--Ads--

ಯುದ್ಧ – ಭೂಕಂಪ ಮುಂತಾದ ಅವಘಡಗಳು ಅಂದು, ಇಂದು, ಮುಂದು……… ಲೇಖನ ವಿವೇಕಾನಂದ ಎಚ್ ಕೆ

On: June 12, 2026 1:52 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಯುದ್ಧ – ಭೂಕಂಪ ಮುಂತಾದ ಅವಘಡಗಳು ಅಂದು, ಇಂದು, ಮುಂದು………..

ಜಗತ್ತನ್ನು ಸದಾ ಕಾಡುವ ಪ್ರಾಕೃತಿಕ ಮತ್ತು ತಾಂತ್ರಿಕ ಅವಘಡಗಳು. ಬದುಕಿನ ಅನಿವಾರ್ಯ, ಆಕಸ್ಮಿಕ, ಅನಾಹುತಗಳು……

ವಿಶ್ವದ ಯಾವ ದೇಶಗಳು ಇದರಿಂದ ಮುಕ್ತವಾಗಿಲ್ಲ. ಬಿಸಿಲು, ಮಳೆ, ಬಿರುಗಾಳಿ, ಶೀತಗಾಳಿ, ಚಂಡಮಾರುತ, ಭೂಕಂಪ, ಪ್ರವಾಹ, ಬರ, ಜ್ವಾಲಾಮುಖಿ, ಹಿಮ ಕುಸಿತ, ಮೇಘ ಸ್ಪೋಟ, ಕಾಳ್ಗಿಚ್ಚು, ಭೂಕುಸಿತ ಹೀಗೆ ಇನ್ನೂ ಕೆಲವು ಪ್ರಾಕೃತಿಕ ಅನಾಹುತಗಳು ಜೀವ ಜಗತ್ತು ಅನುಭವಿಸಬೇಕಾದ ಅನಿವಾರ್ಯ ಆಪತ್ತುಗಳು.

ಇದನ್ನು ಹೊರತುಪಡಿಸಿ ಸ್ವಯಂಕೃತಾಪರಾಧದಿಂದ ಜೀವಲೋಕ ನರಳುವುದು ಯುದ್ದ, ಹೊಡೆದಾಟ, ಅಪಘಾತ, ಅನಾರೋಗ್ಯ, ಆತ್ಮಹತ್ಯೆ, ಬಾಂಬು, ಬಂದೂಕು, ಅಣು ವಿಕಿರಣಗಳು, ವಿಷ ಪ್ರಾಷನ, ಕೊಲೆ, ಕೋಮು ಗಲಭೆಗಳು, ಭಯೋತ್ಪಾದನೆ ಮುಂತಾದವು ಸೇರುತ್ತದೆ. ಇದರಲ್ಲಿ ಒಂದಷ್ಟು ತಾಂತ್ರಿಕ ದೋಷಗಳು, ಮತ್ತೊಂದಿಷ್ಟು ನಿರ್ಲಕ್ಷ್ಯಗಳು, ಕೆಲವು ವಿದ್ವಂಸಕ ಕೃತ್ಯಗಳು ಸೇರಿರುತ್ತದೆ.

ಅಪಘಾತಗಳನ್ನು – ಆಕಸ್ಮಿಕಗಳನ್ನು ತಡೆಯಲು ತಂತ್ರಜ್ಞಾನ ಉಪಯೋಗಿಸಿಕೊಂಡು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಆದರೂ ಅದರಿಂದ ಸಂಪೂರ್ಣ ಮುಕ್ತರಾಗಲು ಸಾಧ್ಯವಾಗಿಲ್ಲ.

ರಷ್ಯಾದ ಚರ್ನೋಬಿಲ್ ಅಣು ದುರಂತ, ಭೋಪಾಲ್ ಕಾರ್ಬೈಡ್ ಗ್ಯಾಸ್ ದುರಂತ, ಅನೇಕ ವಿಮಾನ, ರೈಲು, ಬಸ್ಸು, ಗಣಿ ದುರಂತಗಳು ಈಗಲೂ ವಿಶ್ವದ ಮೂಲೆ ಮೂಲೆಗಳಿಂದ ಸುದ್ದಿಯಾಗುತ್ತಲೇ ಇದೆ.

