ಎಂ.ಎರ್.ಜಯರಾಮ್ ಭೂ ಕಬಳಿಕೆ ಮಾಡಿದ್ದಾರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು: ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯ
ವಿಜಯ ದರ್ಪಣ ನ್ಯೂಸ್….
ಎಂ.ಎರ್.ಜಯರಾಮ್ ಭೂ ಕಬಳಿಕೆ ಮಾಡಿದ್ದಾರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು: ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯ

ವಿಜಯಪುರ: ದೇವನಹಳ್ಳಿ ತಾಲೂಕಿನ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಸುತ್ತಮುತ್ತಲಿನಲ್ಲಿ, ಮಾಜಿ ಶಾಸಕ ಎಂ.ಎರ್.ಜಯರಾಮ್ ಅವರು, ಶಾಸಕರಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು, ಸಾವಿರಾರು ಎಕರೆ ಭೂ ಕಬಳಿಕೆ ಮಾಡಿದ್ದಾರೆ. ರಾಜ್ಯ ಸರಕಾರ, ಭೂಕಬಳಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಭಾರತ್ ಮುಕ್ತಿ ಮೋರ್ಚಾ, ಬಹುಜನ ಕ್ರಾಂತಿ ಮೋರ್ಚಾ, ರಾಷ್ಟ್ರೀಯ ಕಿಸಾನ್ ಮೋರ್ಚಾ, ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1972 ರಲ್ಲಿ ಎಂ.ಆರ್.ಜಯರಾಂ ಅವರು, ದೇವನಹಳ್ಳಿಯಲ್ಲಿ ಶಾಸಕರಾಗಿದ್ದಾಗ, ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು, ಗುಂಡುತೋಪುಗಳು, ಕೆರೆ, ಕುಂಟೆ, ದೇವಾಲಯಗಳು ಕುಡಿಯುವ ನೀರಿನ ಬಾವಿ, ಹಳ್ಳಿಗಳಿಗೆ ಸಂಚರಿಸಲು ನಿರ್ಮಾಣ ಮಾಡಿದ್ದ ರಸ್ತೆಗಳು, ಅರಳಿಕಟ್ಟೆಗಳು, ಸೇರಿದಂತೆ ಎಲ್ಲಾ ಗೋಮಾಳಗಳನ್ನು ಕಬಳಿಕೆ ಮಾಡಿದ್ದಾರೆ.
ಒಂದೇ ಕುಟುಂಬದ ಹಲವರ ಹೆಸರಿನಲ್ಲಿ, ನೂರಾರು ಎಕರೆ ಭೂಮಿ ಮಂಜೂರಾಗಿರುವಂತೆ ದಾಖಲೆಗಳು ಮಾಡಿಕೊಂಡಿದ್ದಾರೆ ಎಂದು ಗ್ರಾಮದ ಮುಖಂಡ ಮುನಿರಾಜು ಅವರು ಆರೋಪ ಮಾಡಿದರು.
ನಾವು, ನಮೂನೆ-50 ರಲ್ಲಿ ಭೂಮಂಜೂರಾತಿಗಾಗಿ ಅರ್ಜಿಗಳು ಹಾಕಿಕೊಂಡಿದ್ದೇವು, ಅಕ್ಲೇನಹಳ್ಳಿ-ಮಲ್ಲೇನಹಳ್ಳಿಯಲ್ಲಿ, ಪರಿಶಿಷ್ಟ ಜಾತಿ-ಪಂಗಡದ ಕುಟುಂಬಗಳು ವಾಸವಾಗಿದ್ದೇವು. ಅಧಿಕಾರ ದುರ್ಬಳಕೆ ಮಾಡಿಕೊಂಡು, ಅಲ್ಲಿಂದ ನಮ್ಮನ್ನು ಓಡಿಸಿದರು. ಅಲ್ಲಿಂದ ಬಂದ ನಾವು, ಸ.ನಂ.37 ರಲ್ಲಿ ಖರಾಜು ಜಾಗದಲ್ಲಿ ಬಂಡೆಗಳ ಜಾಗದಲ್ಲಿ ನೆಲೆಯೂರಿಕೊಂಡು, ಮನೆಗಳು ನಿರ್ಮಾಣ ಮಾಡಿಕೊಂಡಿದ್ದೇವೆ. ಈಗ ಅಲ್ಲಿಂದಲೂ ನಮ್ಮನ್ನು ತೆರವುಗೊಳಿಸಲು ಹುನ್ನಾರಗಳು ನಡೆಯುತ್ತಿವೆ.
