ವಿಜಯ ದರ್ಪಣ ನ್ಯೂಸ್……
ಯಾರಿವನು? ಈ ಸೇವಕನು? ಸುಬ್ರಹ್ಮಣ್ಯ ಹೆಬ್ಬಾಗಿಲು

ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಇವನೂ ಒಂದು ದಿನ ಹಲವು ಕನಸುಗಳನ್ನು, ಆಸೆ-ಆಕಾಂಕ್ಷೆಗಳನ್ನು ಹೊತ್ತು ಕರ್ನಾಟಕದ ಒಂದು ಸಣ್ಣ ಜಿಲ್ಲೆಯಿಂದ ಹೊರಟು ಕತಾರಿಗೆ ಬಂದು, ಹೊರದೇಶದಿಂದ ತನ್ನ ಕುಟುಂಬ, ಮನೆ-ಮಂದಿ, ಬಂಧು-ಬಾಂಧವರಿಗೆ ಬೆಂಬಲ ಮತ್ತು ಆರ್ಥಿಕ ಸಹಾಯ ನೀಡಲು ಪ್ರಾರಂಭಿಸಿದನು. ಒಂದೆರಡು ವರ್ಷಗಳ ಹೀಗೆ ಕಳೆದವು. ನಂತರ ಮತ್ತಿತರ ಜನಸಾಮಾನ್ಯರೊಂದಿಗಿನ ಹೋಲಿಕೆ ನಿಧಾನವಾಗಿ ಪ್ರತ್ಯೇಕಗೊಳ್ಳಲಾರಂಭಿಸಿತು. ‘ಅವನು’ ಎಂದು ಸಂಬೋಧಿಸುವವರು ‘ಅವರು’ ಎಂದು ಗೌರವಪೂರ್ಣವಾಗಿ ಗುರುತಿಸಲು ಆರಂಭಿಸಿದರು. ಈ ಪರಿವರ್ತನೆಯ ಕಾರಣವೇನು ಮುಂದೆ ಓದಿ ತಿಳಿಯೋಣ ಬನ್ನಿ.

ಕರ್ನಾಟಕ ಸಂಘ ಕತಾರಿನ ಸದಸ್ಯರಾಗಿ ಒಂದುವರೆ ದಶಕದ ಹಿಂದೆ ಪ್ರಾರಂಭವಾಯಿತು ಇವರ ಸೇವಾ ಕೈಂಕರ್ಯ. ಒಂದೆಡೆ ತಾವು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯಲ್ಲಿ ದಿನನಿತ್ಯದ ಕಾರ್ಯಕಲಾಪ ಸುಗಮವಾಗಿ ಸಾಗುತ್ತಲೇ ಇತ್ತು, ಇನ್ನೊಂದು ಕಡೆ ಮಡದಿ ಮಕ್ಕಳು ಸಂಸಾರ. ಕೆಲಸ ಮುಗಿಸಿ ನಂತರ ಸಮಯದಲ್ಲಿ ಮತ್ತು ವಾರಾಂತ್ಯದಲ್ಲಿ ತಮ್ಮ ಸಮಯವನ್ನು ಸಮಾಜ ಸೇವಾ ಕೆಲಸಗಳಲ್ಲಿ ಮುಡುಪಾಗಿಡುತ್ತಿದ್ದರು. ಕರ್ನಾಟಕ ಸಂಘದ ನಂತರದ ಆಡಳಿತ ಸಮಿತಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಮುಂದುವರೆಸಿದರು.
ಕಾಲಕ್ರಮೇಣ ರಾಜ್ಯಮಟ್ಟದಿಂದ ಮೇಲೇರಿ ರಾಷ್ಟ್ರಮಟ್ಟದಲ್ಲಿ ದಾಪುಗಾಲು ಹಾಕಿದರು. ‘ಭಾರತೀಯ ಸಮುದಾಯ ಹಿತೈಷಿ ವೇದಿಕೆ’ (ಐ.ಸಿ.ಬಿ. ಎಫ್) ನ ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಈ ಕಾಲಾವಧಿಯಲ್ಲಿ ಕರೋನ ಮಹಾಮಾರಿ ಪ್ರಪಂಚದಾದ್ಯಂತ ಪಸರಿಸಿತ್ತು.
