--Ads--

ಕರ್ನಾಟಕ ಸಂಘ ಕತಾರ್ ವತಿಯಿಂದ ತಾಯಂದಿರ ದಿನಾಚರಣೆ 2026 ಆಚರಣೆ

On: May 12, 2026 12:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕರ್ನಾಟಕ ಸಂಘ ಕತಾರ್ ವತಿಯಿಂದ ತಾಯಂದಿರ ದಿನಾಚರಣೆ 2026 ಆಚರಣೆ

ದೋಹಾದಲ್ಲಿ ನಡೆದ ಸಮುದಾಯ ಕಾರ್ಯಕ್ರಮ ತಾಯ್ತನದ ಮಹತ್ವವನ್ನು ಸಾಂಸ್ಕೃತಿಕ ಸೌಹಾರ್ದತೆ ಮತ್ತು ಗಣ್ಯರ ಉಪಸ್ಥಿತಿಯೊಂದಿಗೆ ಪ್ರತಿಬಿಂಬಿಸಿತು
ದೋಹಾ, ಕತಾರ್ – ಮೇ 10, 2026: ಕರ್ನಾಟಕ ಸಂಘ ಕತಾರ್ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಕತಾರಿನ ಭಾರತೀಯ ದೂತಾವಾಸದ ಆಶ್ರಯದಲ್ಲಿ ಮೇ 10ರಂದು ವೈಬ್ರೆಂಟ್ ಇಂಡಸ್ಟ್ರಿಯಲ್ ಸೇಫ್ಟಿ ಟ್ರೈನಿಂಗ್ ಅಕಾಡೆಮಿಯಲ್ಲಿ ತಾಯಂದಿರ ದಿನಾಚರಣೆ 2026 ಅನ್ನು ಅತ್ಯಂತ ಸಂಭ್ರಮ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು.

“ಮಾತೃ ದೇವೋ ಭವ” ಎಂಬ ಘೋಷವಾಕ್ಯದಡಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಕತಾರ್ ಸದಸ್ಯರು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯ್ತನದ ಮಹತ್ವವನ್ನು ಗೌರವಿಸುವುದರ ಜೊತೆಗೆ, ಕತಾರ್‌ನ ಕನ್ನಡ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳು ಮತ್ತು ಏಕತೆಯನ್ನು ಮತ್ತಷ್ಟು ಬಲಪಡಿಸಿದರು.

ಸಕಾರಾತ್ಮಕತೆ, ಜ್ಞಾನ ಮತ್ತು ಶುಭಾರಂಭದ ಸಂಕೇತವಾದ ಸಾಂಪ್ರದಾಯಿಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತದನಂತರ, ಕು|| ಸಮನ್ವಿ ಅವರ ಸುಮಧುರ ಕಂಠದಿಂದ ಮೂಡಿಬಂದ ‘ಅಮ್ಮ ನಿನ್ನ ಎದೆಯಾಳದಿಂದ’ ಗೀತೆಯು ಕಾರ್ಯಕ್ರಮಕ್ಕೆ ಮಂಗಳಮಯ ನಾಂದಿ ಹಾಡಿತು.

ನಂತರ ಸಂಘದ ಉಪಾಧ್ಯಕ್ಷ ಶ್ರೀ ಅನಿಲ ಭಾಸಗಿ ಅವರು ಆತ್ಮೀಯ ಸ್ವಾಗತ ಭಾಷಣದ ಮೂಲಕ ಸಭಿಕರನ್ನು ಬರಮಾಡಿಕೊಂಡು ಕಾರ್ಯಕ್ರಮಕ್ಕೆ ಸೌಹಾರ್ದಪೂರ್ಣ ಆರಂಭ ನೀಡಿದರು. ನಂತರ ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಸಂಘದ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಮುದಾಯದ ಉತ್ಸಾಹಭರಿತ ಭಾಗವಹಿಸುವಿಕೆಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳು ತಮ್ಮಪ್ರೇರಣಾದಾಯಕ ಹಾಗೂ ಅರ್ಥಪೂರ್ಣ ಸಂದೇಶಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಯಾಗಿದ್ದ ಡಾ. ಫೈಕಾ ಅಶ್ಕನಾನಿ, ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರು, ಪೌರಾಡಳಿತ ಸಚಿವಾಲಯ ಇವರು ತಾಯಂದಿರ ವಿಶ್ವವ್ಯಾಪಿ ಮಹತ್ವ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರದ ಕುರಿತು ಮಾತನಾಡಿದರು. ಸಹ ಮುಖ್ಯ ಅತಿಥಿಯಾಗಿದ್ದ ಭಾರತೀಯ ರಾಯಭಾರ ಕಚೇರಿಯ ದ್ವಿತೀಯ ಕಾರ್ಯದರ್ಶಿ ಶ್ರೀಮತಿ ಬಿಂದು ಎನ್. ನಾಯರ್ ಅವರು ಭಾರತೀಯ ವಲಸೆ ಸಮುದಾಯದಲ್ಲಿ ತಾಯ್ತನದ ಸಾಂಸ್ಕೃತಿಕ ಮಹತ್ವವನ್ನು ಉಲ್ಲೇಖಿಸಿದರು.