ಇತ್ತೀಚಿನ ಉಕ್ರೇನ್ ರಷ್ಯಾ ಯುದ್ಧ, ಅಮೆರಿಕ ಇಸ್ರೇಲ್ ಇರಾನ್ ನಡುವಿನ ಯುದ್ಧ ಇದಕ್ಕೆ ಹೊಸ ಸೇರ್ಪಡೆ ಅಷ್ಟೇ…

ವಿಧ್ವಂಸಕ ಮತ್ತು ನಿರ್ಲಕ್ಷ್ಯದ ಕೃತ್ಯಗಳನ್ನು ಹೊರತುಪಡಿಸಿದ ಎಲ್ಲಾ ಅಪಘಾತಗಳನ್ನು ಸಹಜ ಘಟನೆಗಳು ಮತ್ತು ಸ್ವಾಭಾವಿಕ ಸಾವುಗಳು ಎಂದೇ ನಾವು ಮನಸ್ಸಿಗೆ ಒಪ್ಪಿಸಬೇಕು. ಏಕೆಂದರೆ ಅದರ ನಿಯಂತ್ರಣ ನಮ್ಮ ಕೈ ಮೀರಿರುತ್ತದೆ.

ಬದುಕೊಂದು ಚಲಿಸುವ ನಿರಂತರ ಪ್ರಕ್ರಿಯೆ. ‌ಸುಮ್ಮನೆ ನಿಂತ ನೆಲೆಯಲ್ಲಿಯೇ ನಿಲ್ಲಲು ಸಾಧ್ಯವಿಲ್ಲ. ಮುಂದುವರಿಯುತ್ತಲೇ ಇರಬೇಕು. ಹಾಗೆ ಮುಂದುವರಿಯ ಬೇಕಾದರೆ ಸವಾಲುಗಳನ್ನು ಎದುರಿಸುವುದು ಅನಿವಾರ್ಯ. ಆ ಸವಾಲುಗಳಲ್ಲಿ ಅಘಡಗಳು ಸಹ ಒಂದು ಭಾಗ.

” ನಡೆಯುವವರು ಎಡವದೆ ಕುಳಿತಿರುವವರು ಎಡವುವರೇ ” ಎಂಬ ಮಾತಿನಂತೆ ಚಲನೆಯಲ್ಲಿ ಅಪಘಾತಗಳು ಸಹಜ. ಅಪಘಾತಗಳು ಆಗುತ್ತವೆ ಎಂದು ಮನೆಯೊಳಗೇ ಕುಳಿತಿರಲು ಸಾಧ್ಯವಿಲ್ಲ. ಸಾಧ್ಯವಿರುವ ಎಚ್ಚರಿಕೆಯೊಂದಿಗೆ ಮುಂದುವರಿಯಲೇ ಬೇಕು.

ಯಾವುದೇ ದುರಂತದಲ್ಲಿ ಸುಮಾರು ‌ಜನರು ತೀರಿಕೊಂಡು, ಸಾವಿರ ಜನರು ಗಾಯಗೊಂಡ‌ ಸಂದರ್ಭದಲ್ಲಿ ಮನಸ್ಸು ತುಂಬಾ ಘಾಸಿಗೊಂಡಾಗ, ಸಾಮಾನ್ಯ ಜನರಾದ ನಮ್ಮ ಪ್ರತಿಕ್ರಿಯೆ ಹೇಗೆ ಮತ್ತು ಆ ಸನ್ನಿವೇಶದಲ್ಲಿ ನಾವು ಮಾಡಬಹುದಾದದ್ದು ಏನು ಎಂದು ಯೋಚಿಸಿದಾಗ ಸ್ವಲ್ಪ ಮಾನವೀಯ ಸ್ಪಂದನೆ ಅಥವಾ ಅವಕಾಶ ಇರುವವರು ನೊಂದವರಿಗೆ ಸ್ವಲ್ಪ ಆರ್ಥಿಕ ಸಹಾಯ ಮಾಡುವುದು ಬಿಟ್ಟರೆ ಹೆಚ್ಚಿನ ಹೊಣೆಗಾರಿಕೆ ನಿರ್ವಹಿಸಲು ಸಾಧ್ಯವಿಲ್ಲ ಎನಿಸಿತು.

