--Ads--

80ರ ಹೊಸ್ತಿಲಲ್ಲಿ ಭಾರತ…..

On: August 14, 2026 2:38 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

80ರ ಹೊಸ್ತಿಲಲ್ಲಿ ಭಾರತ…..

ಲೇಖನ: ವಿವೇಕಾನಂದ ಎಚ್ ಕೆ 

 

ಅಂತೂ ಇಂತೂ, ಹಾಗೂ ಹೀಗೂ ಸ್ವಾತಂತ್ರ್ಯ ಪಡೆದ ನಂತರದ 79 ವರ್ಷಗಳನ್ನು ಪೂರೈಸಿದ್ದೇವೆ. ಬಹುತೇಕ ಒಂದು ಪೀಳಿಗೆ ಅಂತ್ಯವಾಗಿ ಮುಂದಿನ ಪೀಳಿಗೆ ಈ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಅವಕಾಶ ಸೃಷ್ಟಿಯಾಗಿದೆ.

ಈ 80 ವರ್ಷಗಳಲ್ಲಿ,
80 ವರ್ಷದ ಆಸುಪಾಸಿನ ಹಿರಿಯರು, 60 ವರ್ಷದ ಮಧ್ಯ ವಯಸ್ಕರು,
40 ವರ್ಷ ಆಸುಪಾಸಿನ ಯುವಕರ ನಂತರ, 20 ವರ್ಷ ಆಸುಪಾಸಿನ ಜಂಜೀಗಳ ಹೊಸ ತಲೆಮಾರು ಈ ದೇಶದ ಜನಸಂಖ್ಯೆಯ ಮುಖ್ಯ ಭಾಗವಾಗಿದೆ

1947 ಆಗಸ್ಟ್ 15ರ ಮಧ್ಯರಾತ್ರಿ ಲಾರ್ಡ್ ಮೌಂಟ್ ಬ್ಯಾಟನ್ ಅವರಿಂದ ಸಹಿ ಮಾಡಿದ ಅಧಿಕಾರ ಹಸ್ತಾಂತರದ ಪತ್ರ
ಶ್ರೀ ಪಂಡಿತ್ ಜವಹರಲಾಲ್ ನೆಹರು ಅವರ ಕೈ ಸೇರಿ ತ್ರಿವರ್ಣ ಧ್ವಜಾರೋಹಣದ ಮೂಲಕ ಭಾರತ ಅಧಿಕೃತವಾಗಿ ಸ್ವಾತಂತ್ರ್ಯ ಪಡೆಯಿತು.

ಅದಾದ ಕೆಲವೇ ತಿಂಗಳುಗಳಲ್ಲಿ ಭಾರತ ಎರಡು ಮುಖ್ಯ ಘಟನೆಗಳಿಗೆ ಸಾಕ್ಷಿಯಾಯಿತು. ಒಂದು ಕಹಿ ಘಟನೆ ಇನ್ನೊಂದು ಸಿಹಿ ಘಟನೆ.
ಭಾರತ ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಆದ ಹತ್ಯಾಕಾಂಡ ಮಾನವ ಇತಿಹಾಸದ ಕೆಲವೇ ಅತ್ಯಂತ ಕೆಟ್ಟ ದುರ್ಘಟನೆಗಳಲ್ಲಿ ಒಂದಾಗಿ ಇತಿಹಾಸದಲ್ಲಿ ದಾಖಲಾಯಿತು.
ಅದೇ ರೀತಿ ಸಿಹಿ ಘಟನೆಯೆಂದರೆ, ಭಾರತದ ಭವಿಷ್ಯ ನಿರ್ಧರಿಸುವ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೇಮಕವಾದದ್ದು.

