ವಿಜಯ ದರ್ಪಣ ನ್ಯೂಸ್….
ಸ್ವಚ್ಚ ಮೈಸೂರು ಬಜೆಟ್ ಆಶಯ :10.2 ಕೋಟಿ ಉಳಿತಾ ಬಜೆಟ್ ಮಂಡಿಸಿದ ಆಡಳಿತಾಧಿಕಾರಿ
ಚ
ತಾಂಡವಪುರ ಮಾರ್ಚ್ 25 :ವೇಸ್ಟ್ ಟು ವಂಡರ್ ಪಾರ್ಕ್, ಹಸಿ ತ್ಯಾಜ್ಯ ಸಂಸ್ಕರಣಾ ಘಟಕ, ಹಸಿರು-ಉಸಿರು, ಸಾಲು ಮರಗಳ ಸಮೀಕ್ಷೆ, ಕ್ಲಿನ್ ಸಿಟಿ ಆ್ಯಪ್ ನಂತಹ ಸ್ವಚ್ಛತೆಗೆ ಪೂರಕವಾದ ಬಜೆಟ್ ಅನ್ನು ಮೈಸೂರು ಮಹಾನಗರಪಾಲಿಕೆ ಮಂಡಿಸಿತು. 2026-27ನೇ ಸಾಲಿನ ಬಜೆಟ್ ಸ್ವಚ್ಛತೆಗೆ ಮೀಸಲಿಡಲಾಗಿದೆ. ಆ ಮೂಲಕ ಸ್ವಚ್ಛತೆಯಲ್ಲಿ ಮೈಸೂರನ್ನು ನಂಬರ್ ಒನ್ ಆಗಿ ಪರಿವರ್ತಿಸುವ ಪ್ರಯತ್ನ ಘೋಷಿಸಿದ್ದಾರೆ.
ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರೂ ಆಗಿರುವ ಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಬುಧವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಮಂಡಿಸಿದ 39 ಯೋಜನೆಗಳಲ್ಲಿ ಶೇ. 70ರಷ್ಟು ವಿಷಯಗಳು ಸ್ವಚ್ಛತೆಗೆ ಪೂರಕವಾದ ಕಾರ್ಯಕ್ರಮಗಳಾಗಿರುವುದು ವಿಶೇಷವಾಗಿದೆ.
‘‘1311.13 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಹೊಂದಿದ್ದುಘಿ, 1300.92 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. 10.2 ಕೋಟಿ ರೂ. ಉಳಿತಾಯವಾಗಲಿದೆ,’’ ಎಂದು ಮಾಹಿತಿ ನೀಡಿದರು.
ತಿಂಗಳಲ್ಲಿ ಟೆಂಡರ್:
ಈ ಬಜೆಟ್‌ನಲ್ಲಿ ಘೋಷಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಬಜೆಟ್ ಮಂಡಿಸಿದ ನಿತೇಶ್ ಪಾಟೀಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
‘‘ಪಾಲಿಕೆಯ ಬಜೆಟ್‌ನಲ್ಲಿ ಘೋಷಣೆಯಾಗಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ವಿಳಂಬ ಸಲ್ಲ. ಕೂಡಲೇ ಯೋಜನೆ ಅನುಷ್ಠಾನ ಸಂಬಂಧ ಕ್ರಮವಹಿಸಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವ ಬಗ್ಗೆ ವರದಿ ನೀಡಬೇಕು,’’ ಎಂದು ಸೂಚಿಸಿದರು.
ಆಡಳಿತಾಧಿಕಾರಿಯ 3ನೇ ಬಜೆಟ್: ಪಾಲಿಕೆ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅಂತ್ಯಗೊಂಡ ಬಳಿಕ ಮಂಡನೆಯಾಗುತ್ತಿರುವ ಮೂರನೇ ಬಜೆಟ್ ಇದಾಗಿದೆ. ಈ ಬಾರಿ ನಿತೇಶ್ ಪಾಟೀಲ್ ಬಜೆಟ್ ಮಂಡಿಸಿದ್ದಾರೆ.
2024-25ರಲ್ಲಿ ಡಾ.ಜಿ.ಸಿ.ಪ್ರಕಾಶ್, 2025-26ರಲ್ಲಿ ಡಿ.ಎಸ್.ರಮೇಶ್ ಪಾಲಿಕೆ ಬಜೆಟ್ ಮಂಡಿಸಿದ್ದರು. ಅಧಿಕಾರಿಗಳೇ ಇದ್ದ ಬಜೆಟ್ ಮಂಡನಾ ಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೇ ಬಜೆಟ್ ಅನುಮೋದನೆಗೊಂಡಿತು.
ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸ್ಸೀ, ಹೆಚ್ಚುವರಿ ಆಯುಕ್ತೆ ವೀಣಾ, ಉಪ ಆಯುಕ್ತರಾದ ದಾಸೇಗೌಡ, ಸೋಮಶೇಖರ್ ಜಿಗಣಿ ಸೇರಿ ಇತರ ಅಧಿಕಾರಿಗಳು ಇದ್ದರು.
ಸಾರ್ವಜನಿಕ ಸ್ನೇಹಿ ಅಭಿಯಾನ:
ಮೈಸೂರು ಮಹಾನಗರ ಪಾಲಿಕೆಯು ಈಗ ಮತ್ತಷ್ಟು ಸಾರ್ವಜನಿಕ ಸ್ನೇಹಿಯಾಗಲಿದೆ. ಪ್ರತಿ ಶುಕ್ರವಾರ ಸಾರ್ವಜನಿಕರ ಸಮಸ್ಯೆ ಆಲಿಸಲು ಜನ ಸ್ಪಂದನ ಸಭೆ ನಡೆಸುವುದರೊಂದಿಗೆ ನಿರಂತರವಾಗಿ ಇ-ಖಾತೆ ಮತ್ತು ಸಿಆರ್ ನೀಡಲು ವಿಶೇಷ ಅಭಿಯಾನ ನಡೆಸಲು ಮುಂದಾಗಿದೆ.
ಪಾಲಿಕೆಯ ಎಲ್ಲ ವಲಯ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಪ್ರತಿ ಶುಕ್ರವಾರ ಜನ ಸ್ಪಂದನ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ. ಇದರೊಂದಿಗೆ ಸಿಆರ್‌ಗೆ ಸಂಬಂಧಿಸಿದಂತೆ ನಿಗದಿಪಡಿಸಿದ ದಾಖಲಾತಿಗಳೊಂದಿಗೆ ಶೇ. 15ರಷ್ಟು ನಕ್ಷೆ ಉಲ್ಲಂಘನೆ ಅನುಪಾತದೊಳಗಿರುವ ಕಟ್ಟಡಗಳಿಗೆ ಸಿಆರ್ ನೀಡಲು ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.
ಸ್ವಚ್ಛತಾ ಬಜೆಟ್ ವಿಶೇಷಗಳು:
ಹಸಿರು-ಉಸಿರು: ಪಾಲಿಕೆಯ ಪ್ರತಿ ವಲಯ ಕಚೇರಿ ವ್ಯಾಪ್ತಿಯಲ್ಲಿ 1500 ಗಿಡಗಳಂತೆ 9 ವಲಯ ಕಚೇರಿ ವ್ಯಾಪ್ತಿಯಲ್ಲಿ 13 ಸಾವಿರ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.
ಉದ್ಯಾನ ದತ್ತು:
‘ನಮ್ಮ ಮೈಸೂರು- ನಮ್ಮ ಕೊಡುಗೆ’ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನಗಳನ್ನು ಖಾಸಗಿ ವ್ಯಕ್ತಿ ಮತ್ತು ಸಂಘ-ಸಂಸ್ಥೆಗಳಿಗೆ ದತ್ತು ನೀಡಿ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲು ನಿರ್ಧರಿಸಲಾಗಿದೆ.
ಈಗಾಗಲೇ 11 ಪಾರ್ಕ್‌ಗಳನ್ನು ದತ್ತು ನೀಡಲಾಗಿದೆ.
ವೇಸ್ಟ್ ಟು ವಂಡರ್ ಪಾರ್ಕ್: ಪಿಪಿಪಿ ಮಾದರಿಯಲ್ಲಿ ನಗರದ ಯಾವುದಾದರೂ ಒಂದು ಉದ್ಯಾನದಲ್ಲಿ ತ್ಯಾಜ್ಯ ವಸ್ತುಗಳನ್ನು ಮರು ಬಳಕೆ ಮಾಡಿ ಅದರಲ್ಲಿ ಕಲಾಕೃತಿಗಳನ್ನು ನಿರ್ಮಿಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿಯೊಂದಿಗೆ ಮನರಂಜನೆ ನೀಡುವ ಉದ್ದೇಶವಿದೆ.