ಕಾರಣ ಅವಘಡಗಳು ಕೂಡಾ ಈ ಸಮಾಜದಲ್ಲಿ ಅನಿವಾರ್ಯ ಆಕಸ್ಮಿಕಗಳು ಎಂದೇ ಭಾವಿಸಬೇಕು. ಏಕೆಂದರೆ ಬದುಕಿನ ಚಲನೆಯಲ್ಲಿ ತಂತ್ರಜ್ಞಾನದ ಅವಲಂಬನೆಯಿಂದ ಅನುಭವಿಸುವುದು ಕೇವಲ ಸುಖ – ಆರಾಮ ಮಾತ್ರವಾಗಿರದೆ ಅದರ ಕಷ್ಟ – ನೋವುಗಳನ್ನು ಸ್ವೀಕರಿಸಬೇಕು. ನಿರ್ಲಕ್ಷ್ಯ, ತಾಂತ್ರಿಕ ದೋಷ, ವಿದ್ವಂಸಕ ಕೃತ್ಯಗಳಿದ್ದಲ್ಲಿ ಅದನ್ನು ಎಚ್ಚರಿಕೆಯಿಂದ ಸರಿಪಡಿಸಿಕೊಂಡು ಮುಂದುವರಿಯಲೇ ಬೇಕು. ಸಂಪೂರ್ಣ ನಿಯಂತ್ರಣ ಅಸಾಧ್ಯ.

ರೈಲು, ಬಸ್ಸು, ವಿಮಾನ, ಕಾರು, ದ್ವಿಚಕ್ರ ವಾಹನ, ಪ್ರಯಾಣದಲ್ಲಿ ಅಷ್ಟೇ ಏಕೆ ರಸ್ತೆಯಲ್ಲಿ ನಡೆದಾಡುವಾಗ ಸಹ ಇತರ ವಾಹನ ಅನಿರೀಕ್ಷಿತವಾಗಿ ಬಂದು ನಮಗೆ ಘಾಸಿ ಮಾಡಿದರೆ ನಾವು ಮಾಡಬಹುದಾದದ್ದು ಏನೂ ಇಲ್ಲ.

ಇಡೀ ವಿಶ್ವದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಅಪಘಾತಗಳಲ್ಲಿ ಸಾಯುತ್ತಾರೆ. ಕೆಲವೊಮ್ಮೆ ಸಾವಿನ ಸಂಖ್ಯೆಗಳಲ್ಲಿ ಮತ್ತು ಅಪಘಾತಗಳ ತೀವ್ರತೆಯಲ್ಲಿ ಒಂದಷ್ಟು ವ್ಯತ್ಯಾಸವಾಗಬಹುದೇ ಹೊರತು ಅದು ಆಧುನಿಕ ಜಗತ್ತಿನ ಅನಿವಾರ್ಯ ಆಕಸ್ಮಿಕ.

ಹಾಗೆಯೇ ಯುದ್ಧ, ಭಯೋತ್ಪಾದನೆ, ಸರ್ಕಾರಗಳ ದೌರ್ಜನ್ಯ ಸಹ ಅನಿವಾರ್ಯಗಳೇನೋ ಎನಿಸುತ್ತಿದೆ. ಅದನ್ನು ಸಹಿಸಿಕೊಂಡು ಮುಂದೆ ಹೋಗುವುದು ಸಹ ಅನಿವಾರ್ಯವೇ. ಆದರೆ ಪ್ರತಿಭಟನೆಯ ಧ್ವನಿಗಳು ಮಾತ್ರ ಅಡಗದಿರಲಿ. ಶಾಂತಿಯ ಮಂತ್ರಗಳು ನಿಲ್ಲದಿರಲಿ. ಜೊತೆಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಹೊಸ ವಿಧಾನಗಳ ಮೂಲಕ ಸಮಾಜ ಶಾಂತಿ ಸೌಹಾರ್ದದಿಂದ ಮುನ್ನಡೆಯಲು ಬೇಕಾದ ಹೊಸ ಮಾರ್ಗಗಳ ಹುಡುಕಾಟ ಸಹ ನಡೆಯಲಿ……

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಎಚ್.ಕೆ.
9844013068…..
9663750451……

WhatsApp

Join Now

Telegram

Join Now

Instagram

Join Now