ವಿಜಯ ದರ್ಪಣ ನ್ಯೂಸ್….
ತಿರಂಗೆಯ ನೆರಳಲ್ಲಿ
ನನ್ನ ಭಾರತ

ಇಂದು ಮುಂಜಾನೆ
ಸೂರ್ಯ ಸ್ವಲ್ಪ ಬೇಗನೆ ಎದ್ದಂತೆ ಅನಿಸಿತು
ಆಕಾಶದ ನೀಲಿಯ ನಡುವೆ
ತಿರಂಗೆಯ ಬಣ್ಣಗಳು ಮೂಡಿದಾಗ
ಭಾರತವೇ ನಗುತ್ತಿರುವಂತೆ ಕಂಡಿತು
ಈ ಮಣ್ಣಿನ ಕಣಕಣದಲ್ಲೂ
ಒಂದು ಕಥೆಯಿದೆ
ಪ್ರತಿ ಹನಿಯ ಬೆವರಿನಲ್ಲೂ_
ಒಬ್ಬ ತ್ಯಾಗಿಯ ನೆನಪಿದೆ
ಒಮ್ಮೆ ಇದೇ ನೆಲದಲ್ಲಿ
ಸಂಕೋಲೆಯ ಸದ್ದು ಕೇಳುತ್ತಿತ್ತು,
ಇಂದು ಇದೇ ನೆಲದಲ್ಲಿ
ಸ್ವಾತಂತ್ರ್ಯದ ಘೋಷ ಮೊಳಗುತ್ತಿದೆ.
ಯಾರೋ ಮನೆ ಬಿಟ್ಟರು
ಯಾರೋ ಬಂಧನ ಅನುಭವಿಸಿದರು
ಯಾರೋ ನಗುತ್ತಲೇ ಪ್ರಾಣ ಕೊಟ್ಟರು
ಅವರ ತ್ಯಾಗದ ನೆರಳಲ್ಲೇ
ನಾವು ಇಂದು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ
ಆದರೆ ಒಂದು ಪ್ರಶ್ನೆ
ಇಂದು ನನ್ನ ಮನಸ್ಸನ್ನು ಕಾಡುತ್ತದೆ
ಸ್ವಾತಂತ್ರ್ಯವೆಂದರೆ
ಕೇವಲ ಧ್ವಜ ಹಾರಿಸುವುದೇ?
ರಾಷ್ಟ್ರಗೀತೆ ಹಾಡುವುದೇ?
ಒಂದು ದಿನ ದೇಶಭಕ್ತಿ ತೋರಿಸಿ
ಮತ್ತೊಂದು ದಿನ ಮರೆತುಬಿಡುವುದೇ?
ಇಲ್ಲ
ಹಸಿದವನಿಗೆ ಅನ್ನ ಸಿಕ್ಕಾಗ
ಬಡವನಿಗೆ ನ್ಯಾಯ ಸಿಕ್ಕಾಗ
ರೈತನ ಬೆವರಿಗೆ ಬೆಲೆ ಸಿಕ್ಕಾಗ
ಯುವಕನ ಕೈಗೆ ಉದ್ಯೋಗ ಸಿಕ್ಕಾಗ
ಸಾಮಾನ್ಯನ ಧ್ವನಿಗೆ
ಆಡಳಿತದಲ್ಲಿ ಬೆಲೆ ಸಿಕ್ಕಾಗ
ಅಲ್ಲೇ ಸ್ವಾತಂತ್ರ್ಯ
ನಿಜವಾದ ಅರ್ಥ ಪಡೆಯುತ್ತದೆ.
ರಾಜಕೀಯವೆಂದರೆ
ಕೇವಲ ಅಧಿಕಾರದ ಆಟವಲ್ಲ
ಜನರ ಬದುಕಿನ ಜೊತೆ
ನೇರವಾಗಿ ಬೆಸೆದುಕೊಂಡಿರುವ ಹೊಣೆ.
ಪದವಿ ಶಾಶ್ವತವಲ್ಲ
ಅಧಿಕಾರ ಶಾಶ್ವತವಲ್ಲ
ಆದರೆ ಜನರಿಗಾಗಿ ಮಾಡಿದ ಕೆಲಸ
ಕಾಲ ಕಳೆದರೂ ಉಳಿಯುತ್ತದೆ
ಮತ ಕೇಳುವ ಸಮಯದಲ್ಲಿ
ಜನರ ಮನೆ ಬಾಗಿಲಿಗೆ ಹೋಗುವುದು ಸುಲಭ
ಮತ ಸಿಕ್ಕ ನಂತರವೂ
ಅದೇ ಬಾಗಿಲಿನ ನೋವನ್ನು ನೆನಪಿಟ್ಟುಕೊಳ್ಳುವುದು.