ಸಂಸ್ಕರಣಾ ಘಟಕ: ವಿದ್ಯಾರಣ್ಯಪುರಂನ ಸುವೇಜ್ ಫಾರಂನ ಆವರಣದಲ್ಲಿ 150 ಟಿಪಿಡಿ ಸಾಮರ್ಥ್ಯದ ಹಸಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ. ಬಿಪಿಸಿಎಲ್‌ನ ಸಹಯೋಗದಲ್ಲಿ ಘಟಕ ಸ್ಥಾಪನೆಯಾಗಲಿದೆ. ಇದರಿಂದ ತ್ಯಾಜ್ಯ ಸಮಸ್ಯೆ ನಿವಾರಣೆಯಾಗಲಿದೆ.
ಕ್ಲೀನ್ ಸಿಟಿ ಆ್ಯಪ್:
ಸ್ವಚ್ಛತೆ ಸಂಬಂಧ ಸಾರ್ವಜನಿಕರು ದೂರು ನೀಡಲು ಕ್ಲೀನ್ ಸಿಟಿ ಹೆಸರಿನಲ್ಲಿ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಸಕಾಲದಲ್ಲಿ ತ್ಯಾಜ್ಯ ವಿಲೇವಾರಿಯಾಗದೇ ಇದ್ದರೆ ಸಾರ್ವಜನಿಕರು ಚಿತ್ರ ಸಹಿತ ಆ್ಯಪ್‌ನಲ್ಲಿ ದೂರು ನೀಡಬಹುದಾಗಿದೆ.
ಗ್ರೀನ್ ಪ್ರಾಪರ್ಟಿ ಟ್ಯಾಗ್:
ಮಳೆ ನೀರು ಸಂಗ್ರಹಣೆ, ಸೌರ ವಿದ್ಯುತ್ ಬಳಕೆ, ತ್ಯಾಜ್ಯ ವಿಂಗಡಣೆ ಹಾಗೂ ಹಸಿ ತ್ಯಾಜ್ಯದಿಂದ ಗೊಬ್ಬರ ಮಾಡುವಂತಹ ಕ್ರಮಗಳನ್ನು ಅನುಸರಿಸುವ ಕಟ್ಟಡಗಳಿಗೆ ಗ್ರೀನ್ ಪ್ರಾಪರ್ಟಿ ಟ್ಯಾಗ್ ನೀಡುವ ಮೂಲಕ ಪ್ರೋತ್ಸಾಹ ನೀಡುವ ಉದ್ದೇಶವಿದೆ.
ಸ್ವಚ್ಛ ಪ್ರದೇಶ: ಮೈಸೂರು ನಗರ ಕೇಂದ್ರ ವ್ಯಾಪಾರ ಪ್ರದೇಶವನ್ನು ದಿನವಿಡೀ ಸ್ವಚ್ಛ ಮತ್ತು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಸಿಎಸ್‌ಆರ್ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಸ್ವಚ್ಛತೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಪರಿಸರ ಸ್ನೇಹಿ ಸುಂದರೀಕರಣ ಹಾಗೂ ಜಾಗೃತಿ ಉದ್ದೇಶವಿದೆ.
ಮರ-ವ್ಯಾಪಾರಿಗಳ ಸಮೀಕ್ಷೆ: ಮೈಸೂರು ನಗರದಲ್ಲಿ ಖಾಸಗಿ ಸಂಸ್ಥೆ ಸಿಎಸ್‌ಎಎಲ್ ಸಹಭಾಗಿತ್ವದಲ್ಲಿ ಆರಂಭಗೊಂಡಿರುವ ಸಾಲು ಮರಗಳ ಸಮೀಕ್ಷೆಯನ್ನು ಈ ಆರ್ಥಿಕ ವರ್ಷದಲ್ಲಿಯೇ ಪೂರ್ಣಗೊಳಿಸಲು ಗುರಿ ನೀಡಲಾಗಿದೆ.
ಇದರೊಂದಿಗೆ ಮೈಸೂರು ನಗರದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಜಿಯೋ ಟ್ಯಾಗಿಂಗ್ ಮೂಲಕ ಸಮೀಕ್ಷೆ ನಡೆಸಿ ಅವರಿಗೆ ಗುರುತಿನ ಚೀಟಿ ನೀಡುವುದು, ಜತೆಗೆ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸ್ಟ್ರೀಟ್ ಹಬ್ ನಿರ್ಮಿಸುವುದು.
