ಅಂಗನವಾಡಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು: ಜಿಲ್ಲಾಧಿಕಾರಿ ಜಿ. ಪ್ರಭು
ವಿಜಯ ದರ್ಪಣ ನ್ಯೂಸ್….
ಅಂಗನವಾಡಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು: ಜಿಲ್ಲಾಧಿಕಾರಿ ಜಿ. ಪ್ರಭು

ಚಿಕ್ಕಬಳ್ಳಾಪುರ,ಫೆ.19 :ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ 320 ಅಂಗನವಾಡಿಗಳಿಗೆ ಮುಂದಿನ ಒಂದು ತಿಂಗಳ ಒಳಗಾಗಿ ನಿವೇಶನ ಗುರ್ತಿಸಿ ನೀಡುವಂತಹ ಕೆಲಸ ಆಗಬೇಕು, ಆ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ಏಕೀಕೃತ ಜಿಲ್ಲಾ ಮಟ್ಟದ ಸಮಿತಿ ಸಭೆ”ಯ ಅಧ್ಯಕ್ಷತೆ ವಹಿಸಿ,ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದರಿಂದ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಆದ್ದರಿಂದ ಜಿಲ್ಲೆಯಲ್ಲಿರುವ 2014 ಅಂಗನವಾಡಿಗಳು ಸಹ ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಆದ್ದರಿಂದ ನಗರಾಡಳಿತ ಪ್ರದೇಶದಲ್ಲಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಯಾವ ಯಾವ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಅದರ ಮಾಹಿತಿಯನ್ನು ನಿಖರವಾಗಿ ಪಡೆದು ಏಕ ಕಡತದಲ್ಲಿ ಒಂದೆರಡು ದಿನಗಳಲ್ಲಿ ಮಂಡಿಸಬೇಕು. ಸಂಬಂಧಪಟ್ಟ ತಹಸೀಲ್ದಾರ್ ಗಳು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ನಗರ ಸ್ಥಳೀಯಾಡಳಿತದ ಮುಖ್ಯಸ್ಥ ಅಧಿಕಾರಿಗಳಿಗೆ ಲಿಖಿತವಾಗಿ ಸೂಚನೆ ನೀಡಿ ಒಂದು ತಿಂಗಳ ಒಳಗಾಗಿ ನಿವೇಶನ ಗುರ್ತಿಸುವ ಕೆಲಸ ಆಗಬೇಕು. ಅಂಗನವಾಡಿಗಳಲ್ಲಿ ಮಕ್ಕಳು ಬರದಿದ್ದರೂ ಹಾಜರಾತಿ ಕೊಡುವಂತದ್ದು ಆಗಬಾರದು. ಶಿಸ್ತು,ಸಮಯ ಪಾಲನೆ ಕಡ್ಡಾಯವಾಗಿ ಆಗಬೇಕು
ಮಕ್ಕಳಿಗೆ ಹಾಗೂ ಮಹಿಳೆಯರಿಗೆ ನೀಡುತ್ತಿರುವ ಪೌಷ್ಠಿಕ ಆಹಾರ ಸಮರ್ಪಕ ವಿತರಣೆ ಬಗ್ಗೆ ಮೇಲಾಧಿಕಾರಿಗಳು ದಿನನಿತ್ಯ ಮೇಲುಸ್ತುವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಜಾರಿಯಲ್ಲಿರುವ “ಪೋಷಣ್ ಟ್ರಾಕ್ ತಂತ್ರಾಂಶವನ್ನು ಸರಿಯಾದ ರೀತಿಯಲ್ಲಿ ಅಧಿಕಾರಿಗಳು ನಿರ್ವಹಿಸಬೇಕು. 2014 ಅಂಗನವಾಡಿಗಳ ಪೈಕಿ 20 ಅಂಗನವಾಡಿ ಕಾರ್ಯಕರ್ತೆಯರಹಾಗೂ 129 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಎಲ್ಲೆಲ್ಲಿ ಈ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳು ಖಾಲಿ ಇವೆ ಅವೆಲ್ಲವನ್ನು ಮುಂದಿನ 3 ತಿಂಗಳಲ್ಲಿ ಭರ್ತಿ ಮಾಡಲು ಕ್ರಮವಹಿಸಬೇಕು. ಒಟ್ಟಾರೆ ಜಿಲ್ಲೆಯ ಅಂಗನವಾಡಿಗಳಲ್ಲಿ ಮಕ್ಕಳಿಗೆ ಗರ್ಭಿಣಿ ಮಹಿಳೆಯರಿಗೆ ದೊರಕುವ ಎಲ್ಲಾ ಸೌಲಭ್ಯಗಳು ಕರಾರುವಕ್ಕಾಗಿ ತಲುಪುವನಿಟ್ಟಿನಲ್ಲಿ ಕ್ರಮವಹಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಹಕಾರ ಪಡೆದು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಭಿಯಾನದ ರೀತಿಯಲ್ಲಿ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮಹೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಾಧರ,ಸಾಂತ್ವಾನ, ಸಖಿ ಕೇಂದ್ರಗಳ ಮುಖ್ಯಸ್ಥರು, ಮಹಿಳಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
