ವಿಜಯ ದರ್ಪಣ ನ್ಯೂಸ್…..
ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಆಷಾಢ ಶನಿವಾರದ ವಿಶೇಷ ಪೂಜೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಸುಪ್ರಸಿದ್ಧ ಅಭಯ ಶನೇಶ್ವರಸ್ವಾಮಿ ಕ್ಷೇತ್ರದಲ್ಲಿ ಆಷಾಢ ಮಾಸದ ಎರಡನೇ ಶನಿವಾರದ ಪ್ರಯುಕ್ತ ಶ್ರೀ ಶನಿ ಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಭಕ್ತಿ-ಶ್ರದ್ಧೆಯಿಂದ ನೆರವೇರಿದವು.
ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ಎಲ್. ವೀರ ಬ್ರಹ್ಮಚಾರ್ ಗುರೂಜಿಗಳು ಮಾತನಾಡಿ, ಆಷಾಢ ಮಾಸದಲ್ಲಿ ಶನಿವಾರದಂದು ಶನಿ ದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಶನಿ ಭಗವಂತನಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿ, ಎಳ್ಳಿನ ಎಣ್ಣೆಯ ದೀಪ ಹಚ್ಚುವುದು, ಎಳ್ಳಿನ ದಾನ ಮಾಡುವುದು ಹಾಗೂ ಪ್ರಾರ್ಥನೆ ಸಲ್ಲಿಸುವುದರಿಂದ ಜೀವನದಲ್ಲಿನ ಕಷ್ಟ-ಕಾರ್ಪಣ್ಯಗಳು ನಿವಾರಣೆಯಾಗುತ್ತವೆ ಎಂಬುದು ಶಾಸ್ತ್ರಗಳಲ್ಲಿಯೂ ಉಲ್ಲೇಖವಾಗಿದೆ ಎಂದು ತಿಳಿಸಿದರು.
ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಶ್ರದ್ಧೆ, ಭಕ್ತಿ ಮತ್ತು ಸತ್ಸಂಕಲ್ಪದಿಂದ ಪೂಜೆ ಸಲ್ಲಿಸಿದರೆ ಶನಿ ದೇವರ ಕೃಪೆಗೆ ಪಾತ್ರರಾಗಿ ಆರೋಗ್ಯ, ಐಶ್ವರ್ಯ, ನೆಮ್ಮದಿ ಹಾಗೂ ಕುಟುಂಬದ ಸುಖ-ಶಾಂತಿಯನ್ನು ಪಡೆಯುತ್ತಾರೆ. ಈ ಪವಿತ್ರ ಕ್ಷೇತ್ರದಲ್ಲಿ ಪ್ರತಿಯೊಂದು ಶನಿವಾರವೂ ವಿಶೇಷ ಪೂಜೆಗಳು ನಡೆಯುತ್ತಿದ್ದು, ಆಷಾಢ ಮಾಸದ ಶನಿವಾರಗಳಲ್ಲಿ ಸಾವಿರಾರು ಭಕ್ತರು ಆಗಮಿಸಿ ಶನಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಪೂಜಾ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿ ಶ್ರೀ ಶನಿ ಮಹಾತ್ಮ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಕ್ಷೇತ್ರದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣಗೊಂಡಿದ್ದು, ಭಕ್ತಿಭಾವದಿಂದ ಪೂಜಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು











