ವಿಜಯ ದರ್ಪಣ ನ್ಯೂಸ್…..
ಜಿಲ್ಲಾಡಳಿತ ಭವನದಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ
–
ಓನಕೆ ಓಬವ್ವಳ ತ್ಯಾಗ ಮತ್ತು ದೇಶಪ್ರೇಮವು ಇಂದಿನ ಯುವಜನತೆಗೆ ಸ್ಫೂರ್ತಿ- ಸಚಿವ ಕೆ.ಹೆಚ್. ಮುನಿಯಪ್ಪ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ನ.11
ಯಾವುದೇ ಸೈನ್ಯದ ತರಬೇತಿ ಇಲ್ಲದೆ ಕೇವಲ ಒಂದು ಧಾನ್ಯ ಕುಟ್ಟುವ ಒನಕೆಯನ್ನು ಹಿಡಿದು ಶತ್ರುಗಳ ವಿರುದ್ಧ ಹೋರಾಡಿದ ಧೀಮಂತ ಮಹಿಳೆ ಒನಕೆ ಓಬವ್ವ. ಓನಕೆ ಓಬವ್ವಳ ತ್ಯಾಗ ಮತ್ತು ದೇಶಪ್ರೇಮವು ಇಂದಿನ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಿಸಿ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.
ಸಾಮಾನ್ಯ ಕಾವಲುಗಾರನ ಹೆಂಡಗತಿಯಾಗಿದ್ದರೂ, ತನ್ನ ಸಮಯ ಸ್ಫೂರ್ತಿ ಮತ್ತು ಧೈರ್ಯದಿಂದ ಚಿತ್ರದುರ್ಗದ ಕೋಟೆಯನ್ನು ಶತ್ರುಗಳಿಂದ ಕಾಪಾಡಿದ ಸಾಹಸಿ. ಯುವಜನತೆಯು ಒನಕೆ ಓಬವ್ವ ಅವರ ಧೈರ್ಯ ಸ್ಥೈರ್ಯ, ಸ್ವಾಭಿಮಾನ, ದೇಶಪ್ರೇಮವನ್ನು ಅಳವಡಿಸಿಕೊಳ್ಳಬೇಕು. ಒನಕೆ ಓಬವ್ವಳ ಹೆಸರು ಧೈರ್ಯ , ಸಾಹಸ ಮತ್ತು ದೇಶಪ್ರೇಮದ ಪ್ರತೀಕವಾಗಿದೆ. ಹೆಣ್ಣು ಕೇವಲ ಅಬಲೆಯಲ್ಲ, ಸಂಕಷ್ಟದ ಸಮಯದಲ್ಲಿ ನಾಡಿಗಾಗಿ ರಣಚಂಡಿಯಾಗಬಲ್ಲಳು ಎಂಬುದಕ್ಕೆ ವೀರವನಿತೆ ಒನಕೆ ಓಬವ್ವ ಪ್ರಮುಖ ಉದಾಹರಣೆ ಎಂದರು.
ಬಡಮಕ್ಕಳಿಗೆ ವಸತಿ ಶಾಲೆಯಲ್ಲಿ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಿದೆ. ನರಸಿಂಹರಾವ್ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ವಸತಿ ಶಾಲೆಗಳಿಗೆ ಚಾಲನೆ ನೀಡಿದರು. ಬಡಮಕ್ಕಳು ವಸತಿ ಶಾಲೆಯಲ್ಲಿ ಗುಣಮಟ್ಟದ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ ಎಂದರು.
ದೇಶವು ಸಮಾನವಾಗಿ ಬಾಳಬೇಕಾದರೆ ಪುರಷ ಹಾಗೂ ಮಹಿಳೆಯರಿಗೆ ಸಮಾನವಾದ ಹಕ್ಕು ಇರಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆದು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಮಾತನಾಡಿ ಸಮಯಪ್ರಜ್ಞೆ, ಧೈರ್ಯ ಮತ್ತು ಪರಾಕ್ರಮಕ್ಕೆ ವೀರವನಿತೆ ಒನಕೆ ಓಬವ್ವ ಅವರ ಜೀವನವೇ ನಮಗೆ ಮಾದರಿ. ಒನಕೆ ಓಬವ್ವ ಅವರ ಪರಾಕ್ರಮವನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಕೋಟೆಯ ಕಿಂಡಿಯ ಮೂಲಕ ಹೈದರಾಲಿಯ ಸೈನಿಕರು ಒಳನುಗ್ಗಲು ಪ್ರಯತ್ನಿಸಿದ ಸಂದರ್ಭದಲ್ಲಿ ತಮ್ಮ ಸಮಯಪ್ರಜ್ಞೆ ಮತ್ತು ಪರಾಕ್ರಮದಿಂದ ಶತ್ರು ಸೈನಿಕರನ್ನು ಎದುರಿಸಿ ಕೋಟೆಯನ್ನು ರಕ್ಷಿಸಿದರು ಎಂದರು.
ಒನಕೆ ಓಬವ್ವ ಅವರ ಜೀವನ ಚರಿತ್ರೆ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಸಮಯಪ್ರಜ್ಞೆ, ಧೈರ್ಯ ಮತ್ತು ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರಬೇಕು. ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ಗಾಬರಿಯಾಗದೆ, ಚಾತುರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂಬುದಕ್ಕೆ ಒನಕೆ ಓಬವ್ವ ಅವರ ಜೀವನವೇ ಅತ್ಯುತ್ತಮ ನಿದರ್ಶನ ಎಂದರು.
ಇಂತಹ ಮಹಾನ್ ವೀರವನಿತೆಯ ಜಯಂತಿಯನ್ನು ಆಚರಿಸುವ ಮೂಲಕ ಅವರ ಸಾಹಸ, ಧೈರ್ಯ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒನಕೆ ಓಬವ್ವನ ಸಾಹಸಗಳನ್ನ ಜಿಲ್ಲಾಧಿಕಾರಿಗಳು ಸ್ಮರಿಸಿದರು.
ಬೆಟ್ಟಕೋಟೆಯ ರಾಮಕೃಷ್ಣ ಪ್ರೌಢಶಾಲೆಯ ಉಪನ್ಯಾಸಕರಾದ ನಾಗರಾಜು ಒನಕೆ ಓಬವ್ವ ಚರಿತ್ರೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಚಿತ್ರದುರ್ಗ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಹೆಸರಿಡಲಾಗಿದೆ. ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಧೃತಿಗೆಡಬಾರದು. ತೊಂದರೆ ತಾಪತ್ರಯಗಳನ್ನು ಎದುರಿಸಿ ನಿಲ್ಲಬೇಕು. ಪ್ರತಿಯೊಬ್ಬರೂ ನಾಡಿನ ಇತಿಹಾಸವನ್ನು ಗೌರವಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಗಣ್ಯರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಡಿಸಿ ರಂಗನಾಥ್, ಎಸಿ ಮಂಜುನಾಥ್, ಉಪಕಾರ್ಯದರ್ಶಿ ಶಿವಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕಲ್ಪನ, ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.