ಈ 80 ವರ್ಷಗಳ ನಂತರವೂ ಅಂದಿನ ಹಿಂದೂ ಮುಸ್ಲಿಂ ಸಂಘರ್ಷ ಈ ಕ್ಷಣಕ್ಕೂ ಜ್ವಾಲಾಮುಖಿಯಾಗಿ ಭಾರತ ತನ್ನ ಒಡಲೊಳಗೆ ಇಟ್ಟುಕೊಂಡು ಮುನ್ನಡೆಯುತ್ತಿದ್ದರೆ, ಈ 80 ವರ್ಷಗಳಲ್ಲಿ ಭಾರತ ವಿಶ್ವದ ಪ್ರಮುಖ ದೇಶವಾಗಿ, ಅತ್ಯದ್ಭುತ ಪ್ರಜಾಪ್ರಭುತ್ವದ ಬಹುತ್ವ ದೇಶವಾಗಿ ಮುನ್ನಡೆಯಲು ಬಾಬಾ ಸಾಹೇಬರ ನೀತಿ ನಿರೂಪಣೆಯ ಸಂವಿಧಾನವೇ ಬಹುಮುಖ್ಯ ಕಾರಣವಾಗಿದೆ.

ಈ ನಡುವಿನ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಮರೆಯಲು ಸಾಧ್ಯವೇ ಇಲ್ಲ. ಜಗತ್ತಿಗೆ ಶಾಂತಿ, ಅಹಿಂಸೆಯನ್ನು ಬೋಧಿಸಿದ ಮಹಾತ್ಮ ಗಾಂಧಿ ವ್ಯವಸ್ಥೆಯ ಕ್ರೌರ್ಯಕ್ಕೆ, ದ್ವೇಷಕ್ಕೆ ಬಲಿಯಾದದ್ದು ವಿಶ್ವ ಇತಿಹಾಸದ ಬಹುದೊಡ್ಡ ವಿಪರ್ಯಾಸ.

ಈ ಮಧ್ಯೆ ಭಾರತ ಚೀನಾ, ಭಾರತ ಪಾಕಿಸ್ತಾನ ನಡುವಿನ ಯುದ್ಧಗಳು, ಸ್ವಾತಂತ್ರ್ಯ ಭಾರತದಲ್ಲಿ ದಾಖಲಾದ ತುರ್ತು ಪರಿಸ್ಥಿತಿ, ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ಹೋರಾಟ, ಇಂದಿರಾಗಾಂಧಿಯವರ ಹತ್ಯೆ, ರಾಜೀವ್ ಗಾಂಧಿಯ ಹತ್ಯೆ, ಅಯೋಧ್ಯೆಯ ಬಾಬರಿಮಸೀದಿ ಧ್ವಂಸ, ಅಣ್ಣ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನ, ಶ್ರೀ ನರೇಂದ್ರ ಮೋದಿ ಅವರ ಅಧಿಕಾರ ಪಟ್ಟ, ಅಯೋಧ್ಯೆ ರಾಮಮಂದಿರದ ಪುನರ್ ನಿರ್ಮಾಣ, ಇದೀಗ ಜಂತರ್ ಮಂಥರ್ ನ ಹೊಸ ತಲೆಮಾರಿನ ಜಂಜೀ ಹೋರಾಟ ಭಾರತದ ಈ ಕೆಲವು ಪ್ರಮುಖ ಐತಿಹಾಸಿಕ ಕ್ಷಣಗಳು.

ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು.

ಮುಂದೆ 2047ಕ್ಕೆ ಭಾರತ ನೂರು ವರ್ಷಗಳನ್ನು ಪೂರೈಸಲಿದೆ. ಆ ನೂರು ವರ್ಷಕ್ಕೆ ಭಾರತವನ್ನು ವಿಶ್ವ ಭೂಪಟದಲ್ಲಿ ಅತ್ಯಂತ ಮಹತ್ವದ ಸ್ಥಾನಕೇರಿಸುವ ಜವಾಬ್ದಾರಿ ನಮ್ಮೆಲ್ಲರದು.