ಶ್ರೀಯುತರು ತಮ್ಮ ಸ್ವಂತ ವಾಹನದಲ್ಲಿ ಅನ್ನ, ಆಹಾರ, ತರಕಾರಿ, ಹಣ್ಣುಗಳನ್ನು ಹೇರಿಕೊಂಡು ದಿನನಿತ್ಯ 100 ರಿಂದ 150 ಜನರಿಗೆ ಹಂಚುತ್ತಿದ್ದರು. ಈ ರೀತಿಯ ದಿನಚರಿ ಹಲವು ತಿಂಗಳು ನಡೆಯಿತು. ಪರಿಸ್ಥಿತಿ ಸ್ವಲ್ಪ ಹತೋಟಿಗೆ ಬಂದ ಮೇಲೆ ಜನರು ಪ್ರಯಾಣ ಮಾಡಲು ಅವಕಾಶ ದೊರಕಿದಾಗ, ‘ಒಂದೇ ಭಾರತ’ ವಿಶೇಷ ವಿಮಾನ ಸೇವೆಯನ್ನು ಜನಗಳಿಗೆ ಒದಗಿಸಲು ಶ್ರೀಯುತರು ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕದ ಜನರಿಗೆ ದೋಹಾದಿಂದ ಬೆಂಗಳೂರಿಗೆ ಹಿಂತಿರುಗಲು ವಿಶೇಷ ವಿಮಾನ ಸೇವೆಯನ್ನು ಆಚರಣೆಗೆ ತರಲು ಶ್ರೀಯುತರು ಪಾತ್ರ ವಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ‘ಭಾರತೀಯ ಸಂಸ್ಕೃತಿಕ ಕೇಂದ್ರ’ದ (ಐ.ಸಿ.ಸಿ) ಉಪಾಧ್ಯಕ್ಷರಾಗಿ ಎರಡು ಬಾರಿ ಆಡಳಿತ ಸಮಿತಿಯಲ್ಲಿ ಸೇವೆ ಸಲ್ಲಿಸಿರುವರು. ಅಂದರೆ ನಾಲ್ಕು ಸಂವತ್ಸರಗಳ ತನಕ ಈ ಅವಧಿಯಲ್ಲಿ ಕಾರ್ಯನಿರ್ವಹಿಸಿರುವರು. ಈ ಅವಧಿಯಲ್ಲಿ ‘ಭಾರತ ಉತ್ಸವ’, ‘ಪ್ಯಾಸೇಜ ಟು ಇಂಡಿಯಾ’, ಬೃಹತ್ ರಕ್ತದಾನ ಶಿಬಿರಗಳಂಥ ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಕ್ರೀಯವಾಗಿ ಭಾಗಿಯಾಗಿದ್ದಾರೆ.
ಭಾರತದಲ್ಲಿ ಪ್ರವಾಹ ಪೀಡಿತರಿಗೆ, ಕತರಿನ ಮೀನುಗಾರರಿಗೆ ಹಾಗೂ ಇತರ ಪ್ರಕೃತಿ ವಿಕೋಪಕ್ಕೆ ಸಿಲುಕಿದವರಿಗೆ ಸೂಕ್ತ ನೆರವು ಮತ್ತು ಆಶ್ರಯ ನೀಡುವು ಅತ್ಯುನ್ನತ ಕಾರ್ಯಕ್ರಮಗಳನ್ನು ಹೆಚ್ಚು ಅನಿವಾಸಿ ಭಾರತೀಯರಿಗೆ ತಲುಪುವಂತೆ ಮಾಡಿರುವ ಹೆಗ್ಗಳಿಕೆ ಇವರದು.
