ವಿಜಯ ದರ್ಪಣ ನ್ಯೂಸ್…..
ನಗರದ ವಾಸವಿ ರಸ್ತೆಯ ಕಾಮಗಾರಿ ವಿಳಂಬಕ್ಕೆ ಬೇಸರ, ಶೀಘ್ರವಾಗಿ ಮುಗಿಸಿ: ಶಾಸಕಬಿ.ಎನ್.ರವಿಕುಮಾರ್
ಶಿಡ್ಲಘಟ್ಟ : ನಗರದ ವಾಸವಿ ರಸ್ತೆಯಲ್ಲಿ ಅಭಿವೃದ್ಧಿಗೆಂದು ಇದ್ದ ರಸ್ತೆಯನ್ನು ಕಿತ್ತು ಹಾಕಿ ತಿಂಗಳುಗಳೇ ಕಳೆದಿದ್ದು ಕುಡಿಯುವ ನೀರಿನ ಪೈಪ್ಲೈನ್, ಚರಂಡಿ ಎಲ್ಲವನ್ನೂ ಕಿತ್ತು ಹಾಕಿದ ಕಾರಣ ಸಾರ್ವಜನಿಕರಿಗೆ ಹಲವು ಸಮಸ್ಯೆಗಳು ಎದುರಾಗಿವೆ,ಜಲ ಜೀವನ್ ಮಿಷನ್ನ ನೀರಿನ ಪೈಪು ಹಾಗೂ ಒಳಚರಂಡಿ ಪೈಪ್ ಅಳವಡಿಕೆ ಬಿಟ್ಟರೆ ಉಳಿದ ಕೆಲಸ ನಡೆಯದೆ ನೆನೆಗುದಿಗೆ ಬಿದ್ದಿತ್ತು ಈ ಬಗ್ಗೆ ಕಾಮಗಾರಿ ಪರಿಶೀಲಿಸಲು ಶಾಸಕರು ಬೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ಶೀಘ್ರವಾಗಿ ಮುಗಿಸುವಂತೆ ತರಾಟೆಗೆ ತೆಗೆದುಕೊಂಡರು.
ನಗರದ ವಾಸವಿ ರಸ್ತೆಯಲ್ಲಿ ಹಲವು ದಿನಗಳಿಂದ ಕಾಮಗಾರಿ ನಡೆಸದೆ ನೆನೆಗುದಿಗೆ ಬಿದ್ದಿದ್ದ ಕಾರಣ ವ್ಯಾಪಾರ-ವಹಿವಾಟು ಹಾಗೂ ದಿನನಿತ್ಯದ ಬದುಕಿಗೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದ ಹಿನ್ನೆಲೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ವಾಸವಿ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರಸಭೆ ಪೌರಾಯುಕ್ತ ಜಿ.ಅಮೃತಗೌಡ ಹಾಗೂ ಇತರೆ ಅಧಿಕಾರಿಗಳೊಂದಿಗೆ ವಾಸವಿ ರಸ್ತೆಗೆ ಭೇಟಿ ನೀಡಿದ ಶಾಸಕರ ಬಳಿ ಅಲ್ಲಿನ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಶೀಘ್ರವಾಗಿ ಕಾಮಗಾರಿ ಮುಗಿಸಿಕೊಡಬೇಕೆಂದು ಮನವಿ ಮಾಡಿದರು.

ಕಾಮಗಾರಿ ವಿಳಂಭದಿಂದ ಈ ರಸ್ತೆಯಲ್ಲಿನ ಎಲ್ಲಾ ಅಂಗಡಿಗಳು ತಿಂಗಳುಗಳಿಂದ ಬಾಗಿಲು ಹಾಕಿದ್ದವು , ಬಾಗಿಲು ತೆಗೆದರೂ ವ್ಯಾಪಾರಕ್ಕೆ ಯಾರೂ ಬರುತ್ತಿಲ್ಲ ಮನೆ-ಅಂಗಡಿಗಳ ತ್ಯಾಜ್ಯ ನೀರು ಬೀದಿಗೆ ಹರಿದು ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ದೂರಿದರು.
ನಾಗರಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ಬಿ.ಎನ್.ರವಿಕುಮಾರ್ ಅವರು, ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ ಒಳಚರಂಡಿ ಹಾಗೂ ಜಲ ಜೀವನ್ ಮಿಷನ್ನ ಕುಡಿಯುವ ನೀರಿನ ಯೋಜನೆಯನ್ನೂ ಏಕಕಾಲಕ್ಕೆ ಪೂರ್ಣಗೊಳಿಸಬೇಕಿದೆ ಎಂದು ವಿವರಿಸಿದರು.
ತಾಂತ್ರಿಕ ಸಮಸ್ಯೆಯ ಕಾರಣ ಕಾಮಗಾರಿ ವಿಳಂಬವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಲಾಗಿದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ನಾಳೆಯಿಂದಲೇ ಕಾಮಗಾರಿ ಆರಂಭಿಸಿ ಶೀಘ್ರ ಮುಗಿಸುವಂತೆ ಸೂಚಿಸಲಾಗಿದೆ ಎಂದು ಶಾಸಕರು ಸ್ಥಳೀಯ ನಿವಾಸಿಗಳಿಗೆ ಭರವಸೆ ನೀಡಿದರು.
ಈ ವೇಳೆ ಕಾರ್ಯಪಾಲಕ ಅಭಿಯಂತರ ಕೆ.ಮಾಧವಿ, ಪೌರಾಯುಕ್ತೆ ಅಮೃತಾ ಗೌಡ , ಸುಧಾಕರ್ ,ಕೆ.ಎನ್.ಸುಬ್ಬಾರೆಡ್ಡಿ,ಮುಖಂಡರಾದ ಕೆ.ಲಕ್ಷ್ಮೀನಾರಾಯಣರೆಡ್ಡಿ, ವೆಂಕಟಸ್ವಾಮಿ, ಮಂಜುನಾಥ್, ಎಸ್.ಎಂ.ರಮೇಶ್, ನವೀನ್ ಕುಮಾರ್, ರಾಘವೇಂದ್ರ, ಬಾಲಕೃಷ್ಣ, ರಾಜೇಶ್, ಸುರೇಶ್ ಮತ್ತಿತರರು ಹಾಜರಿದ್ದರು.