ಇದು ಕೇವಲ ಆರ್ಥಿಕ ಅಭಿವೃದ್ಧಿಯೋ, ಸಾಮಾಜಿಕ ನ್ಯಾಯವೋ, ಸೈನಿಕ ಶಕ್ತಿಯೋ,
ತಾಂತ್ರಿಕ ಪ್ರಗತಿಯೋ ಆಗಬಾರದು. ಇದೆಲ್ಲವನ್ನೂ ಮೀರಿದ ಸುಸ್ಥಿರ ಅಭಿವೃದ್ಧಿ ಬಹಳ ಮಹತ್ವದ್ದು. ದೇಶವೆಂದರೆ ಕೇವಲ ಮಣ್ಣು ಮಾತ್ರವಲ್ಲ ಮನುಷ್ಯರು ಸಹ. ಇದನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಕಟ್ಟಬೇಕಿದೆ.
ತಾಯ್ನೆಲ…….

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ……..

79ರ ಯೌವ್ವನದ ಸೃಷ್ಟಿಯ ಅತ್ಯದ್ಭುತ, ಅತ್ಯಾಕರ್ಷಕ ಭರತ ಖಂಡವೇ,…….

ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ.
ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ…..

ಸ್ವಾತಂತ್ರ್ಯ ಪಡೆದ 79 ವರ್ಷಗಳು ……

ಸಂವಿಧಾನ ಸ್ವೀಕರಿಸಿ 76 ವರ್ಷಗಳು……

ಆದರೆ,

ನಿನ್ನ ಅಸ್ತಿತ್ವ ಸಹಸ್ರಾರು ವರ್ಷಗಳ ನಿರಂತರ ಚಲನೆಯಿಂದ ಕೂಡಿದೆ……

ನನ್ನ ಭರತ ಖಂಡವೇ ಏನೆಂದು ವರ್ಣಿಸಲಿ – ಎಷ್ಟೆಂದು ವರ್ಣಿಸಲಿ ನಿನ್ನನ್ನು ……

ಪದಗಳು – ಭಾವಗಳು – ಕಲ್ಪನೆಗಳಿಗೂ ನಿಲುಕದ ನಿನ್ನನ್ನು ಹೇಗೆಂದು ಹಿಡಿದಿಡಲಿ ಈ ಪುಟ್ಟ ಹೃದಯದಲಿ….

ರಾಮಾಯಣ – ಮಹಾಭಾರತ – ಭಗವದ್ಗೀತೆಗಳೆಂಬ – ಅಸಾಮಾನ್ಯ ಬೃಹತ್ ಗ್ರಂಥಗಳು ನಿನ್ನಲ್ಲೇ ಸೃಷ್ಟಿಯಾದವು……..

ಗೌತಮ ಬುದ್ಧ – ಮಹಾವೀರರೆಂಬ ಚಿಂತನ ಚಿಲುಮೆಗಳಿಗೆ ಜನ್ಮ ನೀಡಿದ್ದು ನೀನೇ…….

ಹಿಮಗಿರಿಯ ಸೌಂದರ್ಯ – ನಿತ್ಯ ಹರಿದ್ವರ್ಣದ ಕಾಡುಗಳು – ತುಂಬಿ ತುಳುಕುವ ನದಿಗಳು – ಕೌತುಕದ ಬೆಟ್ಟ ಗುಡ್ಡಗಳು – ಆಕರ್ಷಕ ಮರುಭೂಮಿ – ವಿಸ್ತಾರವಾದ ಬಯಲುಗಳು ಅಡಗಿರುವುದೂ ನಿನ್ನಲ್ಲೇ….

ಹಿಂದೂ – ಮುಸ್ಲಿಂ – ಕ್ರಿಶ್ಚಿಯನ್ – ಸಿಖ್ – ಬುದ್ಧ – ಜೈನ – ಪಾರ್ಸಿಗಳೆಲ್ಲರ ಆಶ್ರಯದಾತ ನೀನೇ…..