ರಾಷ್ಟ್ರಮಟ್ಟದ ಸೇವಾಕಾಯಾರ್ಲಯದಲ್ಲಿದ್ದರೂ, ಕನ್ನಡದ ಸೇವೆ ಸದಾಕಾಲ ನಡೆಯುತ್ತಲೇ ಇತ್ತು, ಇಂದಿಗೂ ನಡೆಯುತ್ತಿದೆ. ಕನ್ನಡ ಚಲನಚಿತ್ರಗಳನ್ನು ಕತಾರಿಗೆ ತಂದು ಪ್ರದರ್ಶಿಸಲು ಮೊದಲು ಪ್ರಾರಂಭಿಸಿರುವುದು ಶ್ರೀಯುತರೇ ಎನ್ನುವುದು ಹೆಮ್ಮೆಯ ವಿಚಾರ. ನಂತರದ ದಿನಗಳಲ್ಲಿ ಕನ್ನಡ ಚಿತ್ರಗಳ ಪ್ರಖ್ಯಾತಿ ಹಾಗೂ ಪ್ರಾಮುಖ್ಯತೆ ಬೆಳೆಯುತ್ತಿದ್ದಂತೆ ವಿತರಕರು ಚಲನಚಿತ್ರ ಮಂದಿರಗಳ ಮಾಲೀಕರ ಮೂಲಕ ಪ್ರದರ್ಶಿಸಲು ಪ್ರಾರಂಭಿಸಿದರು.

ನಮ್ಮ ತಾಯ್ನಾಡಿನ ಪ್ರತಿಭೆಗಳನ್ನು ಕತಾರಿಗೆ ಆಹ್ವಾನಿಸಿ, ಸ್ವಾಗತಿಸಿ, ಕಾರ್ಯಕ್ರಮ ಆಯೋಜಿಸಿ, ಆತಿಥ್ಯ-ಸತ್ಕಾರ ನೀಡಿ ಬೀಳ್ಕೊಡುಗೆ ಮಾಡಿರುವುದು ಒಂದು ಐತಿಹಾಸಿಕ ಸಂಪ್ರದಾಯವನ್ನು ಚಾಚೂ ತಪ್ಪದೇ ಪ್ರತಿ ಸಂವತ್ಸರ ನಡೆಸಿಕೊಂಡು ಬರುವಲ್ಲಿ ಇವರ ಕೊಡುಗೆ ಅಪಾರ.
ಹ್ಯಾಟ್ರಿಕ್ ಹೀರೋ ಶ್ರೀ ಶಿವರಾಜ್ ಕುಮಾರ್, ದಿವಂಗತ ಕನ್ನಡ ರಾಜರತ್ನ ಶ್ರೀ ಪುನೀತ್ ಕುಮಾರ್, ಶ್ರೀ ಉಪೇಂದ್ರ, ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಶ್ರೀ ಚಂದ್ರಶೇಖರ ಕಂಬಾರ, ಶ್ರೀ ಟಿ. ಎಸ್. ನಾಗಾಭರಣ, ಶ್ರೀ ಅರ್ಜುನ್ ಜನ್ಯ, ಶ್ರೀ ರಾಜೇಶ್ ಕೃಷ್ಣನ್ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಒಂದು ಪುಟ ಸಾಲದು. ಇವರೆಲ್ಲರೂ ಕತಾರಿಗೆ ಬಂದು ಹೋಗಿರುವುದರ ಹಿಂದೆ ಶ್ರೀಯುತರ ಸಹಾಯ ಮರೆಯುವಂತಿಲ್ಲ. ಕನ್ನಡ ಚಿತ್ರೋದ್ಯಮದಲ್ಲಿ ಶ್ರೀಯುತರದು ಚಿರಪರಿಚಿತ ಹೆಸರು.
ಒಮ್ಮೆ ಶ್ರೀ ಶಿವಣ್ಣನವರು ಶ್ರೀಯುತರ ಜನ್ಮದಿನಾಚರಣೆಯನ್ನು ಶ್ರೀಯುತರ ಕತಾರಿನ ದೋಹಾ ನಿವಾಸದಲ್ಲಿ ಜೊತೆಗೆ ಇದ್ದು ಆಚರಿಸಿರುವರು.

