--Ads--

ಸಂವಿಧಾನದ ಧ್ವನಿ ಜನರ ಧ್ವನಿಯಾಗಬೇಕು, ಸಂವಿಧಾನದ ಆಶಯಗಳ ಸಾಕಾರಕ್ಕೆ ಜನಜಾಗೃತಿ ಅತ್ಯಗತ್ಯ: ಸಿದ್ದರಾಮಯ್ಯ ಇಂಗಿತ

On: November 27, 2026 5:00 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಸಂವಿಧಾನದ ಧ್ವನಿ ಜನರ ಧ್ವನಿಯಾಗಬೇಕು, ಸಂವಿಧಾನದ ಆಶಯಗಳ ಸಾಕಾರಕ್ಕೆ ಜನಜಾಗೃತಿ ಅತ್ಯಗತ್ಯ: ಸಿದ್ದರಾಮಯ್ಯ ಇಂಗಿತ

ತಾಂಡವಪುರ ನವೆಂಬರ್ 26: ಸಂವಿಧಾನ ಅಂಗೀಕಾರವಾಗಿ 77 ವರ್ಷಗಳು ಕಳೆದಿದ್ದರೂ ಅದರ ಆಶಯಗಳು ಸಂಪೂರ್ಣವಾಗಿ ಈಡೇರಿಲ್ಲ. ಸಂವಿಧಾನದ ಆಶಯಗಳು ಪ್ರತಿಯೊಬ್ಬರಿಗೂ ಅರ್ಥವಾಗಬೇಕು, ಸಂವಿಧಾನದ ಧ್ವನಿ ಜನರ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಆಯೋಜಿಸಿದ್ದ ‘ಸಂವಿಧಾನ ಧ್ವನಿ – ಜನರ ಧ್ವನಿ’ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನ ರಚನೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ, ಸಂವಿಧಾನದ ಆಶಯಗಳು, ಸಾಮಾಜಿಕ ನ್ಯಾಯ, ವೈಚಾರಿಕತೆ ಹಾಗೂ ಸಂವಿಧಾನದ ಕುರಿತು ಜನಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವರವಾಗಿ ವಿವರಿಸಿದರು.

ಎರಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳ ಸುದೀರ್ಘ ಪ್ರಕ್ರಿಯೆಯ ಮೂಲಕ ಭಾರತದ ಸಂವಿಧಾನವನ್ನು ರಚಿಸಲಾಯಿತು. ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ಸಂವಿಧಾನ ರಚನೆಯ ಬಹುದೊಡ್ಡ ಜವಾಬ್ದಾರಿ ಬಿದ್ದಿತ್ತು. ತಮ್ಮ ಅಪಾರ ಪಾಂಡಿತ್ಯ, ಅನುಭವ ಹಾಗೂ ವಿಶ್ವದ ವಿವಿಧ ದೇಶಗಳ ಸಂವಿಧಾನಗಳ ಅಧ್ಯಯನದ ಮೂಲಕ ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದನ್ನು ಅವರು ಭಾರತಕ್ಕೆ ನೀಡಿದರು ಎಂದು ಸ್ಮರಿಸಿದರು.

ಮೂಲ ಸಂವಿಧಾನದಲ್ಲಿ 395 ವಿಧಿಗಳಿದ್ದವು. ಕಾಲಕಾಲಕ್ಕೆ ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತರಲಾಗಿದೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವುದು ನಮ್ಮ ಸಂವಿಧಾನದ ಪ್ರಮುಖ ಗುಣವಾಗಿದೆ ಎಂದು ಹೇಳಿದರು.

ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಅದರ ಯಶಸ್ಸು ಅದನ್ನು ಅನುಷ್ಠಾನಗೊಳಿಸುವವರ ಬದ್ಧತೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಚ್ಚರಿಸಿದ್ದರು.