ಋಷಿ ಮುನಿಗಳ – ದಾಸ ಆಚಾರ್ಯರ – ಪಂಡಿತ ಪಾಮರರ ನೆಲೆವೀಡು ನಿನ್ನದೇ……‌

ಸಮಾನತೆಯ ಹರಿಕಾರ – ಪ್ರಜಾ ಕ್ರಾಂತಿಯ ಧೀಮಂತ ಬಸವಣ್ಣ ಜನಿಸಿದ್ದು ಈ ಮಣ್ಣಿನಲ್ಲಿಯೇ…..

ವಿಶ್ವ ದಾರ್ಶನಿಕ – ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಹುಟ್ಟಿದ್ದು ಈ ನೆಲದಲ್ಲೇ…..

ಹಿಂದೆಂದೂ ಹುಟ್ಟಿರದ ಮುಂದೆಂದೂ ಹುಟ್ಟಲಸಾಧ್ಯವಾದ ಅಂಬೇಡ್ಕರ್ ಎಂಬ ಜ್ಞಾನದ ಬೆಳಕಿನ ಕಿಡಿ ಬೆಳಗಿದ್ದು ನಿನ್ನ ತೋಳಿನಲ್ಲೇ….

ಮಾನವ ಜನಾಂಗದ ಕೌತುಕ ಗಾಂಧಿ ಎಂಬ ಮಹಾತ್ಮ ಬದುಕಿದ್ದುದು ನಿನ್ನ ಮಡಿಲಲ್ಲೇ….

ಹೆಣ್ಣೆಂಬುದು ದೇವತೆಯಾದದ್ದು ನಿನ್ನೀ ಮನದ ಭಾವನೆಗಳಲ್ಲೇ…..

ತಂದೆ – ತಾಯಿಗಳೇ ದೇವರಾದದ್ದು ನಿನ್ನೀ ನೆಲದ ಮಹಿಮೆಯಿಂದಲೇ….

ಸತ್ಯ – ಅಹಿಂಸೆ – ಆಧ್ಯಾತ್ಮ – ವೈಚಾರಿಕತೆ – ಸ್ವಾತಂತ್ರ್ಯ ಬೆಳೆದದ್ದು ನಿನ್ನೀ ಗುಣದಿಂದಲೇ…..

ಪ್ರೀತಿ – ತ್ಯಾಗ – ನಿಸ್ವಾರ್ಥ – ಮಾನವೀಯತೆ ತವರೂರು ನಿನ್ನಲ್ಲೇ ಅಡಗಿದೆ……

ಬಲಪಂಥ – ಎಡಪಂಥ – ಭಕ್ತಿಪಂಥ – ಕಾಯಕಪಂಥ – ಜ್ಞಾನಪಂಥ, ಆ ವಾದ ಈ ವಾದಗಳ ಪ್ರಯೋಗ ನಡೆಯುತ್ತಿರುವುದು ನಿನ್ನ ಒಡಲಾಳದಲ್ಲೇ…‌…

