಥಿತರಿದ್ದರು.











