--Ads--

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ

On: October 24, 2026 3:17 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್………

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ

ಡಾ. ಹೆಗ್ಗಡೆಯವರ ಸೇವೆ-ಸಾಧನೆ ವಿಶ್ವಮಾನ್ಯವಾಗಿದೆ. ರಾಘವೇಂದ್ರ ಶ್ರೀನಿವಾಸ ಭಟ್

ಧರ್ಮಸ್ಥಳ: ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗನುಗುಣವಾಗಿ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಸಾತ್ವಿಕತ್ಯಾಗದೊಂದಿಗೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವಾಕಾರ್ಯ ಹಾಗೂ ಸಾಧನೆ ಆದರ್ಶ ಹಾಗೂ ಅನುಕರಣೀಯವಾಗಿದ್ದು ವಿಶ್ವಮಾನ್ಯವಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಹೇಳಿದರು.

ಅವರು ಶನಿವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.

ಸಮಾಜಮುಖಿ ಚಿಂತನೆಯೊಂದಿಗೆ, ಧರ್ಮದ ತಳಹದಿಯಲ್ಲಿ ಮಾನವೀಯ ಮೌಲ್ಯಗಳೊಂದಿಗೆ ವಿಶೇಷವಾಗಿ ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಅಸಹಾಯಕರಿಗೆ ಅಭಯದಾನದೊಂದಿಗೆ ಡಾ.ಹೆಗ್ಗಡೆಯವರು ಮಾಡುತ್ತಿರುವ ಸಮಾಜಮುಖಿ ಸೇವಾಕಾರ್ಯಗಳು ಅಪೂರ್ವವಾಗಿದ್ದು ಅವರಿಗೆ “ರಾಜರ್ಷಿ” ಬಿರುದು ಅನ್ವರ್ಥಕವೂ, ಅರ್ಥಪೂರ್ಣವು ಆಗಿದೆ ಎಂದರು.

ಧರ್ಮಸ್ಥಳಕ್ಕೂ ಕರ್ಣಾಟಕ ಬ್ಯಾಂಕ್‌ಗೂ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಅವರು ಡಾ. ಹೆಗ್ಗಡೆಯವರು ಹಾಗೂ ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ನಿರ್ದೇಶಕರಾಗಿ ಬ್ಯಾಂಕ್‌ನ ಪ್ರಗತಿಗೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿ ರಾಜಯೋಗಿಯಾಗಿಯೂ, ಕರ್ಮಯೋಗಿಯಾಗಿಯೂ ಸಮಾಜಕ್ಕಾಗಿ ಡಾ.ಹೆಗ್ಗಡೆಯವರು ಮಾಡುತ್ತಿರುವ ಸೇವೆಯನ್ನು ಕೃತಜ್ಞತೆಯೊಂದಿಗೆ ಉಪಕಾರಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸಂಸ್ಥೆ ಹೊಸನೆಲ ಎಸ್ಟೇಟ್‌ನ ಪ್ರಬಂಧಕ ಶ್ರೀವರ್ಮ ಸೇರಿದಂತೆ 26 ಮಂದಿ ಹಿರಿಯ ನೌಕರರನ್ನು ಡಾ.ಹೆಗ್ಗಡೆಯವರು ಸನ್ಮಾನಿಸಿದರು.

ಡಾ. ಪವನ್ ಬರೆದ “ಮುಹೂರ್ತ ಪದವೀ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಡಾ. ಹೆಗ್ಗಡೆಯವರ ಹೊಸ ಯೋಜನೆಗಳು:
ಶ್ರವಣಬೆಳಗೊಳದಲ್ಲಿ ವಿದ್ಯಾರ್ಥಿನಿ
ನಿಲಯ ನಿರ್ಮಾಣ,

ಉಜಿರೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಕ್ರೀಡಾವಸತಿ ನಿಲಯ
ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜು ಪ್ರಾರಂಭ
ಶಿಕ್ಷಣ ಸಂಸ್ಥೆಗಳ ಹಳೇಕಟ್ಟಡಗಳ ನವೀಕರಣ
ಉಜಿರೆಯಲ್ಲಿ ಸಿಂಥೆಟಿಕ್ ಟ್ರಾಕ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಅನುಕೂಲಕ್ಕಾಗಿ ಎ.ಟಿ.ಎಂ. ಬಳಕೆ
 ಕೆರೆಗಳ ಪುನಶ್ಚೇತನ
ಉಜಿರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ
ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸೌಲಭ್ಯ ಆರಂಭ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ (Cath Lab) ಸೌಲಭ್ಯವನ್ನು ಪ್ರಾರಂಭಿಸಲಾಗುತ್ತದೆ.

ಈ ಸೌಲಭ್ಯದ ಮೂಲಕ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಆಂಜಿಯೋಗ್ರಾಮ್ (Angiogram) ಮತ್ತು ಆಂಜಿಯೋಪ್ಲಾಸ್ಟಿ (Angioplasty) ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿದ್ದು ಯೋಜನೆಗಳನ್ನು ಸದ್ಯದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ಡಾ. ಹೆಗ್ಗಡೆಯವರು ಪ್ರಕಟಿಸಿದರು.

ಅಲ್ಲದೆ ಭಾನುವಾರ, ಸೋಮವಾರಗಳಲ್ಲಿ ಧರ್ಮಸ್ಥಳಕ್ಕೆ ಬಂದು ಚಿಕಿತ್ಸೆಗಾಗಿ ನೆರವು ಕೋರಿದವರಿಗೆ ಸೂಕ್ತ ಸಹಾಯ ನೀಡಲಾಗುತ್ತದೆ.

ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆ ಹಾಗೂ ಧರ್ಮಸ್ಥಳ, ಪರೀಕ ಮತ್ತು ಬೆಂಗಳೂರಿನಲ್ಲಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಪಾರಂಪರಿಕ ಚಿಕಿತ್ಸಾ ಪದ್ಧತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು.

ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್ ಮತ್ತು ಡಿ. ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡಬಿದ್ರೆ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಕಚೇರಿ ಪ್ರಬಂಧಕ ಪಾರ್ಶ್ವನಾಥ್ ಮೊದಲಾದವರು ಇದ್ದರು.

ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು.

ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ಕಾರ್ಯಕ್ರಮ ನಿರ್ವಹಿಸಿದರು.

WhatsApp

Join Now

Telegram

Join Now

Instagram

Join Now