ಅಧಿಕಾರದಲ್ಲಿರುವವರಿಗೆ ಸಂವಿಧಾನ, ಪ್ರಜಾಪ್ರಭುತ್ವ, ಸಮಾಜ ಮತ್ತು ಸಾಮಾಜಿಕ ಬದಲಾವಣೆಯ ಬಗ್ಗೆ ಬದ್ಧತೆ ಇಲ್ಲದಿದ್ದರೆ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಮಾಜದ ಬಹುಸಂಖ್ಯಾತ ಜನರು ಶಿಕ್ಷಣ, ಸಂಪತ್ತು ಸೇರಿದಂತೆ ಅನೇಕ ಅವಕಾಶಗಳಿಂದ ವಂಚಿತರಾಗಲು ಮನುಸ್ಮೃತಿ ಪ್ರತಿಪಾದಿಸಿದ ವ್ಯವಸ್ಥೆಯೇ ಕಾರಣವಾಗಿತ್ತು.

ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಡುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದರು. ಸ್ವತಃ ಸಾಮಾಜಿಕ ಅನ್ಯಾಯವನ್ನು ಅನುಭವಿಸಿದ್ದ ಅಂಬೇಡ್ಕರ್ ಅವರು ತಮ್ಮ ಅಗಾಧ ಜ್ಞಾನದ ಮೂಲಕ ಅವಕಾಶವಂಚಿತ ಸಮುದಾಯಗಳಿಗೆ ಸಂವಿಧಾನದಡಿ ಹಕ್ಕುಗಳನ್ನು ಕಲ್ಪಿಸಿಕೊಟ್ಟರು ಎಂದು ತಿಳಿಸಿದರು.

ಸಂವಿಧಾನದ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ತಾವು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಡಾ. ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂವಿಧಾನದ ಅರಿವು ಮೂಡಿಸುವ ಮೂಲಕವೇ ಜನರು ತಮ್ಮ ಹಕ್ಕುಗಳನ್ನು ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅನ್ಯಾಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ತಮ್ಮ ಕುಟುಂಬದಲ್ಲಿ ಆರು ಮಕ್ಕಳ ಪೈಕಿ ತಾವು ಮಾತ್ರ ಉನ್ನತ ಶಿಕ್ಷಣ ಪಡೆದು ವಕೀಲರಾಗಿ, ನಂತರ ಸಚಿವ ಹಾಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದಿದ್ದನ್ನು ಉಲ್ಲೇಖಿಸಿದ ಅವರು, ಮನುಷ್ಯನ ಬದುಕಿನ ಏಳುಬೀಳುಗಳನ್ನು ಹಣೆಬರಹ ಅಥವಾ ಕರ್ಮಸಿದ್ಧಾಂತದ ಮೂಲಕ ಅರ್ಥೈಸಿಕೊಳ್ಳುವ ಮನಸ್ಥಿತಿಯಿಂದ ಹೊರಬರಬೇಕು ಎಂದು ಹೇಳಿದರು.

ಸಂವಿಧಾನದ ಪರವಾಗಿರುವವರು ಯಾರು, ಮನುಸ್ಮೃತಿಯ ಪರವಾಗಿರುವವರು ಯಾರು ಎಂಬುದನ್ನು ಜನರು ಗುರುತಿಸಿಕೊಳ್ಳಬೇಕು. ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗೆ ಬದ್ಧರಾಗಿರುವುದು ಕೇವಲ ಮಾತುಗಳಿಗೆ ಸೀಮಿತವಾಗಬಾರದು. ನಮ್ಮ ನಡೆ ಮತ್ತು ನಿಲುವುಗಳಲ್ಲಿಯೂ ಆ ಬದ್ಧತೆ ಪ್ರತಿಫಲಿಸಬೇಕು ಎಂದು ತಿಳಿಸಿದರು.

ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರು ಸೇರಿದಂತೆ ಅವಕಾಶವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಅಹಿಂದ ಚಳವಳಿಯನ್ನು ರೂಪಿಸಲಾಗಿತ್ತು. ಸಂವಿಧಾನದ 17ನೇ ವಿಧಿಯಡಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದ್ದರೂ ವಾಸ್ತವದಲ್ಲಿ ಅಸ್ಪೃಶ್ಯತೆ ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಸಂವಿಧಾನದ ಆಶಯಗಳಿಗೂ ಸಾಮಾಜಿಕ ವಾಸ್ತವಕ್ಕೂ ಇರುವ ಅಂತರವನ್ನು ನಿವಾರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆಯನ್ನು ಖಾತರಿಪಡಿಸುತ್ತದೆ. ಈ ಸಮಾನತೆಯ ಆಶಯವನ್ನು ಸಮಾಜದಲ್ಲಿ ಸಾಕಾರಗೊಳಿಸಬೇಕಾದರೆ ಮಾನವೀಯತೆ ಬೆಳೆಯಬೇಕು. ಸಮಾಜದಲ್ಲಿ ದ್ವೇಷ ಹುಟ್ಟುಹಾಕುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಪರಸ್ಪರ ದ್ವೇಷಿಸುವ ಬದಲು ಪ್ರೀತಿಸುವುದನ್ನು ಕಲಿಯಬೇಕು. ಆಗ ಮಾತ್ರ ಅಂಬೇಡ್ಕರ್ ಅವರು ಕನಸು ಕಂಡಿದ್ದ ಸಮಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಸಂವಿಧಾನದ ಆಶಯಗಳ ಸಾಕಾರಕ್ಕೆ ಜನರು ಜಾಗೃತರಾಗುವುದು ಅತ್ಯಂತ ಮುಖ್ಯವಾಗಿದೆ. ಕಳೆದ ಒಂದು ವರ್ಷದಿಂದ ಸಂವಿಧಾನದ ಕುರಿತು ಜನಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿರುವ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಜನಜಾಗೃತಿ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವಿರಲಿದೆ. ಸಾಧ್ಯವಾದ ಕಡೆಯಲ್ಲೆಲ್ಲ ತಾವೂ ಭಾಗವಹಿಸುವುದಾಗಿ ಸಿದ್ದರಾಮಯ್ಯನವರು ತಿಳಿಸಿದರು.

ಕೊನೆಯದಾಗಿ, ಸಂವಿಧಾನದ ಧ್ವನಿಯನ್ನು ಜನರ ಧ್ವನಿಯಾಗಿಸುವ ಉದ್ದೇಶದಿಂದ ಜನಜಾಗೃತಿ ಆಂದೋಲನ ನಡೆಸುತ್ತಿರುವ ಎಲ್ಲ ಸಂಘಟನೆಗಳಿಗೂ ಅಭಿನಂದನೆ ಸಲ್ಲಿಸಿದ ಅವರು, ಈ ಆಂದೋಲನ ಯಶಸ್ವಿಯಾಗಲಿ ಎಂದು ಹಾರೈಸಿದರು

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಲನಾ ಸಮಿತಿ ಹಾಗೂ ಸಂವಿಧಾನ ಜನಾಂದೋಲನ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ‘ಸಂವಿಧಾನದ ಧ್ವನಿ ಜನರ ಧ್ವನಿ’ ರಾಜ್ಯಾದ್ಯಂತ ಒಂದು ವರ್ಷದ ಜನಜಾಗೃತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ರವರು ಭಾಗವಹಿಸಿ ಮಾತನಾಡುತ್ತಾ ಸಂವಿಧಾನದ ಆಶಯಗಳೇ ಕಾಂಗ್ರೆಸ್ ಪಕ್ಷದ ಆಶಯಗಳಾಗಿವೆ. ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಸಮಾನತೆ ಮತ್ತು ಗೌರವಯುತ ಬದುಕು ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು

ಶೋಷಣೆ ಮತ್ತು ಅಸಮಾನತೆಯಿಂದ ಮುಕ್ತರಾಗಲು ಸಂವಿಧಾನವೇ ನಮಗಿರುವ ಪ್ರಬಲ ಅಸ್ತ್ರ. ಸಂವಿಧಾನದ ಆಶಯಗಳಿಗೆ ಧಕ್ಕೆಯಾದಾಗ ಅದನ್ನು ರಕ್ಷಿಸಲು ಮೊದಲು ಧ್ವನಿ ಎತ್ತುವವರು ದಲಿತ ಸಂಘಟನೆಗಳು. ಸಂವಿಧಾನದ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಎಲ್ಲಾ ದಲಿತ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಸಚಿವರು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಡಾ. ಬಿ.ಆರ್. ಅಂಬೇಡ್ಕರ್ ಅವರು ಕರೆ ನೀಡಿದಂತೆ ರಾಜಕೀಯ ಶಕ್ತಿಯನ್ನು ಪಡೆದುಕೊಳ್ಳುವ ಮೂಲಕ ನಾವೆಲ್ಲರೂ ಸಂಘಟಿತರಾಗಬೇಕಿದೆ. ನಮ್ಮ ಒಗ್ಗಟ್ಟನ್ನು ಒಡೆಯಲು ಪಟ್ಟಭದ್ರ ಹಿತಾಸಕ್ತಿಗಳು ಸದಾ ಪ್ರಯತ್ನಿಸುತ್ತಿರುತ್ತವೆ. ಇಂತಹ ಶಕ್ತಿಗಳ ವಿರುದ್ಧ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗಟ್ಟಿನಿಂದ ಹೋರಾಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದ ಸಚಿವರು

ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಸಂಘಟನಾ ಮನೋಭಾವ, ನಾಯಕತ್ವದ ಗುಣ ಹಾಗೂ ಸಂವಿಧಾನಿಕ ಮೌಲ್ಯಗಳ ಅರಿವು ಬೆಳೆಸುವ ಕೆಲಸವಾಗಬೇಕು. ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವದ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಜನಜಾಗೃತಿ ಅಭಿಯಾನಗಳು ಮಹತ್ವದ ಪಾತ್ರ ವಹಿಸಲಿವೆ ಎಂದರು

ಈ ಸಂದರ್ಭದಲ್ಲಿ ನಿಕಟಪೂರ್ವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮೈಸೂರು ಜಿಲ್ಲಾ ಉಸ್ತುವಾ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯರವರು ಭಾರತ ಚುನಾವಣಾ ಆಯೋಗದ ವಿಶ್ರಾಂತ ಮುಖ್ಯ ಆಯುಕ್ತರಾದ ಡಾ. ಎಸ್. ವೈ. ಖುರೇಷಿ, ಮಾಜಿ ಸಚಿವರು ಹಾಗೂ ಶಾಸಕ ಡಾ ಎಚ್ ಸಿ ಮಹದೇವಪ್ಪ, ಸಾಹಿತಿ ಮತ್ತು ಪ್ರಗತಿಪರ ಚಿಂತಕ ಪ್ರೊ ಬರಗೂರು ರಾಮಚಂದ್ರಪ್ಪ, ಹಿರಿಯ ದಲಿತಪರ ಹೋರಾಟಗಾರರು ಮತ್ತು ಪತ್ರಕರ್ತರಾದ ಶ್ರೀ ಇಂದೂಧರ ಹೊನ್ನಾಪುರ ಹಾಗೂ ಈ ಕಾರ್ಯಕ್ರಮದ ಆಯೋಜಕರು ಮುಖಂಡರುಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸಂವಿಧಾನ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕನಕದಾಸರ ಕೀರ್ತನೆಗಳನ್ನು ಮನೆಮನೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

ಕೋಟಕ್ ಮಹೀಂದ್ರ ಬ್ಯಾಂಕ್‌ನ ಸಿಎಸ್‌ಆರ್ (CSR) ನಿಧಿಯಡಿ ಅಳವಡಿಸಲಾಗಿರುವ ಅತ್ಯಾಧುನಿಕ ಎಂಆರ್‌ಐ (MRI) ಯಂತ್ರ ಹಾಗೂ ಕಿಡ್ನಿ ಕಸಿ ತೀವ್ರ ನಿಗಾ ಘಟಕವನ್ನು ಲೋಕಾರ್ಪಣೆಗೊಳಿದ ಸಚಿವರು

ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ  ಪೌರಕಾರ್ಮಿಕರಿಗಾಗಿ ನಿರ್ಮಿಸಿರುವ ವಸತಿ ಸಮುಚ್ಚ ಉದ್ಘಾಟನೆ 

ಮೈಸೂರಿನಲ್ಲಿ ನವೆಂಬರ್ 26 ರಂದು ರಾಜ್ಯಮಟ್ಟದ ಸಂವಿಧಾನ ದಿನಾಚರಣೆ: ಒಂದು ಲಕ್ಷ ಜನ ಸೇರುವ ನಿರೀಕ್ಷೆ : ಸಚಿವ ಕೆ.ಹೆಚ್ ಮುನಿಯಪ್ಪ

ಅಪೋಲೊ ಆಸ್ಪತ್ರೆಯಿಂದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಿಗೆ ಆರೋಗ್ಯ ಕಾರ್ಡ್ ಬಿಡುಗಡೆ