ಕಳೆದ ಒಂದು ದಶಕದಿಂದ ಕತಾರಿನಲ್ಲಿ ನೂತನವಾಗಿ ಬಂದಿಳಿದ ಕನ್ನಡಿಗರಿಗೆ ಕತಾರ್ ತಮ್ಮ ಮನೆಯ ವಿಸ್ತೀರ್ಣವೇ ಆಗಿದೆ ಎಂದು ಆಭಾಸವಾಗದೆ ಇರದು. ದೋಹಾದಲ್ಲಿರುವವರಿಗೆ, ಕನ್ನಡ ನಾಡಿನ, ಭಾರತ ದೇಶದ ಹೊರಗಿರುವೆವು ಎಂದು ಅನ್ನಿಸುವುದೇ ಇಲ್ಲ. ಇಲ್ಲಿ ಪಾಸ್ಪೋರ್ಟ್ ಗೆ ಸಂಬಂಧಿಸಿದ ಮಾರ್ಗದರ್ಶನ, ವೀಸಾ ವಿಚಾರಗಳು, ಮಕ್ಕಳಿಗೆ ಭಾರತೀಯ ಶಾಲೆಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಸಹಾಯ, ಅಗತ್ಯವಿರುವವರಿಗೆ ಕೆಲಸದ ಸಂಪರ್ಕ, ಇಂತಹ ಸೇವೆಗಳು ಶ್ರೀಯುತರು ಸಹಸ್ರ ಸಂಖ್ಯೆಯಲ್ಲಿ ಮಾಡುತ್ತಾ ಬಂದಿರುವರು.
ಸಂಘ ಸಮಿತಿಗಳಲ್ಲಿ ಶ್ರೀಯುತರು ಇರುವಾಗ ‘ಪರಿಸರ ದಿನಾಚರಣೆ’, ‘ವಿಕಸಿತ ಭಾರತ’ ಅಭಿಯಾನದ ಓಟ, ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ’, ಗಣ್ಯರಿಗೆ ಗೌರವ ಸೂಚಿಸುವ ಕಾರ್ಯಕ್ರಮ, ಬೀಳ್ಕೊಡುಗೆ ಸಮಾರಂಭ, ‘ರಕ್ತದಾನ ಶಿಬಿರ’, ‘ಕನ್ನಡ ಶಾಲಾ ಪುನರಾರಂಭ’, ‘ಯುವಜನ ಪ್ರತಿಭಾನ್ವೇಷಣೆ’ ಕಾರ್ಯಕ್ರಮ, ‘ಶಿಕ್ಷಕರ ದಿನಾಚರಣೆ’, ‘ತಾಯಂದಿರ ದಿನಾಚರಣೆ’, ‘ಕಾರ್ಮಿಕರ ದಿನಾಚರಣೆ’ ಹೀಗೆ ಹತ್ತು ಹಲವಾರು ಕ್ರೀಡಾ, ಸಾಂಸ್ಕೃತಿಕ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿರುವರು, ಯಶಸ್ವಿಯಾಗಿ ಸಂಪನ್ನಗೊಳಿಸಿರುವರು.
ಕತಾರಿನ ದೋಹಾದಲ್ಲಿರುವ ಭಾರತೀಯ ದೂತಾವಸ ಕಾರ್ಯಲಯದಲ್ಲಿ ಬಂದು ಹೋಗಿರುವ ಪೂರ್ವ ರಾಯಭಾರಿಗಳೆಲ್ಲರನ್ನೂ ನೀವು ಕೇಳಿದರೆ ಶ್ರೀಯುತರನ್ನು ಹೆಸರಿನಿಂದಲೇ ಗುರುತಿಸುವರು. ಗೌರವಾನ್ವಿತ ಶ್ರೀ ಪಿ. ಕುಮರನ್, ಶ್ರೀ ದೀಪಕ್ ಮಿತ್ತಲ್, ಶ್ರೀ ವಿಪುಲ್ ಈ ಹಿಂದೆ ಕತಾರಿಗೆ ರಾಯಭಾರಿಗಳಾಗಿ ಸೇವೆ ಸಲ್ಲಿಸಿರುವರು. ಇವರೆಲ್ಲರಿಗೂ ಶ್ರೀಯುತರು ಪರಿಚಿತರು ಎನ್ನುವಿದಕ್ಕಿಂತ, ಸ್ನೇಹಿತರು ಎಂದರೆ ಸೂಕ್ತ ಪದ ಪ್ರಯೋಗವಾಗುತ್ತದೆ.