ಗೌರವ ಅತಿಥಿಗಳಾದ ಡಾ. ರೋಹಿಣಿ ಪುಟ್ಟೇಗೌಡ ಮತ್ತು ಶ್ರೀಮತಿ ಹಮೀದಾ ಖಾದರ್ ಅವರು ಆರೋಗ್ಯ, ಕಲ್ಯಾಣ ಮತ್ತು ಶಿಕ್ಷಣ ಕುರಿತ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಇದೇ ಸಂದರ್ಭದಲ್ಲಿ ಐಸಿಸಿ ಪ್ರತಿನಿಧಿಗಳು, ಕತಾರ್‌ನ ಭಾರತೀಯ ಸಂಘಟನೆಗಳು ಹಾಗೂ ಕರ್ನಾಟಕ ಮೂಲದ ವಿವಿಧ ಭ್ರಾತೃ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಐಸಿಸಿ ಉಪಾಧ್ಯಕ್ಷ ಶ್ರೀ ಶಂತನು ದೇಶಪಾಂಡೆ, ಕರ್ನಾಟಕ ಸಂಘದ ಸಲಹಾ ಸಮಿತಿಯ ಸದಸ್ಯರಾದ ಹಾಗೂ ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ಶ್ರೀ ದೀಪಕ್ ಶೆಟ್ಟಿ, ಸಂಘದ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಅರುಣ್ ಕುಮಾರ್, ಶ್ರೀ ವೀರೇಶ್ ಮನ್ನಂಗಿ, ಡಾ. ಸಂಜಯ್ ಕುದರಿ ಹಾಗೂ ಐಸಿಸಿ ಮಾಜಿ ಅಧ್ಯಕ್ಷೆ ಶ್ರೀಮತಿ ಮಿಲನ್ ಅರುಣ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮನಿಸಿದವರಿಗಾಗಿ ವಿವಿಧ ಮನರಂಜನಾ ಆಟಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವು ಸಂಭ್ರಮ, ಪರಸ್ಪರ ಆತ್ಮೀಯತೆ ಮತ್ತು ಸಮುದಾಯ ಬಾಂಧವ್ಯದಿಂದ ಕಂಗೊಳಿಸಿತು.

 

ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕ ಸಂಘ ಕತಾರ್ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಭಾವನಾ ಅವರು ವಂದನಾರ್ಪಣೆ ಸಲ್ಲಿಸಿದರು. ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸ್ಥಳಾವಕಾಶ ಕಲ್ಪಿಸಿದ ವೈಬ್ರೆಂಟ್ ಇಂಡಸ್ಟ್ರಿಯಲ್ ಸೇಫ್ಟಿ ಟ್ರೈನಿಂಗ್ ಅಕಾಡೆಮಿಗೆ ಕರ್ನಾಟಕ ಸಂಘ ಕತಾರ್ ಕೃತಜ್ಞತೆ ಸಲ್ಲಿಸಿತು. ಜೊತೆಗೆ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ನ್ಯೂ ರಿಷಾ ಲೇಡೀಸ್ಸಲೂನ್, ಎಫ್‌ಎನ್‌ಪಿ.ಕ್ಯೂಎ, ಓನ್ಲಿ ಕಾಫಿ ಹಾಗೂ ಪ್ರಿಂಟ್ಶಾಪ್ ಸರ್ವೀಸಸ್ ಸಂಸ್ಥೆಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿತು.

WhatsApp

Join Now

Telegram

Join Now

Instagram

Join Now