ನಿಜವಾದ ನಾಯಕತ್ವ
ಸತ್ಯಮೇವ ಜಯತೇ
ಎಂಬ ಮಾತು ಕೇವಲ ನುಡಿಯಾಗದೆ,
ಆಡಳಿತದ ದಾರಿಯಾಗಲಿ
ವಸುದೈವ ಕುಟುಂಬಕಂ
ಎಂಬ ಭಾವನೆ ಕೇವಲ ಪುಸ್ತಕದಲ್ಲಿರದೆ,
ನಮ್ಮ ಬದುಕಿನಲ್ಲೂ ಕಾಣಿಸಲಿ
ಜಾತಿ ಬೇರೆ ಇರಬಹುದು
ಮತ ಬೇರೆ ಇರಬಹುದು
ಭಾಷೆ ಬೇರೆ ಇರಬಹುದು;
ಆದರೆ ಈ ಮಣ್ಣಿನ ಮೇಲೆ
ನಮ್ಮ ಹೆಜ್ಜೆಯ ಗುರುತು ಒಂದೇ
*ನಾವು ಭಾರತೀಯರು
ಕೊಡಗಿನ ಬೆಟ್ಟಗಳ ನಡುವೆ
ಮಂಜು ಇಳಿಯುವಾಗಲೂ
ಕಾವೇರಿ ತಾಯಿಯ ಹರಿವಿನಲ್ಲೂ
ರೈತನ ಹೊಲದ ಹಸಿರಿನಲ್ಲೂ
ಸೈನಿಕನ ಎದೆಯ ಧೈರ್ಯದಲ್ಲೂ
*ನನಗೆ ನನ್ನ ಭಾರತ ಕಾಣುತ್ತದೆ
ನಮ್ಮ ಹಿರಿಯರು
ಸ್ವಾತಂತ್ರ್ಯವನ್ನು ನಮಗೆ ಕೊಟ್ಟರು
ನಾವು ನಮ್ಮ ಮಕ್ಕಳಿಗೆ
ಎಂತಹ ಭಾರತವನ್ನು ಕೊಡುತ್ತೇವೆ
ಎಂಬುದೇ ಈಗ ನಮ್ಮ ಪರೀಕ್ಷೆ
ಆದ್ದರಿಂದ ಇಂದು
ತಿರಂಗೆಯ ಮುಂದೆ ನಿಂತು
ಒಂದು ಮಾತು ಹೇಳೋಣ
ದೇಶವನ್ನು ಟೀಕಿಸುವ ಮೊದಲು
ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎಂದು ಯೋಚಿಸೋಣ
ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಧೈರ್ಯ ಇರಲಿ
ತಪ್ಪು ಕಂಡಾಗ ಹೇಳುವ ಧೈರ್ಯ ಇರಲಿ
ಆದರೆ ದೇಶದ ಹಿತದ ಮುಂದೆ
ನಮ್ಮ ಸ್ವಾರ್ಥ ಹಿಂದೆ ಸರಿಯಲಿ
ನನ್ನ ಊರು ಬೆಳೆಯಲಿ
ನನ್ನ ಜಿಲ್ಲೆ ಬೆಳೆಯಲಿ
ನನ್ನ ಕರ್ನಾಟಕ ಬೆಳೆಯಲಿ
ನನ್ನ ಭಾರತ ಇನ್ನಷ್ಟು ಎತ್ತರಕ್ಕೆ ಏರಲಿ
ವೀರರ ತ್ಯಾಗಕ್ಕೆ
ನಮ್ಮ ಶಿರಸಾ ನಮನ_
ಭಾರತಮಾತೆಯ ಪಾದಕ್ಕೆ
ನಮ್ಮ ಹೃದಯದ ಅರ್ಪಣ.
ಸ್ವಾತಂತ್ರ್ಯವೆಂದರೆ
ನಮಗೆ ಸಿಕ್ಕ ಹಕ್ಕು ಮಾತ್ರವಲ್ಲ
ಮುಂದಿನ ಪೀಳಿಗೆಗೆ
ನಾವು ಉಳಿಸಬೇಕಾದ ಹೊಣೆ
ತಿರಂಗೆಯ ಬಣ್ಣಗಳು
ಆಕಾಶದಲ್ಲಿ ಹಾರುತ್ತಿರಲಿ
ಭಾರತದ ಕೀರ್ತಿ
ಜಗದಗಲ ಮೊಳಗುತ್ತಿರಲಿ
ನಮ್ಮ ಹೃದಯದಲ್ಲಿ ದೇಶ ಇರಲಿ
ನಮ್ಮ ಕಾಯಕದಲ್ಲಿ ದೇಶ ಇರಲಿ
ನಮ್ಮ ಮಾತಿನಲ್ಲಿ ಸತ್ಯ ಇರಲಿ
ನಮ್ಮ ಬದುಕಿನಲ್ಲಿ ಮಾನವೀಯತೆ ಇರಲಿ
ಇದು ಕೇವಲ ಸ್ವಾತಂತ್ರ್ಯ ದಿನವಲ್ಲ
ನಮ್ಮ ಹೊಣೆಗಾರಿಕೆಯನ್ನು ನೆನಪಿಸುವ ದಿನ
ವೀರರ ತ್ಯಾಗ. ಮರೆಯದಿರೋಣ
ಭಾರತದ ಭವಿಷ್ಯವನ್ನು ಕಾಪಾಡೋಣ
ವಂದೇ ಮಾತರಂ
ಜೈ ಹಿಂದ್
ಜೈ ಭಾರತ 🇮🇳
✍️ ಎಂ ಎಂ ದಾವುದ್