ಇಷ್ಟೊಂದು ಭಿನ್ನತೆಗಳು ಈ ಸೃಷ್ಟಿಯಲ್ಲಡಗಿರುವುದು ನಿನ್ನಲ್ಲಿ ಮಾತ್ರ………

ಶಾಂತಿ – ಸಹೋದರತೆ – ಭಾತೃತ್ವಗಳ ಈ ನಿನ್ನ ಮಡಿಲಲ್ಲಿ ಬೆಳೆಯುತ್ತಿರುವ ಅದೃಷ್ಟವಂತ ನಾನು…

ಮೇಲೆ ನೋಡಿದರೆ ಹಿಮರಾಶಿಯ ಕಾಶ್ಮೀರ,

ಕೆಳಗೆ ನೋಡಿದರೆ ನೀಲಿ ಸಾಗರದ ಕನ್ಯಾಕುಮಾರಿ,

ಪೂರ್ವಕ್ಕೆ ಸಪ್ತ ಸೋದರಿಯರ ಸುಂದರ ನಾಡು,

ಪಶ್ಚಿಮದಲ್ಲಿ ವಾಣಿಜ್ಯ ನಗರಿಯ ಬೀಡು,

ಮಧ್ಯದಲ್ಲಿ ವಿಂಧ್ಯ ಗಿರಿ,

ಅಗೋ ಅಲ್ಲಿ ನೋಡು ಹರಿಯುತ್ತಿದ್ದಾಳೆ ಗಂಗೆ,

ಇಗೋ ಇಲ್ಲಿ ನೋಡು ನಲಿಯುತ್ತಿದ್ದಾಳೆ ಕಾವೇರಿ,

ಅಲ್ಲಲ್ಲಿ ಮುದುನೀಡುವ ಮನೋಹರ ನದಿ ಕಾಡುಗಳು,
ಅಲ್ಲಿಯೇ ಹುಲಿಯ ಘರ್ಜನೆ,
ನವಿಲ ನರ್ತನ, ಕುಹೂ ಕುಹೂ ಗಾನ,

ಹಾಡಲೊಂದು ಶಾಸ್ತ್ರೀಯ ಸಂಗೀತ,
ಕೇಳಲೊಂದು ಕರ್ನಾಟಕ ಸಂಗೀತ,

ಅಲ್ಲೊಂದಿಷ್ಟು ಮರುಭೂಮಿ, ಇಲ್ಲೊಂದಿಷ್ಟು ಪಶ್ಚಿಮ ಘಟ್ಟಗಳು,

ಓದಲು ರಾಮಾಯಣ, ಮಹಾಭಾರತ,
ಕಲಿಯಲು ಬೃಹತ್ ಸಂವಿಧಾನ,

ಅರಿಯಲೊಬ್ಬ ಬುದ್ದ, ಅಳವಡಿಸಿಕೊಳ್ಳಲೊಬ್ಬ ಬಸವ,

ಬುದ್ಧಿ ಹೇಳಲೊಬ್ಬ ವಿವೇಕಾನಂದ,
ತಿಳಿವಳಿಕೆ ಮೂಡಿಸಲೊಬ್ಬ ಅಂಬೇಡ್ಕರ್,
ಎಲ್ಲರೊಳಗೊಬ್ಬ ಗಾಂಧಿ,

ಗುರುಹಿರಿಯರೆಂಬ ಗೌರವ,
ಮಕ್ಕಳೇ ಮಾಣಿಕ್ಯವೆಂಬ ಸಂಸ್ಕಾರ,

ಆಡಲು ಹಾಕಿ, ನೋಡಲು ಕ್ರಿಕೆಟ್,
ಕಾಯಲೊಬ್ಬ ಪ್ರಧಾನಮಂತ್ರಿ,
ಕರುಣಿಸಲೊಬ್ಬ ಮುಖ್ಯಮಂತ್ರಿ,

ಸಂಭ್ರಮಿಸಲು ಸಂಕ್ರಾಂತಿ,
ಸ್ವಾಗತಿಸಲು ಯುಗಾದಿ,
ಕುಣಿದು ಕುಪ್ಪಳಿಸಲು ಗಣೇಶ,
ಮನರಂಜಿಸಲು ದೀಪಾವಳಿ,

ವಿಜೃಂಬಿಸಲು ದಸರಾ,
ಭಾವೈಕ್ಯತೆಯ ರಂಜಾನ್,
ರಂಗುರಂಗಿನ ಕ್ರಿಸ್ ಮಸ್,

ಸತ್ಯ, ಅಹಿಂಸೆ, ಮಾನವೀಯತೆ ಎಂಬ ಸಂಪ್ರದಾಯ,
ದಯವೇ ಧರ್ಮದ ಮೂಲವಯ್ಯ ಎಂಬ ಸಂಸ್ಕೃತಿ,

ಧನ್ಯ ಈ ನೆಲವೇ ಧನ್ಯ ಧನ್ಯ,
ನನ್ನುಸಿರಾಗಿರುವ ಭಾರತ ದೇಶವೇ,
ನಿನಗೆ ನನ್ನ ಶುಭಾಶಯದ ಹಂಗೇಕೆ,
ನೀನಿರುವುದೇ ನನಗಾಗಿ,
ನನ್ನ ಜೀವವಿರುವುದೇ ನಿನಗಾಗಿ,

ಭಿನ್ನತೆಯಲ್ಲೂ ಐಕ್ಯತೆ, ಅದುವೇ,
ನಮ್ಮ ಭಾರತೀಯ ಗಣರಾಜ್ಯ.

