ವಿಜಯ ದರ್ಪಣ ನ್ಯೂಸ್…….
ರಾಜ್ಯೋತ್ಸವದ ರಕ್ತದಾನ ಶಿಬಿರದಲ್ಲಿ
68ನೇ ಬಾರಿ ರಕ್ತದಾನ ಮಾಡಿದ ಉಪತಹಶೀಲ್ದಾರ್ ಕೆ.ಎನ್.ಮಂಜುನಾಥ್

ಶಿಡ್ಲಘಟ್ಟ : ನಟ ಚಿರಂಜೀವಿ ಅವರು 1980ರ ದಶಕದಲ್ಲೇ ತಮ್ಮ ಅಭಿಮಾನಿಗಳಿಗೆ ರಕ್ತದಾನದ ಮಹತ್ವ ತಿಳಿಸಿ, ರಕ್ತದಾನದ ಮೂಲಕ ಮತ್ತೊಬ್ಬರ ಜೀವ ಉಳಿಸುವಂತೆ ಕರೆ ನೀಡಿದ್ದರು ಅವರ ಆಶಯದಂತೆ ಇಂದು ಅನೇಕ ನಟರ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು
ಅಖಿಲ ಭಾರತ ಚಿರಂಜೀವಿ ಯುವತಾ ರಾಷ್ಟ್ರೀಯ ಅಧ್ಯಕ್ಷ ಸತ್ಯನಾರಾಯಣ ಮಹೇಶ್ ತಿಳಿಸಿದರು.
ನಗರದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಸನಾತನ ಜನಸೇನಾ ಸೇವಾದಳ ಟ್ರಸ್ಟ್, ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಮತ್ತು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಚಿತ್ರರಂಗದ ನಟರು ಮತ್ತು ಅವರ ಅಭಿಮಾನಿಗಳ ಪಾತ್ರ ಮಹತ್ವವಾದದು ಎಂದ ಅವರು
ಶಿಡ್ಲಘಟ್ಟ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ರಕ್ತದ ಕೊರತೆ ಎದುರಾದರೆ ತಮ್ಮ ಗಮನಕ್ಕೆ ತಂದಲ್ಲಿ ತಕ್ಷಣವೇ ಶಿಬಿರ ಆಯೋಜಿಸಿ ಅಗತ್ಯ ರಕ್ತ ಪೂರೈಸಲು ಚಿರಂಜೀವಿ ಅಭಿಮಾನಿಗಳು ಹಾಗೂ ಸಮಾಜಸೇವಕರು ಸಿದ್ಧರಿದ್ದಾರೆ ಎಂದರು.
ಮಾಜಿ ಶಾಸಕ ಎಂ. ರಾಜಣ್ಣ ಮಾತನಾಡಿ,ವಿವಿಧ ಕಾಯಿಲೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತದ ಅಗತ್ಯ ಹೆಚ್ಚಿರುವುದರಿಂದ ಆರೋಗ್ಯವಂತ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಉಪತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಕೇವಲ ಸಂಭ್ರಮಾಚರಣೆಗೆ ಸೀಮಿತಗೊಳಿಸದೆ ರಕ್ತದಾನದಂತಹ ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಆಚರಿಸಿರುವುದು ಸಂತಸದ ಸಂಗತಿ ಎಂದರು.
ಉಪತಹಶೀಲ್ದಾರ್ ಮಂಜುನಾಥ್ ಅವರು 68ನೇ ಬಾರಿ ,
ತಾಲ್ಲೂಕು ಕಸಾಪ ಕಾರ್ಯದರ್ಶಿ ಟಿ.ಟಿ.ನರಸಿಂಹಪ್ಪ ಅವರು 66ನೇ ಬಾರಿ ರಕ್ತದಾನ ಮಾಡಿದ್ದು ,
ನಿರಂತರ ರಕ್ತದಾನದ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಇಬ್ಬರ ಸೇವೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸನಾತನ ಜನಸೇನಾ ಸೇವಾದಳದ ಸಂಘಟಕರು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದು, ಇದು 16ನೇ ಶಿಬಿರ ರಕ್ತದ ಅಗತ್ಯ ಎದುರಾದಾಗ ಸಕಾಲದಲ್ಲಿ ರಕ್ತ ದೊರೆಯದೆ ರೋಗಿಗಳು ತೊಂದರೆ ಅನುಭವಿಸುವ ಪರಿಸ್ಥಿತಿ ಇರುವುದರಿಂದ ಸಂಘ-ಸಂಸ್ಥೆಗಳು ಇಂತಹ ಶಿಬಿರ ಆಯೋಜಿಸಿ ನೆರವಾಗಬೇಕು ಎಂದು ಶಿಬಿರದಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸನಾತನ ಜನಸೇನಾ ಸೇವಾದಳ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬುಜ್ಜಿನಾಯಕ್, ಸಬ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ, ರೂಪಸಿ ರಮೇಶ್, ಲಿಯೋ ಕ್ಲಬ್ನ ಶ್ರೀಕಾಂತ್, ತಾಲ್ಲೂಕು ಕಸಾಪ ಕಾರ್ಯದರ್ಶಿ ಟಿ.ಟಿ. ನರಸಿಂಹಪ್ಪ,ದಿನೇಶ್ ಬಾಬು,ಮಾರೇಶ್, ರಾಜು,ಪ್ರಕಾಶ್ , ಅನೀಶ್,ಜಯಂತ್, ಗೌತಮ್ , ಸಂಘಟನೆಯ ಕಾರ್ಯಕರ್ತರು, ಯುವಕರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.










