ವಿಜಯ ದರ್ಪಣ ನ್ಯೂಸ್……
ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಲಿವೆ
ಗ್ಯಾರಂಟಿ ಯೋಜನೆಗಳ ಮೂಲಕ ₹1,500 ಕೋಟಿ ಹಣ ಅರ್ಹರ ಖಾತೆಗೆ: ಎನ್. ಚಲುವರಾಯಸ್ವಾಮಿ

ಮದ್ದೂರು: ಜಿಲ್ಲೆಯ ಸಾರ್ವಜನಿಕರಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು ₹1,500 ಕೋಟಿ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ತಲುಪಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣ ಜನರ ಸೇವೆ ಮಾಡುವ ಅವಕಾಶವಾಗಿದ್ದು, ರಾಜಕಾರಣಿಗಳು ಸೇವಕರ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಮೇಕೆದಾಟು ಯೋಜನೆಗೆ ಶ್ರಮ
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತರೆ ರಾಜ್ಯದ ಪಾಲಿಗೆ ಐತಿಹಾಸಿಕ ಕಾರ್ಯವಾಗಲಿದೆ. ಇದರಿಂದ ರಾಜ್ಯದ ರೈತರ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಯೋಜನೆಗೆ ಅನುಮೋದನೆ ದೊರಕಿಸಲು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ತಮಗೆ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ನೀಡಿದೆ. ಸಮಯದ ಅಭಾವವಿದ್ದರೂ ಈ ಖಾತೆಗೆ ನ್ಯಾಯ ಒದಗಿಸುವ ಹಾಗೂ ಜನರ ನೆನಪಿನಲ್ಲಿ ಉಳಿಯುವಂತಹ ಮಹತ್ವದ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದ್ದೇನೆ. ಇದಕ್ಕೆ ಜನರ ಸಹಕಾರ ಮತ್ತು ಬೆಂಬಲ ಅಗತ್ಯ ಎಂದು ಹೇಳಿದರು.
ಕೊಪ್ಪ ಹೋಬಳಿಗೆ ನೀರಾವರಿ ಸೌಲಭ್ಯ
ಕೊಪ್ಪ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ವಿಸಿ ನಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಈ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮಳವಳ್ಳಿ ಹಾಗೂ ತುಮಕೂರು ಭಾಗದ ಪ್ರದೇಶಗಳಿಗೂ ನೀರು ಪೂರೈಸುವ ಕುರಿತು ಯೋಜನೆ ರೂಪಿಸುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು.

ನಾಡಕಚೇರಿ, ಪೊಲೀಸ್ ಠಾಣೆ, ಪ್ರವಾಸಿ ಮಂದಿರ
ಕೊಪ್ಪ ಹೋಬಳಿಯಲ್ಲಿ ನೂತನ ನಾಡಕಚೇರಿ, ಪೊಲೀಸ್ ಠಾಣೆ ಹಾಗೂ ಪ್ರವಾಸಿ ಮಂದಿರ ನಿರ್ಮಾಣ ಮಾಡುವ ಕುರಿತು ಚರ್ಚೆ ನಡೆದಿದೆ. ಆದರೆ ಸೂಕ್ತ ಜಾಗದ ವಿಚಾರದಲ್ಲಿ ಕೆಲವು ಗೊಂದಲಗಳಿರುವುದರಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ. ಸಾರ್ವಜನಿಕರು ಸಹಮತದಿಂದ ಸಹಕರಿಸಿದರೆ ಯಾವುದೇ ಗೊಂದಲವಿಲ್ಲದೆ ಅಗತ್ಯ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ
ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಸ್ತುತ ₹5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮಿತಿಯನ್ನು ₹10 ಲಕ್ಷಕ್ಕೆ ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಹಿಂದಿನ ಹಲವು ನಾಯಕರು ಶ್ರಮಿಸಿದ್ದಾರೆ. ಅವರ ಹಾದಿಯಲ್ಲೇ ತಾವು ಸಾಗುತ್ತಿದ್ದು, ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಜಿಲ್ಲೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಎನ್. ಚಲುವರಾಯಸ್ವಾಮಿ ಹೇಳಿದರು.
ಸಹಕಾರ ಕ್ಷೇತ್ರಕ್ಕೆ ಆದ್ಯತೆ: ಸಚಿನ್
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ನಾಗಮಂಗಲ ಕ್ಷೇತ್ರದ ಜನರು ತಮ್ಮ ಹಾಗೂ ತಮ್ಮ ತಂದೆಯ ಮೇಲೆ ತೋರಿಸುತ್ತಿರುವ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ. ಸಹಕಾರ ಕ್ಷೇತ್ರದ ಮೂಲಕ ಜಿಲ್ಲೆಯ ಜನರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮುಂದೆಯೂ ಕ್ಷೇತ್ರದ ಜನರೊಂದಿಗೆ ಸದಾ ಇರುವುದಾಗಿ ಭರವಸೆ ನೀಡಿದರು.
₹200 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿ
ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಂತರ ನಮ್ಮ ಭಾಗದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವ ನಾಯಕ ಎನ್. ಚಲುವರಾಯಸ್ವಾಮಿ. ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹200 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮುಖಂಡರಾದ ಕುಮಾರ್ ಕೊಪ್ಪ, ಸ್ವಾಮಿಗೌಡ, ದೀವಾಕರ್, ರಮೇಶ್ ಗೌಡ, ಸಿದ್ದೇಗೌಡ, ಸುಧಾ, ಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.