ಈ ನನ್ನ ಜೀವ ನಿನಗಾಗಿ….
ಎಂದೆಂದಿಗೂ ‌…

ಮನೆ ಮನೆ ಬಾವುಟ,
ಘರ್ ಘರ್ ತಿರಂಗಾ,

ಪ್ರತಿ ಮನೆ ಬಾವುಟ,
ಹರ್ ಘರ್ ತಿರಂಗಾ,

ಭಾರತ ಬಾವುಟ,
ಭಾರತ್ ತಿರಂಗಾ,

ತ್ರಿವರ್ಣ ಬಾವುಟ,
ತ್ರಿವರ್ಣ ತಿರಂಗಾ,…….

ಮನೆಯ ಮೇಲೆ ತ್ರಿವರ್ಣ ಬಾವುಟ,
ಮನೆಯ ಒಳಗೆ ಪ್ರೀತಿಯ ಬಾವುಟ,
ಮನದ ಒಳಗೆ ಪ್ರಾಮಾಣಿಕತೆಯ ಬಾವುಟ,
ಬಾವುಟ ಬಾವುಟ ಬಾವುಟ………

ಆ ಬಾವುಟಗಳು ಕೂಡ ತಮ್ಮ ಬಣ್ಣದ ಮೂಲಕ ಜಾತಿ ಧರ್ಮ ಪ್ರದೇಶ ಭಾಷೆ ಮತ್ತು ಸೈದ್ಧಾಂತಿಕ ಅಸ್ಮಿತೆಯನ್ನು ಹೊರಹೊಮ್ಮಿಸುತ್ತವೆ….

ಬಣ್ಣಗಳು ಯಾರ ಸ್ವತ್ತೂ ಅಲ್ಲ. ಅವು ಪ್ರಾಕೃತಿಕ ಸೃಷ್ಟಿ. ಆದರೂ ಮನುಷ್ಯ ಪ್ರಾಣಿ ಅದರಲ್ಲೂ ವಿಭಜನಾತ್ಮಕ ಭಾವ ಸೃಷ್ಟಿಸಿಯಾಗಿದೆ.

ಈ ಸಂದರ್ಭದಲ್ಲಿ……

ಏರುತಿಹುದು – ಹಾರುತಿಹುದು
ನೋಡು ನಮ್ಮ ಬಾವುಟ……..

