ವಿಜಯ ದರ್ಪಣ ನ್ಯೂಸ್….
ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆ: ಮಹಿಳಾ ಮೀಸಲಾತಿ ಜಾರಿಯಾದರೆ ಕಾಂಗ್ರೆಸ್‌ಗೆ ಸರ್ವನಾಶದ ಭೀತಿ: ಜಿಲ್ಲಾಧ್ಯಕ್ಷೆ ಮಹೇಶ್ವರಿ ವಾಲಿ

ಕಲಬುರ್ಗಿ, ಏ.22- ಕ್ಷೇತ್ರಗಳ ಪುನರ್ ವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿ ಜಾರಿಯಾದಲ್ಲಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಸರ್ವನಾಶವಾಗಲಿದೆ ಎಂಬ ಭೀತಿ ಆ ಪಕ್ಷದ ಮುಖಂಡರಿಗಿದೆ ಎಂದು ಜಾತ್ಯಾತೀತ ಜನತಾದಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಮಹೇಶ್ವರಿ ವಾಲಿ ಅವರು ಹೇಳಿದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ಸೋಲಿಗೆ ಕಾರಣವಾದ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಈ ಹಿಂದಿನಿಂದಲೂ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಹಿಡಿದು, ಇಂದಿರಾಗಾಂಧಿಯಿಂದ ಶ್ರೀಮತಿ ಸೋನಿಯಾಗಾಂಧಿ ಹಾಗೂ ಪ್ರಿಯಾಂಕಾ ವಾಡ್ರಾ ಅವರೇ ಕಾಂಗ್ರೆಸ್ ಪಕ್ಷದಲ್ಲಿ ಸರ್ವಾಧಿಕಾರಿಗಳಾಗಿದ್ದಾರೆ ಎಂದು ದೂರಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸಹ ಶ್ರೀಮತಿ ಸೋನಿಯಾಗಾಂಧಿ ಹಾಗೂ ಶ್ರೀಮತಿ ಪ್ರಿಯಾಂಕಾ ವಾಡ್ರಾ ಅವರೇ ಮುಂದಾಳತ್ವ ವಹಿಸುತ್ತಿದ್ದಾರೆ. ಅವರಿಗೆ ಸಂಸತ್ತಿನಲ್ಲಿ ಕುಳಿತುಕೊಳ್ಳಲು ನಾಚಿಕೆಯಾಗಬೇಕು. ನಾವೇ ಸಂಸತ್ತಿನಲ್ಲಿ ಇರಬೇಕು. ಮಹಿಳೆಯರು ಇರಬಾರದು ಎಂಬ ಕಾರಣದಿಂದ ನಮ್ಮ ಮಹಿಳಾ ಹಕ್ಕು ಕಸಿದುಕೊಂಡಿದ್ದಾರೆ. ಹೀಗಾಗಿ ಕಳೆದ 2023ರ ಮಹಿಳಾ ಮೀಸಲಾತಿ ಕಾಯ್ದೆಯು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣಕ್ಕೆ ಮತ್ತಷ್ಟು ಬೆಂಬಲಿಸುತ್ತಿತ್ತು.