ನಾವು ಭೂ ಮಂಜೂರಾತಿಗಾಗಿ ಬೇಡಿಕೆಯಿಟ್ಟಿದ್ದ ನಮ್ಮ ಭೂಮಿಗಳು, ನಮಗೆ ವಾಪಸ್ಸು ಕೊಡುವಂತೆ ನ್ಯಾಯಾಲಯಕ್ಕೂ ಹೋಗಿದ್ದೇವು. ನ್ಯಾಯಾಲಯವು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸೇರಿದ, ಒತ್ತುವರಿ ಭೂಮಿಯನ್ನು ತೆರವುಗೊಳಿಸುವಂತೆ ಆದೇಶ ಮಾಡಿತ್ತು.
ಈ ಹಿಂದೆ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿಯಾಗಿರುವ ಜಾಗವನ್ನು ಗುರುತಿಸಿದ್ದರು. ನಾಮಫಲಕಗಳನ್ನು ಹಾಕಿದ್ದರು. ಜಿಲ್ಲಾಧಿಕಾರಿ ಭೇಟಿ ಕೊಟ್ಟು ಪರಿಶೀಲನೆಯನ್ನೂ ನಡೆಸಿದ್ದರು. ಆದರೆ, ಏಕಾಏಕಿ ಜಿಲ್ಲಾಧಿಕಾರಿ ವರ್ಗಾವಣೆಯಾದರು. ಈ ತಾಲೂಕು ಕಚೇರಿಯಲ್ಲಿ ಇದಕ್ಕೆ ಸಂಬಂಧಪಟ್ಟ ದಾಖಲೆಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.
ಹಿರಿಯ ವಕೀಲ ಸಿದ್ಧಾರ್ಥ ಅವರು ಮಾತನಾಡಿ, ತಾಲೂಕಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ನಂತರ, ಬಡವರ ಭೂಮಿಗಳು ಕಬಳಿಕೆ ಮಾಡುವುದು ಜಾಸ್ತಿಯಾಗಿದೆ. ವಿದೇಶಿ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿ ವರ್ಗವೇ ಇದಕ್ಕೆ ಬೆಂಬಲ ನೀಡಿ, ಅವರಿಗೆ ಬೇಕಾಗಿರುವಂತಹ ಎಲ್ಲಾ ದಾಖಲೆಗಳನ್ನು ಒದಗಿಸಿಕೊಡುತ್ತಿದ್ದಾರೆ.
ರೈತರು ದಾಖಲೆಗಳು ಕೇಳಿದರೆ ಸಿಗಲ್ಲ, ಭೂಮಾಫಿಯಾದವರಿಗೆ ಅರ್ಧ ಗಂಟೆಯಲ್ಲಿ ಅವರು ಕೇಳಿದ ದಾಖಲೆಗಳು ಲಭ್ಯವಾಗುತ್ತಿವೆ. ರಾಜ್ಯ ಸರ್ಕಾರ, ಭೂ ಕಬಳಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, 50 ಕ್ಕೂ ಹೆಚ್ಚು ಕುಟುಂಬಗಳಿಗೆ ಹಳೇಯ ಊರು, ಅವರು ಕಳೆದುಕೊಂಡಿರುವ ಆಸ್ತಿಗಳನ್ನು ಪುನಃ ಅವರಿಗೆ ಕಲ್ಪಿಸಿಕೊಡಬೇಕು. ಸರಕಾರ ನಿರ್ಲಕ್ಷ್ಯ ಮಾಡಿದರೆ, ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಧರಣಿ ಮಾಡುತ್ತೇವೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ತಾಲೂಕಿನಲ್ಲಿ, ಭೂ ಮಾಫಿಯಾ ಹೆಚ್ಚಾಗಿದೆ. ರೈತರಿಗೆ ಸಂಬಂಧಪಟ್ಟ ಯಾವ ದಾಖಲೆಗಳೂ ಸಿಗುತ್ತಿಲ್ಲ. ಅಧಿಕಾರಿಗಳೇ ನೇರವಾಗಿ ರಾಜಕಾರಣಿಗಳಿಗೆ ಸಾಥ್ ನೀಡುವ ಮೂಲಕ ಭೂಮಾಫಿಯಾಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹೋರಾಟ ಮಾಡುವುದಕ್ಕೂ ಅವಕಾಶ ನೀಡುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಿಕ್ಕೇಗೌಡ, ನಾರಾಯಣಸ್ವಾಮಿ, ಮುನಿಶಾಮಪ್ಪ, ದೇವರಾಜ್, ಗೌರಮ್ಮ, ವಕೀಲ ಮೂರ್ತಿ, ಮುನಿರಾಜು, ಶಿವಪ್ಪ, ಮುನಿರಾಜು, ರವಿ, ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಹಾಗೂ ಹೋರಾಟಗಾರರು ಇದ್ದರು.