ಬಡವರ ಒಡಲಾಳದಿಂದ ಹೊರಟ ಕೆಂಬಾವುಟ,

ಬ್ರಾಹ್ಮಣ ಅಗ್ರಹಾರಗಳಿಂದ ಹೊರಟ ಕೇಸರಿ ಬಾವುಟ,

ದಲಿತ ಕೇರಿಗಳಿಂದ ಹೊರಟ ನೀಲಿ ಬಾವುಟ,

ರೈತರ ಹೊಲಗದ್ದೆಗಳಿಂದ ಹೊರಟ ಹಸಿರು ಬಾವುಟ,

ಮುಸ್ಲಿಮರ ಮನೆಗಳಿಂದ ಹೊರಟ ಹಸಿರಿನದೇ ಬಾವುಟ,

ಎಲ್ಲಾ ಶೋಷಿತರ ಕನಸಿನಾಳದಿಂದ ಹೊರಟ ಕಪ್ಪು ಬಾವುಟ,

ಶಾಂತಿಪ್ರಿಯರ ಮನಸ್ಸಿನಾಳದಿಂದ ಹೊರಟ ಹಾಲು ಬಿಳುಪಿನ ಬಾವುಟ,

ಕ್ರಿಶ್ಚಿಯನ್ನರ ಹೃದಯದಾಳದಿಂದ ಹೊರಟ ಬಿಳಿಯದೇ ಬಾವುಟ,

ಪ್ರಕೃತಿಯ ಮಡಿಲಿನಿಂದ ಹೊರಟ ಭೂ ಬಣ್ಣದ ಬಾವುಟ,

ಎಲ್ಲವೂ ಆಕಾಶದಲ್ಲಿ ಕಾಮನಬಿಲ್ಲಿನಂತೆ ಮೂಡಿ,

ಅಲೆ ಅಲೆಯಾಗಿ ತೇಲುತ್ತಾ ತೇಲುತ್ತಾ ತೇಲುತ್ತಾ,

ಭಾರತ ಮಾತೆಯ ಮೈ ಹೊದಿಕೆಯಂತೆ ಅವರಿಸಿಕೊಂಡಾಗ,

ಏನೆಂದು ವರ್ಣಿಸಲಿ ಆ ಸೌಂದರ್ಯವನ್ನು,

ವಿಶ್ವ ಸುಂದರಿಯರ ಸುಂದರಿಯಂತೆ,

ಮೊನಲಿಸಾಳ ನಗುವೂ ಮಾಸುವಂತೆ,

ಸೃಷ್ಟಿಯನ್ನೇ ಮೆಟ್ಟಿನಿಂತ ದೈತ್ಯಳಂತೆ,

ಸ್ವಾತಂತ್ರ್ಯ ದೇವರುಗಳ ದೇವತೆಯಂತೆ,

ಸಮಾನತೆಯ ಸಾರುವ ಬೆಳಕಿನಂತೆ,

ಮಾನವೀಯತೆಯೇ ಪ್ರತ್ಯಕ್ಷಳಾದಂತೆ,

ಕಂಗೊಳಿಸುತ್ತದೆ……

ಇದು ಕಲ್ಪನೆಯೂ ಅಲ್ಲ,
ಅಸಾಧ್ಯವೂ ಅಲ್ಲ.

ನಮ್ಮ ನಿಮ್ಮ ಮನಗಳಲ್ಲಿ, ಪ್ರಬುದ್ಧತೆಯ ಬೀಜಾಂಕುರವಾದಾಗ,

ಯೋಚನಾಶಕ್ತಿ ವಿಶಾಲವಾದಾಗ
ಇದು ಸಾಧ್ಯವಾಗುತ್ತದೆ.

ನಾವು ಉಸಿರಾಡುತ್ತಿರುವಾಗಲೇ ಇದನ್ನು ನಿರೀಕ್ಷಿಸೋಣ, ………

ಇಲ್ಲದಿದ್ದರೆ ನಾವು ಪ್ರತಿನಿತ್ಯ ಹೆಣ ಉರುಳುವ,

ಆ ಹೆಣದ ರಕ್ತ ಮಾಂಸಗಳಿಗೆ ಹಾತೊರೆಯುವ ರಕ್ಕಸ ಸಂತತಿಯ ಹದ್ದುಗಳ ನಡುವೆ ಬದುಕುತ್ತಾ,

ನಾವೇ ಸರಿ, ನಾವೇ ಶ್ರೇಷ್ಠ, ನಮ್ಮ ಚಿಂತನೆಯೇ ಅತ್ಯುತ್ತಮ ಎಂಬ ಹುಚ್ಚಿಗೆ ಬಲಿಯಾಗಿ,

ಇಡೀ ಸಮಾಜ ಹುಚ್ಚರ ಸಂತೆಯಾಗುವುದರಲ್ಲಿ ಸಂದೇಹವಿಲ್ಲ.

ಈಗಲಾದರೂ ಎಚ್ಚೆತ್ತುಕೊಳ್ಳೋಣ……

ಭವ್ಯ ಭವಿಷ್ಯದ ಕನಸುಗಳನ್ನು ಕಾಣುತ್ತಾ….
ನಿಮ್ಮೊಂದಿಗೆ……

80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451……
9844013068……

WhatsApp

Join Now

Telegram

Join Now

Instagram

Join Now