ಹಾಗಾಗಿ ಮಹಿಳೆಯರಿಗೆ ಸಂಸತ್ತಿನಲ್ಲಿ ಹಕ್ಕುಗಳನ್ನು ರಕ್ಷಿಸಲು ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರವು ಕ್ಷೇತ್ರಗಳ ಪುನರ್ ವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಬಯಸಿತ್ತು. ಈ ಕಾಯ್ದೆಯು ಎಲ್ಲಿ ತಮ್ಮ ನಾಯಕತ್ವ ಹಾಗೂ ಪಕ್ಷವನ್ನು ಸರ್ವನಾಶ ಮಾಡಲಿದೆ ಎಂಬ ಆತಂಕಕ್ಕೆ ಒಳಗಾಗಿ ಕಾಂಗ್ರೆಸ್ಸಿನವರು ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿನ ಜೆಡಿಎಸ್ ಪಕ್ಷವು ಮಹಿಳಾ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷರು ಸಹ ಈ ಕುರಿತು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳಿಗೆ ಧಿಕ್ಕಾರ ಹಾಕಿದ ಅವರು, ಮುಂದಾದರೂ ಸಹ ವಿರೋಧ ಪಕ್ಷಗಳು ಮಹಿಳಾ ವಿರೋಧಿ ನೀತಿಯನ್ನು ಕೈಬಿಟ್ಟು ಮಹಿಳಾ ಮೀಸಲಾತಿ ವಿಧೇಯಕಕ್ಕೆ ಬೆಂಬಲಿಸಬೇಕು ಎಂದು ಒತ್ತಾಯಿಸಿದರು. ಇದು ಸೋಲು ಸೋಲಲ್ಲ. ಮುಂದೆ ಮಹಿಳಾ ಮಸೂದೆ ಗೆಲ್ಲಲಿದೆ. ಈಗ ಭಾರತ್ ಮಾತಾಕೀ ಜೈ ಎನ್ನುತ್ತೇವೆ. ಮುಂದೆ ಮಹಿಳೆಯರ ಪರ ಜೈ ಹಾಕುತ್ತೇವೆ.
ಮಹಿಳಾ ಮೀಸಲಾತಿಯನ್ನು ಜಾರಿಯಾಗುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಅಶೋಕ್ ಗುತ್ತೇದಾರ್ ಅವರು ಮಾತನಾಡಿ, ನಗರದಲ್ಲಿ ಜೆಡಿಎಸ್ ವತಿಯಿಂದ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಒದಗಿಸುವ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರವಾಗಬೇಕಿತ್ತು. ಆದಾಗ್ಯೂ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಕಾಯ್ದೆಯನ್ನು ವಿರೋಧಿಸುವ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ನಾವು ಸುಮ್ಮನೇ ಕೂರುವುದಿಲ್ಲ. ಕೂಡಲೇ ಕಾಂಗ್ರೆಸ್ ಮಹಿಳಾ ವಿರೋಧಿ ನೀತಿಯನ್ನು ಕೈಬಿಡಬೇಕು. ಇಲ್ಲದಿದ್ದರೆ ಇಡೀ ಮಹಿಳೆಯರು ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಲಿದೆ . ಈಗಲೂ ಕಾಲ ಮಿಂಚಿಲ್ಲ. ಮಹಿಳಾ ಮೀಸಲಾತಿ ವಿಧೇಯಕವನ್ನು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಶಂಕರಗೌಡ ಬೀರಬಟ್ಟಿ. ಪಾಟೀಲ್, ವೈ ವಿಠಲ್ ಜಾಧವ್, ರವಿಶಂಕರರೆಡ್ಡಿ, ಮಂಜುಗೌಡ ಪಾಟೀಲ್, ರಿಜವಾನ್ ಅಹ್ಮದ್, ಪ್ರವೀಣ್ ಜಾಧವ್, ರಾಜೇ ಪಟೇಲ್, ಕಿರಣ್ ಪಾಟೀಲ್, ಶಿವಲಿಂಗಪ್ಪ ಪಾಟೀಲ್, ಅನ್ವರ್ ಪಟೇಲ್, ಸಾಬೀರ್ ಗನಿ, ನಾಗಯ್ಯಸ್ವಾಮಿ, ಶ್ರೀಧರ್, ಮಹಿಳಾ ಮುಖಂಡರಾದ ಮಹಾನಂದಾ ಪಡ ಶೆಟ್ಟಿ, ಅನುರಾಧ, ಗೀತಾ, ಚಂದ್ರಕಲಾ, ಪದ್ಮನಿ, ಛತ್ರುಬಿ ಬೇಗಂ, ವಿಜಯಶ್ರೀ, ಮಹಾದೇವಿ, ಸಂಗೀತಾ, ಭಾಗ್ಯಶ್ರೀ, ಮಮತಾ, ಬಬೀತಾ, ಮಲ್ಲಮ್ಮ, ಪ್ರಭಾವತಿ, ನೀಲಮ್ಮ, ಪೂರ್ಣಿಮಾ, ಪ್ರೇಮಾ ಮುಂತಾದವರು ಇದ್ದರು.





