ವಿಜಯ ದರ್ಪಣ ನ್ಯೂಸ್…..
ಬಾಕಿ ಉಳಿದ ಯೋಜನೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು : ಜಿಲ್ಲಾಧಿಕಾರಿ ಜಿ. ಪ್ರಭು

ಶಿಡ್ಲಘಟ್ಟ – ಪ್ರತಿ ತಾಲೂಕಿಗೆ ವಾರಕ್ಕೆ ಕನಿಷ್ಠ ಎರಡು ರಿಂದ ಮೂರು ದಿನ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು ದೀರ್ಘಕಾಲದಿಂದ ಬಾಕಿ ಉಳಿದ ಯೋಜನೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅವರು ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾಗು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಿಯಮಿತವಾಗಿ ತಾಲ್ಲೂಕಗಳಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆ ಸುಧಾರಣೆ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ,ತ್ವರಿತ ಸೇವೆ ಒದಗಿಸುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಜಂಟಿ ಖಾತೆ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುತ್ತಿದ್ದು, ಕುಟುಂಬ ಸದಸ್ಯರ ಒಪ್ಪಿಗೆ ಆಧಾರದ ಮೇಲೆ ಖಾತೆ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ ‘ಇ-ಆಫೀಸ್ ‘ ವ್ಯವಸ್ಥೆ ಮೂಲಕ ಅರ್ಜಿಗಳ ಮೇಲ್ವಿಚಾರಣೆ ಸುಗಮವಾಗಿದ್ದು, ಸಾರ್ವಜನಿಕರು ಕಚೇರಿಯ ಸ್ವೀಕೃತಿ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಮನವಿ ಮಾಡಿದರು.
ಜಿಲ್ಲೆಯಲ್ಲಿ ದರಖಾಸ್ತು ಪೊಡಿ, ಸರ್ವೇ ಸಂಖ್ಯೆ ಸೃಷ್ಟಿ ಮತ್ತು ಕಂದಾಯ ದಾಖಲೆ ವಿತರಣೆ ಕಾರ್ಯ ವೇಗ ಪಡೆದುಕೊಂಡಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಸಾವಿರಾರು ಅರ್ಜಿಗಳಿಗೆ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಎಲ್ಲಾ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದರು.
ತಾಲ್ಲೂಕಿನಲ್ಲಿ ದರಖಾಸ್ತು ಪೊಡಿಗೆ ಸಂಬಂಧಿಸಿದಂತೆ ಸುಮಾರು 6,500 ಸಾವಿರದಿಂದ 7,000 ಸಾವಿರ ಅರ್ಜಿಗಳು ಬಾಕಿ ಇವೆ ಈ ಮಂಜೂರಿದಾರರಿಗೆ ಹೊಸ ಸರ್ವೇ ನಂಬರ್ ನೀಡಿ, ವಿಸ್ತೀರ್ಣಕ್ಕೆ ಅನುಗುಣವಾಗಿ ಹೊಸ ಆರ್.ಟಿ.ಸಿ ಕೊಡುವಂತಹ ಕೆಲಸ ಮಾಡಲಾಗುವುದು ಎಂದು ವಿವರಿಸಿದರು.
ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 25,000 ನಾಗರಿಕರಿಗೆ ಶಾಶ್ವತ ದಾಖಲೆಗಳನ್ನು ನೀಡಲಾಗಿದ್ದು, ಶಿಡ್ಲಘಟ್ಟದಲ್ಲೂ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಹೇಳಿದರು.

ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಲು ದಾಖಲೆಗಳ ಡಿಜಿಟಲೀಕರಣ ಕಾರ್ಯ ಚುರುಕುಗೊಂಡಿದೆ,ತಾಲ್ಲೂಕಿನ 4,300 ಮಂಜೂರಾತಿ ಕಡತಗಳ ಪೈಕಿ 3,300 ಕಡತಗಳು ಸ್ಕ್ಯಾನಿಂಗ್ ಆಗಿದ್ದು, ಪರಿಶೀಲನೆ ನಂತರ ಸಾರ್ವಜನಿಕರಿಗೆ ಆನ್ ಲೈನ್ ಮೂಲಕ ಲಭ್ಯವಾಗಲಿದೆ
ಎಂದರು.
ನಗರದಲ್ಲಿ ಸ್ವಚ್ಛತೆ, ಈ-ಸ್ವತ್ತು ಅಭಿಯಾನ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ,ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ಸ್ಥಳಗಳನ್ನು ಗುರುತಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುತ್ತದೆ ಮನೆಮನೆಗೆ ಈ-ಸ್ವತ್ತು ಅಭಿಯಾನ ನಡೆಸಿ ಹೆಚ್ಚಿನ ಸಂಖ್ಯೆಯ ಜನರಿಗೆ ಈ ಸ್ವತ್ತುಪತ್ರ ನೀಡುವ ಗುರಿ ಹೊಂದಲಾಗಿದೆ ಎಂದರು.
ಕಂದಾಯ ಗ್ರಾಮಗಳಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಸುಮಾರು 80 ಸಾವಿರ ಕುಟುಂಬಗಳಿಗೆ ಮಾಲೀಕತ್ವ ಹಕ್ಕು ನೀಡುವ ಯೋಜನೆ ಜಾರಿಯಲ್ಲಿದೆ, ತಾತಹಳ್ಳಿ, ಹಂಡಿಗನಾಳ ಹಾಗೂ ಹನುಮಂತಪುರ ಗ್ರಾಮಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಶೀಘ್ರದಲ್ಲೇ ವೈಜ್ಞಾನಿಕ ಸರ್ವೆ ಆರಂಭವಾಗಲಿದೆ ಮುಂದಿನ ಎಂಟು ತಿಂಗಳಿನಿಂದ, ಒಂದು ವರ್ಷದೊಳಗೆ ಮನೆ ಬಾಗಿಲಿಗೆ ಹಕ್ಕುಪತ್ರ ವಿತರಣೆ ಮಾಡುವುದಾಗಿ ಅವರು ಭರವಸೆ ನೀಡಿದರು.
ಜಂಗಮಕೋಟೆ ಪ್ರದೇಶದ ಭೂಸ್ವಾಧೀನ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿರುವುದಾಗಿ ತಿಳಿಸಿದ ಅವರು, ಕೈಗಾರಿಕಾ ಅಭಿವೃದ್ಧಿ ಹಾಗೂ ರೈತರ ಹಿತದ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗಗನಸಿಂಧು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೇಮಾವತಿ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.