ಅಕ್ಕ ಕೆಫೆ, ಕಾಫಿ ಕಿಯೋಸ್ಕ್: ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಅಕ್ಕ ಕೆೆ ತೆರೆಯುವುದರೊಂದಿಗೆ ಐದು ವಲಯ ಕಚೇರಿಗಳಲ್ಲಿ ಕಾಫಿ ಕಿಯೋಸ್ಕ್ ಸೆಂಟರ್‌ಗಳನ್ನು ಸ್ಥಾಪಿಸಿ, ಮಹಿಳಾ ಸ್ವಸಹಾಯ ಸಂಘಗಳಿಗೆ ನಿರ್ವಹಣೆಗೆ ವಹಿಸುವುದು.
ಮೂಲ ಸೌಕರ್ಯಕ್ಕೆ ಒತ್ತು: ನೀರು ಸರಬರಾಜು, ಒಳಚರಂಡಿ ಕೊಳವೆ ಮಾರ್ಗ ಅಭಿವೃದ್ಧಿಗೆ 30 ಕೋಟಿ ರೂ., ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 30 ಕೋಟಿ ರೂ., ವೃತ್ತಗಳ ಅಭಿವೃದ್ಧಿಗೆ 5 ಕೋಟಿ ರೂ., ಪಾದಚಾರಿ ಮಾರ್ಗ ಅಭಿವೃದ್ಧಿಗೆ 10 ಕೋಟಿ ರೂ., ಪುಟ್ಟರಾಜ ಗವಾಯಿ ಕ್ರೀಡಾಂಗಣ ಅಭಿವೃದ್ಧಿಗೆ 1.1 ಕೋಟಿ ರೂ., ಕುಂಬಾರಕೊಪ್ಪಲಿನ ಕ್ರೀಡಾಂಗಣ ಅಭಿವೃದ್ಧಿಗೆ 5 ಕೋಟಿ ರೂ., ಪುರಭವನ ಅಭಿವೃದ್ಧಿಗೆ 3 ಕೋಟಿ ರೂ. ನೀಡಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಪಾರಂಪರಿಕ ಶೌಚಗೃಹ ನಿರ್ಮಾಣ, ಪಿಪಿಪಿ ಮಾದರಿಯಲ್ಲಿ ನಗರದ ಮೂರು ಕ್ಷೇತ್ರದಲ್ಲಿ ಮಾರುಕಟ್ಟೆ, ಈಜು ಕೊಳ ನಿರ್ಮಾಣ.
ಕಾಮಗಾರಿ ಪರೀಕ್ಷೆಗೆ ಲ್ಯಾಬ್:
ನಗರದಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸಲು ಪರೀಕ್ಷಾ ಉಪ-ವಿಭಾಗ ಮತ್ತು ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ.
ಇದಕ್ಕಾಗಿ 1 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಈ ಲ್ಯಾಬ್‌ನಿಂದ ನಿರ್ಮಾಣ ಹಂತದಲ್ಲಿರುವ ರಸ್ತೆ, ಕಟ್ಟಡ, ಸೇತುವೆ ಕಾಮಗಾರಿಗಳಲ್ಲಿ ಬಳಸುವ ಸಿಮೆಂಟ್, ಮರಳು, ಕಾಂಕ್ರಿಟ್ ಮತ್ತು ಡಾಂಬರ್ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ.
ಅಧಿಕಾರಿಗಳ ಸಂಪರ್ಕಕ್ಕೆ ಕ್ಯೂಆರ್ ಕೋಡ್:
ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕಲ್ಪಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಂಪರ್ಕಿಸಲು ಅಲೆದಾಡಬೇಕಿಲ್ಲ. ಪಾಲಿಕೆಯ ವಲಯ ಕಚೇರಿಯಲ್ಲಿ ಅಳವಡಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ತಮಗೆ ಬೇಕಾದ ಅಧಿಕಾರಿ ಮತ್ತು ಸಿಬ್ಬಂದಿಯ ಹೆಸರು ಮತ್ತು ಸಂಪರ್ಕ ವಿವರ ಸಿಗಲಿದೆ. ಆ ಮೂಲಕ ಅವರನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದರೊಂದಿಗೆ ಕಚೇರಿಯಲ್ಲಿನ ಎಲ್ಲ ವರ್ಗದ ಕಡತಗಳನ್ನು ಗಣಕೀಕೃತಗೊಳಿಸಲು 50 ಲಕ್ಷ ರೂ. ಮೀಸಲಿರಿಸಲಾಗಿದೆ. ಜತೆಗೆ ಕಾಗದ ರಹಿತ ಇ-ಆಫೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.