ಐ.ಸಿ.ಬಿ.ಎಫ್ ನ ಆಡಳಿತ ಸಮಿತಿಯಲ್ಲಿರುವಾಗ ಹಾಗೂ ನಂತರದ ದಿನಗಳಲ್ಲಿ ಶ್ರೀಯುತರು ಒಂದು ದಿವ್ಯ ನಿಸ್ವಾರ್ಥ ಸೇವೆಯನ್ನು ಮನುಕುಲಕ್ಕೆ ಸಲ್ಲಿಸುತ್ತಾ ಬಂದಿರುವರು.
ಇತ್ತೀಚಿಗೆ ಅಂದರೆ ದಿನಾಂಕ 10-ಸೆಪ್ಟೆಂಬರ್-2026ರಲ್ಲಿ ಓರ್ವ ಯುವತಿಯು ಹೃದಯಘಾತದಿಂದ ಕಾಲವಾದಾಗ, ಅವಳ ಪಾರ್ಥಿವ ಶರೀರವನ್ನು ಮಾತೃಭೂಮಿಯಾದ ಭಾರತಕ್ಕೆ ರವಾನಿಸಲು ಶ್ರೀಯುತರೂ ಸಹಾಯ ಮಾಡಿರುವರು.
ಅಂದಿನಿಂದ ಇಂದಿನವರೆಗೆ, ಈ ವೈಕುಂಠ ಸೇವೆಗೆ ಪಾತ್ರರಾಗಿರುವ ಆತ್ಮಗಳು ಅದೆಷ್ಟೋ. ಬಹುಶಃ ಶ್ರೀಯುತರೂ ಅವುಗಳ ಗಣತಿಯನ್ನು ಇಟ್ಟಿರುವುದಿಲ್ಲವೇನೋ, ಏಕೆಂದರೆ ಅದು ಅನಗತ್ಯ ಹಾಗು ಅನವಶ್ಯಕ. ಪ್ರಶಸ್ತಿ- ಪುರಸ್ಕಾರಗಳ ಸಲುವಾಗಿ ದುಡಿದರೆ ಅದಕ್ಕೆ ಬಹುಶಃ ಲೆಕ್ಕಾಚಾರ ಬೇಕಾಗುತ್ತದೆ. ಆದರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆಯನ್ನು ಸದಾಕಾಲ ನಡೆಸುತ್ತಿದ್ದರೆ, ಅದರಿಂದ ಸಿಗುವ ದಿವ್ಯಾನಂದ, ಮಹತ್ತರ ಸಂತಸ, ಅನಂತ ಅಘಾದ ನೆಮ್ಮದಿ, ಯಾವ ಪ್ರಶಸ್ತಿ- ಪುರಸ್ಕಾರಗಳು ನೀಡಲಾಗದು.
“ಸಮಾಜ ಸೇವೆ ಎನ್ನುವುದು ಮಾನವೀಯತೆ ಹಾಗೂ ಮನುಷ್ಯತ್ವದ ಆರಾಧನೆ. ಅದನ್ನು ಪೈಪೋಟಿಗೆ ಮಾಡಬಾರದು. ಅದು ಸ್ವಯಂ ಪ್ರೇರಿತವಾಗಿರಬೇಕು” ಎಂದು ಶ್ರೀಯುತರ ಅಭಿಪ್ರಾಯ.

ಯಾರಿವರು? ಈ ಸೇವಕರು? ಈ ಗಣ್ಯರು? ಜನಸಾಮಾನ್ಯರಲ್ಲಿ ಒಬ್ಬರು? ಶ್ರೀಯುತರು? ಇವರೇ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಕರ್ನಾಟಕ ಸಂಘ ಕತಾರಿನ ಈಗಿನ ಅಧ್ಯಕ್ಷರು.











